ತೇಲಿ ಬಂದಿದ್ದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತೇಲಿ ಬಂದಿದ್ದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ

ನಾನೂ ಸಮುದ್ರವಾಗಬಾರದಿತ್ತಾ?

ಹರಿಯುತ್ತಿದ್ದರೆ ನದಿ ಆಗುತ್ತಾ, ಯಾರಿಗೆ ಗೊತ್ತು, ಸಮುದ್ರವು ಅಗ್ಬಹುದಲ್ಲ?.ನಿಜ.
ಹೊಳೆಯೂ ಅಗಬಹುದು!
ನನ್ನ ಊರ ಕಡೆಯಲ್ಲ,'ಹೊಳೆ' ಎಂದೂ ಕರೆಯುತ್ತಾರೆ.
ನಾನೂ ಸಮುದ್ರವಾಗಬಾರದಿತ್ತಾ?!
(ಹರಿ , ಹೊಳೆ ಎರಡಕ್ಕೂ ಹಲವು ಅರ್ಥಗಳಿದ್ದಾವೆ ನಮ್ಮ ಕನ್ನಡದಲ್ಲಿ.)

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೋ. ಹುಡುಕಾಟ ಕೆಲವರಿಗೆ ಹುಡುಗಾಟವೆನ್ನಿಸಬಹುದು.ಅದರೆ ಹಲವರಿಗೆ ?
ಗೊತ್ತಿಲ್ಲಾ. ಯಾಕೋ ಅಲ್ಲೊಂದು ಕೂಗು, ಇಲ್ಲೊಂದು ಅಳಲು, ಮನದ ಕದ ತಟ್ಟಿ ಹಾಗೆಯೇ ಹಾರಿಹೋಗುತ್ತಿವೆ. ಅಮ್ಮಂಗೆ ಅವತ್ತು ಅನಿಸಿದ್ದು ನನಗೆ ಇವತ್ತಿಗೂ ಸಲ್ಲುವಂತಿದೆ.

ಧೃತ್ ಯಾವಾಗಲೂ ಹೀಗೆಯೆ; ಮಾತಿಗೆ ಸಿಕ್ಕಿದರೆ, ಎಲ್ಲಿಂದ ಎಲ್ಲಿಗೋ ಹಾರಿ,ತೇಲಿ,ನೆಗೆದು,ಜಿಗಿದು ಹೋಗಿಬಿಡುತ್ತಾನೆ. ಬಿಡೊ ಮಾರಾಯ, ಒಂದಕ್ಕೊಂದು ತಾಳೆ ಅಗ್ಲಿಕ್ಕಿಲ್ಲ ನಿನ್ನ ಮಾತು ಅಂದರೆ ತಟ್ಟನೆ ಸುಮ್ಮನಾಗಿಬಿಡುತ್ತಾನೆ. ಅಲ್ಲೊಂದು ತಣ್ಣನೆಯ ಮೌನ ಆವರಿಸಿಬಿಡುತ್ತದೆ. ಅದೊಂದು ಅಸಹನೀಯ ಮೌನ, ಮತ್ತೆ ನಾನೇ ಕೆದಕಿ ಕೇಳಬೇಕು, ಏನಾಯ್ತೋ ನಿಂಗೆ?

ಏನಿಲ್ಲಾಕ್ಕ, ಹಾಗೆ ಸುಮ್ಮನೆ, ಅಂದು ಸುಮ್ಮನಾಗಿಬಿಟ್ಟ. ಯಾಕೋ ಎಲ್ಲೋ ಏನೋ ಎಡವಟ್ಟಾಗಿದೆ, ಎಂಬ ಸೂಚನೆ ಆಗಲೆ ಸಿಕ್ಕಿಯಾಗಿತ್ತು ನನಗೆ.

ಅಕ್ಕಾ, ಬಂಗಾಳ ಕೊಲ್ಲಿಯತರ ನೀನು ಅಂದ. ಅಬ್ಬರ ಜಾಸ್ತಿ, ಅದಕ್ಕೆ ನೀನು ಹೇಳುವದಕ್ಕೆ, ಮಾತಿಗೆ  ಇಲ್ಲವೆನುವದಕ್ಕಾಗುವದಿಲ್ಲ.
ಮೊನ್ನೆ ನೋಡಿಬಂದೆ.ಯಾಕೋ ಆ ಸಮುದ್ರ ನನ್ನ ನಿದ್ದೆ ಗೆಡಿಸಿದೆ, ಆ ಸಂಜೆಯ ಹೊತ್ತಲ್ಲಿ, ಫ್ಲೊರೆಸೆಂಟ್ ದೀಪದ ಬದಿಯಲ್ಲಿ ಕುಳಿತು ಸಮುದ್ರ ನೋಡುವದಿದೆಯಲ್ಲಾ..ಅಹ್.

ಯಾವದಕ್ಕೋ ಪೀಠಿಕೆ ಅನ್ನಿಸಿತ್ತು.
ಅಕ್ಕ, ಸರಯು ಸಿಕ್ಕಿದ್ದಳು ಅಂದ.
ಯಾವ ಸರಯೂ? ಅಂದೆ.ಗೊತ್ತಿಲ್ಲದವಳಂತೆ.
ಆ ಕಲ್ತುಡ್ಕ ನಿಂಗನ ಮಗಳು..
ಯಾಕೋ ಅಷ್ಟು ಹೊತ್ತು ಇದ್ದ ಉತ್ಸಾಹ ಧೃತ್ ನಲ್ಲಿ ಮಾಯವಾಗಿತ್ತು.

'ಸಿಟ್ಟು ಮಾಡಿ ಹಿಂದೆ ಹೋದ ಸಮುದ್ರದ ಅಲೆಗಳು ಮತ್ತೆ ದಡಕ್ಕೆ ಬಾರದಿರುತ್ತವೆಯೇ',ಅಂದೆ. ಅಪರೂಪದ 'ತಮ್ಮ' ಬಿಡು ನೀನು.

'ಹಿಂದೆ ಕಳೆದು ಹೋದ ಅಲೆಯೇ ಅದು, ಅಂತ ಸಾರಿ ಹೇಳಲಿಕ್ಕೆ ಯಾವ ಬಂಡೆಗೆ ಮಾತು ಬರುತ್ತದೆ ಹೇಳು ಅಕ್ಕಾ', ಅಂದ.

ಅದು ಹೌದು, ಬಂಡೆಗಳಿಗೆ ಮಾತಾಡುವ ತಾಳ್ಮೆ ಎಲ್ಲಿಂದ ಬರಬೇಕೋ ಮಾರಾಯ, ದಿನವಿಡೀ ಅಬ್ಬರ ಸಹಿಸಿ ಸಾಕಾಗಿರುತ್ತದೆ ಅಂದೆ. ಜೊತೆಗೆ ಮರಳಿ ಬರುವ ಅಲೆಗಳೇನು ಶಾಂತವಾದುದವಾ? ಹೊಸದು ಹೊಸದು ಬಂದಂತೆ, ಅಬ್ಬರ ಹೆಚ್ಚುತ್ತಾ ಪೌರ್ಣಮಿಯ ಇದುರು ಬಂದಾಗ ಮಹಾ ಕಾಳಿಯ ಅವತಾರವೇ ಅಲ್ಲವ?

ಕಾಳಿಯೋ ಚಂಡಿಯೋ ನನ್ನ ವ್ಯಾಪ್ತಿ ಮೀರಿದ್ದು ಅನ್ನಿಸಿದೆ. ಅದಿಕ್ಕೆ ಹೇಳಿದ್ದು, ನಾನೂ ಸಮುದ್ರವಾಗಬಾರದಿತ್ತಾ? ಸದಾ ಹರಿಯುತ್ತಲೇ ಇರಬಹುದಿತ್ತು.

ಹೋಗಿ ಆ ಮರಳುಗಳನ್ನು ಕೇಳು ನನಗೇನು ಗೊತ್ತು,ಅಂದೆ. ಎಷ್ಟೇ ಹರಿಯುತ್ತಿದ್ದರು ಒಂದು ದಿನ ದಡ ಸೇರಲೇ ಬೇಕಲ್ಲ ಅಂದೆ. ಅಲ್ಲಿಗೆ ಒಂದು ಅಲ್ಪವಿರಾಮ ಬಿದ್ದಿತ್ತು ನಮ್ಮ ಮಾತಿಗೆ.

ಬಿಡಿಸಿ ಹೇಳುತ್ತಾನೆಂದು ಕಾದೆ, ಅದೇನೆಂದು ಕೊನೆಗೂ ಹೇಳಲೇ ಇಲ್ಲ. ಅವ ಯಾವಾಗಲೂ ಹಾಗೆಯೇ.

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಭಾನುವಾರ

ಹಲಗೆ ಬಳಪ ಕೈಯಲ್ಲಿ ಹಿಡಿದು...

ಬಹಳ ಹಿಂದಿನ ಕತೆ. ನನಗೆ ಅದರೊಳಗೆ ಏನಿರಬಹುದೆಂಬ ಕೆಟ್ಟ ಕುತೂಹಲ.ಅದರ ಆಕಾರ, ಬಣ್ಣ ನೋಡಿದರೆ ಅದು ಬಹಳ ಹಳೆಯ ಪೆಟ್ಟಿಗೆಯೆಂದು ಸುಲಭವಾಗಿ ಹೇಳಬಹುದಿತ್ತು. ಆಗ ನನಗೆ ಸುಮಾರು ಆರೇಳು ವಯಸ್ಸಿರಬಹುದೇನೋ. ಥೇಟ್ ಮಂಗನಂತೆಯೇ ಇದ್ದನಂತೆ. ಕುಂತಲ್ಲಿ ಕೂಡದ, ಕೈಗೆ ಸಿಕ್ಕಿದ್ದನ್ನು ಸುಮ್ಮನೆ ಬಿಡದ ನಾನು, ಜಗುಲಿಯಿಂದ ಅಂಗಳಕ್ಕೆ ಹಾರುತ್ತಾ, ಅಂಗಳದಿಂದ ಜಗುಲಿಗೆ ನೆಗೆಯುತ್ತಾ, ಕುಂತಲ್ಲೇ ಬಿದ್ದು, ನಿಂತಲ್ಲೇ ಅತ್ತು,ಹಾಗೇ ಒಮ್ಮೆ ನಕ್ಕು, ಅಪ್ಪ ಅಮ್ಮರನ್ನ ಹೈರಾಣ ಮಾಡುತ್ತಿದ್ದನಂತೆ.

ಅಮಿತ, ರಂಜನರೊಟ್ಟಿಗೆ ಜಗಳವಾದಾಗಲೆಲ್ಲ ನನಗೆ, ನನ್ನ ದುಃಖಕ್ಕೆ ಜೊತೆಯಾಗುತ್ತಿದ್ದುದು ಅದೇ ಪೆಟ್ಟಿಗೆ. 'ನನ್ನ ಅಪ್ಪನ ಹತ್ರ ದೊಡ್ಡ ಪೆಟ್ಟಿಗೆ ಇದ್ದು ಒಹೋ'ಎಂದು ಕೋಣೆಗೆ ಹೋಗಿ ಪೆಟ್ಟಿಗೆ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಖಾತರಿ ಪಡಿಸಿ ಕೊಳ್ಳುತ್ತಿದ್ದೆ. ಬಹುಷಃ ನನಗೆ ಗೊತ್ತಿದ್ದ ಪುಟ್ಟ ಲೋಕಕ್ಕೆ ಆ ಪೆಟ್ಟಿಗೆ ಬಹಳ ದೊಡ್ಡದಾಗಿ ಕಂಡಿರಬೇಕು.

ಅಪ್ಪ ಎಂದೂ ಪೆಟ್ಟಿಗೆಯನ್ನ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಎಲ್ಲೋ ಒಮ್ಮೆ ಅತ್ತಾಗ, ಸುಮ್ಮನೆ ಹಟ ಮಾಡಿದಾಗ, ಆಗೊಂದು ಈಗೊಂದು ಎಂದು ಬಣ್ಣದ ಪೆನ್ಸಿಲ್ ಗಳು ಹೊರಗೆ ಬರುತ್ತಿದ್ದುದ ನೋಡಿ, ಅಪ್ಪ ಹೇಳುತ್ತಿದ್ದ ಕತೆಯಲ್ಲಿ ಬರುವ 'ಮಾಯ ಪೆಟ್ಟಿಗೆ'ಯೇ ಇರಬಹುದು ಎಂದೆಲ್ಲ ಅನಿಸಿತ್ತು. ಆದರೂ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನ ನೋಡಿಯೇ ಬಿಡಬೇಕೆಂಬ ಆಸೆ ಬಹಳ ಇತ್ತು.

ದೊಡ್ಡವಳಾಗುತ್ತ ಬಂದ ಹಾಗೆ, ಆ ಪೆಟ್ಟಿಗೆ ವಿಸ್ಮಯವಾಗಿ ಕಾಡಿದ್ದು ನಿಜ. ಒಂದು ದಿನ ಅಪ್ಪ ಮನೆಯಲ್ಲಿಲ್ಲದಾಗ ಪೆಟ್ಟಿಗೆ ತೆರೆಯುವ ವ್ಯರ್ಥ ಪ್ರಯತ್ನ ಮಾಡಿದಾಗಲೇ ಸಿಕ್ಕಿದ್ದು 'ಮಲ್ಲಿಗೆ'. ನಾ ನೋಡಿದ ಮೊದಲ ಪತ್ರಿಕೆ 'ಮಲ್ಲಿಗೆ', ಅದರ ನಂತರ, ನಮ್ಮ ಮನೆಗೆ ಬರುತ್ತಿದ್ದುದು 'ಸುಧಾ' ವಾರಪತ್ರಿಕೆ. ಜಗತ್ತೇ ನನ್ನ ಕೈಲಿದ್ದಂತೆ ಸಂಭ್ರಮಿಸುತ್ತಿದ್ದೆ. ನಾನು ಮೂರನೇ ತರಗತಿಯಲ್ಲಿದ್ದಾಗ ಬರುತ್ತಿದ್ದಾಗಿನ ಪತ್ರಿಕೆಯನ್ನ ಇನ್ನೂ ಓದುತ್ತಿದ್ದೇನೆ. ಅದರೆ ಈಗೀಗ ಯಾಕೋ ಕುಶಿ ಕೊಡುತ್ತಿಲ್ಲಾ, ಬಹುಷಃ ನಾನು ನೋಡುತ್ತಿರುವ ಜಗತ್ತಿಗೆ ಅದು ಸಾಕಾಗುತ್ತಿಲ್ಲ ಅನಿಸುತ್ತದೆ. ಆದರೂ 'ಸುಧಾ' ಪತ್ರಿಕೆ ನನ್ನ ಮನಸ್ಸಿಗೆ ತೀರ ಹತ್ತಿರದ್ದು. ಪತ್ರಿಕೆಯ ಹಿರಿಯರಾದ ಅಂತರಾಮು ಅವರ ನೆನಪಿದೆ.

ಬಹುಷಃ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದಿದೆ. ಭಾಸ್ಕರ್ ಮಾಮನ ಪುಸ್ತಕದ ಅಂಗಡಿಯಿಂದ ನನಗೆ ಓದಲಿಕ್ಕಾಗಿಯೇ ಎಲ್ಲ ದಿನಪತ್ರಿಕೆಗಳೂ, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಿಗುತ್ತಿತ್ತು. ಓದಿ ಮತ್ತೆ ಅಂಗಡಿಗೆ ಕಳುಹಿಸುತ್ತಿದ್ದೆ, ಆ ಪುಸ್ತಕ ಅಂಗಡಿಯಿಂದಾಗಿ ಕನ್ನಡದ ಎಲ್ಲ ಪತ್ರಿಕೆಗಳನ್ನು ಪ್ರತಿ ದಿನವೂ ಓದುವ ಭಾಗ್ಯ ನನ್ನದಾಗಿತ್ತು. ಹಾಗೆ ಓದುತ್ತಿದ್ದಾಗ ನನ್ನ ಮನಸ್ಸಿಗೆ ಯಾವುದೇ 'Prejudice' (ಪೂರ್ವಗ್ರಹ) ಇರಲಿಲ್ಲ. ಲೇಖಕ ಯಾರೆಂಬುದು ನನಗೆ ಮುಖ್ಯವಾಗಿರಲೇ ಇಲ್ಲ, ಯಾಕೆ ಓದಬೇಕೆನ್ನುವ ಪ್ರಶ್ನೆ ಯಾವತ್ತೂ ಕಾಡಿರಲೇ ಇಲ್ಲಾ. ಸತತ ಹದಿಮೂರು ವರುಷ ಹಾಗೆಯೇ ಓದಿದೆ.

ಇನ್ನು, ಶಾಲೆಯಲ್ಲಿ ಪುಸ್ತಕ ಓದುವ ಹುಚ್ಚಿರುವ ಕೆಲವು ಸ್ನೇಹಿತರಿದ್ದರು, ಕೆಲವೊಮ್ಮೆ ಅವರಿಗಿಂತ ಮುಂಚೆ ಓದಿರಬೇಕೆನ್ನುವ ಮನೋಭಾವವು ಮತ್ತೂ ಓದಲ್ಲಿಕ್ಕೆ ಹಚ್ಚಿದ್ದು ದಿಟ. ಹೈ ಸ್ಕೂಲ್ & ಕಾಲೇಜುಗಳ ಗ್ರಂಥಾಲಯದಲ್ಲಿನ ಯಾರೂ ಓದದೆ ಇದ್ದ, ಒಮ್ಮೆಯೂ ಯಾರ ಹೆಸರನ್ನೂ ತನ್ನ ಬೆನ್ನಮೇಲೆ ಬರೆಯಿಸಿ ಕೊಳ್ಳದ ಪುಸ್ತಕಗಳಿಗೆಲ್ಲ ನನ್ನ ಮತ್ತು ನನ್ನ ಕೆಲವು ಸ್ನೇಹಿತೆಯರ ಹೆಸರಿದೆ.

ಅಪ್ಪ ಎಂದೂ ನನಗೆ ಪುಸ್ತಕ ಓದೆಂದು ಹೇಳಿರಲಿಲ್ಲ.ಮತ್ತೂ ಇಂದಿಗೂ ನಾ ಆ ದೊಡ್ಡ ಪೆಟ್ಟಿಗೆಯ ಬಾಗಿಲು ಪೂರ್ತಿ ತೆರೆದು ನೋಡಿಲ್ಲ. ಅಪ್ಪ ನನ್ನನ್ನು ಓದಲು ಹಚ್ಚಿದ ರೀತಿಯೇ ಅಂತದ್ದು. ಮನೆಗೆ ಬರುವಾಗ ಚೀಲದಲ್ಲಿ ತರುತ್ತಿದ್ದ ಪುಸ್ತಕಗಳು ಅವಾಗಿಯೇ ತಮ್ಮತ್ತ ಸೆಳೆದುಕೊಂಡಿದ್ದವು. ನನ್ನ ಪುಟ್ಟ ಟೇಬಲ್ಲಿನ ಮೇಲೆ ಬಣ್ಣದ ಪುಸ್ತಕಗಳು , ಮತ್ತು ಮನೆಗೆ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ಓದುತ್ತ ಕುಳಿತ್ತಿರುತ್ತಿದ್ದ ಭಂಗಿ ಬಹುಷಃ ನನ್ನ ಸೆಳೆದಿರಬೇಕು. ದಿನಕಳೆದಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದೇ ಬೈಠಕ್ ನಲ್ಲಿ ಓದುವದು ಅಪ್ಪನಂತಾಗಬೇಕೆನ್ನುವ ನನ್ನ ಜೀವನದ ಭಾಗವಾಯಿತೆನ್ನಿ. ಅಲ್ಲದೇ ಸ್ನೇಹಿತರ ಮುಂದೆ ಜಂಭ ಕೊಚ್ಚಿಕೊಳ್ಳುವದಕ್ಕು ಸಹಾಯವಾಯಿತು. ಜನಮಾಧ್ಯಮ ಪತ್ರಿಕೆಯ ಬೆನ್ನೆಲುಬಾಗಿದ್ದ ಜಯರಾಮ್ ಹೆಗಡೆಯವರು ಕನ್ನಡದಲ್ಲಿದ್ದ ಕುರಾನ್ ಪುಸ್ತಕವನ್ನು ಕಳುಹಿಸಿದ್ದರು. ಅಪ್ಪನೊಟ್ಟಿಗೆ ಅದನ್ನೂ ಓದಿದೆ.

ನಮ್ಮ ಕಾಲೇಜಿನಲ್ಲಿ, 'ಓದು ಕಮ್ಮಟ' ಎಂಬ ತರಬೇತಿಯನ್ನ ಏರ್ಪಡಿಸಿದ್ದರು. ಘಟಾನುಘಟಿಗಳೆಲ್ಲ ಸೇರಿದ್ದರು. ಕಾರ್ಯಕ್ರಮ ಉದ್ಘಾಟಿಸಿದವರ ಮಾತೊಂದನ್ನು ಬಿಟ್ಟು ಮತ್ತೆಲ್ಲವು ಬೆಳಗಿಂದ ಸಂಜೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು, ನಮಗಿರುವ ಓದುವ ಹುಚ್ಚನ್ನು ಬಿಡಿಸಿಯೇ ಬಿಡುತ್ತಾರೆಂದು ನಾನು ಮತ್ತು ಸ್ನೇಹಿತೆ ಪಲ್ಲವಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದೆವು.

ಓದುವದೆಲ್ಲ, ಹೀಗೆಯೇ ಓದಬೇಕೆಂದರದು ಹೇಗೆ ಸಾಧ್ಯಾ? ಅವೆಲ್ಲ ಸ್ವಂತಕ್ಕೆ ಬಿಟ್ಟಿದ್ದು, ಓದುವದು, ಬರೆಯುವದು ಎಲ್ಲ ಬಹಳ ವಯಕ್ತಿಕವಾದದ್ದು ಕೂಡ. ಹೀಗೆಯೇ ಓದು, ಹೀಗೆಯೇ ಬರೆ, ಎಂದರೆ ಅದು ವೈವಿಧ್ಯತೆ ಕಳೆದುಕೊಳ್ಳುತ್ತದೆ ಎಂಬುದಾಗಿತ್ತು ನಮ್ಮ ಅಭಿಪ್ರಾಯ. ನಾವೇನು ಇವರನ್ನು ಹೇಗೆ ಓದಬೇಕೆಂಬುದನ್ನು ಕೇಳಿದ್ದೆವ ಎಂಬ ಉದ್ಧಟತನವೂ ನಮ್ಮಲ್ಲಿತ್ತು.

ಅದರೆ ಅಂದು ಪರಿಚಯವಾದ ಮಾನ್ಯರು ಇಂದಿಗೂ ಓದಲಿಕ್ಕೆ ಸ್ಪೂರ್ತಿಯಾಗಿದ್ದಾರೆ. ಇವರೇನು ಗುರುತದವರಾ? ನಮ್ಮ ನೋಡಿದ ಕೂಡಲೇ ನಗೆಯಾಡಿದರಲ್ಲ ಎಂದು ನಾನು,ಪಲ್ಲವಿ ಅಂದುಕೊಂಡ ಹಿರಿಯ ಸಾಹಿತಿಗಳು, ಇಂದಿಗೂ ಗುರುತಿಟ್ಟು ಸಿಕ್ಕಿದಾಗಲೆಲ್ಲ ಪಕ್ಕದಮನೆಯವರಂತೆ ಮಾತಾಡುತ್ತಾರೆ. ತುದಿಯಲ್ಲಿ ಮತ್ತೆಲ್ಲ ಆರಾಮ್ ಅಲ್ದಾ, ಮಗಳ ಕರ್ಕಂಡು ಬರಲಿಕ್ಕೆ ಹೋಗಬೇಕು ಅನ್ನುತ್ತ ಕಾರ್ ಹತ್ತಿ ಕೈ ಆಡಿಸುತ್ತಾ ನಡೆದುಬಿಡುತ್ತಾರೆ.

ಅಂದಿಗೆ ಹೋಲಿಸಿದರೆ ನನ್ನ ಓದಿನ ಓಘ ಕಡಿಮೆ ಆಗಿದೆ.ಅದರೂ ಘಮ ಕಡಿಮೆಯಾಗಿಲ್ಲ ಬಿಡಿ. ಜೋಗಿಯವರ ಪುಸ್ತಕ ‘ಹಲಗೆ ಬಳಪ’ ಕೈಯಲ್ಲಿ ಹಿಡಿದು ಇಷ್ಟೆಲ್ಲ ನೆನಪಾಯಿತು. ಪುಸ್ತಕ ಇನ್ನು ಓದಿ ಮುಗಿದಿಲ್ಲ.
(ಅಂದಹಾಗೆ, ಇದ್ಯಾವುದು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೆ ಬರೆದುದಲ್ಲ,ನನಗೆ ಇವತ್ತು ದಕ್ಕಿದ್ದು ಇಷ್ಟು.)

ಮಂಗಳವಾರ

ಅಪರೂಪಕ್ಕೆ ಸಿಕ್ಕ ಖಾಲಿತನ

ಅಪರೂಪಕ್ಕೆ ಸಿಕ್ಕ  ಖಾಲಿತನ ಅದೇ ಇವತ್ತಿನ ವಿಶೇಷ. ಬರೆಯದೇ ಅದೆಷ್ಟೋ ದಿನಗಳೇ ಸಂದಿವೆ, ಅದೆಷ್ಟೆಂದರೆ ನಾನು ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ನನಗೇ ಅನುಮಾನ ಬರುವಷ್ಟು ದಿನಗಳು.

ನಿಜ ಹೇಳಬೇಕೆಂದರೆ, ಇಷ್ಟು ದಿನ ಓಡುತ್ತಲೇ ಇದ್ದೆ ಅನ್ನಿಸುತ್ತದೆ, ಹಗಲಲ್ಲೂ, ರಾತ್ರಿಯಲ್ಲೂ,ಮುಂಜಾವಿನಲ್ಲೂ! ಮುಸ್ಸಂಜೆಯಲ್ಲೂ.ಕೊನೆಗೆ ನಿದ್ದೆಯಲ್ಲೂ ಕೈ ಕಾಲು ಬಡಿಯುತ್ತ ಒಡುತ್ತಿದ್ದೆ ಇರಬೇಕು, ಹಾಗೆಯೇ  ಓಡುತ್ತಾ ಕನಸುಗಳನ್ನೂ ಹಿಂದೆ ಸರಿಸಿ ಓಡಿರಬೇಕು. ಯಾಕೆಂದರೆ ಒಳ್ಳೆಯ ಕನಸುಗಳು ಬೀಳದೆ ತಿಂಗಳುಗಳೇ ಸರಿದಿವೆ.

ಆದರೇ, ಇವೆಲ್ಲವುಗಳ ಮಧ್ಯದಲ್ಲು ಮತ್ತೆ ಹೊರಳಿ ಬರುವ ಯತ್ನ ನಡೆಸಿದ್ದೇನೆ ಅನ್ನುವದಂತು ಸತ್ಯ.೬ ವರುಷಗಳ ನಂತರ ಮತ್ತೆ ಕುಂಚ ಹಿಡಿದೆ,೨ ನನಗೆ ಖುಶಿ ಅನ್ನಿಸುವ ಚಿತ್ರ ಬಿಡಿಸಿದೆ, ಹಲವಾರು ಛಾಯಚಿತ್ರ ಕ್ಲಿಕ್ಕಿಸಿದೆ.ಅದನ್ನ ನನ್ನ ಈ ತೇಲಿ ಬಂದ ಪುಟಗಳ ಜೊತೆಗೆ ಸೇರಿಸಿದ್ದೇನೆ.



ಶನಿವಾರ

ಶಾಲ್ಮಲೆ ನಕ್ಕಳಾ?

ಶಾಲ್ಮಲೆ ಯಾವತ್ತೂ ಹಾಗೇ, ಮುನಿಸಿಕೊಂಡದ್ದೇ ಇಲ್ಲ ಅಂದರೆ ತಪ್ಪಾಗುತ್ತದೆ. ‍ಅಲ್ಲದೇ, ಇದನ್ನು ಆಕೆಯ ‘ಅವನು’ ಒಪ್ಪನು.
'ಸಿಟ್ಟು’ ಒಂದು ಸೊಬಗಂತೆ, ಆಕೆಯ ಪ್ರಕಾರ!
ಆಕೆಯ ‘ಅವನು’ ಮೌನ ಬಂಗಾರ ಅನ್ನುವದರಲ್ಲೇ ಜೀವನ ಕಳೆಯಬೇಕೆಂದಿದ್ದವ.
“ನೋಡು ಸುಮ್ಮನೆ ನೋಡು ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು !
ಅದರೊಳೊಂದಾಗುವದೆ ಪರಮ ರಸಿಕತೆ! ಅದಕೆ
ಮಿಗಿಲಿಹ ರಸಾನಂದ ಮತ್ತೆ ಬೇರೊಂದಿಲ್ಲ” - ಕುವೆಂಪು
ಎನ್ನುತ್ತಾ ಆತ ಬರಿದೇ ನಕ್ಕು ಬಿಡುತ್ತಾನೆ. ಅರ್ಥವಾಗುವದಿಲ್ಲ ಇಬ್ಬರೂ!

ತತ್ ಈ ಶಾಲ್ಮಲೆಯೊಂದಿಲ್ಲದಿದ್ದರೆ ..ರೇ ರೇ ಉಹುಮ್..ಮುಂದೆ ಮಾತು ಹೊರಡುವದೇ ಇಲ್ಲ.ಇದುರಿಗೆ ಶಾಲ್ಮಲೆ ನಿಂತಾಗ,ಮಾತು ಹೊರಕ್ಕೆ ಬರುವದೇ ಇಲ್ಲ. ಅದು ಹಾಗೇ.ಆಕೆಯೆಂದರೆ ಗೌರವವಾ,ಅತಿಯಾದ ಪ್ರೀತಿಯ? ಅದು ಆಕೆಗೂ ಅರ್ಥವಾಗಿಲ್ಲ.
ಬದುಕುತ್ತಾ ಹೊಗಬೇಕು ಇದು ‘ಅವನ’ ಸಿದ್ಧಾಂತ.ಹಾನ್, ಸಿದ್ಧಾಂತವೆಂದೆಲ್ಲ ಕರಿಯಲಿಕ್ಕೆ ಅವ ತಯಾರಿಲ್ಲ.

ಜೀವನಕ್ಕೊಂದು ಗುರಿ ಇರಬೇಕು, ಸಿದ್ಧಾಂತ ಇರಬೇಕು, ನಂಬಿಕೆ ಇರಬೇಕು,ಬಾಳಲಿಕ್ಕೆ Scientific Reason ಬೇಕು, ಯಾಕೆಂದು ಪ್ರಶ್ನಿಸಬೇಕು,ಇಲ್ಲವಾದರೆ ಅದು ಮೌಢ್ಯವಾಗುತ್ತದೆ. ಇದೆಲ್ಲ ಏನಿದ್ದರು ನಮ್ಮ ಶಾಲ್ಮಲೆಯದು.

 ಕೆಲವೊಮ್ಮೆ, ಪ್ರಶ್ನೆಯೂ ಮುಖ್ಯವಲ್ಲ, ಉತ್ತರವೂ ಮುಖ್ಯವಲ್ಲ, ಅವೆರಡರ ನಡುವಿನ ಗೊಂದಲ,ತಳಮಳ ದ್ವಂದ್ವ ಮತ್ತು ಮೌನ ಬಹಳ ಮುಖ್ಯವಾದುದು ಅನ್ನಿಸುತ್ತದೆ & ಬದುಕಲಿಕ್ಕೆ Scientific Reason ಬೇಕಿಲ್ಲ ಅಲ್ಲವಾ? -ಇದು ಶಾಲ್ಮಲೆಯ ‘ಅವ’ನದ್ದು.

ನನಗಂತು ನೂರಕ್ಕೆ ನೂರು ಸತ್ಯ ಅನ್ನಿಸಿತ್ತು.’ಅವನ’ ಮಾತನ್ನೆ ಹಾಗೆಯೇ ಫೇಸ್ ಬುಕ್ ವಾಲ್ನಲ್ಲಿ ಹಾಕಿದಾಗ, ನನ್ನ ಹಲವು ಸ್ನೇಹಿತರುಗಳಾದ ಪಲ್ಲವಿ,ಕವಿತಾ,ಪ್ರಸಾದು ,ಹೌದೆಂದಿದ್ದರು. ಶಾಲ್ಮಲೆಯ ಸಿಟ್ಟು ಈಗ ನನ್ನ ಮೇಲೆ ತಿರುಗಿರಬೇಕು.ಸಧ್ಯ ಮಾತಿಗೆ ಸಿಕ್ಕಿಲ್ಲ.
ಶಾಲು, ಈ ‘ಬೇಕು’ಗಳಲ್ಲೆ ಜೀವನ ತುಂಬಿಸ್ಕೋತೀಯೇನೆ ಹುಚ್ಚಿ, ಅನ್ನುತ್ತಾನೆ.
ತಿಂಗಳದ ಆ ನಾಲ್ಕು ದಿನಗಳಲ್ಲಿ ಶಾಲುವಿನವದ್ದಾಟ ಆಕೆಯ ‘ಅವನನ್ನ’ ಕಂಗೆಡಿಸುತ್ತದೆ. Painkiller ತೆಗೆದು ಕೊಳ್ಳದೆ ಹಾಗೆಯೇ ಒದ್ದಾಡುವ ಆಕೆಯನ್ನ ನೋಡುತ್ತ ಸುಮ್ಮನೆ ಕುಳಿತುಬಿಡುತ್ತಾನೆ, ಹೆಣ್ಣಿಗಿಂತ ಮೃದುವಾಗಿ ಬಿಡುತ್ತಾನೆ,ತಾನೇನು ಮಾಡಬೇಕೆಂದು ತಿಳಿಯದೆ ಶಾಲುವಿನ ಹಿಂದೆಯೇ ಸುತ್ತುತ್ತಾನೆ,ಬಾಲ ಸುಟ್ಟ ಬೆಕ್ಕಿನಂತೆ.ಆಕೆಗೆ ಅದು ಅರ್ಥವಾಗುವದೆ ಇಲ್ಲ. ಅರ್ಥವಾಗುವದಿಲ್ಲವೋ, ಅರ್ಥಮಾಡಿಕೊಳ್ಳಲಿಕ್ಕೆ ಯತ್ನಿಸುವದಿಲ್ಲವೋ, ನನಗಂತು ಬಗೆಹರಿಯುವದಿಲ್ಲ.

ನೋವು ಸಹಿಸುವ ಆಕೆ ಆತಂಗೆ ವಿಸ್ಮಯವಾಗಿ ಕಾಣುತ್ತಾಳೆ. ಒಂದು ಗುಳಿಗೆನುಂಗಿ ನಗಲಿಕ್ಕೆ ಆಗುವದಿಲ್ಲವ ಅಂದರೆ, ಇಲ್ಲ ಅಂತವುಗಳನೆಲ್ಲ ನುಂಗಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಂದೆ ಏನೇನೊ ಆಗಿಬಿಡುತ್ತದಂತೆ, ಶಾಲು ನಿಜಕ್ಕು ಆತನನ್ನು ಹೆದರಿಸುತ್ತಿದ್ದಾಳೆ ಅನ್ನಿಸುತ್ತದೆ.

ತನ್ನ ಮಿತಿಗೆ ಬಗೆಹರಿಯದ್ದು ಎಂದು ಸುಮ್ಮನಾಗುತ್ತಾನೆ.
ಮುಂದೆ ಎಂದೋ,ಎನೇನೋ ಆಗಿಬಿಡುತ್ತದೆಯೆಂದು ಇಂದು ಯೋಚಿಸುವ ಶಾಲ್ಮಲೆ ಆತಂಗೆ 'ಪ್ರಶ್ನೆ'ಯಾಗಿದ್ದಾಳೆ.
ಶಾಲು ಯಾಕೇ ಹೀಗೆ ನೀನು ?
ಅಳು ಬಂದಾಗ ಅತ್ತುಬಿಡು, ನಗು ಬಂದಾಗ ನಕ್ಕುಬಿಡು ಎನ್ನುವ 'ಅವ' ಶಾಲ್ಮಲೆಯ ಆ ನಗುವಿಗಾಗಿ ಕಾಯುತ್ತಿದ್ದಾನೆ. ಶಾಲ್ಮಲೆ ನಕ್ಕಳಾ?

ಗುರುವಾರ

ಖಾಲಿ



 A:ಯಾಕೋ ಸೋತು ಹೋದೆ ಅನ್ನೋ ಫೀಲಿಂಗು ಕಣೆ. ೩೦ ವರುಷಗಳ ವೃತ್ತಿ ಬದುಕಲ್ಲಿ ಹೀಗೆ ಅನ್ನಿಸಿದ್ದೇ ಇಲ್ಲ.

 B:ಹಮ್ ಅರ್ಥಾ ಆಗುತ್ತೆ.ನಿನಗೆ ಬೇಕಾದುದ್ದೆಲ್ಲ ಸಿಕ್ತು ಅದಿಕ್ಕೆ ಹಾಗಿರಬೇಕು.

A:ಈಗ ನನ್ನರಿವಿಗೆ ಬರುತ್ತಿಲ್ಲ,ಏನು ಬೇಕಾಗಿತ್ತು ನಂಗೆ?

B:ಇಲ್ನೋಡೆ,ಸ್ವಲ್ಪ ದಿನ ಅಷ್ಟೇ.ಈ ಒಂಟಿತನ ಇದೆಯಲ್ಲ,ಒಮ್ಮೆ ರೂಢಿ ಆಗಿ ಬಿಟ್ಟರೆ ಅಷ್ಟೆ ಮುಗೀತು,ಒಂಟಿತನವನ್ನ ನಾವು ಪ್ರೀತಿಸಲು ಶುರುಮಾಡಿ
ಬಿಡುತ್ತೇವೆ,ಹಾಗೆಯೇ ಒಂಟಿತನವೂ ಕೂಡ.

A:ಅದು ಹಾಗಲ್ಲ.

B:ಹಾಗೂ ಇಲ್ಲ ಹೀಗೂ ಇಲ್ಲ.ನಿನಗೆ ನೀನೆ.

A:ಹ್ಮ್ ನೀನಂದಿದ್ದು ಸರಿ,ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಆದರೂ..
ಎಷ್ಟು ವಿಚಿತ್ರ ಗೊತ್ತ,ನಮ್ಮ ಮೊಬೈಲಿನಲ್ಲಿ ಸಾವಿರ ನಂಬರ್ ಗಳಿರಲಿ,ನಮಗೆ ಬೇಕಾದಾಗ ಮಾತಾಡಲಿಕ್ಕೆ ಯಾರೂ ಸಿಕ್ಕುವದೇ ಇಲ್ಲ.ಎಲ್ಲವೂ ಕಾರ್ಯನಿರತವಾಗಿರುತ್ತವೆ,ಇಲ್ಲಾ ಸದ್ದಿಲ್ಲದೆ ಎಲ್ಲೋ ಬಿದ್ದಿರುತ್ತವೆ ಜೀವ ಕಳೆದುಕೊಂಡು.

B:ಅದಿಕ್ಕೆ ಹೇಳಿದ್ದು,ಯಾರಿಗೋ ಕಾಯುವದರಲ್ಲಿ ಅರ್ಥವಿಲ್ಲ

A:ಅದು ಹಾಗಲ್ಲ,ಎಲ್ಲೋ ಒಂದುಕಡೆ ಸಣ್ಣ ಭರವಸೆ.

B:ಭರವಸೆ ಇರಬೇಕು ನಿಜ, ಆದರೆ ಬೇರೆಯವರ ಮೇಲಲ್ಲ,ನಮಗೆ ನಮ್ಮ ಮೇಲೆ.

A:ಈ ಬೇಜಾರು,ನಿರೀಕ್ಷೆ ಗಳೆಲ್ಲ ಹಾಗೆ ಕಾಡುತ್ತವೆ, ಕಾಡಿಸುತ್ತವೆ.ಮಾಡಲಿಕ್ಕೆ ಕೆಲಸವಿಲ್ಲದಾಗ ನೆನಪಾಗುತ್ತವೆ.ಹಿಂದಿಲ್ಲ ಮುಂದಿಲ್ಲ,ಹೋಗಲಿ ಅರ್ಥವಾದರು ಇದೆಯ? ಅದೂ ಇಲ್ಲ.Just Like that…

B:ಯಾಕೆ ಅನ್ನಿಸುವದಿಲ್ಲ ಗೊತ್ತಾ, ಯಾರು ಆಪ್ತರಾಗುವದೇ ಇಲ್ಲ,ಎಲ್ಲರಿಗೂ ಧಾವಂತದ ಬದುಕಿನ ಹೋರಾಟ ದಿಕ್ಕೆಟ್ಟಿಸಿರುತ್ತದೆ.ಅವರವರ ಬದುಕು ಅವರವರಿಗೆ .

A:ಇಂದಿನ ಬದುಕೊಂದೇ ನಿಜ ಅಲ್ಲ ಅಲ್ಲವ, ನಾಳೆಯೂ ಬದುಕಬೇಕು,ಅದ್ಯಾಕೆ ಅರ್ಥವಾಗುವದಿಲ್ಲ?

B:ಅಯ್ಯೊ ಮಂಕೆ,ಇವತ್ತು ಬದುಕಿದರೆ, ನಾಳೆ ತಾನೆ? ಅಲ್ಲಿಯವರೆಗು ನಾಳೆಯ ಯೋಚನೆ ಯಾತಕ್ಕೆ.ಇವರೆಲ್ಲ ಜನಸಾಮಾನ್ಯರು ಕಣೆ,ಇಂದು ಮುಖ್ಯ.ಕಾಣದ ನಾಳೆಯಲ್ಲ.

A:ಹ್ಮ್ಮ್ ಆದರೂ ಕಾಣದ ನಾಳೆಯ ಬಗ್ಗೆ ಕನಸು ಕಟ್ಟಿದಾಗ,ಎಷ್ಟು ಕುಶಿಯಾಗುತ್ತದಲ್ಲ.

B:ನನ್ನ ಕತೆ ಕೇಳು

ಇಷ್ಟು ವರ್ಷ ಕೆಲಸ ಮಾಡಿ, ಒಂದೇ ಸಾರಿ ನಿನಗಿನ್ನು ವಯಸ್ಸಾಯಿತು ಮನೆಗೆ ಹೋಗು ಎಂದಾಗ,ಇವರಿಗು ನನಗೂ ಇನ್ನು ಏನು ಸಂಬಂಧ ಉಳಿದಿಲ್ಲ ಎಂದು.ಈ Retirement  ಹಾಗೆ.ಎಲ್ಲರಿಗೂ ವಯಸ್ಸಾಗುತ್ತದೆ,ಆದರೆ ಅದನ್ನ ಬೇರೆಯವರ ಬಾಯಿಯಿಂದ ಕೇಳಿದಾಗ , ನಿಜಕ್ಕೂ ನನಗೆ ವಯಸ್ಸಾಯಿತು ಅನ್ನಿಸಿಬಿಡುತ್ತದೆ.

A:ಹೌದು…ಅದು ಹಾಗೆ ಕಣೆ

B:ಅದು ನನ್ನದೇ ಕಂಪನಿ, ನಾ ಕಟ್ಟಿ ಬೆಳೆಸಿದ್ದು.ನನಗೆ ನಿನ್ನ ಸೇವೆ ಸಾಕು ಇನ್ನು ನೀನು ಹೋಗಿ ವಿಶ್ರಾಂತಿ ತೆಗದುಕೊ ಅಂದಾಗ, ಇದನ್ನ ಕಟ್ಟಲು ಪಟ್ಟ ಪಾಡೆಲ್ಲ ಕಣ್ಮುಂದೆ ಬಂದು,ಯಾಕೋ ನಾ ಬೇರೆಯವ,ಒಂಟಿ ಅನ್ನಿಸಿಬಿಡುತ್ತದೆ.ಇನ್ನು ಅವರ ಆಡಳಿತದಲ್ಲಿ ತಲೆ ಹಾಕಬಾರದಂತೆ.ಯುವಕರಿಗೆ ಅವಕಾಶ ಕೊಡಬೇಕಂತೆ.ಕಂಪನಿ ಬೆಳೆಯಿಸುತ್ತಾ,ಸಾವಿರ ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದು ಕಾಣುವದೇ ಇಲ್ಲ.

A:ಹುರುಳಿಲ್ಲದ್ದು ಕಣೆ.ಸಂಜೆ ಆಗ್ತ ಇದೆ ಮನೆಗೆ ಹೋಗಬೇಕಲ್ಲಾ.ಅಲ್ಲಾ ನೀ ಅದೆನೋ ಹೊಸ ಕಂಪನಿ ಕಟ್ಟುತ್ತೀಯಂತೆ?

B :ಹ್ಮ್ ,ಸುಮ್ಮನೆ ಮನೆಯಲ್ಲಿ ಕುತಿರ್ಲಾ? ಶುದ್ಧ ಸೋಂಬೇರಿಯಾಗಿ?

A: ಯಾಕಾಗಬಾರ್ದು? ಒಂದಷ್ಟು ದಿನ ಹಾಗೆ,ಖಾಲಿ,ಏನನ್ನೂ ಯೋಚಿಸದೇ.ಪಾರ್ಕಿಗೆ ಬಾ ,ಸುತ್ತಲಿದನ್ನು ನೋಡು,ಬೇರೆಯದೇ ಲೋಕ.ಹೊಸ ಹೊಸ ವಿಚಾರಗಳು ಬಂದಪ್ಪಳಿಸಿಯಾವು.

B: Let me try Out..


ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.

ಖಾಲಿತನ ಅನುಭವಿಸಿದವರಿಗಷ್ಟೆ ಗೊತ್ತು,ಖಾಲಿತನಕ್ಕಾಗಿ ಜನರಿಲ್ಲದ ಪ್ರದೇಶವೇ ಆಗಬೇಕಿಲ್ಲ,ನೀವೆಲ್ಲಿದ್ದೀರೋ ಅಲ್ಲೇ ದಕ್ಕಬಹುದು.
ತ್ವಮೇವ ಕರ್ತಾಸಿಯಿಂದ 'ಅವನೇ ನಾನು'  ವರೆಗೂ.

ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?
ಮತ್ತೇನೂ ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ


ನನ್ನ ಆಫೀಸಿನ ೧೧ ನೆ ಮಹಡಿಯಲ್ಲಿ ಇರುವದು ನನ್ನ ಡೆಸ್ಕ್,ಒಟ್ಟು 10ಲಿಫ್ಟ್ ಗಳಿದ್ದಾವೆ ಅಲ್ಲಿ .ಬೆಳಿಗ್ಗೆ ೮ ಕ್ಕೆಲ್ಲ ಲಿಫ್ಟ್  ಸುಮಾರಾಗಿ ಖಾಲಿ ಇರುತ್ತದೆ.ಆದ್ದರಿಂದ ನಾನೇರಿದ ಲಿಫ್ಟ್, ಬೇರೆ ಮಹಡಿಗಳಲ್ಲಿ ನಿಲ್ಲದೆ,ಸೀದಾ ೧೧ ನೆ ಮಹಡಿ ತಲುಪಿಬಿಡುತ್ತದೆ.ಆಗಲೇ ನನಗೆ ಒಂದು ತರದ ಸಮಾಧಾನ,ಎಲ್ಲಾಮಹಡಿಗಳಲ್ಲಿ ನಿಲ್ಲುತ್ತಾ ಮೇಲೇರ ತೊಡಗಿದರೆ,ಯಾಕೋ ವಿಪರೀತ ಅಸಮಾಧಾನ.೫ ನಿಮಿಷಕ್ಕೆ ಬರಬೇಕಾದ್ದು,೭ ನಿಮಿಷ ತೆಗೆದುಕೊಂಡರೆ ಅದರ ಬಗ್ಗೆ ಕೆಟ್ಟ ಅಸಮಾಧಾನ.ಲಿಫ್ಟೆ ಇಲ್ಲದಿದ್ದರೆ ಎಂಬುದನ್ನ ಯೋಚಿಸುವದಕ್ಕೂ ಹೋಗುವದಿಲ್ಲ,ಆತುರತೆ 'ಆಧುನಿಕತೆಯ ಉಡುಗರೆಯ?ಇರಬೇಕು .ಜೀವನ ಸರಳವಾದಷ್ಟು ,ಸುಲಭವಾದಷ್ಟು ಮತ್ತೂ ಸುಲಭವಾಗಬೇಕು,ಸರಳವಾಗಬೇಕೆಂಬುದು ದುರಾಸೆ ಅಲ್ಲವ?(ಹ್ಮಮ್, ಇಂದಿನ ಎಲ್ಲಾ ನವನವೀನ ಆವಿಷ್ಕಾರಗಳಿಗೆ ,ಬರುತ್ತಿರುವ ಹೊಸ ಉದ್ಯಮಗಳಿಗೆ ಇದೇ ಮೂಲ)ನಾನೊಬ್ಬಳು ಹುಟ್ಟಾ ಆತುರಗಿತ್ತಿ,ದಡ್ ದಡ್ ಎಂದು ಎಲ್ಲಾ ಆಗಿಬಿಡಬೇಕು,ಕಣ್ಮುಚ್ಚಿ ತೆರೆಯುವಷ್ಟರಲ್ಲಿ ,ಇಲ್ಲದ್ದು ಬಂದುಬಿಡಬೇಕು (ಅದನ್ನು ನಾನು 'Effcient Way' ಅನ್ನುವದು )

ಆದರೂ,ಇತ್ತೀಚಿಗೆ ನನ್ನ ಆತುರ ಪ್ರವ್ರತ್ತಿಗೆ ಕಡಿವಾಣ ಬಿದ್ದಿದೆ (ಮತ್ತೇನು ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ:ಕೊನೆಯಲ್ಲಿ ಅದರ ಬಗ್ಗೆ ಬರೋಣ.)ತುಂಬಿದ ಲಿಫ್ಟ್ ನ ಕನ್ನಡಿಯಲ್ಲಿ ತನ್ನ ಅಲಂಕಾರ ಸರಿಯಾಗಿದೆಯೋ ಇಲ್ಲವೋ ಎಂದು ಪದೇ ಪದೇ   ಕನ್ನಡಿಯತ್ತ ನೋಡುತ್ತಿರುವ ಆ ನೀರೆಯ ನಾಜೂಕು, ಬಿಗಿದುಕೊಂಡ ಕೊರಳ ಪಟ್ಟಿ (ಟೈ ) ಸರಿಪಡಿಸಿಕೊಳ್ಳುವ ಮಹಾನುಭಾವ ,ಕಾಪಿಚಿನೋ ಕೈಯಲ್ಲಿ ಹಿಡಿದು,ಕಣ್ಣು ಕಣ್ಣು ಬಿಡುತ್ತಿರುವ ಚೀನಿ ಯುವಕ,ಯುವತಿ,ಜಗತ್ತೇ ತಲೆಯ ಮೇಲಿದೆಯೇನೋ ಎಂಬ ಮುಖಮಾಡಿ ಕೈಯಲ್ಲಿನ ಬೆರ್ರಿ ಯಲ್ಲಿ ಇ-ಮೇಲ್ ಓದುತ್ತಿರುವ ಗಂಭೀರ ಮುಸುಡಿಯ ಮ್ಯಾನೇಜರ್ ,ತನ್ನದೇ ಫೋಟೋವನ್ನು ಫ್ರೇಮು ಹಾಕಿ ಕುತ್ತಿಗೆಗೆ ನೇತುಹಾಕಿಕೊಂಡಿರುವ ಆತಾ, ಆಕೆ .....ಅಯ್ಯೋ ಇಷ್ಟು ದಿನ ಎಷ್ಟೆಲ್ಲಾ ಮಿಸ್ ಮಾಡಿಕೊಂಡಿದ್ದೆನಲ್ಲ  ಅಂತ ಮೊನ್ನೆ ಅನಿಸಿತ್ತು.

ಮನೆಗೆ ಬಂದು ಬಾಗಿಲು ತೆರೆಯಲು ಐಡಿ ಕಾರ್ಡ್ ಹಿಡಿಯುವದು , ಮಾತಿನಲ್ಲಿ ನೂರುಬಾರಿ 'Issue' ಎಂಬ ಪದ ಬಳಸುವದು ಇವೆಲ್ಲ ವ್ರತ್ತಿ ಕೊಟ್ಟ ವರ.
                              * **** ******* **** **** **** ***
ನಾನು ಮೊದಲೇ ಪ್ರಾಮಿಸ್ ಮಾಡಿದಂತೆ, ಚಿತ್ರಾ ದಿವಾಕರುಣಿ ಯವರ 'One Amazing Thing ' ಕಾದಂಬರಿಯ ಕತೆ ಹೇಳಿಬಿಡುತ್ತೇನೆ;

೯ ಜನರ ತಂಡವೊಂದು, ಅಮೇರಿಕದ ನಗರವೊಂದರಲ್ಲಾದ ಭೂಕಂಪದಿಂದಾಗಿ,ವೀಸಾ ಆಫೀಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ:ಉಮಾ (ಅಮೇರಿಕಾದಲ್ಲಿ ಬೆಳೆದ ಭಾರತೀಯ ಕೂಸು) ,ತಾರಿಕ್ (ಬದಲಾದ ಅಮೇರಿಕಾದ ಬಗ್ಗೆ ಕೋಪವುಳ್ಳ ಮುಸ್ಲಿಂ ಯುವಕ), ಮತ್ತೊಬ್ಬ ಮಾಜಿ ಸೈನಿಕ ,ವೀಸಾ ಕಚೇರಿಯ ಅಧಿಕಾರಿ ,ಚೈನೀಸ್ - ಇಂಡಿಯನ್  ಮಹಿಳೆ ಮತ್ತೂ ಆಕೆಯ ಮಗಳು ಲಿಲಿ ,ವಯಸ್ಸಾದ ಬಿಳಿಯ ದಂಪತಿಗಳು, ಇವರೆಲ್ಲ ಕಾದಂಬರಿಯ ಪಾತ್ರಗಳು. ತಮ್ಮನ್ನು ರಕ್ಷಿಸಲು ಬರುವ  ಸಹಾಯ ತಂಡಕ್ಕಾಗಿ ಕಾದುಕುಳಿತಿರುವಾಗ, ಸಮಯ ಕಳೆಯಲು ತಮ್ಮ ಜೀವನದ ಅತಿ ಅದ್ಭುತ ಅನಿಸುವ,
ಅದುವರೆಗೂ ಯಾರಿಗೂ ಹೇಳಿರದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.


ಅಮೇರಿಕಾದ 'Houston Univercity' ಯಲ್ಲಿ ಪ್ರೊಫೆಸರ್ ಆಗಿರುವ ಈಕೆಯ ಹಲವು ಸಂದರ್ಶನಗಳನ್ನು ಓದಿದ್ದೇನೆ, ಆಕೆಯಿಂದ ಹಲವು ಮಾರ್ಗದರ್ಶನಗಳನ್ನೂ ಪಡೆದಿದ್ದೇನೆ. ಆಕೆಯ ಬರವಣಿಗೆಯ ಶೈಲಿಯಲ್ಲಿ,ವಸ್ತು ವರ್ಣನೆಯಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು.ಆಕೆಯ ಸರಳ ಬರಹ ನನಗೆ ತುಂಬಾ ಇಷ್ಟವಾದದ್ದು. ಮುಖ್ಯವಾಗಿ ಅನಿವಾಸಿಗಳ ಜೀವನದ ತುಮುಲಗಳು,ಮಹಿಳೆ, ಆಕೆಯ ಬರಹದ ವಿಷಯಗಳು. ಆಕೆಯ 'Palace Of Illusions'ಇನ್ನೊಂದು ಇಷ್ಟವಾದ ಕೃತಿ(ದ್ರೌಪದಿ ಮತ್ತು ಕರ್ಣನ ಕುರಿತಾದದ್ದು)

                                                    ****************
ಕೊನೆಯದೊಂದು ಪ್ರಶ್ನೆ :

- ನನ್ನ ಮೊದಲಿನ ಜೀವನಕ್ಕೆ ಹಿಂತಿರುಗಲು ಹಾದಿಗಳಿಲ್ಲ- ಕೂಡಿಸುವ ಸೇತುವೆಗಳು ಮುರಿದಿವೆ ;ಅಷ್ಟೇ ಅಲ್ಲ ,ನನಗೆ ನನ್ನಿದುರು ಯಾವ ಹಾದಿಗಳು ಕಾಣುತ್ತಿಲ್ಲ.

ಅವರು ಹೇಳಿದ್ದು :
ಯಾವುದು ಇಲ್ಲ, 'ಹಾದಿ'ಎನ್ನುವದು ನಿನ್ನ ಮನದ ಭ್ರಮೆ.ಮನಸ್ಸಿದೆಯಲ್ಲ, ಅದು ತನ್ನ ಗುರಿಸಾಧಿಸಲು, ಆಸೆ ಪೂರೈಸಿಕೊಳ್ಳಲು ಕನಸುಗಳನ್ನು ಕಾಣುತ್ತಲೇ ಸಾಗುತ್ತದೆ. ಮನಸ್ಸಿನ ಈ ವ್ಯವಹಾರಗಳ ಛಾಯೆಯೇ 'ಹಾದಿ '.ಮೊದಲು ಏನೋ ಬೇಕೆಂದುಕೊಳ್ಳುತ್ತೀಯ,ಸಹಜವಾಗಿ ಅದು ಬೇಕು,ಇದು ಬೇಕು,ಇತ್ಯಾದಿ 'ಬೇಕು'ಗಳ ವ್ಯವಹಾರ ಭವಿಷ್ಯತ್ತಿಗೆ ಸಂಬಂಧಿಸಿದ್ದು.ಭವಿಷ್ಯತ್ ವರ್ತಮಾನದಲ್ಲಿಲ್ಲ, ಹಾಗಂದ ಮೇಲೆ ನಮ್ಮ ಬಳಿ ಇರುವ ಇವತ್ತಿಗೂ, ಇನ್ನೂ ಬಾರದ ನಾಳೆಗೂ ಸೇತುವೆ ಕಟ್ಟಿದೆ ಅನ್ನಿಸಿದರೆ ಅದು ನಿನ್ನ ಕಲ್ಪನೆ,ಭ್ರಮೆ .

ನಿನಗೆ ಎಲ್ಲೂ ಹೋಗುವದಕ್ಕಿಲ್ಲ, ನೀನು ಎಲ್ಲಿ ಹೋಗಬೇ ಕೆಂದಿರುವೆಯೋ ಅಲ್ಲಿಯೇ ಇದ್ದೀಯ,ಅದು ನೀನು ಸಾಧಿಸಿದ್ದಲ್ಲ, ನಿನಗೆ ದಕ್ಕಿದ್ದು .

ಸ್ನೇಹಿತರೇ , ಇವತ್ತು ನನಗೆ ದಕ್ಕಿದ ಸಮಯ ಇಷ್ಟೇ.ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು

ಸೋಮವಾರ

ನಾವು ಎಲ್ಲೋ ಕಳೆದು ಹೋಗ್ತೀವ?


When finally ,we reached the place,

We hardly knew why we were there

The trip had darkened every face..


'ಅಂತೂ ಇಂತೂ ನಮ್ಮ ಗುರಿ ತಲುಪಿದಾಗ,ನಮ್ಮ ಪ್ರಾಜೆಕ್ಟ್ ,ಯೋಜನೆ ಅಂತಹ ಮಹತ್ತರವಾದುದನ್ನೇನು ಸಾಧಿಸಿಲ್ಲ ಎಂಬುದು ಅರಿವಿಗೆ ಬಂದು ಎಲ್ಲರ ಮುಖ ಕಳೆಗುಂದಿರುತ್ತದೆ '.

ಹೀಗೂ ಆಗುತ್ತದಲ್ಲ? ಏನೇನೋ ಪ್ಲಾನು ,ಏನೇನೋ ಉಪಾಯಗಳು ,....ಜೀವನದಲ್ಲಿ ಬೊಗಸೇ ತುಂಬಾ ಕತೆಗಳು ,ವಿಪರೀತ ಎನ್ನುವಸ್ಟು ಮಾತುಗಳು ,ಅಣ್ಣ, ತಮ್ಮ ,ಅಮ್ಮ ಅಪ್ಪನೆಂಬ ಹಲವಾರು ಸಂಬಂಧಗಳು , ನಾನೆಂಬ ಮಾಯೆ,ನಿನ್ನೆಯೆಂಬ ಕನಸು ,ನಾಳೆ ಎಂಬ ಸಚಿತ್ರ ,ನನ್ನದೆಂಬ ಮೋಹ, ಇದು ನನ್ನದಾಗಬೇಕು,ಈಸಾರೇ ಇಷ್ಟೇ % ಮೋಸಮಾಡಬೇಕು ಎಂಬ ದೊಡ್ಡವರ (!?)ವ್ಯವಹಾರಿಕ ನಿಯತ್ತು . ಇಂತಃ ಎಲ್ಲವುಗಳ ಮಧ್ಯ ಬದುಕುತ್ತಾ, ನಲಿಯುತ್ತಾ, (ನಮ್ಮ ಕರ್ಮಕ್ಕೆ ಕೆಲವೊಂದು ಸಾರೇ ಅದನ್ನು ಒಗ್ಗಿಸಿಕೊಳ್ಳುತ್ತ ) ? ಬ್ಲೋಗೆ ಗೆ ಒಂದು ಹೊಸ ಫೋಟೋ ಹಾಕ್ತಾ  (ಪ್ರೊಫೈಲ್ ಗೆ ಒಂದು ಫೋಟೋ ಹಾಕುವದು ನೀವು ಬದುಕಿದ್ದೀರಿ ಎಂಬುದಕ್ಕೆ ಒಂದು ಪ್ರೂಫ್ , ಬ್ಲೋಗ್ ನಂತಹ ಸೋಶಿಯಲ್ ನೆಟ್‌ವರ್ಕಿಂಗ್ ಟೂಲ್ ಗೆ ಮಾತ್ರ ಇದು ಅಪ್ಲಿಕಬಲ್, ಕಾರಣ ಏನಪ್ಪಾ ಅಂದ್ರೆ ಬ್ಲೋಗ್ ಒಂದು ಸೋಶಿಯಲ್ ನೆಟ್ವರ್ಕಿಂಗ್ ಟೂಲ್ ಆಗಿರೋದಕ್ಕೆ ಬ್ಲೋಗ್ ಬರೆಯೋರು ಎಲ್ಲರ ಮುಖವನ್ನ ನೋಡಿರೋದಿಲ್ಲ ,ನಿಜವಾದವರ ,ಇಲ್ಲವ ಎನ್ನುವ ಬಗ್ಗೆ ಒಂದು ಚಿಕ್ಕ ಕ್ಲೂ ಸಿಗಬಹುದು . Cyber ಕ್ರೈಮ್ ನ ತಡೆಗಟ್ಟುವಲ್ಲಿ ಕೊಂಚ ಉಪಯುಕ್ತ ಅಲ್ವಾ?  ಬಾಯೀ ತುಂಬಾ ನಕ್ಕು, ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಬೈ ಎಂದರೆ .. ನಮಗಾಗಿ ಕಾಯೋಕೆ ನಮ್ಮ ಗುರಿ ಇದೆಯಲ್ಲಾ..we should reach our Aim alva? Han . ಹಾಂ Aim ಅನ್ನೋದಕ್ಕಿಂತ The Ultimate ಎನ್ನುವ ಶಬ್ಧ ಬಹಳ ಸೂಕ್ತ ಎನ್ನಿಸುತ್ತೆ The ultimate is nothing but Fact,Truth,Reality..! ನಾನೇನು ಮುಕ್ತಿಯ ಬಗ್ಗೆ ಮಾತನಾಡುತ್ತಿಲ್ಲ.. ಸತ್ಯ,ವಾಸ್ತವದ ಬಗ್ಗೆ ..ಸತ್ಯ ,ಮಿಥ್ಯ ಎಲ್ಲವೂ ಯಾರು ಹೇಳ್ತಾರೆ ಎನ್ನುವದರ ಮೇಲೆ ಮೇಲೆ ಡಿಪೆಂಡ್ ಆಗಿರುತ್ತೆ............ ಇವೆಲ್ಲವನ್ನ ಮೀರಿ ಬೆಳೆಯೋ ಹೊತ್ತಿಗೆ ನಾವು ಎಲ್ಲೋ ಕಳೆದು ಹೋಗ್ತೀವ?.......... ಮಾಡೋ ಕೆಲಸಾನ enjoy ಮಾಡಬೇಕು ,ಇಲ್ಲಾಂದ್ರೆ ಇಷ್ಟ ಇಲ್ದೇ ಇರೋದನ್ನ ಆನಂದಿಸುವ ಅಥ್ವಾ ಹಾಗಂತ ನಟಿಸುವ ಭರದಲ್ಲಿ –‘ಲೇ ,ನೀನ್ಯಾಕೆ ಹಿಂಗಾದೆ ? ‘ ಅಂತ ನಮ್ಮನ್ನ ನಾವು ಕೇಳುವ stage ಬರುತ್ತದಾ? ನಿಮಗೂ ಹೀಗೆ ಫೀಲ್ ಆಗಿರಬೇಕಲ್ಲ? ನಮ್ಮನ್ನ ನಾವು Prepare ಮಾಡೋ ಅಗತ್ಯ ಇದೆ..

ಮೇಲಿನ ಪದ್ಯದ ಸಾಲುಗಳನ್ನ Nissim Ezekiel ಎಂಬ ‘finest’ Anglo- Indian ಕವಿಯ Enterprise ಎಂಬ ಪದ್ಯದಿಂದ ಆಯ್ದಿದ್ದೇನೆ.. Do you Prepare for realities? ಯಾವುದೇ ಪ್ರಾಜೆಕ್ಟ್ ನ್ನ ಶುರು ಮಾಡುವ ಮುಂಚೆ ನಮ್ಮನ್ನು ನಾವು ಕೇಳಿಕೊಳ್ಳ ಬೇಕಾದ ಪ್ರಶ್ನೆ ಇದು..

ಮುಂದಿನ ಒಂದು ವರುಷಕ್ಕೆ ಸರಿಯಾಗುವ ಪ್ರಾಜೆಕ್ಟ್ ಗಳಿದ್ದಾವೆ ನನ್ನ ಕೈಯಲ್ಲಿ , ಒಂದಿಷ್ಟು ಜಾಸ್ತಿ ಓದು ,ಒಂದು ಚೂರು ಬರಿಯೊದು...ಮಧ್ಯ wakeup call ಕೊಡೋ Exam ಗಳು ಸ್ನೇಹಿತರೊಬ್ಬರಿಗೆ ಕಮರ್ಶಿಯಲ್ website, ಪ್ರಶಾಂತ ಅಣ್ಣ ಗೆ ಎಂದು ಒಂದು ಫೋಟೋ ವೆಬ್ ಸೈಟ್ ಜೊತೆಗೆ ಆಫೀಸ್ ನ ಕೆಲಸ, ಸಂಭ್ರಮಿಸಲು ಮನೆ ಇತ್ಯಾದಿ ಇತ್ಯಾದಿ….


ಶುಕ್ರವಾರ

[This poem was nominated by UN as the best poem Written by an African Kid]

ನಾನು ಚಿಕ್ಕ ಮಗುವಿನ ಭಾವನೆಯನ್ನ ಅನುವಾದ ಮಾಡಿದ್ದೇನಷ್ಟೇ.
-ಶ್ವೇತಾ



ಯೋಚಿಸಿ ..

ಅಪ್ಪ ಅಮ್ಮ ನ ಪ್ರೀತಿಯ ಮಗಳಾಗಿ ಹುಟ್ಟುವಾಗಲೂ ಕಪ್ಪಗಿದ್ದೆ.

ಅಮ್ಮನ ಕೈ ತುತ್ತು ತಿಂದು ದೊಡ್ಡವನಾಗಿ ಬೆಳೆದಂತೆಲ್ಲ ಕಪ್ಪಗೆ ಇದ್ದೆ

ಬೆಳ್ಳಗಿನ ಸೂರ್ಯನ ಮೈ ಸುಡುವ ಬಿಸಿಲಿನಲ್ಲಿ ನಡೆದಾಗಲು ಕಪ್ಪಗೆ ಇದ್ದೇ..

ಪುಟ್ಟ ಹೃದಯ ದಭ್ ಡಬ್ ಎಂದು ಹೊಡೆದುಕೊಂಡು ಭೀತನಾಗಿ  ನಡುಗಿದಾಗಲು ಕಪ್ಪಗೆ

ಸೌಖ್ಯವಿಲ್ಲದೇ ಒದ್ದಾಡುವಾಗಲೂ ನಾ ಕಪ್ಪಗೇ ಇದ್ದಿದ್ದೆ..

ಹಮ್‍ಮ್ ..  ಇನ್ನು ನಾನು ಸತ್ತು ಮಣ್ಣಲ್ಲಿ ಮಣ್ಣಾಗುವಾಗ ಆಗಲೂ ಕಪ್ಪು.

ಆದರೆ, ನೀವು ಬಿಳಿಯ ಸಜ್ಜನರು .....


ಹುಟ್ಟಿದಾಗ ಗುಲಾಬಿ ,

ಬೆಳೆದಂತೆಲ್ಲ ಬೆಳ್ಳಗೆ ,ಸೂರ್ಯನ ಬಿಸಿಲಲ್ಲಿ ಕೆಂಪಗೆ ,

ಭಯಭೀತನಾದಾಗ ಬಣ್ಣ ಗೆಟ್ಟ ಹಳದಿ ,

ಹೆಚ್ಚು ತಂಪಾದರೆ ನೀಲಿ , ಅಪ್ಪಿತಪ್ಪಿ ಹಸಿರು ಅನಾರೋಗ್ಯದಿಂದ ,

ಮಣ್ಣಲ್ಲಿ ಮಣ್ಣಾಗುವಾಗ?
 
ನೀವು ಬೂದು ...


ಹೀಗಿದ್ದಾಗಲು ,ನೀವು ನನ್ನನ್ನು ಕರೆಯುವದು ವರ್ಣೀಯನೆಂದೆ?

ಗುರುವಾರ

ಮೂಡಿಗೆರೆಯ ವಿಸ್ಮಯ!

ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದು ಕಾಫಿ ಬೀಜಗಳನ್ನು ಮಾರಿ ಇಲ್ಲಿಂದ ಹಳೆಯ ಪೇಪರ್ ಗಳನ್ನು ಒಟ್ಟುಗೂಡಿಸಿ ಒಯ್ಯುತ್ತಿದ್ದ.ಸುತ್ತಲಿನ ಮನೆಗಳಿಗೆಲ್ಲ ಹೋಗುವ ಮುಂಚೆ ಬರುತ್ತಿದ್ದುದೇ ನಮ್ಮಮನೆಗೆ.

ನನಗೆ ಆತನ ನೆನಪಾದಾಗಲೆಲ್ಲ ರವೀಂದ್ರರ 'ಕಾಬೂಲಿವಾಲ' ನೆನಪಿಗೆ ಬರುತ್ತಾನೆ .ನಮ್ಮ ಮನೆಯ ಮಕ್ಕಳೆಲ್ಲ ಸಾಬಣ್ಣ ಬರುತ್ತಾನೆ ಅಂದ್ರೆ ಸಾಕು ಅಂದು ಆಟ ಪಾಟಗಳೆಲ್ಲ ಬಂದು .ಆತ ಬರುತ್ತಿದ್ದುದೇ ವರ್ಷಕ್ಕೆರಡು ಸಾರೆ. ಬಂದೆ ಇಲ್ವಲ್ಲೋ ಸಾಬಣ್ಣ ಅಂದರೆ 'ಹಾದಿ ಕರ್ಚು ಹುಟ್ಟಬೇಕಲ್ಲ ಕೂಸೇ 'ಎಂದು ಸುಮ್ಮನಾಗುತ್ತಿದ್ದ..ಆತ ನಮಗೆ ಹೇಳುತ್ತಿದ್ದುದೆಲ್ಲ ಪೂರ್ಣ ಚಂದ್ರ ತೇಜಸ್ವಿಯವರ ಕತೆಗಳು.ಆತ ಅವರ ತೋಟಕ್ಕೆ ಕಾಫಿ ಬೀಜಕ್ಕಾಗಿ ಹೋಗುತ್ತಿದ್ದ .
ಮೀನು ಹಿಡಿಯುತ್ತ ಕೂತಿರುತ್ತಿದ್ದ ತೇಜಸ್ವಿ,ಹಾರುವ ಹಕ್ಕಿಗಾಗಿ ತಾಸುಗಟ್ಟಲೆ ಕುಳಿತು ಕಾದು ಪೋಟೋ ತೆಗೆಯುತ್ತಿದ್ದ ತೇಜಸ್ವಿ ,ನಮ್ಮ ಮನೆಯ ಮಕ್ಕಳಿಗೆಲ್ಲ ತೇಜಸ್ವಿ ಬಹು ಪರಿಚಿತರು .ಚಿರತೆ ಎಂದರೆ ಜಿಮ್ ಕಾರ್ಬೆಟ್ ,ಮಚಾನು , ಚಂದ್ರ ,ನಡೆಯುತ್ತಿದ್ದರೆ ನಿಮ್ಮನ್ನು ಹುದುಗಿಸಿಕೊಳ್ಳುವ ಮಾಯಾ ಮರಳು ,ಹಾರುವ ತಟ್ಟೆಗಳು ...,ಒಟ್ಟಾರೆ ಜಗತ್ತನ್ನು ನಾವು ನೋಡಿದ್ದೇ ತೇಜಸ್ವಿಯವರ ಕಣ್ಣುಗಳ ಮೂಲಕ. ಸಾಬಣ್ಣ ಹೇಳುತ್ತಿದ್ದ ಕತೆಗಳಲ್ಲಿನ ಕೈಗೆಲ್ಲ ಕಪ್ಪು ತಾಗಿಸಿಕೊಳ್ಳುತ್ತ ಮಿಕ್ಸರ್ ,ಗಾಡಿ ಗಳ ರೆಪೇರಿ ಮಾಡುತ್ತಿದ್ದ ,ಕಂಪ್ಯೂಟರ್ ಮುಂದೆ ಕುಳಿತು ಕನ್ನಡ ಸಾಫ್ಟವೇರ್ ಬಗ್ಗೆ ಹೋರಾಡುತ್ತಿದ್ದತೇಜಸ್ವಿ ,ಕಾಫಿ ಬೆಳೆಗಾರರಿಗಾಗಿ ಧ್ವನಿಯೆತ್ತಿದ್ದ ತೇಜಸ್ವಿ .....ಅವರ ಪ್ರೀತಿಯ ಕಾಫಿ ತೋಟ ,ನಾಯಿ ಎಲ್ಲ ಕತೆಗಳನ್ನ ನಮಗೆ ಸಾಬಣ್ಣ ಹೇಳುತ್ತಿದ್ದ. ಈ ಎಲ್ಲವುಗಳಿಂದ ತೇಜಸ್ವಿ ಒಂದು ವ್ಯಕ್ತಿಯಸ್ಟೇ ಆಗಿರದೇ ಶಕ್ತಿಯಾಗಿ ಕಂಡಿದ್ದರು .ವ್ಯಕ್ತಿ ಶಕ್ತಿ ಆಗುವದು ನಿಜಜೀವನದಲ್ಲಿ ಬಹು ಕಠಿಣ .

ಇಂದಿನ ಹಾಗೆ ಏಪ್ರಿಲ್ ತಿಂಗಳು .ನನ್ನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ...ನ್ಯೂಸ್ ನೋಡುತ್ತಿದ್ದ ಅಪ್ಪ ಬಂದು ತೇಜಸ್ವಿಯವರು ಮರಣಿಸಿದ ವಾರ್ತೆ ತಿಳಿಸಿದಾಗ ..ಓಹ್ ಇದು ಸುಳ್ಳಾಗಬಾರದೆ ಎಂದು ಮರುಗಿದ್ದೆ .Attachment With Dettachment ಎಂಬ ನಂಬಿಕೆಯಿಟ್ಟು ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನಗೆ ತೇಜಸ್ವಿಯವರನ್ನು ಮರೆಯಾದ ಸುದ್ದಿ ಬಹಳ ದುಃಖ ತಂದಿತ್ತು.

ಸತ್ಯ ಒಪ್ಪಿಕೊಳ್ಳ ಬೇಕಿತ್ತು ಮತ್ತು ಜೀವನ ಸಾಗಿತ್ತು .

ಆ ವಿಸ್ಮಯ ವಿಶ್ವ ,ಕಾಡುಗಳು ,ಕಾಡುತ್ತಿದ್ದವು ...ಕೃಷ್ಣೆ ಗೌಡನ ಆನೆ ,ಮಂದಣ್ಣ ನೆನಪಾಗಿದ್ದರು ,ಮಚಾನು ಹತ್ತಿ ಚಿರತೆಗಾಗಿ ಕಾಯಬೇಕು ಅನ್ನಿಸುತ್ತಿತ್ತು ,ಬಿಸಿಲುಗಾಲದಲ್ಲಿ ಪಕ್ಕದಲ್ಲೇ ಹಾರುವ ತಟ್ಟೆ ಕಂಡಹಾಗೆ ಆಗುತ್ತಿತ್ತು ...ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ ಜೀವನದ ಕೆಲವು ಗಳಿಗೆಗಳನ್ನು ಕಾಡಿನಲ್ಲಿ ಮನೆಮಾಡಿ ಅಲ್ಲೊಂದು ಕೊಳ ಕಟ್ಟಿ ಗಾಳ ಹಾಕುತ್ತ ಮೀನು ಹಿಡಿಯುತ್ತ ಕುಳಿತಿರಬೇಕು ಎಂದು .....ಹುಚ್ಚಾ ..!ಸಮಸ್ಯೆ ಇಲ್ಲದಲ್ಲಿ ಸಮಸ್ಯೆ ಹುಟ್ಟುಹಾಕಿ ಅದನ್ನು solve ಮಾಡುವ ಹುಚ್ಚೆ ನಿಂಗೆ ಎಂದು ಸ್ನೇಹಿತರೊಬ್ಬರು ಅಣಕಿಸಿದ್ದರು....ನಾನೂ ನನ್ನ ಸ್ನೇಹಿತೆ ಸೇರಿ ರೈಟೆಯ ಎಂಬ ಕೃತಿಯನ್ನು ಚಲನ ಚಿತ್ರವಾಗಿಸಬೇಕೆಂದು ಮಾತಾಡಿಕೊಂಡಿದ್ದೆವು . ಪಂಪ ಪ್ರಶಸ್ತಿ ಬಂದಾಗ ಹತ್ತಿರದ ಬನವಾಸಿಗೆ ಬರುವರಲ್ಲ ಎಂದು ಅಲ್ಲಿಗೆ ಹೋದರೆ ತಗೆದುಕೊಳ್ಳಲು ಬರಲೇ ಇಲ್ಲ...ನೇರ ನುಡಿಯ ನಿಗೂಢ ಮನುಷ್ಯ ನಮ್ಮ ಮೆಚ್ಚಿನ ತೇಜಸ್ವಿ .

ಹತ್ತಿರದ ಮರ್ಕಡಕ್ಕೋ,ಕಾರ್ಕಳಕ್ಕೋ ಹೋದಾಗ ,ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನೆನಪಾಗುತ್ತಿತ್ತು ,ತೇಜಸ್ವಿ ನೆನಪಪಾಗುತ್ತಿದ್ದರು ..ತಟ್ಟನೆ ಅವರಿಲ್ಲವಲ್ಲ ಎಂದು ನೆನಪಾಗುತ್ತಿತ್ತು ....ನದಿಮೂಲ ಹುಡುಕ ಹೊರಟ ಮಾಯಾಲೋಕ ,ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ,ಓತಿಕ್ಯಾತ ದ ಹಿಂದೆ ಬಿದ್ದೆ ಕರ್ವಾಲೋ, ಮಿಲೆನಿಯಮ್ ಸಿರೀಸ್ ,ಅಣ್ಣನ ನೆನಪು ,ಪರಿಸರದ ಕತೆಗಳು ,ಹುಲಿಯೂರಿನ ಸರಹದ್ದು ,ಅಬಚೂರಿನ ಪೋಸ್ಟ್ ಆಫೀಸು ,ತಬರನ ಕತೆ ,ಕಾಡಿನ ಕತೆಗಳು ,ಗುಡುಗು ಹೇಳಿದ್ದೇನು,ರಹಸ್ಯ ವಿಶ್ವ,ನಿಗೂಢ ಮನುಷ್ಯರು ಸ್ವರೂಪ ....ಓದುತ್ತ ಓದುತ್ತ ಚಿರತೆ ಕೂಗಿದ ಹಾಗೆ ಆಗುತ್ತಿತ್ತು,ಗಯ್ಯಾಳಿಗಳು ಅಟ್ಟಿಸಿಕೊಂಡು ಬಂದ ಹಾಗೆ ಅನ್ನಿಸುತ್ತಿತ್ತು ,ಮೇಲೆ ನಡೆದರೆ ತನ್ನೊಳಗೆ ಹುದುಗಿಸಿಕೊಳ್ಳುವ ಮಾಯಾ ಮರಳಲ್ಲಿ ನಡೆದ ಹಾಗೆ ,ಮಲೆನಾಡಿನ ಅಪ್ಪಟ ಮಳೆಗಾಲದಲ್ಲಿ ಕಿಟಕಿಯ ಮುಂದೆ ಕುಳಿತು ಹಪ್ಪಳ ತಿನ್ನುತ್ತ ಕುಳಿತರೆ ವಿಶ್ವವೇ ನಿಗೂಢ ವಾಗಿ ,ನಾನೂ ನಿಗೂಢತೆಯ ಭಾಗವಾದಂತೆ ತೋರುತ್ತಿತ್ತು ....ತಿರುಗಿದಾಗ ತೇಜಸ್ವಿಯವರು ಪಕ್ಕದಲ್ಲೇ ಬಂದು ನಿಂತಂತೆ ಭಾಸವಾಗುತ್ತಿತ್ತು ,,ಆದರೆ ಅದು ಬರಿದೇ ಕೋಲ್ ಮಿಂಚು ..ಮಿಂಚುಳ್ಳಿಯಲ್ಲ ಎಂದರಿವಿಗೆ ಬಂದಾಗ ತುಸು ಸಂಕಟ ....

ಮೊನ್ನೆ ಏಪ್ರಿಲ್ ೫ ಕ್ಕೆ ಅವರಿಲ್ಲವಾಗಿ ವರ್ಷಗಳೆರಡು ಕಳೆಯುತ್ತಿದೆ ....ಅಂದೇ ಬರೆಯಬೇಕೆಂದು ಕೊಂಡಿದ್ದೆ ಆದರೆ ಕೆಲಸದ ಒತ್ತಡ ದಿಂದಾಗಿ ಬರೆಯಲಿಕ್ಕಾಗಲಿಲ್ಲ.. ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ ..ನನಗೆ ಗೊತ್ತು ಇಂದು ನನ್ನ ಕೆಲಸ ಹಿಂದೆ ಬೀಳುತ್ತದೆ ಎಂದು.ಆದರೆ ನಾನು ಇಸ್ಟು ಮುಂದೆ ಬರಲು ಕಾರಣರದವರಿಗಾಗಿ ಇಸ್ಟೂ ಮಾಡಲಾರೆನೆ???

ನನ್ನ ಒಂದು ನುಡಿ ನಮನ...............
ಇತ್ತೀಚಿಗೆ ಕಾಫೀ ಸಾಬಣ್ಣನೂ ಬರುತ್ತಿಲ್ಲ ,ವಯಸ್ಸಾಯಿತಲ್ಲ ..ಪರಾವಲಂಭಿ ಆಗಿದ್ದಾನಂತೆ.....ನಾವು ಮಕ್ಕಳೆಲ್ಲ ರೆಕ್ಕೆ ಕಟ್ಟಿಕೊಂಡು ಗೂಡಿನಿಂದ ಹಾರಿ ಬಂದಿದ್ದೇವೆ .... ಜೀವನ ಸಾಗುತ್ತಲಿದೆ .....

ತೇಜಸ್ವಿಯವರ ಪತ್ನಿ ರಾಜೇಶ್ವರಿ ಕೆಂಡಸಂಪಿಗೆ ಯಲ್ಲಿ ತಮ್ಮ ನೆನಪುಗಳನ್ನು ತುಂಬ ಚೆನ್ನಾಗಿ ಹಂಚಿಕೊಂಡಿದ್ದಾರೆ ....


ಸ್ನೇಹಿತರೆ,



ಇದು ನನ್ನ ಮೆಚ್ಚಿನ ಹಳೆಯದೊಂದು ಬ್ಲೋಗ್ ..ಬಹಳ ದಿನಗಳ ಹಿಂದೆ ಬರೆದಿದ್ದೆ ,ಹಲವಾರು ಕಾರಣಗಳಿಂದ ನನ್ನ ನೆನಪಲಿ ಬಹಳ ದಿನ ಉಳಿದಿದೆ ಈ ಲೇಖನ ...ಯಾಕೋ ಮತ್ತೆ ಹೊಸ ಬ್ಲೋಗ್ ಮನೆಯಲ್ಲಿ ಹಾಕಬೇಕು ಅನ್ನಿಸಿತು ,ಮತ್ತೆ ಈ ಬ್ಲೋಗಿನಲ್ಲಿ ಮಾರ್ಪಡಿಸದೆಯೇ ಹಾಕಿದ್ದೇನೆ.........ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ ........

ಶುಕ್ರವಾರ

ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ!!!..

ಆಕೆ ನಗುನಗುತ್ತಾ ಮಾತನಾಡುತ್ತಾ ಳೆ ,ಬೆಳಿಗ್ಗೆ ನಾನು ಆಫೀಸ್ ಗೆ ಹೊರಡುವಾಗ ದಾರಿಯ ಬದಿಯಲ್ಲಿ ಕುಳಿತು ,ಗುಡ್ ಮಾರ್ನಿಂಗ್ ಅಕ್ಕ ಎನ್ನುತ್ತಾಳೆ, ಸಂಜೆ ಮನೆಗೆ ಬರುವಾಗ ,ಅಕ್ಕ ಇವತ್ತು ಪಪ್ಪಾಯ ಹಣ್ಣು ಸಿಹಿಯಾಗಿದೆ ,ಪಡುವಲ ಕಾಯಿ ಫ್ರೆಶ್ ಆಗಿ ಬಂದಿದೆ ಎನ್ನುತ್ತಾಳೆ,ಹಣ್ಣು ತೆಗೆದು ಕೊಳ್ಳಲು ಹೋದರೆ , ಇದು ನೋಡಿ,ಸ್ವೀಟ್ ಆಗಿದೆ ಎಂದು ೪ ದ್ರಾಕ್ಷಿ ತೆಗೆದು ಕೈಯಲ್ಲಿ ಇಡುತ್ತಾಳೆ ,ಸೇಬು ತೆಗೆದು ಕೊಳ್ಳಲು ಹೋದರೆ ,ಒಂದು ಬಾಳೆ ಹಣ್ಣು ,ಒಂದು ಕಿತ್ತಳೆ ತೆಗೆದು ನಿಮ್ಮ ಕೈಚೀಲದೊಳಕ್ಕೆ ಹಾಕುತ್ತಾಳೆ ,ಹಣ್ಣು ಸಿಹಿ ಇಲ್ಲವಾದರೆ ಈಗಲೇ ವಾಪಾಸು ತಂದುಕೊಡಿ ಅನ್ನುತ್ತಾಳೆ....ಸೇಬು ತೆಗೆದು ಕೊಳ್ಳಲು ಹೋದ ನನಗೆ ಆಕೆ ಬಾಳೆಹಣ್ಣು , ಹೀರೇಕಾಯಿ ,ಸೌತೆಕಾಯಿ ಕೊಳ್ಳು ವ ಹಾಗೆ ಮಾಡುತ್ತಾಳೆ.......

ಯಾರೀಕೆ? ಎಲ್ಲಿಂದ ಕಲಿತಳು ಕಸ್ಟಮರ್ ಸ್ಯಾಟಿಸ್ಫ್ಯಾಕ್ಶನ್ ,ಮಾರ್ಕೆಟಿಂಗ್ ಉಪಾಯಗಳ ನ್ನ ?B school ನಲ್ಲಿ ಓದಿದ್ದಾಳ ? ಐ ಟಿ ಯಲ್ಲಿ ಕೆಲಸ ಮಾಡುತ್ತಿದ್ದಾಳ, ದೇಶ ದೇಶ ತಿರುಗಿದ್ದಾಳಾ ? ,ಹೋಗಲಿ ಕೋಶ ಓದಿದ್ದಾಳಾ?? ನೋಡೋಕೆ ವಿಶ್ವ ಸುಂದರಿಯಾ?! ಇಲ್ಲಾ.!!.ಇಲ್ಲಾ....!!!

ಗ್ರಾಹಕರಿಗೆ ಸಂತೋಷ ವಾಗುವಂತೆ ಹೇಗೆ ಮಾತನಾಡಬೇಕು ,ಹೇಗೆ ಉತ್ತಮ ಕ್ವಾಲಿಟಿಯನ್ನ ಉಳಿಸಿಕೊಳ್ಳ ಬೇಕು ,ಒಮ್ಮೆ ಬಂದ ಗ್ರಾಹಕನನ್ನ ಮತ್ತೊಮ್ಮೆ ಬರುವ ಹಾಗೆ ಕೆಲಸವನ್ನ ಹೇಗೆ ಮಾಡಬೇಕು ಎಲ್ಲ ವನ್ನ ಕಲಿಯಲಿಕ್ಕೆ ವಿಶೇಷ ತರಬೇತಿಗಳಿವೆ ,ಒಳ್ಳೆಯ ವಿಡಿಯೋ ,ಆಡಿಯೋ ಗಳಿವೆ ,ಕಲಿಸಲು ಗುರುಗಳು ಇದ್ದಾರೆ (fecilitators .. ಎನ್ನಬೇಕು trainers ಅಲ್ಲ.) ನಮ್ಮಂತಾ ಸೊಫ್ಟೆeರಿಗಳಿ ಗೆ ಅದಕ್ಕೊಂದು ಟ್ರೈನಿಂಗ್ ,ಕಲಿಸೋಕೆ ಗುರುಗಳು ಇರುತ್ತಾರೆ ,


ಈಕೆಗೆ?? ......  ಯಾರೂ ಇಲ್ಲ,.

ಆದರೇ ,. ತೊಂದರೆ ಕೊಡಲು, ಪಾಠ ಹೇಳಲು ಬದುಕಿದೆ.!! ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ.

ಈಕೆ ಒಬ್ಬ ಸಾಮಾನ್ಯ ಹೆಂಗಸು,ಕುಡುಕ ಗಂಡ, ೩ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಹೆಣಗುತ್ತಿರುವವಳು ,
ಆದರೆ ಆಕೆಗೆ ಹಸಿವು ಗೊತ್ತು ,ಮಕ್ಕಳ ಪುಟ್ಟ ಹೊಟ್ಟೆ ತುಂಬಿಸುವ ಜವಾಬ್ದಾರಿ ಗೊತ್ತು .ಕುಡುಕ ಗಂಡನನ್ನ ಸಂಭಾಳಿಸುವ ಮನಸ್ಸು ಗೊತ್ತು .ನನ್ನ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ಮಾರುತ್ತ ಜೀವನಸಾಗಿಸುತ್ತಿರುವವಳು.

ಆಕೆಯ ಅದ್ಭುತ ಅನ್ನಿಸುವ ಕಪಟ ಇಲ್ಲದ ವ್ಯಾಪಾರೀ ಶೈಲಿಗೆ ಖಂಡಿತವಾಗಿ ನಾನು ಮರುಳಾಗಿದ್ದೆನೆ..ವ್ಯಾಪಾರವೇ ಕಪಟತನದ್ದು ಎನ್ನಬೇಡಿ ಪ್ಲೀಸ್ .ಏಕೆಂದರೆ ಅದು ಅವರ ಹೊಟ್ಟೆ ಪಾಡು .ನಾವು ತಿನ್ನುವದ ರಲ್ಲಿ ಆಕೆಗೊಂದು ಚೂರು ಕೊಡೋಣ ಅಷ್ಟೇ...

ಹ್ಯಾಟ್ಸ್ ಓಫ್ ಅನ್ನೋಣವೇ? ಬದುಕು ಎಲ್ಲವನ್ನ ಕಲಿಸುತ್ತೆ .ವ್ಯಾಪಾರ ಎನ್ನುವದು ಒಂದು ಕಲೆ ,ಅದಕ್ಕೆ ನಿಮ್ಮ ಆಟಿಟ್ಯೂಡ್ ಒಂದೇ ಸಾಕು, ಬೇರಾವ ಕಲಿಕೆಯೂ ಬೇಡ. ಸಾಫ್ಟ್ವೇರ್ ಕಂಪನಿಯ ಒಡೆಯನಿಗೆ ಜಾವಾ ಪ್ರೋಗ್ರಾಮ್ ,ಸೀ ಪ್ರೋಗ್ರಾಮ್ ಕಲಿಯುವ ಅಗತ್ಯವಿಲ್ಲ  ,ಜನರಿಂದ ಕೆಲಸ ತೆಗೆಯುವ ಕಲೆ ಗೊತ್ತಿದ್ದರೆ ಸಾಕು .

ಈಕೆಯೊಂದು ಉದಾಹರಣೆಯಷ್ಟೇ ,ಇಂತಹ ಹಲವು ಮಹಿಳೆಯರಿದ್ದಾರೆ ,ಚಿಕ್ಕ ಪುಟ್ಟ ಗೂಡಂಗಡಿಗಳಿಂದ ತಮ್ಮ ಬದುಕು ನಿರ್ವಹಿಸುತ್ತಿದ್ದಾರೆ..ಸೂಪರ್ ಮಾರ್ಕೆಟ್ ಗಳು ಧಾಳಿ ಇಟ್ಟಾಗ ಬೀದಿ ಬದಿಯ ವ್ಯಾಪಾರಿಗಳೆಲ್ಲ ಕಂಗಾಲಾಗಿದ್ದು ಹಳೆಯ ಕತೆ .ವ್ಯವಹಾರ ಕಡಿಮೆ ಆಗಿರಬಹುದು ,ಆದರೆ ವ್ಯವಹಾರ ಪೂರ್ಣ ಮುಳುಗಿಲ್ಲ.ಎಲ್ಲ ಸೂಪರ್ ಮಾರ್ಕೆಟ್ ಗಳಿಂದ ತಮ್ಮನ್ನ ಸುರಕ್ಷಿತವಾಗಿಸಿಕೊಂಡವರಿದ್ದಾರೆ ,ಹಿಂದಿನ ಹಾಗೆ ಶೆಟ್ಟರ  ದಿನಸಿ ಅಂಗಡಿ ಇಂದಿಗೂ ನಡೆಯುತ್ತಿದೆ.

ಎಲ್ಲರಿಗೂ ನನ್ನದೊಂದು ಸಲಾಮ್!..

ಮಂಗಳವಾರ

 ಪುಟಗಳು ತೇಲಿ ಬಂದಿದ್ದು ಹೀಗೆ .....

ಮನಸ್ಸು ರಿಲ್ಯಾಕ್ಸ್ ಆಗಲು ಕಂಡುಕೊಂಡ ಹಾದಿ ಬರಹ.

ನೋಡಿದ್ದು ,ಕೇಳಿದ್ದು ,ಗಾಳಿಯಲ್ಲಿ ತೇಲಿ ಬಂದದ್ದು ,ಈಮೇಲ್ ನಲ್ಲಿ ಸ್ನೇಹಿತೆ ಕಳುಹಿಸಿದ್ದ ಚಿಕ್ಕ ಹೈಕು ,ಸಣ್ಣ ಕಥೆ ,ಅಮ್ಮ ಫೋನ್ ನಲ್ಲಿ ಹೇಳಿದ್ದ ಸುದ್ದಿ ,ಎಲ್ಲವಕ್ಕೂ ಒಂದು ಹೊಸ ಟಚ್ ಕೊಟ್ಟು ,ನನ್ನ ಮನಸು ಹೇಳಿದ್ದನ್ನ ಕೇಳಿ ,ಇದನ್ನು 'ಆಕೆ ' ಯಾವಾಗ ಹೇಳಿರಬಹುದು ಎಂದು ಒಂದು ಚಿಕ್ಕ ಗೆಸ್ ವರ್ಕ್ ಮಾಡಿ ,ಎಲ್ಲ ಕೂಡಿಸಿ,ಕಳೆದು ಕಟ್ಟಿ ,ಒಂದು ಹೊಸ ತೆರನಾದ ಲೋಕಕ್ಕೆ ಕರೆದೊಯ್ಯುವ ಪ್ರಯತ್ನ ..

ನನ್ನ ಮೊದಲ ಬ್ಲೋಗನ್ನು ೩ ವರುಷಗಳ ಹಿಂದೆಯೇ ಆರಂಭಿಸಿದ್ದೆ ..ಆಗೊಂದು ಈಗೊಂದು  ಜಲನಯನ ಸರ್     ಹೇಳಿದ ಹಾಗೆ ಮಿಸ್ಸೈಲ್  ನಂತೆ  ಒಂದೊಂದನ್ನು ಬರೆಯುತ್ತಿದ್ದೆ . ..ಕನ್ನಡ ಮತ್ತು ಆಂಗ್ಲ ಮಿಶ್ರಿತ ಲೇಖನ ಗಳನ್ನು ಬರೆಯಬೇಕೆನಿಸಿದಾಗ ಬರೆದು ಬಿಟ್ಟೆ ...ಆದರೆ ಯಾಕೋ ಗೊತ್ತಿಲ್ಲ ಸಮಾಧಾನವೇ ಆಗಿರಲಿಲ್ಲ... ಕನ್ನಡ ವನ್ನು ಬೇರೆಯದೇ  ಬ್ಲೋಗಿನಲ್ಲಿ  ಬರೆಯೋಣ ಅನ್ನಿಸಿತ್ತು ,,,ಇಂದು ಅದನ್ನು ಆರಂಭಿಸಿಬಿಟ್ಟಿದ್ದೇನೆ...


ನೀವು ಓದಿ ,ಮನಸಿಗೆ ಖುಷಿ ಅನಿಸಿದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ,ಸಲಹೆ ,ಪ್ರೋತ್ಸಾಹ ನಿಮ್ಮಿಂದ ತೇಲಿ ಬರುತ್ತಿರಲಿ ಎಂಬುದು ನನ್ನ ಚಿಕ್ಕ ಆಶಯ....

ಬರೆಯಲೇಬೇಕೆನ್ನುವ ಹಟವಲ್ಲ, ಬರೆದರೆ ನಾನು ಪ್ರಖ್ಯಾತಿ ಪಡೆಯಬಲ್ಲೆ ಎಂಬ ಹಮ್ಮೂ ಇಲ್ಲ ಯಾಕೆ ಗೊತ್ತಾ ? ನಾನೊಬ್ಬ ಮನಸ್ಸಿನ ಮಾತು ಕೇಳುವವ ...ಮನಕ್ಕೆ ಸರಿ ಅನ್ನಿಸಿದ್ದನ್ನು ಯಾರ ಹಂಗು ಇಲ್ಲದೇ ಕಾರ್ಯರೂಪಕ್ಕೆ ಇಳಿಸುವವ. ನನಗೆ ವಾರಕ್ಕೊಂದು ಬರೆಯಲೇ ಬೇಕೆಂಬ ಹಟವಿಲ್ಲ .ಒಂದು ದಿನ ಒಂದು ಸಂಜೆ ಮನೆಯ ತೆರೆಸಿನ ಮೇಲೆ ಹತ್ತಿ ಕುಳಿತಾಗ ಯಾಕೋ ಬರೆಯ ಬೇಕೆನ್ನಿಸುತ್ತದೆ ,ಓದುತ್ತಿರುವ ಮೋಡ ನೋಡುತ್ತಾ ಕುಳಿತಿದ್ದಾಗ ಯಾವಾಗಲೋ ಒಮ್ಮೆ ಈಗ ಬರೆಯುವೆ ಎಂಬ ಉಲ್ಲಾಸ ಮನೆಮಾಡಿಬಿಡುತ್ತೆ ,ಆಗ ನಾನು ಬರೆಯುವದನ್ನ ಯಾರೂ ತಪ್ಪಿಸಲಾಗುವದಿಲ್ಲ...

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...