ಭಾನುವಾರ

ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ

ಇಂದಿನ ಬೆಳಗು ಶುರುವಾದದ್ದೇ ಬಿಸಿಬಿಸಿ ಕಾಫಿಯಿಂದ. ಭಾನುವಾರವಾದರು ನಾನು ನಿದ್ದೆಗೆ ಶುಭೋದಯ ಹೇಳುವದು ಬೆಳ್ಳಂಬೆಳಗ್ಗೆಯೇ .ದೊಡ್ಡ ಕಪ್ ನ ತುಂಬ ತುಂಬಿಸಿ ಸೊರ್ ಸೊರ್ ಎಂದು ಕುಡಿಯುತ್ತ ಕುಳಿತರೆ ಹೊತ್ತೇರುತ್ತಿರುವದನ್ನ ಮರೆಯಿಸುವ ನಷೆ ಆವರಿಸಿಬಿಟ್ಟಿದೆ. ಮೂಡಣದ ನಸುಕು ಕತ್ತಲೆಯ ಕಳೆ ಕಳೆಯುತ್ತ,ಮುಂಜಾವಿನ ಮಂಜು ಇಳಿಯುತ್ತಿದ್ದರೆ,ಅದನ್ನೆ ನೋಡುತ್ತ ,ಬಿಸಿಬಿಸಿ ಕಾಫಿಯ ಒಂದೊಂದೇ ಗುಟುಕು ಹೊಟ್ಟೆ ಸೇರಿದ ಆ ಗಳಿಗೆಗಳು ಗೊತ್ತೇ ಅಗುವದಿಲ್ಲ. ರುಚಿ ಸವಿವ ಕೈಂಕರ್ಯ ದಲ್ಲಿ ಬಹಳ ಬ್ಯೂಸಿಯಾಗಿರುವ ನಾಲಿಗೆ, ಆ ಬಿಸಿಗೆ ಚುರುಗುಟ್ಟಿದರು ಎನನ್ನೂ ಹೇಳುವದೇ ಇಲ್ಲ.ಕಾಫಿಯ ಮಟ್ಟಿಗೆ ಹೇಳುವದಾದರೆ ಮೊದಲು ಸುದ್ದಿ ಮುಟ್ಟುವದು ಮೂಗಿಗೆ ಸರಿ.ಮೂಗು ಮಿಕ್ಕವರನ್ನ ಬಡಿದೆಬ್ಬಿಸಿ,ಬೆಳಗಾಗಿದ್ದನ್ನ ಸಾರಿ ಹೇಳಿದ್ದು ದಿಟ.
ಆ ಗುಬ್ಬಿಗೂ ಹಾಗೇ ಆಗಿರಬೇಕು.ನನ್ನ ಪ್ರೀತಿಯ ಗುಬ್ಬಿ/ ಗುಬ್ಬಚ್ಚಿ ನಾ ಕಾಫಿ ಕುಡಿಯುವದನ್ನ ನೋಡಲಿಕ್ಕೆ ಬೇಗ ಎದ್ದಿರಬೇಕು,ಅಥವ ಅದಕ್ಕು ರುಚಿ ಸವಿವ ಮನಸ್ಸಾಗಿರಬೇಕು,ಚಿವ್ ಚಿವ್ ಎನ್ನುತ್ತ ಇಲ್ಲೇ ಸುತ್ತುತ್ತಿದೆ, ನನ್ನಿದುರಿನ ಕಟಾಂಜನದ ತುದಿಯಲ್ಲಿ ಕೂತು ತನ್ನ ಚೊಂಚಿನ ಎರಡು ಬದಿಯನ್ನು ಅನುಕ್ರಮವಾಗಿ ಉಜ್ಜುತ್ತ ಕಾಫಿಯ ಸೇವನೆಗೆ ನಾ ಸಿದ್ಧ ಎಂದು ಸಾರಿ ಹೇಳುತ್ತಿರುವದು ನನಗೆ ಕಾಣಿಸುತ್ತಿಲ್ಲ. ಈ ಗುಬ್ಬಿ ಏನ ಹೇಳ ಹೊರಟಿದೆಯೆಂಬುದು ಕಾಫಿಯ ಸವಿರುಚಿಯ ನಷೆಯಲ್ಲಿ ತೇಲುತ್ತಿದ್ದ ನನಗೆ ತಿಳಿಯುವದೇ ಇಲ್ಲ

ಯಾಕೋ ನನ್ನ ದಿವ್ಯ ನಿರಾಸಕ್ತಿ ತನಗೆ ನೋವು ತಂದಿದೆ ಎಂದು ನನಗೆ ತಿಳಿಯಲೆಂದು ಕುಂತಲ್ಲಿಂದ ರೆಕ್ಕೆ ಬಡಿಯುತ್ತ ಹಾರಿ,ಚಿವ್ ಚಿವ್ ಎಂದುಲಿದು ನನ್ನನೊಂದು ಸುತ್ತು ಹಾಕಿ ಮತ್ತೆ ಬಂದು ಅಲ್ಲೇ ತುದಿಯಲ್ಲಿ ಕುಳಿತು ಮೌನದ ಪಾಲಾಗಿಬಿಟ್ಟಾಗ, ತಟ್ಟನೆ ಇಹದ ಅರಿವಾಗಿ, ನನಗೆ ಖೇದವೆನಿಸಿಬಿಡುತ್ತದೆ. ಸಾವಧಾನ ಭಂಗಿಯಲ್ಲಿ ಕುಳಿತ ಆ ಗುಬ್ಬಿಯ ಆ ಚೂಪು ಚೊಂಚು ಮತ್ತೂ ಚೂಪಗಾದಂತೆ,ರೆಕ್ಕೆಗಳೆಲ್ಲ ಸೇರಿ ನನ್ನ ವಿರುದ್ಧ ಸಮರ ಸಾರಿದಂತೆ ನಾನು ಅಂದುಕೊಳ್ಳುತ್ತೇನೆ.
ಆದರೆ ನಡೆದದ್ದು ಹಾಗಲ್ಲ.ಅಲ್ಲೇ ಎಲ್ಲೋ ಹತ್ತಿರದಲ್ಲಿ ಅಡಗಿ ಕುಳಿತಿದ್ದ ಕೀಟವೊಂದರ ಮೂಗು ಸೇರಿದ ಕಾಫಿಯ ಪರಿಮಳ ಪ್ರಾಣಭಯವನ್ನೂ ಲೆಕ್ಕಿಸದಂತೆ ಮೂಲದೆಡೆಗೆ ಎಳೆದು ತಂದಿರುತ್ತದೆ. ಕಾಫಿಯ ಪರಿಮಳದ ಮೂಲ ಅರಸಿ ಬಂದ ಆ ಪುಟ್ಟ ಕೀಟ,ಕಾಫಿಯ ರುಚಿ ನೋಡಲು ಆಗದೆ ಚಡಪಡಿಸುತ್ತಿರುವ ಆ ಪ್ರೀತಿಯ ಗುಬ್ಬಚ್ಚಿಯ ಆಹಾರವಾಗಿ ಬಿಡುತ್ತದೆ.ಕಾಫಿ ಸಿಕ್ಕದಿದ್ದರೇನು ಎನ್ನ ಹೊಟ್ಟೆ ತುಂಬಿತಲ್ಲ, ಎಂದು ತನಗೇ ತಾ ಸಮಧಾನಿಸಿಕೊಳ್ಳುತ್ತ ಕುಂತಲ್ಲಿ ಕೂಡದ ಗುಬ್ಬಚ್ಚಿ ಅಲ್ಲಿಂದ ಮರೆಯಾಗಿ ಬಿಡುತ್ತದೆ.ಪಾಪ ಗುಬ್ಬಿ,ಎಂದು ಅಂದುಕೊಳ್ಳುತ್ತ,ರುಚಿ ಸವಿಯುವಲ್ಲಿ ತಲ್ಲೀನಳಾಗಿಬಿಡುತ್ತೇನೆ ನಾನು.

ಚೂರು ಸಕ್ಕರೆ ಹೆಚ್ಚಿದ್ದರೂ ನಡೆಯುತ್ತಿತ್ತು ಎಂಬಲ್ಲಿಗೆ ಕಾಫಿಯ ಲೋಟದಲ್ಲಿ ಕೊನೆಯ ಆ ಗುಟುಕೊಂದೇ ಉಳಿದುಬಿಡುತ್ತದೆ.ಬಿಸಿ ತಣಿದ ಆ ಕೊನೆಯ ಗುಟುಕು,ತಳ ಸೇರಿ ಅಡಗಿದ್ದ ಚೂರು ಸಕ್ಕರೆಯ ಜೊತೆ ಬೆರೆತು ಸಿಹಿಯ ಸಿಹಿ ದುಪ್ಪಟ್ಟಾಗಿ, ಅಬ್ಬಾ ಸಕ್ಕರೆ ಕಮ್ಮಿ ಅನಿಸಿದ್ದರೂ ಪರವಾಯಿಲ್ಲ ಇಷ್ಟೆಲ್ಲ ಸಿಹಿ ಇರಬಾರದಪ್ಪ ಅನ್ನಿಸಿ ಹೋಗುವಂತೆ ಮಾಡಿಬಿಡುತ್ತದೆಯಲ್ಲಾ.
ಏನೇ ಅಂದರು, ಮತ್ತೊಂದು ಲೋಟ ಕಾಫಿ ಕುಡಿವ ತನಕ ಉಳಿಯುವದು ಆ ದುಪ್ಪಟ್ಟಾದ ಸಿಹಿಯೆ, ಅದರ ಸವಿಯೇ, ಅದರ ನೆನಪೆ, ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ ಏನಂತೀರಿ?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...