ಶನಿವಾರ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ?

ನೂರಕ್ಕೆ ನೂರು ಹೌದು.

ಇದನ್ನ ಒಪ್ಪಿಕೊಳುವದಕ್ಕೆ ನಮ್ಮ ಮನಸು ಬಹಳ ಸಾರಿ ತಯಾರಿರುವದಿಲ್ಲ. ಯಾಕಂದರೆ ನಾವು ವಾಸ್ತವಕ್ಕೆ ದೂರಾಗಿ ಬದುಕುತ್ತಿರುತ್ತೇವೆ. ಮತ್ತು ಅದನ್ನೇ ಸಾಫಲ್ಯ ಎಂದು ಭ್ರಮಿಸಿರುತ್ತೇವೆ. ನಮ್ಮಷ್ಟಕ್ಕೆ ನಾವು ಸಾಫಲ್ಯವೆಂದರೆ ಹೀಗೆ ಇರುವದು, ಹಾಗೆ ಮಾತನಾಡುವದು, ಎಂದೆಲ್ಲ ಭಾವಿಸಿ ಕಣ್ಣಿಗೆ ಕಾಣದ ಗೋಡೆ ಕಟ್ಟಿರುತ್ತೇವೆ. ಮತ್ತು ಈ ಗೋಡೆ ಎಷ್ಟೋ ತರಹದ ನಡುವಳಿಕೆಗಳಿಗೆ ಕಾರಣವಾಗಿರುತ್ತದೆ.

ವ್ಯಕ್ತಿ, ತನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾದ ನಡೆ ನುಡಿಯನ್ನ ಅನುಕರಿಸಿರುತ್ತಾ, ಕಾಣದ, ಎಂದೂ ಮುಗಿಯದ, ಅಸಹಜವಾದ, ಜೀವನಕ್ಕೆ ತನ್ನನ್ನು ತಾನು ಒಡ್ಡಿಯಾಗಿರುತ್ತದೆ. ಮತ್ತು ಅದು ವ್ಯಕ್ತಿತ್ವದ ಭಾಗವಾಗಿಬಿಡುತ್ತದೆ.

ಇಂದು ಮಾರುಕಟ್ಟೆಯಲ್ಲಿ ಎಲ್ಲ ತರಹದ ವಸ್ತುಗಳು ದೊರೆಯುತ್ತವೆ, ಹೇಗೆ ಬದುಕಬೇಕು, ಹೇಗೆ ಮಾತನಾಡ್ಬೇಕು , ಹೇಗೆ ಮತ್ತು ಎಷ್ಟು ಊಟಮಾಡಬೇಕು, ಎಂದೆಲ್ಲ ಕಲಿಸುವದಕ್ಕೆ ಪುಸ್ತಕಗಳಿದ್ದಾವೆ, ಜನರಿದ್ದಾರೆ. ಮತ್ತು ಇವೆಲ್ಲುವುಗಳಿಂದ ಜನರನ್ನ ಹೇಗೆ ಗೆಲ್ಲಬಹುದು, ಸುದೀರ್ಘ ಜೀವನನಡೆಸಬಹುದು, ವೃತ್ತಿರಂಗದಲ್ಲಿ ಹೇಗೆ ಎಲ್ಲವನ್ನ ಗೆಲುವಿನತ್ತ ಬದಲಾಯಿಸಬಹುದು ಎಂದೆಲ್ಲ ಪ್ರತಿಪಾದಿಸಲಾಗುತ್ತದೆ. 

ಒಂದುಹಂತದವರೆಗೆ ಇವೆಲ್ಲ ಕೆಲಸಕ್ಕೆ ಬರುವದನ್ನು ನಾನು ಗಮನಿಸಿದ್ದೇನೆ. ಆದರೇ, ಇದೇ ಜೀವನವಲ್ಲವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಉದ್ದೇಶ, ಧ್ಯೇಯ, ಸನ್ನಿವೇಷ ಎಲ್ಲವೂ ಬದಲಾಗುತ್ತಿರುತ್ತವೆ . ಎಲ್ಲದಕ್ಕು ಇದೇ ತಕ್ಕ ಸೂತ್ರ ಅನ್ನುವ ಹಾಗಿಲ್ಲ. ಅಂತೆಯೇ ಹೀಗೆಯೇ ಬದುಕಬೇಕು, ಹಾಗೆ ಮಾತನಾಡಬೇಕು, ಇದನ್ನೇ ಓದಬೇಕು ಎಂದೆಲ್ಲ ನಿರ್ಣಯಿಸುವ ಹಕ್ಕಿಲ್ಲ ಅಲ್ಲವ. ಯಾಕೆಂದರೆ ಹಕ್ಕಿನ ಜೊತೆ ಬಾಧ್ಯತೆಗಳೂ ಇರುತ್ತದವಲ್ಲ.  

 ಯಾರದೋ ಅನುಭವವೇ ಸರಿಯಾದ ಮಾರ್ಗ ಅನ್ನಲಿಕ್ಕೂ ಆಗುವದಿಲ್ಲ. ನಾನು ನನ್ನ ವ್ಯಾಪ್ತಿಗೆ ಬಂದ ಅನುಭವದ ಮೂಲಕ ಒಂದು ಹಂತಕ್ಕೆ ನಿರ್ಣಯಿಸಬಹುದೇನೋ.

ಸಮಯ, ಸನ್ನಿವೇಶಗಳೇ ಇದನ್ನೆಲ್ಲ ನಿರ್ಧರಿಸಬೇಕು.ಪ್ರಕೃತಿಯ ಮುಂದೆ ನಾವೆಲ್ಲ ತುಂಬಾ ಚಿಕ್ಕವರು.ಇದನ್ನೆಲ್ಲ ಧೃತ್ ಬಾಯಿಯಿಂದ ಕೇಳಲಿಕ್ಕೆ ಬಹಳ ಚೆಂದ. ಆತ ಇತ್ತೀಚೆಗೆ ಮೌನದಕಡೆಗೆ ಬಹಳ ವಾಲಿದ್ದಾನೆ. ಮೌನ ಬಂಗಾರವಂತೆ!. 

ಮಳೆಗಾಲದ ಸಂಜೆ

ಮಳೆಗಾಲದ ಸಂಜೆ,
ಸಮುದ್ರ ನೋಡುವ ಮನಸಾಗಿತ್ತು.
ಅಪ್ಪಳಿಸುವ ಅಬ್ಬರದ ಅಲೆಗಳಿಲ್ಲ,
ಅಲೆಗಳ ಅಳಲ ಕೇಳುವ ಬಂಡೆಗಳೂ ಇಲ್ಲ
ತೇಲುವ ಹಡಗಿನ ಲಂಗರುಗಳಿಲ್ಲ,
ಹಾರುವ ಹಕ್ಕಿಯ ನೆರಳೂ ಇಲ್ಲ

ಅಲ್ಲಲ್ಲಿ ಬಾಗಿರುವ ತೆಂಗಿನ ಮರ,
ಅಪರೂಪಕ್ಕೊಮ್ಮೆ ಇಣುಕುವ ಸೂರ್ಯ,
ಹತ್ತಿರದ ಹುಣಿಮೆಯ ನೆನಪಿಸುವರ ಚಂದಿರ,
ತಂಪಿಲ್ಲದ,ಹದವಾದ ಗಾಳಿ

ಅದು ಮುಸ್ಸಂಜೆ, ಸೂರ್ಯ ತಂಪಾಗ್ವ ಹೊತ್ತು
ಮಳೆ ನಿಂತು, ಹನಿಯೊಂದು ಸಮುದ್ರಸೇರಿದ ಗಳಿಗೆ,
ಸಮುದ್ರ ಸೇರದ ಇನ್ನೊಂದು ಹನಿ ಮುತ್ತಾಗುವ,
ತಾಪಕ್ಕೆ ಬಳಲಿದ ಕಪ್ಪೆ ಮಳೆಗಾಗಿ ಧ್ಯಾನಿಸುವ
ಸುಯೋಗದ ಗಳಿಗೆ!

ಎಲ್ಲಿದ್ದವೋ ಆ ಕರಿಯ ಮೋಡ,
ಎಲ್ಲಿತ್ತೋ ಆಪರಿಯ ಗಾಳಿ
ಎಲ್ಲ ಒಟ್ಟು ಸೇರಿದಾಗಲೇ ಶುರುವಿಟ್ಟಿತು
ಭೋರ್ಗರೆವ ಜೋರು ಮಳೆ,‍ xyz ಬರೆವ ಕೋಲ್ಮಿಂಚು
ಮುಸ್ಸಂಜೆಯ ಮಳೆಯಜೊತೆ ಗುಡುಗು ರಾಯನ ಸ್ಪರ್ಧೆ!

ತಣ್ಣಗೆ ಕುಳಿತ ಸಮುದ್ರಕ್ಕೂ ಜೀವ ಬಂತು
ಮತ್ತೆ ಶುರುವಾಯ್ತು ಅಲೆಗಳ ಅಲೆದಾಟ,
ಅದು ಮಳೆಗಾಲದ ಸಂಜೆ!

ಭಾನುವಾರ

ಇನ್ನೂ ಹೆಸರಿಡದ್ದು

ಅದೊಂದು ಚಿಕ್ಕ ಊರು. ಅಲ್ಲಿನ ಜನರದ್ದು ಆರಕ್ಕೇರದ,ಮೂರಕ್ಕಿಳಿಯದ ಜೀವನ. ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ಹಾಗೆಯೇ ನೇರ ನಡೆದರೆ ಇದುರಿಗೆ ಒಂದು ದೊಡ್ಡ ಅರಳಿ ಮರ ಕಾಣುತ್ತದೆ. ವಿಶಾಲವಾಗಿ ಹರಡಿಕೊಂಡಿದ್ದ ಆ ಮರದ ಕೆಳಗೆ ಇದ್ದುದು ಒಂದು ನಾಗರ ಕಲ್ಲು,ಅರಳಿ ಮರದ ಬುಡದಲ್ಲಿದ್ದ ಆ ನಾಗರ ಕಲ್ಲಿಂದಾಗಿ ಅರಳಿಮರದ ಮಹಿಮೆ ಹೆಚ್ಚಿತ್ತು ಅಂದರೆ ತಪ್ಪಿಲ್ಲವೇನೋ. ಊರವರೆಲ್ಲ ಅದಕ್ಕೊಂದು ಕಟ್ಟೆಕಟ್ಟಿಸಿಮರದ ಸುತ್ತಲೂ ಆ ನೀಲಗಿರಿ ಗಿಡದ ನಾಲ್ಕು ಕಂಬ ನೆಟ್ಟುಬಣ್ಣದ ಕಾಗದದ ತೋರಣ ಕಟ್ಟಿದ್ದರು. ಸುರಿವ ಮಳೆ, ಬೀಸುವ ಗಾಳಿಯಿಂದ ಅರಳಿಯ ಮರ ಆ ತೋರಣವನ್ನ ತನ್ನೆರಡೂ ಕೈಗಳಿಂದ ರಕ್ಷಣೆ ಮಾಡುತ್ತಿತ್ತು ಅನಿಸುತ್ತದೆ. ಅದೇನೇ ಇರಲಿ ಅರಳಿಮರ ಜನರ ಅಸ್ತಿತ್ವಕ್ಕೊಂದು ಗುರುತಾಗಿತ್ತು, ಆ ಊರಿನ ಹಗಲು ರಾತ್ರಿಗಳಿಗೆ ಕಣ್ಣಾಗಿತ್ತು.

ಆ ಮರವನ್ನ ದಾಟಿ ಮುಂದೆ ನಾಲ್ಕು ಹೆಜ್ಜೆ ಹಾಕಿದರೆಅಲ್ಲೊಂದು ದೊಡ್ಡ ಬಾವಿ. ಆ ಊರಿನ ಜನರ ನೀರಿನ ಮೂಲ ಆಕರ. 'ಸರಕಾರಿ ಬಾವಿ' ಎಂದೇ ಹೆಸರು. ಒಂದು ಕ್ಷಣವೂ ಬಾವಿಯನ್ನು ಬಿಟ್ಟು ಇದ್ದುದೇ ಇಲ್ಲ ಊರಿನವರು. ಆ ಹಾದಿಗುಂಟಾ ಹೋದರೆ ನೀವು ಕೇಳಿದ್ದ ನೀರೆತ್ತುವ ಶಬ್ಧ ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಹಗಲಲ್ಲೂ, ಇರುಳಲ್ಲೂ. ಹಾಗೇ ಆ ಕಪ್ಪು ಬಾವಿಯನ್ನ ದಾಟಿ ಮುಂದೆ ನಡೆದರೆ ಅಲ್ಲೊಂದು ಮನೆಯಿದೆಅದು ಕ್ಯಾಶಿಯರ್ ಮನೆ ಅಂದೆ ಪರಿಚಿತ. ಬಿಳಿಯ ತಾಜ್ಮಹಲ್ಲೇ ಅದು. ಮನೆಯ ಉದ್ದುದ್ದ ಗೋಡೆಗಳಿಗೆ ಬಿಳಿಯ ಸುಣ್ಣ ಬಡಿದಿದ್ದಕ್ಕೇ ಇರಬೇಕು ಅಥವಾ ಆ ಮನೆಗಿದ್ದ ಗಂಭೀರ ಕಳೆ ಊರವರಲ್ಲಿ ಒಂದು ಖಚಿತ ಅಭಿಪ್ರಾಯವನ್ನಂತೂ ಹುಟ್ಟುಹಾಕಿತ್ತು. ಆ ಮನೆಯ ಯಜಮಾನ ಕ್ರಷ್ಣಾ ಭಟ್ಟರು ಮತ್ತು ಅವರ ಪತ್ನಿ ಅನ್ನಪೂರ್ಣಮ್ಮ. ಕ್ರಷ್ಣಾ ಭಟ್ಟರು ಆ ಊರಿಂದ ಮೈಲಿ ದೂರದಲ್ಲಿರುವ ಮಲ್ಲಾಪುರದ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿದ್ದರು. ಆ ಕಾರಣ ಮನೆಗೂ ಅದೇ ಹೆಸರು.
 ಕ್ಯಾಶಿಯರ್ ಮನೆ ಅಥವಾ ವಟಾರದಲ್ಲಿ ಬಾಡಿಗೆಗೆಂದು ಇದ್ದವರಲ್ಲಿ ನಮ್ಮ ಸೋಮಸುಂದರ ರಾವ್ ಕೂಡ ಒಬ್ಬರು. ಅನ್ನಪೂರ್ಣಮ್ಮನವರ ಪ್ರಕಾರ ಆ ಮನುಷ್ಯಂಗೆ ೪೦ ಆಗಿರಬಹುದುತಮ್ಮ ಯಜಮಾನರಿಗಿಂತ ಇನ್ನೂ ನಾಲ್ಕು ವರ್ಷ ಕಿರಿಯವನೆಂದು ಅನಿಸಿಕೆ. ಇನ್ನು ಮದುವೆ ಮಾಡ್ಕೊಂಡಿಲ್ಲಾ ಅದಿಕ್ಕೆ ಆತ ಬ್ರಹ್ಮಚಾರಿಮನೆಗೆ ಬಂದ ಮೊದಲ ದಿನವೇ ತನ್ನ ಹೆಸರಿರುವ ನೀಲಿ ಬಣ್ಣದ ಬೋರ್ಡನ್ನ ಬಾಗಿಲಿಗೆ ತೂಗುಬಿಟ್ಟಿದ್ದ. ತಹಶೀಲುದಾರ್ ಕಛೇರಿಯಲ್ಲಿ ಈತನ ಕೆಲಸ. ಆತ ಪ್ರತಿ ದಿನ ಬೆಳಿಗ್ಗೆದ್ದುತಣ್ಣೀರಲ್ಲಿ ಸ್ನಾನ ಮಾಡಿಹಣೆಗೊಂದು ಕುಂಕುಮದ ಬೊಟ್ಟಿಟ್ಟುಕೃಷ್ಣಾರ್ಪಣಮಸ್ತು! ಎನ್ನುತ್ತಾ ತನ್ನ ಉದ್ದನೆಯ ಚೀಲ ತಗಲುಹಾಕಿ ಕೊಂಡು ಮನೆಯಿಂದ ಹೊರಬೀಳುತ್ತಿದ್ದ. ‍ತಿಂಡಿ ತೀರ್ಥದ ವಿಷಯ ಅನ್ನಪೂರ್ಣಮ್ಮನವರಿಗೆ ಅಷ್ಟಾಗಿ ತಿಳಿಯುತ್ತಿರಲ್ಲಿಲ್ಲ. ಭಾನುವಾರ ಮಾತ್ರಾ ಕೃಷ್ಣಾ ಭಟ್ಟರೊಡನೆ ಮಾತಿಗೆ ಸಿಗುತ್ತಿದ್ದ. ಈ ಪರಿಪಾಠ ಹಲವು ದಿನ ನಡೆದಿತ್ತು.

ಈಗಿನಂತೆ ಎಲ್ಲರ ಮನೆಗಳಲ್ಲಿ ದೂರದರ್ಶನದ ಸೌಲಭ್ಯಗಳಿಲ್ಲದ ಕಾಲ ಅದು.  ಮುಸ್ಸಂಜೆಯ ಹೊತ್ತಲ್ಲಿ ಊರ ಹೆಂಗಸರೆಲ್ಲ ಒಂದು ಕಡೆ ಕುಳಿತು ಹರಟುತ್ತಾರೆ. ಅರಳೀ ಕಟ್ಟೆ ಖಾಲಿ ಇದ್ದರೆ ಅಲ್ಲಿ, ಇಲ್ಲವಾದರೆ ಊರ ಮಧ್ಯದಲ್ಲಿನ ಆಂಜನೇಯ ದೇವಾಲಯದ ಕಟ್ಟೆ.ಅದೂ ಇಲ್ಲವಾದರೇ ಕ್ಯಾಶಿಯರ್ ಮನೆಯ ಉದ್ದನೆಯ ಜಗುಲಿ. ಅವರ ಮಾತುಗಳಲ್ಲಿ, ಮಳೆ, ಗಾಳಿ, ಬಿಸಿಲು,ಅಡುಗೆ, ನೆಂಟರು,ಮದುವೆ, ಇತ್ಯಾದಿಗಳದ್ದೆ ಮೇಲುಗೈ. ಲೋಕಾಭಿರಾಮವಾಗಿ ಹರಟುತ್ತಿದ್ದರು
 ಬೆಳಗ್ಗೆದ್ದು ಜ್ಯೊತಿಷ್ಯವನ್ನೋ,ಬ್ರೇಕಿಂಗ್ ಸುದ್ದಿಗಳನ್ನೋ  ನೋಡುವ ತರಾತುರಿ ಮನೆಯ ಗಂಡಸರಿಗಿರುತ್ತಿರಲಿಲ್ಲ, ಹಾಕುತ್ತಿರುವ ವಗ್ಗರಣೆಯನ್ನ ಅಲ್ಲೇ ಬಿಟ್ಟು  ಬೇರೆಯವರಿಂದ ಅಡುಗೆ ಕಲಿವ ಜರೂರತ್ತು, ಊಟ ಮಾಡುತ್ತಲೋ, ಮನೆಗೆಲಸ ಮಾಡುತ್ತಲೋ ಧಾರಾವಾಹಿಗಳನ್ನ ನೋಡುವ ಕಲ್ಪನೆ ಮನೆಯ ಹೆಂಗಸರಿಗಿರುತ್ತಿರಲಿಲ್ಲ. ನಮ್ಮೂರಿಗೆ ಟೀವಿ ಬಂದ ಕತೆ ಬಹಳ ಆಸಕ್ತಿದಾಯಕವಾಗಿದೆ.ಇನ್ನೊಮ್ಮೆ ನೋಡೋಣ ಅದರ ಬಗ್ಗೆ.ಬಹುಷ, ಘಟ್ಟದ ಮೇಲಿನ ಜನರ ಜೀವನವೇ ಹಾಗೆ ಅನ್ನಿಸುತ್ತದೆ, ಜಾಸ್ತಿ ಅನ್ನಿಸುವಷ್ಟೇ ಸುಖಕರ.ಅವರ ಜೀವನಕ್ಕೆ ಅಂತಹ ಗಿಲೀಟಿನ ಬೆರಗಿನ ಅಗತ್ಯ ಇಲ್ಲವಾಗಿತ್ತೆಂದೇ ನನ್ನ ಲೆಕ್ಕ.

ಕ್ರಷ್ಣಾ ಭಟ್ಟರು  ಮತ್ತು ಸೋಮಸುಂದರ ರಾವ್ ಕೂಡ ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದರು. ಸೋಮಸುಂದರ ರಾವ್ ರ ಪ್ರಕಾರ ರಾಮ ದೇವರಲ್ಲ, ಕೃಷ್ಣ ಮಾತ್ರ ದೇವರಂತೆ. ಅವರದೇ ವಾದಗಳಿದ್ದವು ಅದನ್ನ ಸಮರ್ಥಿಸಲಿಕ್ಕೆ. ಅವರವರ ನಂಬಿಕೆ ಎನ್ನುತ್ತ ಸುಮ್ಮನಾಗಿದ್ದರು ಕ್ರಷ್ಣಾ ಭಟ್ಟರು. ಆತ ಮತ್ತೆ ಮತ್ತೆ ಅದನ್ನೇ ಹೇಳತೊಡಗಿದಾಗ, ಮಾತಾಡುವದನ್ನೇ ಕಡಿಮೆ ಮಾಡಿದ್ದರು ಕೂಡಾ. ರಾಮಾಯಣದ ಶ್ರೀ ರಾಮನಾಗಲೀ, ಮಹಭಾರತದ ಶ್ರೀ ಕೃಷ್ಣನಾಗಲೀ ಅವತಾರಗಳಲ್ಲವ. ಇವ ಎಂತ ಮಾತಾಡೋದು, ಅನ್ನುತ್ತಾ ಸುಮ್ಮನ್ನಿದ್ದರು. ಇವರ ಮನೆಯಲ್ಲಿ ರಾಮನವಮಿಯಂತೆ ಕೃಷ್ಣಷ್ಟಮಿಯೂ ನಡೆಯುತ್ತಿತ್ತು. ತಮ್ಮ ನಂಬಿಕೆಯ ಬಗ್ಗೆ ಎಂದೂ ಸಂಶಯ ಬಂದಿರಲೇ ಇಲ್ಲ.

ನಮ್ಮೂರಿನಲ್ಲಿ ಇರುವ  ದೇವಸ್ಥಾನಗಳಲ್ಲಿ, ಆಂಜನೇಯ ಸ್ವಾಮಿ ಬಹಳ ಶಕ್ತಿವಂತ ಎನ್ನುವ ಪ್ರತೀತಿ. ಪ್ರತಿ ಶನೀವಾರದಂದು ಅಲ್ಲಿ ಭಜನೆಗಳು, ವಿಶೇಷ ಪೂಜೆಗಳು ಜರುಗುತ್ತವೆ. ಊರಿನವರೆಲ್ಲ ಒಂದುಕಡೆ ಸೇರುವದೇ ಒಂದು ಸಂಭ್ರಮ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ, ಜನರನ್ನು ಒಟ್ಟಾಗಿಸಲಿಕ್ಕೆ ಬಹಳ ಸಹಾಯವಾಗಿರಲಿಕ್ಕೆ ಸಾಕು ಇಂತಹವುಗಳು. ರುಚಿಯಾದ ಪ್ರಸಾದ ಸಿಕ್ಕುತ್ತಿತ್ತು ಎಲ್ಲರಿಗೂ. ದೇವಾಲಯಗಳ ಪ್ರಸಾದಗಳಲ್ಲಿ ಏನೋ ಒಂದು ವಿಶಿಷ್ಟ ರುಚಿ ಇರುವದಂತು ನಿಜ. ಮೊನ್ನೆ ಇಲ್ಲಿನ(ಈಗ ನಾನಿರುವ ಊರಲ್ಲಿ)ಪೆರುಮಾಳ್ ಟೆಂಪಲ್ ನ ಪ್ರಸಾದ ತಿಂದಾಗಿನಿಂದಲೂ ನನ್ನ ನಂಬಿಕೆಗೆ ಇನ್ನೂ ಬಲ ಬಂದಿತ್ತು.

ಕ್ರಷ್ಣ ಭಟ್ಟರ ವತ್ತಾಯಕ್ಕೆ ಈತನೂ ಹೋಗುತ್ತಿದ್ದ ಅನಿಸುತ್ತದೆ. ಪ್ರಸಾದ ಕೈಯಲ್ಲಿ ಹಿಡಿದು ಅದೇನು ಯೊಚಿಸುತ್ತಿದ್ದನೋ, ಹಾಗೆಯೇ 
ಕೈಯಲ್ಲಿ ಹಿಡಿದು ಮನೆಯತ್ತ ಹೋಗಿಬಿಡುತ್ತಿದ್ದ. ತಿನ್ನುತ್ತಿದ್ದನೋ, ಹಾಗೆಯೇ ಚೆಲ್ಲುತ್ತಿದ್ದನೋ ಹೊರಗಿನವರಿಗೆ ತಿಳಿಯುತ್ತಿರಲಿಲ್ಲ. 
ಪುಣ್ಯಾತ್ಮನ ಕೃಷ್ಣ ಭಕ್ತಿ ದಿನೇ ದಿನೇ ಹೆಚ್ಚುತ್ತಿತ್ತು. ನಮ್ಮೂರಲ್ಲಿ ಒಂದೂ ಕೃಷ್ಣ ದೇವಾಲಯವಿಲ್ಲ ಎಂಬುದೂ ಈತನ ಅಸಮಾಧಾನಕ್ಕೆ 
ಕಾರಣವಾಗಿತ್ತು. ಆಗಾಗ್ಗೆ ಹೇಳುತ್ತಲೂ ಇದ್ದ.

ಶನಿವಾರ

ಮಳೆಗಾಲವೆಂಬುದು ಒಂದು ಸುಂದರ ಅನುಭವ

ಎಲ್ಲ ಕಡೆ ಕತ್ತಲುಆಕಾಶದಲ್ಲೆಲ್ಲ ಕರಿಮೋಡಜಿಟಿ ಜಿಟಿ ಮಳೆ ಥೇಟ್ ನಮ್ಮೂರಂತೆಯೇ ಇದೆ ಈದಿನ . ಮಳೆಗಾಲಕ್ಕೆ ಮಳೆಗಾಲವೇ ಸಮ.
ಸುಮ್ಮಗೆ ನನ್ನ ಪಾಡಿಗೆ ಕೂತಿದ್ದೆ ನೋಡಿ ಎಲ್ಲಿತ್ತೋ ಆ ಮಳೆಯ ಮೋಡಗಳ ಗಮನ, ಥಟ್ಟನೇ ನಮ್ಮ ಮನೆಯ ಸುತ್ತ ಇಣುಕಿ ನೋಡಿದ್ದೇ ನನ್ನ ಈಗಿನ ಖುಷಿಗೆ ಕಾರಣ.
ಮಳೆ ಒಂದು ವಿಸ್ಮಯ. ಮಳೆ ಮೊದಲಮೋಡ ಮೊದಲ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕೀತುಮೊದಲ ನೋಟಕ್ಕೆ ಮೋಡ ಮೊದಲೆನ್ನಿಸಿದರೂ, ಮಳೆಯ ನೀರಿಂದಲೇ ಅಲ್ಲವ ಮೋಡ. ಆ ಕರಿಮೋಡ ಬೇಧಿಸಿ,ದೊಡ್ಡ ಹನಿಯೊಂದು ಭುವಿ ಸೇರುವ ಹೊತ್ತಿಗೆ ಹಲವು ಹನಿಗಳಾಗಿ, ಮಳೆಯ ಮುತ್ತುಗಳಾಗಿ, ಬಿಸಿಯ ಬೇಗೆಯಲ್ಲಿ ಬೇಯುತ್ತಿರುವ ಈ ಭುವಿಯನ್ನ ಚುಂಬಿಸಿದ್ದು. ಅಷ್ಟೇ ಅಲ್ಲದೇಬಾಯ್ ತೆರೆದು ಕಾಯುತ್ತಿದ್ದ ಆ ಚಿಪ್ಪಿನಲ್ಲಿ ಸೇರಿ ಸ್ವಾತಿಯ ಮುತ್ತಾಗಿದ್ದು? ಏನೇ ಇರಲಿ, ಸುಮ್ಮಗೆ ತಣ್ಣಗೆ ಕೂತು ಸೆಖೆಯಿಂದ ಬೇಯುತ್ತಿರುವಾಗಬಿರು ಬೇಸಿಗೆಯ ಶುರುವಿಗೆ ಬಂದ ಈ ಮಳೆಯಿದೆಯಲ್ಲ ಅದೊಂದು ಅದ್ಭುತ ಲೋಕ ಕಟ್ಟಿಕೊಟ್ಟಿದೆ. ಕಿಟಕಿಯ ಪಕ್ಕದಲ್ಲಿ ಕೂತು ಮಳೆಹನಿಗಳ ಲೆಕ್ಕ ಬರೆಯುತ್ತಿದ್ದೇನೆ.
ನನ್ನ ಮಟ್ಟಿಗೆ ಮಳೆಗಾಲವೆಂಬುದು ಒಂದು ಸುಂದರ  ಅನುಭವ. ನಿಮ್ಮ ದಣಿವನ್ನ ಅಳಿಸಿಹಾಕುವ ತಾಕತ್ತಿದೆ.

ಗುರುವಾರ

ನಾನೂ ಸಮುದ್ರವಾಗಬಾರದಿತ್ತಾ?

ಹರಿಯುತ್ತಿದ್ದರೆ ನದಿ ಆಗುತ್ತಾ, ಯಾರಿಗೆ ಗೊತ್ತು, ಸಮುದ್ರವು ಅಗ್ಬಹುದಲ್ಲ?.ನಿಜ.
ಹೊಳೆಯೂ ಅಗಬಹುದು!
ನನ್ನ ಊರ ಕಡೆಯಲ್ಲ,'ಹೊಳೆ' ಎಂದೂ ಕರೆಯುತ್ತಾರೆ.
ನಾನೂ ಸಮುದ್ರವಾಗಬಾರದಿತ್ತಾ?!
(ಹರಿ , ಹೊಳೆ ಎರಡಕ್ಕೂ ಹಲವು ಅರ್ಥಗಳಿದ್ದಾವೆ ನಮ್ಮ ಕನ್ನಡದಲ್ಲಿ.)

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೋ. ಹುಡುಕಾಟ ಕೆಲವರಿಗೆ ಹುಡುಗಾಟವೆನ್ನಿಸಬಹುದು.ಅದರೆ ಹಲವರಿಗೆ ?
ಗೊತ್ತಿಲ್ಲಾ. ಯಾಕೋ ಅಲ್ಲೊಂದು ಕೂಗು, ಇಲ್ಲೊಂದು ಅಳಲು, ಮನದ ಕದ ತಟ್ಟಿ ಹಾಗೆಯೇ ಹಾರಿಹೋಗುತ್ತಿವೆ. ಅಮ್ಮಂಗೆ ಅವತ್ತು ಅನಿಸಿದ್ದು ನನಗೆ ಇವತ್ತಿಗೂ ಸಲ್ಲುವಂತಿದೆ.

ಧೃತ್ ಯಾವಾಗಲೂ ಹೀಗೆಯೆ; ಮಾತಿಗೆ ಸಿಕ್ಕಿದರೆ, ಎಲ್ಲಿಂದ ಎಲ್ಲಿಗೋ ಹಾರಿ,ತೇಲಿ,ನೆಗೆದು,ಜಿಗಿದು ಹೋಗಿಬಿಡುತ್ತಾನೆ. ಬಿಡೊ ಮಾರಾಯ, ಒಂದಕ್ಕೊಂದು ತಾಳೆ ಅಗ್ಲಿಕ್ಕಿಲ್ಲ ನಿನ್ನ ಮಾತು ಅಂದರೆ ತಟ್ಟನೆ ಸುಮ್ಮನಾಗಿಬಿಡುತ್ತಾನೆ. ಅಲ್ಲೊಂದು ತಣ್ಣನೆಯ ಮೌನ ಆವರಿಸಿಬಿಡುತ್ತದೆ. ಅದೊಂದು ಅಸಹನೀಯ ಮೌನ, ಮತ್ತೆ ನಾನೇ ಕೆದಕಿ ಕೇಳಬೇಕು, ಏನಾಯ್ತೋ ನಿಂಗೆ?

ಏನಿಲ್ಲಾಕ್ಕ, ಹಾಗೆ ಸುಮ್ಮನೆ, ಅಂದು ಸುಮ್ಮನಾಗಿಬಿಟ್ಟ. ಯಾಕೋ ಎಲ್ಲೋ ಏನೋ ಎಡವಟ್ಟಾಗಿದೆ, ಎಂಬ ಸೂಚನೆ ಆಗಲೆ ಸಿಕ್ಕಿಯಾಗಿತ್ತು ನನಗೆ.

ಅಕ್ಕಾ, ಬಂಗಾಳ ಕೊಲ್ಲಿಯತರ ನೀನು ಅಂದ. ಅಬ್ಬರ ಜಾಸ್ತಿ, ಅದಕ್ಕೆ ನೀನು ಹೇಳುವದಕ್ಕೆ, ಮಾತಿಗೆ  ಇಲ್ಲವೆನುವದಕ್ಕಾಗುವದಿಲ್ಲ.
ಮೊನ್ನೆ ನೋಡಿಬಂದೆ.ಯಾಕೋ ಆ ಸಮುದ್ರ ನನ್ನ ನಿದ್ದೆ ಗೆಡಿಸಿದೆ, ಆ ಸಂಜೆಯ ಹೊತ್ತಲ್ಲಿ, ಫ್ಲೊರೆಸೆಂಟ್ ದೀಪದ ಬದಿಯಲ್ಲಿ ಕುಳಿತು ಸಮುದ್ರ ನೋಡುವದಿದೆಯಲ್ಲಾ..ಅಹ್.

ಯಾವದಕ್ಕೋ ಪೀಠಿಕೆ ಅನ್ನಿಸಿತ್ತು.
ಅಕ್ಕ, ಸರಯು ಸಿಕ್ಕಿದ್ದಳು ಅಂದ.
ಯಾವ ಸರಯೂ? ಅಂದೆ.ಗೊತ್ತಿಲ್ಲದವಳಂತೆ.
ಆ ಕಲ್ತುಡ್ಕ ನಿಂಗನ ಮಗಳು..
ಯಾಕೋ ಅಷ್ಟು ಹೊತ್ತು ಇದ್ದ ಉತ್ಸಾಹ ಧೃತ್ ನಲ್ಲಿ ಮಾಯವಾಗಿತ್ತು.

'ಸಿಟ್ಟು ಮಾಡಿ ಹಿಂದೆ ಹೋದ ಸಮುದ್ರದ ಅಲೆಗಳು ಮತ್ತೆ ದಡಕ್ಕೆ ಬಾರದಿರುತ್ತವೆಯೇ',ಅಂದೆ. ಅಪರೂಪದ 'ತಮ್ಮ' ಬಿಡು ನೀನು.

'ಹಿಂದೆ ಕಳೆದು ಹೋದ ಅಲೆಯೇ ಅದು, ಅಂತ ಸಾರಿ ಹೇಳಲಿಕ್ಕೆ ಯಾವ ಬಂಡೆಗೆ ಮಾತು ಬರುತ್ತದೆ ಹೇಳು ಅಕ್ಕಾ', ಅಂದ.

ಅದು ಹೌದು, ಬಂಡೆಗಳಿಗೆ ಮಾತಾಡುವ ತಾಳ್ಮೆ ಎಲ್ಲಿಂದ ಬರಬೇಕೋ ಮಾರಾಯ, ದಿನವಿಡೀ ಅಬ್ಬರ ಸಹಿಸಿ ಸಾಕಾಗಿರುತ್ತದೆ ಅಂದೆ. ಜೊತೆಗೆ ಮರಳಿ ಬರುವ ಅಲೆಗಳೇನು ಶಾಂತವಾದುದವಾ? ಹೊಸದು ಹೊಸದು ಬಂದಂತೆ, ಅಬ್ಬರ ಹೆಚ್ಚುತ್ತಾ ಪೌರ್ಣಮಿಯ ಇದುರು ಬಂದಾಗ ಮಹಾ ಕಾಳಿಯ ಅವತಾರವೇ ಅಲ್ಲವ?

ಕಾಳಿಯೋ ಚಂಡಿಯೋ ನನ್ನ ವ್ಯಾಪ್ತಿ ಮೀರಿದ್ದು ಅನ್ನಿಸಿದೆ. ಅದಿಕ್ಕೆ ಹೇಳಿದ್ದು, ನಾನೂ ಸಮುದ್ರವಾಗಬಾರದಿತ್ತಾ? ಸದಾ ಹರಿಯುತ್ತಲೇ ಇರಬಹುದಿತ್ತು.

ಹೋಗಿ ಆ ಮರಳುಗಳನ್ನು ಕೇಳು ನನಗೇನು ಗೊತ್ತು,ಅಂದೆ. ಎಷ್ಟೇ ಹರಿಯುತ್ತಿದ್ದರು ಒಂದು ದಿನ ದಡ ಸೇರಲೇ ಬೇಕಲ್ಲ ಅಂದೆ. ಅಲ್ಲಿಗೆ ಒಂದು ಅಲ್ಪವಿರಾಮ ಬಿದ್ದಿತ್ತು ನಮ್ಮ ಮಾತಿಗೆ.

ಬಿಡಿಸಿ ಹೇಳುತ್ತಾನೆಂದು ಕಾದೆ, ಅದೇನೆಂದು ಕೊನೆಗೂ ಹೇಳಲೇ ಇಲ್ಲ. ಅವ ಯಾವಾಗಲೂ ಹಾಗೆಯೇ.

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಸೋಮವಾರ

ಆಯ್ಕೆ

ಅಕೆಗೆ ಆಯ್ಕೆಯೆಂದರೆ ಏನೆಂಬುದೇ ಗೊತ್ತಿರಲಿಲ್ಲ.ಹೆಸರಿಲ್ಲದವರೂ ಇರಬಹುದೇನೋ, ಅದರೆ ಅಯ್ಕೆಯಿಲ್ಲದವರು? ಪ್ರಪಂಚ ವಿಶಾಲವಾದುದಲ್ಲ ಇದ್ದರು ಇರಬಹುದಲ್ಲಾ? ಆಂತರ್ಯ ಹೊಕ್ಕಿ ನೋಡಿದವರಾರು?
ಅಂತಹ ಅವಳು ಇಂದು ಒಂದು ಅಮೇರಿಕನ್ ಡೈಮಂಡ ನ ಕಿವಿಯೋಲೆ ಕೊಂಡಿದ್ದಳು. ಆ ಬಂಗಾರದ ಅಂಗಡಿಯಲ್ಲಿ ಅವ ಕೊಟ್ಟ ಕನ್ನಡಿ ಹಿಡಿದು ಕೈಯಲ್ಲಿ ಕಿವಿಯೋಲೆ ಹಿಡಿದು ಮತ್ತೆ ಮತ್ತೆ ಕಿವಿಗಿಟ್ಟು ನೋಡಿಕೊಳ್ಳುತ್ತಿದ್ದಳು. ಆ ಓಲೆಯ ಹರಳಿಗೆ ಸವರಿ ಮತ್ತೆ ಹಿಂದಿರುಗಿದ್ದ ಆ ಬೆಳ್ಳನೆಯ ಬೆಳಕಿಂದ ಆಕೆಯ ಕಣ್ಣು ಹೊಳೆವ ವಜ್ರವಾಗಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಮನೆ ದೊಡ್ಡದಿತ್ತು, ಮನೆ ತುಂಬ ಜನರಿದ್ದರು, ಉಡಲಿಕ್ಕೆ, ಉಣ್ಣಲಿಕ್ಕೆ ಬೇಕಿದ್ದದೆಲ್ಲ ಅಲ್ಲಿತ್ತು.ಆದರೆ ಅಲ್ಯಾರಿಗೂ ದೊಡ್ಡ ಮನಸಿರಲಿಲ್ಲ.ಮಾತಡಲಿಕ್ಕೆ ಜನರಿರಲಿಲ್ಲ.ಹೊಟ್ಟೆತುಂಬ ಉಂಡಿರಲಿಲ್ಲ ಆಕೆ, ಮೆತ್ತನೆಯ ಹಾಸಿಗೆಯಮೇಲೆ ತಲೆ ಇಟ್ಟರು ಕಣ್ತುಂಬ ನಿದ್ದೆ ಇರಲಿಲ್ಲ. ಆಕೆಗೆ ಎಲ್ಲದಕ್ಕೂ ತಲೆ ಆಡಿಸಿ ಗೊತ್ತಿತ್ತೇ ವಿನಃ, ತಲೆ ಎತ್ತಿ ನಡೆದು ಗೊತ್ತೇ ಇರಲಿಲ್ಲ

ಆಕೆ ಇಂದು ಕುಶಿಯಿಂದ ಇದ್ದಾಳೆ, ಬಾಯಿತುಂಬ ನಗುತ್ತಿದ್ದಾಳೆ ಮನಸಿಂದ..

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...