ಸ್ವಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ವಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ

ಮಳೆಗಾಲವೆಂಬುದು ಒಂದು ಸುಂದರ ಅನುಭವ

ಎಲ್ಲ ಕಡೆ ಕತ್ತಲು, ಆಕಾಶದಲ್ಲೆಲ್ಲ ಕರಿಮೋಡ, ಜಿಟಿ ಜಿಟಿ ಮಳೆ ಥೇಟ್ ನಮ್ಮೂರಂತೆಯೇ ಇದೆ ಈದಿನ . ಮಳೆಗಾಲಕ್ಕೆ ಮಳೆಗಾಲವೇ ಸಮ.
ಸುಮ್ಮಗೆ ನನ್ನ ಪಾಡಿಗೆ ಕೂತಿದ್ದೆ ನೋಡಿ ಎಲ್ಲಿತ್ತೋ ಆ ಮಳೆಯ ಮೋಡಗಳ ಗಮನ, ಥಟ್ಟನೇ ನಮ್ಮ ಮನೆಯ ಸುತ್ತ ಇಣುಕಿ ನೋಡಿದ್ದೇ ನನ್ನ ಈಗಿನ ಖುಷಿಗೆ ಕಾರಣ.
ಮಳೆ ಒಂದು ವಿಸ್ಮಯ. ಮಳೆ ಮೊದಲ, ಮೋಡ ಮೊದಲ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕೀತು, ಮೊದಲ ನೋಟಕ್ಕೆ ಮೋಡ ಮೊದಲೆನ್ನಿಸಿದರೂ, ಮಳೆಯ ನೀರಿಂದಲೇ ಅಲ್ಲವ ಮೋಡ. ಆ ಕರಿಮೋಡ ಬೇಧಿಸಿ,ದೊಡ್ಡ ಹನಿಯೊಂದು ಭುವಿ ಸೇರುವ ಹೊತ್ತಿಗೆ ಹಲವು ಹನಿಗಳಾಗಿ, ಮಳೆಯ ಮುತ್ತುಗಳಾಗಿ, ಬಿಸಿಯ ಬೇಗೆಯಲ್ಲಿ ಬೇಯುತ್ತಿರುವ ಈ ಭುವಿಯನ್ನ ಚುಂಬಿಸಿದ್ದು. ಅಷ್ಟೇ ಅಲ್ಲದೇ, ಬಾಯ್ ತೆರೆದು ಕಾಯುತ್ತಿದ್ದ ಆ ಚಿಪ್ಪಿನಲ್ಲಿ ಸೇರಿ ಸ್ವಾತಿಯ ಮುತ್ತಾಗಿದ್ದು? ಏನೇ ಇರಲಿ, ಸುಮ್ಮಗೆ ತಣ್ಣಗೆ ಕೂತು ಸೆಖೆಯಿಂದ ಬೇಯುತ್ತಿರುವಾಗ, ಬಿರು ಬೇಸಿಗೆಯ ಶುರುವಿಗೆ ಬಂದ ಈ ಮಳೆಯಿದೆಯಲ್ಲ ಅದೊಂದು ಅದ್ಭುತ ಲೋಕ ಕಟ್ಟಿಕೊಟ್ಟಿದೆ. ಕಿಟಕಿಯ ಪಕ್ಕದಲ್ಲಿ ಕೂತು ಮಳೆಹನಿಗಳ ಲೆಕ್ಕ ಬರೆಯುತ್ತಿದ್ದೇನೆ.
ನನ್ನ ಮಟ್ಟಿಗೆ ಮಳೆಗಾಲವೆಂಬುದು ಒಂದು ಸುಂದರ  ಅನುಭವ. ನಿಮ್ಮ ದಣಿವನ್ನ ಅಳಿಸಿಹಾಕುವ ತಾಕತ್ತಿದೆ.

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಸೋಮವಾರ

ಆಯ್ಕೆ

ಅಕೆಗೆ ಆಯ್ಕೆಯೆಂದರೆ ಏನೆಂಬುದೇ ಗೊತ್ತಿರಲಿಲ್ಲ.ಹೆಸರಿಲ್ಲದವರೂ ಇರಬಹುದೇನೋ, ಅದರೆ ಅಯ್ಕೆಯಿಲ್ಲದವರು? ಪ್ರಪಂಚ ವಿಶಾಲವಾದುದಲ್ಲ ಇದ್ದರು ಇರಬಹುದಲ್ಲಾ? ಆಂತರ್ಯ ಹೊಕ್ಕಿ ನೋಡಿದವರಾರು?
ಅಂತಹ ಅವಳು ಇಂದು ಒಂದು ಅಮೇರಿಕನ್ ಡೈಮಂಡ ನ ಕಿವಿಯೋಲೆ ಕೊಂಡಿದ್ದಳು. ಆ ಬಂಗಾರದ ಅಂಗಡಿಯಲ್ಲಿ ಅವ ಕೊಟ್ಟ ಕನ್ನಡಿ ಹಿಡಿದು ಕೈಯಲ್ಲಿ ಕಿವಿಯೋಲೆ ಹಿಡಿದು ಮತ್ತೆ ಮತ್ತೆ ಕಿವಿಗಿಟ್ಟು ನೋಡಿಕೊಳ್ಳುತ್ತಿದ್ದಳು. ಆ ಓಲೆಯ ಹರಳಿಗೆ ಸವರಿ ಮತ್ತೆ ಹಿಂದಿರುಗಿದ್ದ ಆ ಬೆಳ್ಳನೆಯ ಬೆಳಕಿಂದ ಆಕೆಯ ಕಣ್ಣು ಹೊಳೆವ ವಜ್ರವಾಗಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಮನೆ ದೊಡ್ಡದಿತ್ತು, ಮನೆ ತುಂಬ ಜನರಿದ್ದರು, ಉಡಲಿಕ್ಕೆ, ಉಣ್ಣಲಿಕ್ಕೆ ಬೇಕಿದ್ದದೆಲ್ಲ ಅಲ್ಲಿತ್ತು.ಆದರೆ ಅಲ್ಯಾರಿಗೂ ದೊಡ್ಡ ಮನಸಿರಲಿಲ್ಲ.ಮಾತಡಲಿಕ್ಕೆ ಜನರಿರಲಿಲ್ಲ.ಹೊಟ್ಟೆತುಂಬ ಉಂಡಿರಲಿಲ್ಲ ಆಕೆ, ಮೆತ್ತನೆಯ ಹಾಸಿಗೆಯಮೇಲೆ ತಲೆ ಇಟ್ಟರು ಕಣ್ತುಂಬ ನಿದ್ದೆ ಇರಲಿಲ್ಲ. ಆಕೆಗೆ ಎಲ್ಲದಕ್ಕೂ ತಲೆ ಆಡಿಸಿ ಗೊತ್ತಿತ್ತೇ ವಿನಃ, ತಲೆ ಎತ್ತಿ ನಡೆದು ಗೊತ್ತೇ ಇರಲಿಲ್ಲ

ಆಕೆ ಇಂದು ಕುಶಿಯಿಂದ ಇದ್ದಾಳೆ, ಬಾಯಿತುಂಬ ನಗುತ್ತಿದ್ದಾಳೆ ಮನಸಿಂದ..

ಶನಿವಾರ

ಶಾಲ್ಮಲೆ ನಕ್ಕಳಾ?

ಶಾಲ್ಮಲೆ ಯಾವತ್ತೂ ಹಾಗೇ, ಮುನಿಸಿಕೊಂಡದ್ದೇ ಇಲ್ಲ ಅಂದರೆ ತಪ್ಪಾಗುತ್ತದೆ. ‍ಅಲ್ಲದೇ, ಇದನ್ನು ಆಕೆಯ ‘ಅವನು’ ಒಪ್ಪನು.
'ಸಿಟ್ಟು’ ಒಂದು ಸೊಬಗಂತೆ, ಆಕೆಯ ಪ್ರಕಾರ!
ಆಕೆಯ ‘ಅವನು’ ಮೌನ ಬಂಗಾರ ಅನ್ನುವದರಲ್ಲೇ ಜೀವನ ಕಳೆಯಬೇಕೆಂದಿದ್ದವ.
“ನೋಡು ಸುಮ್ಮನೆ ನೋಡು ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು !
ಅದರೊಳೊಂದಾಗುವದೆ ಪರಮ ರಸಿಕತೆ! ಅದಕೆ
ಮಿಗಿಲಿಹ ರಸಾನಂದ ಮತ್ತೆ ಬೇರೊಂದಿಲ್ಲ” - ಕುವೆಂಪು
ಎನ್ನುತ್ತಾ ಆತ ಬರಿದೇ ನಕ್ಕು ಬಿಡುತ್ತಾನೆ. ಅರ್ಥವಾಗುವದಿಲ್ಲ ಇಬ್ಬರೂ!

ತತ್ ಈ ಶಾಲ್ಮಲೆಯೊಂದಿಲ್ಲದಿದ್ದರೆ ..ರೇ ರೇ ಉಹುಮ್..ಮುಂದೆ ಮಾತು ಹೊರಡುವದೇ ಇಲ್ಲ.ಇದುರಿಗೆ ಶಾಲ್ಮಲೆ ನಿಂತಾಗ,ಮಾತು ಹೊರಕ್ಕೆ ಬರುವದೇ ಇಲ್ಲ. ಅದು ಹಾಗೇ.ಆಕೆಯೆಂದರೆ ಗೌರವವಾ,ಅತಿಯಾದ ಪ್ರೀತಿಯ? ಅದು ಆಕೆಗೂ ಅರ್ಥವಾಗಿಲ್ಲ.
ಬದುಕುತ್ತಾ ಹೊಗಬೇಕು ಇದು ‘ಅವನ’ ಸಿದ್ಧಾಂತ.ಹಾನ್, ಸಿದ್ಧಾಂತವೆಂದೆಲ್ಲ ಕರಿಯಲಿಕ್ಕೆ ಅವ ತಯಾರಿಲ್ಲ.

ಜೀವನಕ್ಕೊಂದು ಗುರಿ ಇರಬೇಕು, ಸಿದ್ಧಾಂತ ಇರಬೇಕು, ನಂಬಿಕೆ ಇರಬೇಕು,ಬಾಳಲಿಕ್ಕೆ Scientific Reason ಬೇಕು, ಯಾಕೆಂದು ಪ್ರಶ್ನಿಸಬೇಕು,ಇಲ್ಲವಾದರೆ ಅದು ಮೌಢ್ಯವಾಗುತ್ತದೆ. ಇದೆಲ್ಲ ಏನಿದ್ದರು ನಮ್ಮ ಶಾಲ್ಮಲೆಯದು.

 ಕೆಲವೊಮ್ಮೆ, ಪ್ರಶ್ನೆಯೂ ಮುಖ್ಯವಲ್ಲ, ಉತ್ತರವೂ ಮುಖ್ಯವಲ್ಲ, ಅವೆರಡರ ನಡುವಿನ ಗೊಂದಲ,ತಳಮಳ ದ್ವಂದ್ವ ಮತ್ತು ಮೌನ ಬಹಳ ಮುಖ್ಯವಾದುದು ಅನ್ನಿಸುತ್ತದೆ & ಬದುಕಲಿಕ್ಕೆ Scientific Reason ಬೇಕಿಲ್ಲ ಅಲ್ಲವಾ? -ಇದು ಶಾಲ್ಮಲೆಯ ‘ಅವ’ನದ್ದು.

ನನಗಂತು ನೂರಕ್ಕೆ ನೂರು ಸತ್ಯ ಅನ್ನಿಸಿತ್ತು.’ಅವನ’ ಮಾತನ್ನೆ ಹಾಗೆಯೇ ಫೇಸ್ ಬುಕ್ ವಾಲ್ನಲ್ಲಿ ಹಾಕಿದಾಗ, ನನ್ನ ಹಲವು ಸ್ನೇಹಿತರುಗಳಾದ ಪಲ್ಲವಿ,ಕವಿತಾ,ಪ್ರಸಾದು ,ಹೌದೆಂದಿದ್ದರು. ಶಾಲ್ಮಲೆಯ ಸಿಟ್ಟು ಈಗ ನನ್ನ ಮೇಲೆ ತಿರುಗಿರಬೇಕು.ಸಧ್ಯ ಮಾತಿಗೆ ಸಿಕ್ಕಿಲ್ಲ.
ಶಾಲು, ಈ ‘ಬೇಕು’ಗಳಲ್ಲೆ ಜೀವನ ತುಂಬಿಸ್ಕೋತೀಯೇನೆ ಹುಚ್ಚಿ, ಅನ್ನುತ್ತಾನೆ.
ತಿಂಗಳದ ಆ ನಾಲ್ಕು ದಿನಗಳಲ್ಲಿ ಶಾಲುವಿನವದ್ದಾಟ ಆಕೆಯ ‘ಅವನನ್ನ’ ಕಂಗೆಡಿಸುತ್ತದೆ. Painkiller ತೆಗೆದು ಕೊಳ್ಳದೆ ಹಾಗೆಯೇ ಒದ್ದಾಡುವ ಆಕೆಯನ್ನ ನೋಡುತ್ತ ಸುಮ್ಮನೆ ಕುಳಿತುಬಿಡುತ್ತಾನೆ, ಹೆಣ್ಣಿಗಿಂತ ಮೃದುವಾಗಿ ಬಿಡುತ್ತಾನೆ,ತಾನೇನು ಮಾಡಬೇಕೆಂದು ತಿಳಿಯದೆ ಶಾಲುವಿನ ಹಿಂದೆಯೇ ಸುತ್ತುತ್ತಾನೆ,ಬಾಲ ಸುಟ್ಟ ಬೆಕ್ಕಿನಂತೆ.ಆಕೆಗೆ ಅದು ಅರ್ಥವಾಗುವದೆ ಇಲ್ಲ. ಅರ್ಥವಾಗುವದಿಲ್ಲವೋ, ಅರ್ಥಮಾಡಿಕೊಳ್ಳಲಿಕ್ಕೆ ಯತ್ನಿಸುವದಿಲ್ಲವೋ, ನನಗಂತು ಬಗೆಹರಿಯುವದಿಲ್ಲ.

ನೋವು ಸಹಿಸುವ ಆಕೆ ಆತಂಗೆ ವಿಸ್ಮಯವಾಗಿ ಕಾಣುತ್ತಾಳೆ. ಒಂದು ಗುಳಿಗೆನುಂಗಿ ನಗಲಿಕ್ಕೆ ಆಗುವದಿಲ್ಲವ ಅಂದರೆ, ಇಲ್ಲ ಅಂತವುಗಳನೆಲ್ಲ ನುಂಗಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಂದೆ ಏನೇನೊ ಆಗಿಬಿಡುತ್ತದಂತೆ, ಶಾಲು ನಿಜಕ್ಕು ಆತನನ್ನು ಹೆದರಿಸುತ್ತಿದ್ದಾಳೆ ಅನ್ನಿಸುತ್ತದೆ.

ತನ್ನ ಮಿತಿಗೆ ಬಗೆಹರಿಯದ್ದು ಎಂದು ಸುಮ್ಮನಾಗುತ್ತಾನೆ.
ಮುಂದೆ ಎಂದೋ,ಎನೇನೋ ಆಗಿಬಿಡುತ್ತದೆಯೆಂದು ಇಂದು ಯೋಚಿಸುವ ಶಾಲ್ಮಲೆ ಆತಂಗೆ 'ಪ್ರಶ್ನೆ'ಯಾಗಿದ್ದಾಳೆ.
ಶಾಲು ಯಾಕೇ ಹೀಗೆ ನೀನು ?
ಅಳು ಬಂದಾಗ ಅತ್ತುಬಿಡು, ನಗು ಬಂದಾಗ ನಕ್ಕುಬಿಡು ಎನ್ನುವ 'ಅವ' ಶಾಲ್ಮಲೆಯ ಆ ನಗುವಿಗಾಗಿ ಕಾಯುತ್ತಿದ್ದಾನೆ. ಶಾಲ್ಮಲೆ ನಕ್ಕಳಾ?

ಶುಕ್ರವಾರ

ಧಿಕ್ಕಾರವಿರಲಿ ಕ್ರೌರ್ಯಕ್ಕೆ


ಡಿಸೆಂಬರಿನ ಚಳಿ ಜೋರಾಗುತ್ತಿರುವಂತೆಯೇ,ಕ್ರಿಸ್ ಮಸ್ ನ ಸಂಭ್ರಮ, ಹೊಸವರುಷದ ಆಗಮನದ ದಿನಗಣನೆ ಶುರುವಾಗಿದೆ. ಯಾವತ್ತಿನಂತೆ,ನಿಟ್ಟುಸಿರು ಬಿಡುತ್ತಾ,'ಅಯ್ಯೊ ಅದೆಷ್ಟು ಬೇಗ ಈ ವರ್ಷ ಕಳೀತಪ್ಪ' ಅಂತ ಹೇಳಲು ಶುರುಮಾಡಿದ್ದಾಗಿದೆ.

ಹರಸಾಹಸ ಪಟ್ಟ ಒಸಾಮ ಮೇಲಣ ಧಾಳಿ, ಅಲ್ಲೊಂದು ಭೂಕಂಪ,ಇಲ್ಲೊಂದು ಪ್ರವಾಹ,
ಮುಂಬೈ ನ ಜನರ ಧೈರ್ಯ,ಬದುಕನ್ನ ಪ್ರೀತಿಸುವ ಕಲೆ,ಉಗ್ರರ ಕ್ರೌರ್ಯ,ಅಣ್ಣಾ ಹಜಾರೆ, ಅಮಿತಾಬ್ ಬಚ್ಚನ್ ರ ಮೊಮ್ಮಗಳು,ವಿದ್ಯಾ ಬಾಲನ್,ಸುದ್ದಿ ಮಾಡದೆ ಭೇಶ್ ಅನ್ನಿಸಿಕೊಂಡ ಕಿರಣ್ ಮತ್ತು ಅಮಿರ್ ಖಾನ್,ಖಾಲಿ ಡಬ್ಬಾ ಸೇರಿ ಹಿಟ್ಟಾದ ಶಾರುಕ್ ನ 'ರಾ ಒನ್', ಹೇಳದೇ,ಕೇಳದೆ ಸುದ್ದಿ ಮಾಡಿದ 'ಕೊಲಾವೇರಿ ಡಿ',
ಕೊಳೆತು ನಾರುತ್ತಿರುವ ಕರ್ನಾಟಕದ ರಾಜಕಾರಣ, ವಿಪರೀತಕಕ್ಕೇರುತ್ತಿರುವ ಮಾನಹಾನಿ,ಪ್ರಾಣಹಾನಿ ಪ್ರಕರಣಗಳು,

- ಇವೆಲ್ಲಾ ಈ ವರ್ಷದ ಕೆಲವು ಹೈ ಲೈಟ್ಸ್ ಅಷ್ಟೇ.

ಇವೆಲ್ಲವುಗಳ ಮಧ್ಯೆ, ಬೆಳಿಗ್ಗೆದ್ದು ಪೇಪರ್ ಓದಲಿಕ್ಕೆ ಮನಸ್ಸಾಗುವದಿಲ್ಲ.ಮಾನಹಾನಿ,ಪ್ರಾಣಹಾನಿ ಪ್ರಕರಣಗಳ ಸಂಖ್ಯೆ ಯಲ್ಲಾಗುತ್ತಿರುವ ಏರಿಕೆ ನನಗೆ ನಿಜಕ್ಕು ಅಸಹ್ಯ ಅನಿಸುತ್ತಿದೆ.ಮನುಷ್ಯ ಇನ್ನೊಬ್ಬ ಮನುಷ್ಯನನ್ನ ವಸ್ತುವಾಗಿ ಪರಿಗಣಿಸುತ್ತಿರುವದು ಖೇದಕಾರಿಯಾಗಿದೆ.

ಧಿಕ್ಕಾರವಿರಲಿ ಕ್ರೌರ್ಯಕ್ಕೆ.ಮಾನವನ ವಿಕೃತ ಮುಖಕ್ಕೆ ತೆರೆ ಬೀಳಲಿ.

ಭಾನುವಾರ

ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ

ಇಂದಿನ ಬೆಳಗು ಶುರುವಾದದ್ದೇ ಬಿಸಿಬಿಸಿ ಕಾಫಿಯಿಂದ. ಭಾನುವಾರವಾದರು ನಾನು ನಿದ್ದೆಗೆ ಶುಭೋದಯ ಹೇಳುವದು ಬೆಳ್ಳಂಬೆಳಗ್ಗೆಯೇ .ದೊಡ್ಡ ಕಪ್ ನ ತುಂಬ ತುಂಬಿಸಿ ಸೊರ್ ಸೊರ್ ಎಂದು ಕುಡಿಯುತ್ತ ಕುಳಿತರೆ ಹೊತ್ತೇರುತ್ತಿರುವದನ್ನ ಮರೆಯಿಸುವ ನಷೆ ಆವರಿಸಿಬಿಟ್ಟಿದೆ. ಮೂಡಣದ ನಸುಕು ಕತ್ತಲೆಯ ಕಳೆ ಕಳೆಯುತ್ತ,ಮುಂಜಾವಿನ ಮಂಜು ಇಳಿಯುತ್ತಿದ್ದರೆ,ಅದನ್ನೆ ನೋಡುತ್ತ ,ಬಿಸಿಬಿಸಿ ಕಾಫಿಯ ಒಂದೊಂದೇ ಗುಟುಕು ಹೊಟ್ಟೆ ಸೇರಿದ ಆ ಗಳಿಗೆಗಳು ಗೊತ್ತೇ ಅಗುವದಿಲ್ಲ. ರುಚಿ ಸವಿವ ಕೈಂಕರ್ಯ ದಲ್ಲಿ ಬಹಳ ಬ್ಯೂಸಿಯಾಗಿರುವ ನಾಲಿಗೆ, ಆ ಬಿಸಿಗೆ ಚುರುಗುಟ್ಟಿದರು ಎನನ್ನೂ ಹೇಳುವದೇ ಇಲ್ಲ.ಕಾಫಿಯ ಮಟ್ಟಿಗೆ ಹೇಳುವದಾದರೆ ಮೊದಲು ಸುದ್ದಿ ಮುಟ್ಟುವದು ಮೂಗಿಗೆ ಸರಿ.ಮೂಗು ಮಿಕ್ಕವರನ್ನ ಬಡಿದೆಬ್ಬಿಸಿ,ಬೆಳಗಾಗಿದ್ದನ್ನ ಸಾರಿ ಹೇಳಿದ್ದು ದಿಟ.
ಆ ಗುಬ್ಬಿಗೂ ಹಾಗೇ ಆಗಿರಬೇಕು.ನನ್ನ ಪ್ರೀತಿಯ ಗುಬ್ಬಿ/ ಗುಬ್ಬಚ್ಚಿ ನಾ ಕಾಫಿ ಕುಡಿಯುವದನ್ನ ನೋಡಲಿಕ್ಕೆ ಬೇಗ ಎದ್ದಿರಬೇಕು,ಅಥವ ಅದಕ್ಕು ರುಚಿ ಸವಿವ ಮನಸ್ಸಾಗಿರಬೇಕು,ಚಿವ್ ಚಿವ್ ಎನ್ನುತ್ತ ಇಲ್ಲೇ ಸುತ್ತುತ್ತಿದೆ, ನನ್ನಿದುರಿನ ಕಟಾಂಜನದ ತುದಿಯಲ್ಲಿ ಕೂತು ತನ್ನ ಚೊಂಚಿನ ಎರಡು ಬದಿಯನ್ನು ಅನುಕ್ರಮವಾಗಿ ಉಜ್ಜುತ್ತ ಕಾಫಿಯ ಸೇವನೆಗೆ ನಾ ಸಿದ್ಧ ಎಂದು ಸಾರಿ ಹೇಳುತ್ತಿರುವದು ನನಗೆ ಕಾಣಿಸುತ್ತಿಲ್ಲ. ಈ ಗುಬ್ಬಿ ಏನ ಹೇಳ ಹೊರಟಿದೆಯೆಂಬುದು ಕಾಫಿಯ ಸವಿರುಚಿಯ ನಷೆಯಲ್ಲಿ ತೇಲುತ್ತಿದ್ದ ನನಗೆ ತಿಳಿಯುವದೇ ಇಲ್ಲ

ಯಾಕೋ ನನ್ನ ದಿವ್ಯ ನಿರಾಸಕ್ತಿ ತನಗೆ ನೋವು ತಂದಿದೆ ಎಂದು ನನಗೆ ತಿಳಿಯಲೆಂದು ಕುಂತಲ್ಲಿಂದ ರೆಕ್ಕೆ ಬಡಿಯುತ್ತ ಹಾರಿ,ಚಿವ್ ಚಿವ್ ಎಂದುಲಿದು ನನ್ನನೊಂದು ಸುತ್ತು ಹಾಕಿ ಮತ್ತೆ ಬಂದು ಅಲ್ಲೇ ತುದಿಯಲ್ಲಿ ಕುಳಿತು ಮೌನದ ಪಾಲಾಗಿಬಿಟ್ಟಾಗ, ತಟ್ಟನೆ ಇಹದ ಅರಿವಾಗಿ, ನನಗೆ ಖೇದವೆನಿಸಿಬಿಡುತ್ತದೆ. ಸಾವಧಾನ ಭಂಗಿಯಲ್ಲಿ ಕುಳಿತ ಆ ಗುಬ್ಬಿಯ ಆ ಚೂಪು ಚೊಂಚು ಮತ್ತೂ ಚೂಪಗಾದಂತೆ,ರೆಕ್ಕೆಗಳೆಲ್ಲ ಸೇರಿ ನನ್ನ ವಿರುದ್ಧ ಸಮರ ಸಾರಿದಂತೆ ನಾನು ಅಂದುಕೊಳ್ಳುತ್ತೇನೆ.
ಆದರೆ ನಡೆದದ್ದು ಹಾಗಲ್ಲ.ಅಲ್ಲೇ ಎಲ್ಲೋ ಹತ್ತಿರದಲ್ಲಿ ಅಡಗಿ ಕುಳಿತಿದ್ದ ಕೀಟವೊಂದರ ಮೂಗು ಸೇರಿದ ಕಾಫಿಯ ಪರಿಮಳ ಪ್ರಾಣಭಯವನ್ನೂ ಲೆಕ್ಕಿಸದಂತೆ ಮೂಲದೆಡೆಗೆ ಎಳೆದು ತಂದಿರುತ್ತದೆ. ಕಾಫಿಯ ಪರಿಮಳದ ಮೂಲ ಅರಸಿ ಬಂದ ಆ ಪುಟ್ಟ ಕೀಟ,ಕಾಫಿಯ ರುಚಿ ನೋಡಲು ಆಗದೆ ಚಡಪಡಿಸುತ್ತಿರುವ ಆ ಪ್ರೀತಿಯ ಗುಬ್ಬಚ್ಚಿಯ ಆಹಾರವಾಗಿ ಬಿಡುತ್ತದೆ.ಕಾಫಿ ಸಿಕ್ಕದಿದ್ದರೇನು ಎನ್ನ ಹೊಟ್ಟೆ ತುಂಬಿತಲ್ಲ, ಎಂದು ತನಗೇ ತಾ ಸಮಧಾನಿಸಿಕೊಳ್ಳುತ್ತ ಕುಂತಲ್ಲಿ ಕೂಡದ ಗುಬ್ಬಚ್ಚಿ ಅಲ್ಲಿಂದ ಮರೆಯಾಗಿ ಬಿಡುತ್ತದೆ.ಪಾಪ ಗುಬ್ಬಿ,ಎಂದು ಅಂದುಕೊಳ್ಳುತ್ತ,ರುಚಿ ಸವಿಯುವಲ್ಲಿ ತಲ್ಲೀನಳಾಗಿಬಿಡುತ್ತೇನೆ ನಾನು.

ಚೂರು ಸಕ್ಕರೆ ಹೆಚ್ಚಿದ್ದರೂ ನಡೆಯುತ್ತಿತ್ತು ಎಂಬಲ್ಲಿಗೆ ಕಾಫಿಯ ಲೋಟದಲ್ಲಿ ಕೊನೆಯ ಆ ಗುಟುಕೊಂದೇ ಉಳಿದುಬಿಡುತ್ತದೆ.ಬಿಸಿ ತಣಿದ ಆ ಕೊನೆಯ ಗುಟುಕು,ತಳ ಸೇರಿ ಅಡಗಿದ್ದ ಚೂರು ಸಕ್ಕರೆಯ ಜೊತೆ ಬೆರೆತು ಸಿಹಿಯ ಸಿಹಿ ದುಪ್ಪಟ್ಟಾಗಿ, ಅಬ್ಬಾ ಸಕ್ಕರೆ ಕಮ್ಮಿ ಅನಿಸಿದ್ದರೂ ಪರವಾಯಿಲ್ಲ ಇಷ್ಟೆಲ್ಲ ಸಿಹಿ ಇರಬಾರದಪ್ಪ ಅನ್ನಿಸಿ ಹೋಗುವಂತೆ ಮಾಡಿಬಿಡುತ್ತದೆಯಲ್ಲಾ.
ಏನೇ ಅಂದರು, ಮತ್ತೊಂದು ಲೋಟ ಕಾಫಿ ಕುಡಿವ ತನಕ ಉಳಿಯುವದು ಆ ದುಪ್ಪಟ್ಟಾದ ಸಿಹಿಯೆ, ಅದರ ಸವಿಯೇ, ಅದರ ನೆನಪೆ, ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ ಏನಂತೀರಿ?

ಬುಧವಾರ

ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ


ಸುರಿವ ಮಳೆ  ಸುರಿದು ಬರಿದಾಗಿತ್ತು,ನನ್ನ ಕಣ್ಣೀರಿನಂತೆಯೇ.ಯಾಕೊ ಅತ್ತು ಹಗುರಾಗೋಣವೆಂದರೆ ಅಳುವು ಬರುತ್ತಿಲ್ಲಾ.ಮಾಡಂಚಿನಿಂದ ಮಳೆ ನೀರು ಬಿದ್ದು ಬಿದ್ದು ನೆಲ ಸವೆದಿತ್ತು,ಕೊರಕಲಾಗಿತ್ತು,ನನ್ನ ಬದುಕಿನಂತೆಯೆ.ಬಿದ್ದ ನೀರು ಆ ಇಳೆಯ ಒಡಲೊಳಕ್ಕೆ ಇಳಿಯಲೇ ಇಲ್ಲ ಆತನ ಪ್ರೀತಿಯಂತೆ.ಕೊರಕಲ ಸಂದಿಯನ್ನೂ ಬಿಡದೇ ಅಂಗಳದ ಮಣ್ಣ ಸಮೇತ ಹಾಗೆಯೇ ಕೊರೆದು, ತರೆದು ಮಳೆಯ ನೀರು ಕೆಂಪಾಗಿ ದೂರ ಹರಿದಿತ್ತು ನಮ್ಮ ಪ್ರೀತಿಯಂತೆಯೆ.ಮಣ್ಣ ಸಾರವೆಲ್ಲ ಮಳೆಯ ನೀರಿನೊಟ್ಟಿಗೆ ಹರಿದು ದೂರ ದೂರ ಸರಿದು ಸಾಗರವ ಸೇರಿತ್ತು ಉಪ್ಪಾಗಲು,ಮರಳಾಗಲು,ಥೇಟ್ ನನ್ನ ಕಣ್ಣಿರಿಂತೆಯೇ, ನನ್ನ ಬದುಕಿನಂತೆಯೇ.

ಅಂವ ಕಂಡಿದ್ದು ನಮ್ಮ ಮಲೆನಾಡಿನ ಆ ರಪ್ಪನೆ ಬಾರಿಸುವ ಮಳೆಗಾಲದಲ್ಲಿಯೇ.ನಾನು ಆಗ ಧಾರವಾಡದಲ್ಲಿ ಎಮ್ ಎ ಓದುತ್ತಿದ್ದೆ.ಇಂಗ್ಲಿಷ್ ನನ್ನ ಮೆಚ್ಚಿನ ವಿಷಯ. ಅವಗೆ ಹೇಗೋ ತಿಳಿದಿತ್ತು ಅನ್ನಿಸುತ್ತದೆ.ಆತ ಮಾತ ಶುರುವಲ್ಲಿಯೇ,
I'm Nobody! Who are you?
Are you – Nobody – too?

Then there's a pair of us?

Don't tell! they'd advertise – you know!
How dreary – to be – Somebody!

How public – like a Frog –

To tell one's name – the livelong June –

To an admiring Bog!



ಅಂದಿದ್ದ. ಎಮಿಲಿ ಡಿಕಿನ್ಸೊನ್ ರ ಪದ್ಯ.

ಇಲ್ಲಿ ಯಾರು ಯಾರಿಗು ಒತ್ತಾಯಿಸುವ ಅಗತ್ಯವಿಲ್ಲ, ಯಾರೋ ಅಗುವದಕ್ಕೆ ಹೋಗಿ ಎನೇನೊ ಆಗುವ ಅನಿವಾರ್ಯತೆ ಇಲ್ಲ,ನೀನು ನೀನಾಗಿರಲಿಕ್ಕೆ,ನಿನಗನಿಸಿದ್ದನ್ನ ಹೇಳಲಿಕ್ಕೆ ಯಾರ ಭಯವು ಇಲ್ಲ ಅಂದ.

ಕುಶಿ ಅನ್ನಿಸಿತು,ಮಹಿಳೆಯರ ಮೆಲೆ ಗೌರವವಿರುವವರನ್ನ ಕಂಡರೆ ನನಗೆ ಗೌರವ ಜಾಸ್ತಿ. ಹೀಗೆ ಪರಿಚಯ ೪ನೆ ವರುಷಕ್ಕೆ ಬಂದಿತ್ತು.ಮನೆಯಲ್ಲಿ ಮದುವೆಯ ಮಾತುಕತೆ ನಡೆದಿತ್ತು.ಜಾತಿ,ಆಚಾರ,ಗ್ರಹ ಗತಿಗಳೆಲ್ಲ ಪ್ರತಿಕೂಲವಾಗಿದ್ದವು.ಮನೆಯಲ್ಲಿ ಧಾರವಡದ ಬಿಸಿಲಲ್ಲಿ ಕಂಡ ಅವನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಕೊನೆಗು ಒಪ್ಪಲೆ ಇಲ್ಲ, ಆ ಮಳೆಗಾಲದಲ್ಲೂ.

ಅಂದು ನಮ್ಮನೆಯ ಕೆರೆ ದಂಡೆಯ ಮಗ್ಗುಲಲ್ಲಿ ಕೊನೆಯ ನಿರ್ಧಾರ.ಅದೆ ಸಿನಿಮೀಯ ತಿರುವುಗಳಿಗಾಗುವ ಅಂತ್ಯ ನಮ್ಮ ಜೀವನದ್ದು. ಬೇಜಾರಿನದ್ದು.
I cannot live with you,

It would be life,

And life is over there

Behind the shelf

………….



So we must keep apart,

You there, I here,

With just the door ajar

That oceans are,

And prayer,

And that pale sustenance,

Despair! -

Emily Dickinson

ಆ ಸಾಲುಗಳನ್ನ ಹೇಳಿಯೇ ಆತ ದೂರಸರಿದಿದ್ದು.

ಹ್ಮ್ಮ್ ಅಂದೇ ಮಳೆಗಾಲ ಶುರುವಾಗಿತ್ತು,ಜಡಿಮಳೆ. ಕನಸಾಗಿರಲಿ ಎಂದು ಕೈ ಚಿವುಟಿ ನೋಡಿಕೊಂಡಿದ್ದೆ.ಉರಿಯಲಿಲ್ಲ,ಉರಿಯಲಿಕ್ಕೆ ನೋವು ಗೊತ್ತಾಗುವದಾದರೂ ಹೇಗೆ? ಆ ನೋವೇ ಈ ನೋವ ನುಂಗಿದರೆ?
ಮತ್ತೆ ಅದೇ ಮಳೆಗಾಲ, ಅದೇ ಕಿಡಕಿಯ ಪಕ್ಕ ಅಂತೆಯೇ ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ.
ಉಸಿರು ಎಲ್ಲೋ ಕಳೆದು ಹೋಗಿದೆ,ಕಾಣದ ಅವನಂತೆ ಕಣ್ತುಂಬ ನಿದ್ರೆ ಬರದೆ ವರುಷಗಳಾಗಿದೆ,ಅಂದಿನ ದಿಟ್ಟತನ ಅವನೊಟ್ಟಿಗೇ ಮರೆಯಾಗಿದೆ ಮತ್ತೆ ಬಾರದಂತೆ.ಮತ್ತೆ ಮಳೆ ಶುರುವಾಗಿದೆ ಒಂದೇ ಸಮನೆ ಕಾಡುವ ನೆನಪುಗಳಂತೆ.

ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?

ಶುಕ್ರವಾರ

ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ !

ನೀಲಿ ಬಣ್ಣದ ವಸ್ತ್ರದ ಅಲಂಕಾರ,ಅದರೊಳಗೆ  ಚಿನ್ನದ ಬಣ್ಣದ ಇನ್ನೊಂದು ಅಂಗಿ, ಸಾಥ್ ಕೊಡಲಿಕ್ಕೆಂದೇ ಬಿಳಿಯ ಬಣ್ಣ,  ಚಿಕ್ಕದು ,ದೊಡ್ಡದು,ಇನ್ನೂ ದೊಡ್ಡದು ,ಹೀಗೆ ತಹೇವಾರಿ ಗಾತ್ರಗಳಲ್ಲಿ.. ನೀಲಿ ಬಣ್ಣದ್ದು,ಬಂಗಾರದ ಬಣ್ಣದ್ದು
ಒಮ್ಮೆ ನೋಡಿದರೆ ಮತ್ತೆ ತಿರುಗದೆಯೆ ಹಾಗೆ ಹೋಗಲಿಕ್ಕಾಗುವದಿಲ್ಲ,ಅಂತಹ ಸೆಳೆತ ಆ ನೀಲಿ ಮಾಟಗಾತಿಯದು. ಸುಂದರಿ ಅನ್ನಲಿಕ್ಕಾಗದಿದ್ದರು ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ ,ಅದೇಕೋ ಏನೋ ,ನೋಡುವವರು ಕುರುಬಿಯಾರೆಂದೋ ಏನೋ ಈ ಮಾಟಗಾತಿ ಯ ಬಣ್ಣ ಕಪ್ಪು- ಅಮ್ಮ ಹೇಳೋ ಹಾಗೆ, ಅದೇ ಕಾಫೀ  ಕಲರ್ರು. 'ಕಬ್ಬು ಡೊಂಕಾದರೆ ಸಿಹಿ ಡೊಂಕೆ' ಅನ್ನುವ ಗಾದೆ ಇದೆಯಲ್ಲಾ,ಅದೇ ತರ ಓಡಳೊಳಗೆ ಮುಗಿಯಲಾರದಷ್ಟು ಸಿಹಿ ಹಾಂ..ಡಬ್ಬಿ ತುಂಬಿಸಿಡುವಷ್ಟು .
ಪುಟ್ಟಿ ನೀನು ಊಟ  ಬೇಗ ಮಾಡ್ಬಿಟ್ರೆ, ಹೋಮ್‌ವರ್ಕ್ ಎಲ್ಲ ಬೇಗ ಮುಗ್ಸಿ ಬಿಟ್ರೆ, ಹಟ ಮಾಡದೇ ಇದ್ರೆ ...ಎನ್ನುವ ಎಲ್ಲ  'ಟ್ರೇ,ದ್ರೆ' ಗಳಿಗೆ ಪರಿಹಾರ ಆ ಮಾಟಗಿತ್ತಿಯೇ ...ನಂಗೂ ಅಮ್ಮಂಗೂ ಎಂದಿಗೂ ಗೊತ್ತಿದ್ದುದು.
ಇನ್ನೊಂದು ಮತ್ತೊಂದು ,ಈ ಕೈಗೊಂದು ಇನ್ನೊಂದು ಕೈಗೆ ಇನ್ನೊಂದು ...ಮುಗಿಯದ ಕತೆ ಎಂದು ಅಮ್ಮ ಅರಿತಾಗ, ನಾಳೆಗೆ ಮತ್ತೊಂದು ಎಂದು ಸಮಾಧಾನ ಮಾಡಿದ್ದು ಅಮ್ಮನ ಜಾಣ್ಮೆ.
ಅದು -------->Cadbury Dairy Milk

ಭಾನುವಾರ

ಮತ್ತೇನೂ ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ


ನನ್ನ ಆಫೀಸಿನ ೧೧ ನೆ ಮಹಡಿಯಲ್ಲಿ ಇರುವದು ನನ್ನ ಡೆಸ್ಕ್,ಒಟ್ಟು 10ಲಿಫ್ಟ್ ಗಳಿದ್ದಾವೆ ಅಲ್ಲಿ .ಬೆಳಿಗ್ಗೆ ೮ ಕ್ಕೆಲ್ಲ ಲಿಫ್ಟ್  ಸುಮಾರಾಗಿ ಖಾಲಿ ಇರುತ್ತದೆ.ಆದ್ದರಿಂದ ನಾನೇರಿದ ಲಿಫ್ಟ್, ಬೇರೆ ಮಹಡಿಗಳಲ್ಲಿ ನಿಲ್ಲದೆ,ಸೀದಾ ೧೧ ನೆ ಮಹಡಿ ತಲುಪಿಬಿಡುತ್ತದೆ.ಆಗಲೇ ನನಗೆ ಒಂದು ತರದ ಸಮಾಧಾನ,ಎಲ್ಲಾಮಹಡಿಗಳಲ್ಲಿ ನಿಲ್ಲುತ್ತಾ ಮೇಲೇರ ತೊಡಗಿದರೆ,ಯಾಕೋ ವಿಪರೀತ ಅಸಮಾಧಾನ.೫ ನಿಮಿಷಕ್ಕೆ ಬರಬೇಕಾದ್ದು,೭ ನಿಮಿಷ ತೆಗೆದುಕೊಂಡರೆ ಅದರ ಬಗ್ಗೆ ಕೆಟ್ಟ ಅಸಮಾಧಾನ.ಲಿಫ್ಟೆ ಇಲ್ಲದಿದ್ದರೆ ಎಂಬುದನ್ನ ಯೋಚಿಸುವದಕ್ಕೂ ಹೋಗುವದಿಲ್ಲ,ಆತುರತೆ 'ಆಧುನಿಕತೆಯ ಉಡುಗರೆಯ?ಇರಬೇಕು .ಜೀವನ ಸರಳವಾದಷ್ಟು ,ಸುಲಭವಾದಷ್ಟು ಮತ್ತೂ ಸುಲಭವಾಗಬೇಕು,ಸರಳವಾಗಬೇಕೆಂಬುದು ದುರಾಸೆ ಅಲ್ಲವ?(ಹ್ಮಮ್, ಇಂದಿನ ಎಲ್ಲಾ ನವನವೀನ ಆವಿಷ್ಕಾರಗಳಿಗೆ ,ಬರುತ್ತಿರುವ ಹೊಸ ಉದ್ಯಮಗಳಿಗೆ ಇದೇ ಮೂಲ)ನಾನೊಬ್ಬಳು ಹುಟ್ಟಾ ಆತುರಗಿತ್ತಿ,ದಡ್ ದಡ್ ಎಂದು ಎಲ್ಲಾ ಆಗಿಬಿಡಬೇಕು,ಕಣ್ಮುಚ್ಚಿ ತೆರೆಯುವಷ್ಟರಲ್ಲಿ ,ಇಲ್ಲದ್ದು ಬಂದುಬಿಡಬೇಕು (ಅದನ್ನು ನಾನು 'Effcient Way' ಅನ್ನುವದು )

ಆದರೂ,ಇತ್ತೀಚಿಗೆ ನನ್ನ ಆತುರ ಪ್ರವ್ರತ್ತಿಗೆ ಕಡಿವಾಣ ಬಿದ್ದಿದೆ (ಮತ್ತೇನು ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ:ಕೊನೆಯಲ್ಲಿ ಅದರ ಬಗ್ಗೆ ಬರೋಣ.)ತುಂಬಿದ ಲಿಫ್ಟ್ ನ ಕನ್ನಡಿಯಲ್ಲಿ ತನ್ನ ಅಲಂಕಾರ ಸರಿಯಾಗಿದೆಯೋ ಇಲ್ಲವೋ ಎಂದು ಪದೇ ಪದೇ   ಕನ್ನಡಿಯತ್ತ ನೋಡುತ್ತಿರುವ ಆ ನೀರೆಯ ನಾಜೂಕು, ಬಿಗಿದುಕೊಂಡ ಕೊರಳ ಪಟ್ಟಿ (ಟೈ ) ಸರಿಪಡಿಸಿಕೊಳ್ಳುವ ಮಹಾನುಭಾವ ,ಕಾಪಿಚಿನೋ ಕೈಯಲ್ಲಿ ಹಿಡಿದು,ಕಣ್ಣು ಕಣ್ಣು ಬಿಡುತ್ತಿರುವ ಚೀನಿ ಯುವಕ,ಯುವತಿ,ಜಗತ್ತೇ ತಲೆಯ ಮೇಲಿದೆಯೇನೋ ಎಂಬ ಮುಖಮಾಡಿ ಕೈಯಲ್ಲಿನ ಬೆರ್ರಿ ಯಲ್ಲಿ ಇ-ಮೇಲ್ ಓದುತ್ತಿರುವ ಗಂಭೀರ ಮುಸುಡಿಯ ಮ್ಯಾನೇಜರ್ ,ತನ್ನದೇ ಫೋಟೋವನ್ನು ಫ್ರೇಮು ಹಾಕಿ ಕುತ್ತಿಗೆಗೆ ನೇತುಹಾಕಿಕೊಂಡಿರುವ ಆತಾ, ಆಕೆ .....ಅಯ್ಯೋ ಇಷ್ಟು ದಿನ ಎಷ್ಟೆಲ್ಲಾ ಮಿಸ್ ಮಾಡಿಕೊಂಡಿದ್ದೆನಲ್ಲ  ಅಂತ ಮೊನ್ನೆ ಅನಿಸಿತ್ತು.

ಮನೆಗೆ ಬಂದು ಬಾಗಿಲು ತೆರೆಯಲು ಐಡಿ ಕಾರ್ಡ್ ಹಿಡಿಯುವದು , ಮಾತಿನಲ್ಲಿ ನೂರುಬಾರಿ 'Issue' ಎಂಬ ಪದ ಬಳಸುವದು ಇವೆಲ್ಲ ವ್ರತ್ತಿ ಕೊಟ್ಟ ವರ.
                              * **** ******* **** **** **** ***
ನಾನು ಮೊದಲೇ ಪ್ರಾಮಿಸ್ ಮಾಡಿದಂತೆ, ಚಿತ್ರಾ ದಿವಾಕರುಣಿ ಯವರ 'One Amazing Thing ' ಕಾದಂಬರಿಯ ಕತೆ ಹೇಳಿಬಿಡುತ್ತೇನೆ;

೯ ಜನರ ತಂಡವೊಂದು, ಅಮೇರಿಕದ ನಗರವೊಂದರಲ್ಲಾದ ಭೂಕಂಪದಿಂದಾಗಿ,ವೀಸಾ ಆಫೀಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ:ಉಮಾ (ಅಮೇರಿಕಾದಲ್ಲಿ ಬೆಳೆದ ಭಾರತೀಯ ಕೂಸು) ,ತಾರಿಕ್ (ಬದಲಾದ ಅಮೇರಿಕಾದ ಬಗ್ಗೆ ಕೋಪವುಳ್ಳ ಮುಸ್ಲಿಂ ಯುವಕ), ಮತ್ತೊಬ್ಬ ಮಾಜಿ ಸೈನಿಕ ,ವೀಸಾ ಕಚೇರಿಯ ಅಧಿಕಾರಿ ,ಚೈನೀಸ್ - ಇಂಡಿಯನ್  ಮಹಿಳೆ ಮತ್ತೂ ಆಕೆಯ ಮಗಳು ಲಿಲಿ ,ವಯಸ್ಸಾದ ಬಿಳಿಯ ದಂಪತಿಗಳು, ಇವರೆಲ್ಲ ಕಾದಂಬರಿಯ ಪಾತ್ರಗಳು. ತಮ್ಮನ್ನು ರಕ್ಷಿಸಲು ಬರುವ  ಸಹಾಯ ತಂಡಕ್ಕಾಗಿ ಕಾದುಕುಳಿತಿರುವಾಗ, ಸಮಯ ಕಳೆಯಲು ತಮ್ಮ ಜೀವನದ ಅತಿ ಅದ್ಭುತ ಅನಿಸುವ,
ಅದುವರೆಗೂ ಯಾರಿಗೂ ಹೇಳಿರದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.


ಅಮೇರಿಕಾದ 'Houston Univercity' ಯಲ್ಲಿ ಪ್ರೊಫೆಸರ್ ಆಗಿರುವ ಈಕೆಯ ಹಲವು ಸಂದರ್ಶನಗಳನ್ನು ಓದಿದ್ದೇನೆ, ಆಕೆಯಿಂದ ಹಲವು ಮಾರ್ಗದರ್ಶನಗಳನ್ನೂ ಪಡೆದಿದ್ದೇನೆ. ಆಕೆಯ ಬರವಣಿಗೆಯ ಶೈಲಿಯಲ್ಲಿ,ವಸ್ತು ವರ್ಣನೆಯಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು.ಆಕೆಯ ಸರಳ ಬರಹ ನನಗೆ ತುಂಬಾ ಇಷ್ಟವಾದದ್ದು. ಮುಖ್ಯವಾಗಿ ಅನಿವಾಸಿಗಳ ಜೀವನದ ತುಮುಲಗಳು,ಮಹಿಳೆ, ಆಕೆಯ ಬರಹದ ವಿಷಯಗಳು. ಆಕೆಯ 'Palace Of Illusions'ಇನ್ನೊಂದು ಇಷ್ಟವಾದ ಕೃತಿ(ದ್ರೌಪದಿ ಮತ್ತು ಕರ್ಣನ ಕುರಿತಾದದ್ದು)

                                                    ****************
ಕೊನೆಯದೊಂದು ಪ್ರಶ್ನೆ :

- ನನ್ನ ಮೊದಲಿನ ಜೀವನಕ್ಕೆ ಹಿಂತಿರುಗಲು ಹಾದಿಗಳಿಲ್ಲ- ಕೂಡಿಸುವ ಸೇತುವೆಗಳು ಮುರಿದಿವೆ ;ಅಷ್ಟೇ ಅಲ್ಲ ,ನನಗೆ ನನ್ನಿದುರು ಯಾವ ಹಾದಿಗಳು ಕಾಣುತ್ತಿಲ್ಲ.

ಅವರು ಹೇಳಿದ್ದು :
ಯಾವುದು ಇಲ್ಲ, 'ಹಾದಿ'ಎನ್ನುವದು ನಿನ್ನ ಮನದ ಭ್ರಮೆ.ಮನಸ್ಸಿದೆಯಲ್ಲ, ಅದು ತನ್ನ ಗುರಿಸಾಧಿಸಲು, ಆಸೆ ಪೂರೈಸಿಕೊಳ್ಳಲು ಕನಸುಗಳನ್ನು ಕಾಣುತ್ತಲೇ ಸಾಗುತ್ತದೆ. ಮನಸ್ಸಿನ ಈ ವ್ಯವಹಾರಗಳ ಛಾಯೆಯೇ 'ಹಾದಿ '.ಮೊದಲು ಏನೋ ಬೇಕೆಂದುಕೊಳ್ಳುತ್ತೀಯ,ಸಹಜವಾಗಿ ಅದು ಬೇಕು,ಇದು ಬೇಕು,ಇತ್ಯಾದಿ 'ಬೇಕು'ಗಳ ವ್ಯವಹಾರ ಭವಿಷ್ಯತ್ತಿಗೆ ಸಂಬಂಧಿಸಿದ್ದು.ಭವಿಷ್ಯತ್ ವರ್ತಮಾನದಲ್ಲಿಲ್ಲ, ಹಾಗಂದ ಮೇಲೆ ನಮ್ಮ ಬಳಿ ಇರುವ ಇವತ್ತಿಗೂ, ಇನ್ನೂ ಬಾರದ ನಾಳೆಗೂ ಸೇತುವೆ ಕಟ್ಟಿದೆ ಅನ್ನಿಸಿದರೆ ಅದು ನಿನ್ನ ಕಲ್ಪನೆ,ಭ್ರಮೆ .

ನಿನಗೆ ಎಲ್ಲೂ ಹೋಗುವದಕ್ಕಿಲ್ಲ, ನೀನು ಎಲ್ಲಿ ಹೋಗಬೇ ಕೆಂದಿರುವೆಯೋ ಅಲ್ಲಿಯೇ ಇದ್ದೀಯ,ಅದು ನೀನು ಸಾಧಿಸಿದ್ದಲ್ಲ, ನಿನಗೆ ದಕ್ಕಿದ್ದು .

ಸ್ನೇಹಿತರೇ , ಇವತ್ತು ನನಗೆ ದಕ್ಕಿದ ಸಮಯ ಇಷ್ಟೇ.ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು

ಸೋಮವಾರ

ಮತ್ತೆ ಅದೇ ಸಂಭ್ರಮ ! ಇತ್ತ ಬರದೇ ,ಏನನ್ನೂ ಬರೆಯದೇ ದಿನಗಳೆe ಉರುಳಿ ಹೊಗಿವೆ.ಪುರುಸೊತ್ತಿನಲ್ಲಿ, ನಾಲ್ಕಾರು ಪುಸ್ತಕ ಓದಿದ್ದು ಬಿಟ್ಟರೆ,ಫೇಸ್ ಬುಕ್ ನಲ್ಲಿ ಚುಟುಕು ಸಂದೇಶಗಳನ್ನ ಹಾಕುತ್ತಿದ್ದುದನ್ನ ಬಿಟ್ಟರೆ ಮತ್ತೇನನ್ನು ಮಾಡಿಯೇ ಇಲ್ಲ. ಈ ನಡುವೆ ಹೇಳಬೇಕೆಂದುಕೊಂಡಿದ್ದ ಹಲವು ವಿಷಯಗಳು ಹಳೆಯದಾಗಿವೆ,ಹಾಂ ಹೊಸ ವಿಷಯಗಳು ಬಂದು ಸೇರಿವೆ .ಈ ಸಾರೇ ನಾನೋದಿದ ಪುಸ್ತಕಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಓದಿ ಖುಷಿಯಾಗಿದ್ದು,ಜೋಗಿಯವರ ಸೂಫೀ ಕತೆಗಳನ್ನ,ಚಿತ್ರಾ ದಿವಾಕರುಣಿಯವರ One Amazing Thing,ಮತ್ತು ಇನ್ನೂ ಹಲವು, ಎಷ್ಟು ಓದಿದರು   ಹಳೆಯದೆನಿಸದ ಪ್ರೀತಿಯ ಲಂಗೂಲಾಚಾರ್ಯರದ್ದು .

ನನ್ನ ಮೆಚ್ಚಿನ ಆಕೆ ಇತ್ತೀಚೆಗೆ ಖುಷಿ ಇಂದ ಇದ್ದಾಳೆ,ಮನೆಯಲ್ಲಿ ಮತ್ತೆ ಸಂಭ್ರಮ ಮರುಕಳಿಸಿದೆ .ಮತ್ತೆ ಬರೆಯುತ್ತೇನೆ,ಇವತ್ತು ಲಭ್ಯವಿದ್ದ ಸಮಯ ಇಷ್ಟೇ....

ಗುರುವಾರ

ನಾನೇರಿದ ಎತ್ತರಕ್ಕೆ ನೀನೂ ಏರಬಲ್ಲೆಯಾ ?

ಹಿಮಾಲಯ ಸೇರ್ಬೇಕು ಅನ್ನೋ ಮನಸ್ಸಾಗಿದೆ ಕಣೋ , ಬೇಗ ಹಿಂದಿರುಗಿ ಬರುವ ಯೋಚನೆಯೂ ಇಲ್ಲಾ...ಆ ಮಂಜಿನಲ್ಲಿ ಬೆಚ್ಚಗೆ ಹೊದ್ದು ಕುಳಿತುಕೊಳ್ಳುವ ಇರಾದೆಯೇನು ಇಲ್ಲ. 25-30ಕ್ಕೆ ವಾನಪ್ರಸ್ಥವಾ ಎನ್ನಬೇಡ... ಆ ಬಿಳಿಯ ಹಿಮದಲ್ಲಿ ಮುಳುಗಿ ,ಭಾನುವಿನುದಯ ಕಾಯುತ್ತಾ ಕುಳಿತಿರಲೆಷ್ಟು ಮುದ.


ಜೀವ ಕೈಬೀಸಿ ಕರೆಯುತ್ತದಲ್ಲ? ತಲೆ ತುಂಬಾ ಹಿಮಸೋಕಿ ,ಮೈತುಂಬಾ ಹಿಮಗಾಳಿ ಆವರಿಸಿ 'ಮನೆಯೇ ದೇಗುಲ' ಅನ್ನುವ ಫೀಲ್ ಕೊಡುತ್ತದಲ್ಲ ,ಅಲ್ಲಿದೆ ಜೀವವನ್ನ ನೋಡುವ ಬಗೆ ...ಜೀವನವನ್ನ ಪ್ರೀತಿಸುವ ಕಲೆ . ಸುಯ್ಯೋ ಭರ್ರೋ...ಎಂದು ಬೀಸುವ ಗಾಳಿಯೇನಿರದೆಂದು ಭಾವಿಸಿದ್ದೆ .. ಆದರೆ ನಮ್ಮ ಮನೆಯಿದುರಿನ ಮಲ್ಲಿಗೆಯ,ಸಂಪಿಗೆಯ ಕಂಪು ಹೊತ್ತು ತರುವ ತಂಗಾಳಿಯಂತು ಅಲ್ಲ ಅದು ಬಿಡು. ಕೊರೆಯುವ ಚಳಿಯಲ್ಲಿ ಹೇಗಿರುವದೆನ್ನುವ ಚಿಂತೆ ಬಿಡು ...ಬೆಚ್ಚನೆ ಕೋಟುಗಳಿದ್ದಾವಲ್ಲ .. ತೊಟ್ಟ ನಿಲುವಂಗಿಗಿಂತ ಹೆಚ್ಚು ಬೆಚ್ಚಗಿಡುವ ಭಾವಗಳಿದ್ದಾವಲ್ಲ! ಉದ್ದನೆಯ ಬೆಚ್ಚನೆಯ ವಸ್ತ್ರ ತೊಟ್ಟು ಮೈ ಪೂರ್ತಿ ಅಂಗಿಯ ಒಳ ಹೊಕ್ಕಿಸಿ , ನಮಗೇ ಅರಿವಿಲ್ಲದಂತೆ ದಿವ್ಯಲೋಕದಲ್ಲ್ಲಿ ಮುಳುಗುವ ಬಗೆ ಅದು, ಮುಳುಗಬಾರದೆಂದು ಓಶೋ ಎಲ್ಲೋ ಒಂದು ಕಡೆ ಹೇಳುತ್ತಾರೆ ,ತೇಲಬೇಕಂತೆ .. (ನಶೆಯಿಂದಲೋ ,ಉಷೆಯಿಂದಲೋ ಅವರಿಗೇ ಗೊತ್ತು!)

(ಕೈಲಾಸಕ್ಕೆ ಹತ್ತಿರವಂತೆ , ಪಾರ್ವತೀ ಪರಮೇಶ್ವರರನ್ನ ಒಮ್ಮೆ ಭೇಟಿ ಮಾಡಬೇಕು , ಜಗತ್ತಿನ ತಂದೆ ತಾಯಿಯರಲ್ಲವ ,ಕೇಳಿದ್ದೆಲ್ಲ ಕೊಡುವ ಆ ಪರಶಿವಗೆ, ಶಿವೆಗೆ ನಮಿಸಬೇಕು ,ಯಾಕೆ ಗೊತ್ತಾ ಇಂತಹ ಚಳಿಯಲ್ಲೂ ಬೆಚ್ಚನೆಯ ಉಡುಗೆಯಿಲ್ಲದೇ ಇಷ್ಟು ದಿನ ‘ಅದು ಹ್ಯಾಗೆ ಇದ್ಯಪ್ಪ ಶಿವ’ ಎನ್ನುವ ತರದ ಒಂದು ಚಿಕ್ಕ ಸಂದರ್ಶನ ಮಾಡಿ ಕಾಪೀ ರೈಟ್ ನಿಂಗೆ ಕೊಡ್ತೀನಪ್ಪ...)

ಬದುಕುವದಕ್ಕೊಂದು ಕೆಲಸ, ಕೆಲಸವಾದ ನಂತರ ಸಂಸಾರ ,ತಲೆಯ ಮೇಲೊಂದು ಸೂರು ,ಹಾಹಾ ... ಎಷ್ಟೋ ನನ್ನ ಸ್ನೇಹಿತರಿಗೆಲ್ಲ ಬರುವದು ಇಂತಹ ಸೆಟ್ಲ್ ಆಗುವಂತಹುದೇ ಉಪಾಯಗಳು ... ಓಹೋ ನೀನು ಭಿನ್ನಾನ ಅಂತ ಕೇಳ್ತೀಯಲ್ಲಾ, ಹಮ್...ಅಲ್ಲ. ಮನೆಯಾಯ್ತು ,ಮದುವೆ ಆಯ್ತು ಮಕ್ಕಳಾಯ್ತು ,ಇನ್ನೇನಪ್ಪ ನಿನ್ನ ಜೀವನ ಅಂತ ಮೊನ್ನೆ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನಿಗೆ ಹೇಳುತ್ತಿದ್ದ,... ಅಲ್ಲೇ ಇದೆ ಉತ್ತರ ನೀನು ಹುಡುಕಿಕೊಳ್ಳಬೇಕಷ್ಟೇ . 'ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣಿನ ಗುಡಿಯೊಳಗೆ…' ಈ ಸ್ಥಿತಿಯಲ್ಲಿ ನಾವಿದ್ದೇವಲ್ಲ,ತೀರಾ ಸೆಂಟೀ ಎನ್ನಬೇಡ..

ಕಾಡು ಕರೆಯುವ ವಯಸ್ಸೇನೂ ಅಲ್ಲ,ಯಾಕೋ ಮನೆಯಿಂದ ಒಂದಿಷ್ಟು ದಿನದೂರವಿರ ಬೇಕೆನಿಸಿದೆ....ಗಿಜಗುಡುವ ಗಲಾಟೆಯಿಂದ ದೂರ ಸಾಗಬೇಕೆನಿಸಿದೆ. ತಣ್ಣನೆಯ ಗಾಳಿಯನ್ನ ಉಸಿರ ತುಂಬಾ ತುಂಬಿಸಿಕೊಳ್ಳಬೇಕೆನಿಸಿದೆ. ಜೀವಕ್ಕಾದ ತಲ್ಲಣ ತಣಿಸಬೇಕಿದೆ. ಹಾಂ, 'ನಾನೇರಿದ ಎತ್ತರಕ್ಕೆ ನೀನು ಏರಬಲ್ಲೆಯಾ?' ಎನ್ನುವ ಸವಾಲೊಡ್ಡಿ ಗಟ್ಟಿ ನಿಂತಿದೆಯಲ್ಲ ಹಿಮಾಲಯ,ಅದು ನಂಗೊಂದು ಸ್ಪೂರ್ತಿ .... ಆವತ್ತು ನೀನೂ ಹಾಗೆ ಹೇಳಿದ್ದೇಯಲ್ಲ, ಹ್ಮ್ ..ನಿನ್ನ ಮಟ್ಟಕ್ಕೆ ಏರುವಷ್ಟು ಸುಲಭವಲ್ಲವೆಂದು ಎಂದೋ ಗೊತ್ತಿತ್ತು ನನಗೆ .... ಪ್ರಯತ್ನಿಸುವದರಲ್ಲಿ ತಪ್ಪೇನೂ ಇಲ್ಲ ಅಲ್ಲವ? ನಾನು ನಿನಗಿಂತ ಚಿಕ್ಕವಳು ಎನ್ನುವ ಸಮಝಾಯಿಸಿ ಇದೆಯಲ್ಲ. ಒಬ್ಬಳೇ ಹೇಗೆ ನಿಭಾಯಿಸುತ್ತೇನೋ ಎನ್ನುವ ಭಯವ..?ಆ ಹಿಮಾಲಯದಲ್ಲಿ ನನ್ನಂತ ಹಲವು ಚಾರಣಿಗರಿದ್ದಾರಲ್ಲ.ಹಾಗೂ ಒಂದು ದಿನ ಆಗುವದೇ ಇಲ್ಲ ಎಂದು ಅನ್ನಿಸಿದ ದಿನ ತಿರುಗಿ ಬಂದು ಬಿಡುತ್ತೇನೆ... ಅಲ್ಲಿಯವರೆಗೆ ಮನೆಯ ಕಡೆ ಜೋಪಾನ..!

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...