ಸೋಮವಾರ

ದೀಪದಂತೆ ಬೆಳಗುತ್ತಿರಲಿ ಎಂಬ ಭಾವದೊಂದಿಗೆ

ಹೀಗೇ ಎತ್ತು ಏರಿಗೆ ಎಮ್ಮೆ ನೀರಿಗೆ ಎಳೆದರೆ,ಬದುಕು ಕಟ್ಟೋದು ಸಾಧ್ಯವಾ?ಅಂತದೊಂದು ಪ್ರಶ್ನೆ ಬಹುದಿನದಿಂದ ಕಾಡತೊಡಗಿತ್ತು. ಅದಕಿಂತ ಮುಂಚೆ, ಇಂತದೊಂದು ಬದುಕು ಕಟ್ಟಲೇ ಬೇಕಾ? ಎಂಬ ಹೋಯ್ದಾಟ ಮನಸಲ್ಲಿ. ಯಾಕೆಂದರೆ ಅದರ ಅಗತ್ಯ ಯಾಕೋ ದಿನೇ ದಿನೇ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿತ್ತು.ಅಂವ ಇರೋದೆ ಹಿಂಗೆ,ನೀನೆ ಸ್ವಲ್ಪಾ ಹೊಂದಾಣಿಕೆ ಮಾಡಿಕೊ ಎಂಬ ಬೇಕಾಬಿಟ್ಟಿ ಹಿತವಚನಗಳ ಧಾಳಿ ತಳಮಳಿಸುವಂತೆ ಮಾಡಿತ್ತು. ನಾ ಮಾಡಿದ್ದು ಸರಿ ಎಂಬ ನಂಬಿಕೆ ಎಷ್ಟೇ ಇದ್ದರೂ, ಇಂತಹ ಸ್ವಹಿತ ಚಿಂತಕರ ಮಾತುಗಳು ಅಷ್ಟಷ್ಟೇ ಅಧೀರಳಾಗಿಸಲಿಕ್ಕೆ ಸಾಕಲ್ಲ.
- ಎಂದ ಅವಳ ಮಾತಿಗೆ ತಲೆ ಆಡಿಸಿದ್ದೆ. ಕೈಯಲ್ಲಿದ್ದ ಹಣತೆಗೆ ಎಣ್ಣೆ ಸುರಿಯುತ್ತಿದ್ದಳು ಆಕೆ. ದೀಪಾವಳಿಗೆ ಊರಿಗೆ ಬಂದಿದ್ದ ನಾನು, ಅವಳನ್ನ ನೋಡುವ ಸಲುವಾಗೇ ಬಂದಿದ್ದೆ.

"ಹೀಗೆ ಅದೆಷ್ಟು ದಿನಾಂತ ಬದುಕುವದು? ಹೀಗೆಯೆ ಮೂಲೆಯಲ್ಲಿ ಅಳುತ್ತಾ ಕುಳಿತರೆ ಮನಸ್ಸು ಗಬ್ಬೆದ್ದು ನಾರಲಿಕ್ಕೆ ಶುರುವಾಗಿಬಿಡುತ್ತದೆ,ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ನಂಬಿಕೆ ಕಡಿಮೆ ಅಗಲಿಕ್ಕೂ ಸಾಕು,ಈಗಲೇ ಭವಿಷ್ಯ ಪ್ರಶ್ನಾರ್ಥಕವಾಗಿದೆ, ಹೀಗೆಯೇ ಕುಳಿತರೆ ಭವಿಷ್ಯ ಕಾಣುವದಾದರೂ ಹೇಗೆ? ಹ್ಮ್ ಹೇಗಾದರೂ ಇದರಿಂದ ಹೊರ ಬರಬೇಕು. ಜೀವನದಲ್ಲಿ ಕೋಲ್ಮಿಂಚು ಕಾಣಲಿಕ್ಕೆ, ಅಬ್ಬರದ ಮಳೆ ಗುಡುಗುಗಳೇ ಬೇಕು ಅಲ್ಲವ" ಅಂದೆ ಹಣತೆಯನ್ನ ನೋಡುತ್ತಾ.

ಹೌದು ಅನ್ನು, ಎಲ್ಲವನ್ನ ಬುಡಮೇಲು ಮಾಡುವ ಸಾಮರ್ಥ್ಯ ಇರುವದು ನಮ್ಮ ಮನಸ್ಸಿಗೆ ಅಲ್ವ? ಯಾವುದೋ ಸಮಯಕ್ಕೆ 'ಇದೇ ಅದು' ಎಂದು ಅನಿಸಿಬಿಡುತ್ತದೆ, ಭಾವವೊಂದು ಬದಲಾಗಿ ಬಿಡುತ್ತದೆ. ಅಂತಹ ಘಟನೆಗಳೆಲ್ಲ ನಡೆಯುವದು 'ಕ್ಷಣಗಳಲ್ಲಿ'. ನಿರ್ಧಾರವೊಂದು ಮನದಲ್ಲಿ ನಿಶ್ಚಲವಾಗಿಬಿಡುತ್ತದೆ. ವರ್ಷಗಳಲ್ಲಿ ಅಳೆದು ಸುರಿದು ಮಾಡಿದ ಕೆಲಸ,ಯೋಚನೆ ಹೊಸ ದಿಗಂತದತ್ತ ವಾಲಿಬಿಡುತ್ತದೆ. ಅದಕೊಂದು ಭಾವಬಂದು, ಜೀವತುಂಬಿ, ನಾನಿದ್ದೇನೆ, ಹೀಗೆಯೇ ಮಾಡು ಅಂತ ನಮ್ಮ ಮನಸ್ಸೇ ನಮ್ಮನ್ನ ನಿರ್ದೆಶಿಸತೊಡಗುತ್ತದೆ’ ಅಂದಳು ಅವಳು ದೀಪ ಹಚ್ಚುತ್ತಾ.

ಆಕೆಯ ಮನದಲ್ಲಿ ನಿರ್ಧಾರವೊಂದು, ಗುರಿಯೊಂದು ಸ್ಪಷ್ಟವಾದ ಎಲ್ಲ ಕಳೆಗಳು ಇದ್ದವು.

ಆ ಗಳಿಗೆಯಲ್ಲಿ ರಾಮಾಯಣದ ರಾಮ ನೆನಪಾಗುತ್ತಾನೆ.ಆಕೆಯ ಗಂಡನ ಮೇಲಿನ ಸಿಟ್ಟು ರಾಮನ ಬಗ್ಗೆ ತಿರುಗುವ ಎಲ್ಲ ಚಿಹ್ನೆಗಳೂ ಆಕೆಯ ಮುಖದಲ್ಲಿ ಫ್ಲೋರೆಸೆಂಟ್ ದೀಪದಷ್ಟೆ ನಿಚ್ಚಳ.ಸೀತೆ ಪಾಪ ಅನ್ನಿಸತೊಡಗುತ್ತಾಳೆ.ಸೀತೆಯನ್ನ ಕಾಡಿಗಟ್ಟುವಾಗಿನ ರಾಮನ ಮನಸು ಇಂದಿಗೂ ಆಕೆಯರಿವಿಗೆ ಮೀರಿದ್ದು ಅನ್ನಿಸಿ,ಥುತ್,ಈ ಗಂಡಸು ಜಾತಿಯೇ ಇಷ್ಟು ಅಂದುಕೊಳ್ಳುತ್ತಾಳೆ.ಅಕೆಯ ಅಜ್ಜಿ ಹೇಳಿದ್ದ ಪುರಾಣ ಕತೆಗಳಲ್ಲಿ ಬರುವ ಎಲ್ಲ ಮಹಿಳೆಯರ ಪಾಡು ನೆನೆದು ಅಯ್ಯೋ ಅನಿಸುತ್ತದೆ.ಎಲ್ಲ ನೋವು 'ಇವಳಿ'ಗೇ ಏತಕ್ಕೆ ಎಂಬ ಪ್ರಶ್ನೆಯೂ ಹಾಗೇ ಬಂದು ಹೀಗೆಯೇ ಮಾಯವಾಗುತ್ತದೆ ಅವಳಲ್ಲಿ. 'ತಾನು ಸೀತೆಯಲ್ಲ, ದ್ರೌಪದಿಯೂ ಅಲ್ಲ! ಅಹಲ್ಯೆ, ಊರ್ಮಿಳೆಯರಂತೂ ಅಲ್ಲವೇ ಅಲ್ಲ' ಎಂಬ ಸತ್ಯ ಯಾಕೋ ಅರಿಯದ ನೆಮ್ಮದಿ ಕೊಡುತ್ತಿದೆ ಅನಿಸುತ್ತದೆ. ತಾನು ಅವರ ಹಾಗೆ ಅಗುವದೂ ಇಲ್ಲ ಎಂದು ಖಚಿತವಾಗಿ ಹೇಳೇಬಿಟ್ಟಳು. ಕಾಲಘಟ್ಟವನ್ನ ಮೀರಿದ್ದು ಇದು ಅನ್ನಿಸಿ ಸುಮ್ಮನಾಗುತ್ತೇನೆ.

ನನಗೇನು ಕಮ್ಮಿ ಇದೆ? ಓದಿಲ್ಲವಾ? ಭಾಷೆ ಬರೋದಿಲ್ಲವಾ? ಏನಂತ ತಿಳ್ಕೊಂಡಿದಾನೆ ಅವ ನನ್ನ, ‘ಬದುಕಿ ತೋರಿಸ್ತೇನೆ ಅಂತ ಹೇಳು ಅವಂಗೆ’ ಅಂತ ಸ್ವಲ್ಪ ಆವೇಶದಲ್ಲೇ ಹೇಳಿದ್ದು ನನ್ನರಿವಿಗೆ ಬಂದಿತ್ತು

ತನ್ನ ಬದುಕ ಬೆರೆಯವರ ಸಹಾಯ ಪಡೆದು ಕಟ್ಟುವ ಅಗತ್ಯ ತನಗಿಲ್ಲ ಎಂದಾಗ ನನಗೆ ಆಕೆಯ ಮುಖದಲ್ಲಿ ಕಂಡಿದ್ದು ಬದುಕಿನ ಇನ್ನೊಂದು ಮುಖದ ದರ್ಶನ.ನನ್ನ ಮಟ್ಟಿಗೆ ಅದೊಂದು ಸತ್ಯ ದರ್ಶನ.ತನ್ನ ಬದುಕ ಸ್ವತಂತ್ರವಾಗಿ ಕಟ್ಟುವ ನಿರ್ಧಾರವನ್ನ ನನ್ನ ಮನವೂ ಅನುಮೋದಿಸುತ್ತಿದೆ. ದೀಪಾವಳಿಯ ಹಣತೆಯ ಬೆಳಕಲ್ಲಿ ಆಕೆಯ ನಿರ್ಧಾರ ಪ್ರತಿಫಲಿಸತೊಡಗುವದನ್ನ ನೋಡಿ ಆನಂದಿಸುವ ಭಾಗ್ಯ ನನ್ನದು. ಏನೇ ಇರಲಿ ಆಕೆ ನಗುತ್ತ ಇರಲಿ ಖುಷಿಯಾಗಿರಲಿ,
ಹಣತೆಯ ದೀಪದಂತೆ ಬೆಳಗುತ್ತಿರಲಿ, ಮೇಣದ ಬತ್ತಿಯಂತೆ ಕರಗದಿರಲಿ ಎಂಬ ಭಾವ ಮನತುಂಬಿದೆ.

ಭಾನುವಾರ

ಹಲಗೆ ಬಳಪ ಕೈಯಲ್ಲಿ ಹಿಡಿದು...

ಬಹಳ ಹಿಂದಿನ ಕತೆ. ನನಗೆ ಅದರೊಳಗೆ ಏನಿರಬಹುದೆಂಬ ಕೆಟ್ಟ ಕುತೂಹಲ.ಅದರ ಆಕಾರ, ಬಣ್ಣ ನೋಡಿದರೆ ಅದು ಬಹಳ ಹಳೆಯ ಪೆಟ್ಟಿಗೆಯೆಂದು ಸುಲಭವಾಗಿ ಹೇಳಬಹುದಿತ್ತು. ಆಗ ನನಗೆ ಸುಮಾರು ಆರೇಳು ವಯಸ್ಸಿರಬಹುದೇನೋ. ಥೇಟ್ ಮಂಗನಂತೆಯೇ ಇದ್ದನಂತೆ. ಕುಂತಲ್ಲಿ ಕೂಡದ, ಕೈಗೆ ಸಿಕ್ಕಿದ್ದನ್ನು ಸುಮ್ಮನೆ ಬಿಡದ ನಾನು, ಜಗುಲಿಯಿಂದ ಅಂಗಳಕ್ಕೆ ಹಾರುತ್ತಾ, ಅಂಗಳದಿಂದ ಜಗುಲಿಗೆ ನೆಗೆಯುತ್ತಾ, ಕುಂತಲ್ಲೇ ಬಿದ್ದು, ನಿಂತಲ್ಲೇ ಅತ್ತು,ಹಾಗೇ ಒಮ್ಮೆ ನಕ್ಕು, ಅಪ್ಪ ಅಮ್ಮರನ್ನ ಹೈರಾಣ ಮಾಡುತ್ತಿದ್ದನಂತೆ.

ಅಮಿತ, ರಂಜನರೊಟ್ಟಿಗೆ ಜಗಳವಾದಾಗಲೆಲ್ಲ ನನಗೆ, ನನ್ನ ದುಃಖಕ್ಕೆ ಜೊತೆಯಾಗುತ್ತಿದ್ದುದು ಅದೇ ಪೆಟ್ಟಿಗೆ. 'ನನ್ನ ಅಪ್ಪನ ಹತ್ರ ದೊಡ್ಡ ಪೆಟ್ಟಿಗೆ ಇದ್ದು ಒಹೋ'ಎಂದು ಕೋಣೆಗೆ ಹೋಗಿ ಪೆಟ್ಟಿಗೆ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಖಾತರಿ ಪಡಿಸಿ ಕೊಳ್ಳುತ್ತಿದ್ದೆ. ಬಹುಷಃ ನನಗೆ ಗೊತ್ತಿದ್ದ ಪುಟ್ಟ ಲೋಕಕ್ಕೆ ಆ ಪೆಟ್ಟಿಗೆ ಬಹಳ ದೊಡ್ಡದಾಗಿ ಕಂಡಿರಬೇಕು.

ಅಪ್ಪ ಎಂದೂ ಪೆಟ್ಟಿಗೆಯನ್ನ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಎಲ್ಲೋ ಒಮ್ಮೆ ಅತ್ತಾಗ, ಸುಮ್ಮನೆ ಹಟ ಮಾಡಿದಾಗ, ಆಗೊಂದು ಈಗೊಂದು ಎಂದು ಬಣ್ಣದ ಪೆನ್ಸಿಲ್ ಗಳು ಹೊರಗೆ ಬರುತ್ತಿದ್ದುದ ನೋಡಿ, ಅಪ್ಪ ಹೇಳುತ್ತಿದ್ದ ಕತೆಯಲ್ಲಿ ಬರುವ 'ಮಾಯ ಪೆಟ್ಟಿಗೆ'ಯೇ ಇರಬಹುದು ಎಂದೆಲ್ಲ ಅನಿಸಿತ್ತು. ಆದರೂ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನ ನೋಡಿಯೇ ಬಿಡಬೇಕೆಂಬ ಆಸೆ ಬಹಳ ಇತ್ತು.

ದೊಡ್ಡವಳಾಗುತ್ತ ಬಂದ ಹಾಗೆ, ಆ ಪೆಟ್ಟಿಗೆ ವಿಸ್ಮಯವಾಗಿ ಕಾಡಿದ್ದು ನಿಜ. ಒಂದು ದಿನ ಅಪ್ಪ ಮನೆಯಲ್ಲಿಲ್ಲದಾಗ ಪೆಟ್ಟಿಗೆ ತೆರೆಯುವ ವ್ಯರ್ಥ ಪ್ರಯತ್ನ ಮಾಡಿದಾಗಲೇ ಸಿಕ್ಕಿದ್ದು 'ಮಲ್ಲಿಗೆ'. ನಾ ನೋಡಿದ ಮೊದಲ ಪತ್ರಿಕೆ 'ಮಲ್ಲಿಗೆ', ಅದರ ನಂತರ, ನಮ್ಮ ಮನೆಗೆ ಬರುತ್ತಿದ್ದುದು 'ಸುಧಾ' ವಾರಪತ್ರಿಕೆ. ಜಗತ್ತೇ ನನ್ನ ಕೈಲಿದ್ದಂತೆ ಸಂಭ್ರಮಿಸುತ್ತಿದ್ದೆ. ನಾನು ಮೂರನೇ ತರಗತಿಯಲ್ಲಿದ್ದಾಗ ಬರುತ್ತಿದ್ದಾಗಿನ ಪತ್ರಿಕೆಯನ್ನ ಇನ್ನೂ ಓದುತ್ತಿದ್ದೇನೆ. ಅದರೆ ಈಗೀಗ ಯಾಕೋ ಕುಶಿ ಕೊಡುತ್ತಿಲ್ಲಾ, ಬಹುಷಃ ನಾನು ನೋಡುತ್ತಿರುವ ಜಗತ್ತಿಗೆ ಅದು ಸಾಕಾಗುತ್ತಿಲ್ಲ ಅನಿಸುತ್ತದೆ. ಆದರೂ 'ಸುಧಾ' ಪತ್ರಿಕೆ ನನ್ನ ಮನಸ್ಸಿಗೆ ತೀರ ಹತ್ತಿರದ್ದು. ಪತ್ರಿಕೆಯ ಹಿರಿಯರಾದ ಅಂತರಾಮು ಅವರ ನೆನಪಿದೆ.

ಬಹುಷಃ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದಿದೆ. ಭಾಸ್ಕರ್ ಮಾಮನ ಪುಸ್ತಕದ ಅಂಗಡಿಯಿಂದ ನನಗೆ ಓದಲಿಕ್ಕಾಗಿಯೇ ಎಲ್ಲ ದಿನಪತ್ರಿಕೆಗಳೂ, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಿಗುತ್ತಿತ್ತು. ಓದಿ ಮತ್ತೆ ಅಂಗಡಿಗೆ ಕಳುಹಿಸುತ್ತಿದ್ದೆ, ಆ ಪುಸ್ತಕ ಅಂಗಡಿಯಿಂದಾಗಿ ಕನ್ನಡದ ಎಲ್ಲ ಪತ್ರಿಕೆಗಳನ್ನು ಪ್ರತಿ ದಿನವೂ ಓದುವ ಭಾಗ್ಯ ನನ್ನದಾಗಿತ್ತು. ಹಾಗೆ ಓದುತ್ತಿದ್ದಾಗ ನನ್ನ ಮನಸ್ಸಿಗೆ ಯಾವುದೇ 'Prejudice' (ಪೂರ್ವಗ್ರಹ) ಇರಲಿಲ್ಲ. ಲೇಖಕ ಯಾರೆಂಬುದು ನನಗೆ ಮುಖ್ಯವಾಗಿರಲೇ ಇಲ್ಲ, ಯಾಕೆ ಓದಬೇಕೆನ್ನುವ ಪ್ರಶ್ನೆ ಯಾವತ್ತೂ ಕಾಡಿರಲೇ ಇಲ್ಲಾ. ಸತತ ಹದಿಮೂರು ವರುಷ ಹಾಗೆಯೇ ಓದಿದೆ.

ಇನ್ನು, ಶಾಲೆಯಲ್ಲಿ ಪುಸ್ತಕ ಓದುವ ಹುಚ್ಚಿರುವ ಕೆಲವು ಸ್ನೇಹಿತರಿದ್ದರು, ಕೆಲವೊಮ್ಮೆ ಅವರಿಗಿಂತ ಮುಂಚೆ ಓದಿರಬೇಕೆನ್ನುವ ಮನೋಭಾವವು ಮತ್ತೂ ಓದಲ್ಲಿಕ್ಕೆ ಹಚ್ಚಿದ್ದು ದಿಟ. ಹೈ ಸ್ಕೂಲ್ & ಕಾಲೇಜುಗಳ ಗ್ರಂಥಾಲಯದಲ್ಲಿನ ಯಾರೂ ಓದದೆ ಇದ್ದ, ಒಮ್ಮೆಯೂ ಯಾರ ಹೆಸರನ್ನೂ ತನ್ನ ಬೆನ್ನಮೇಲೆ ಬರೆಯಿಸಿ ಕೊಳ್ಳದ ಪುಸ್ತಕಗಳಿಗೆಲ್ಲ ನನ್ನ ಮತ್ತು ನನ್ನ ಕೆಲವು ಸ್ನೇಹಿತೆಯರ ಹೆಸರಿದೆ.

ಅಪ್ಪ ಎಂದೂ ನನಗೆ ಪುಸ್ತಕ ಓದೆಂದು ಹೇಳಿರಲಿಲ್ಲ.ಮತ್ತೂ ಇಂದಿಗೂ ನಾ ಆ ದೊಡ್ಡ ಪೆಟ್ಟಿಗೆಯ ಬಾಗಿಲು ಪೂರ್ತಿ ತೆರೆದು ನೋಡಿಲ್ಲ. ಅಪ್ಪ ನನ್ನನ್ನು ಓದಲು ಹಚ್ಚಿದ ರೀತಿಯೇ ಅಂತದ್ದು. ಮನೆಗೆ ಬರುವಾಗ ಚೀಲದಲ್ಲಿ ತರುತ್ತಿದ್ದ ಪುಸ್ತಕಗಳು ಅವಾಗಿಯೇ ತಮ್ಮತ್ತ ಸೆಳೆದುಕೊಂಡಿದ್ದವು. ನನ್ನ ಪುಟ್ಟ ಟೇಬಲ್ಲಿನ ಮೇಲೆ ಬಣ್ಣದ ಪುಸ್ತಕಗಳು , ಮತ್ತು ಮನೆಗೆ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ಓದುತ್ತ ಕುಳಿತ್ತಿರುತ್ತಿದ್ದ ಭಂಗಿ ಬಹುಷಃ ನನ್ನ ಸೆಳೆದಿರಬೇಕು. ದಿನಕಳೆದಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದೇ ಬೈಠಕ್ ನಲ್ಲಿ ಓದುವದು ಅಪ್ಪನಂತಾಗಬೇಕೆನ್ನುವ ನನ್ನ ಜೀವನದ ಭಾಗವಾಯಿತೆನ್ನಿ. ಅಲ್ಲದೇ ಸ್ನೇಹಿತರ ಮುಂದೆ ಜಂಭ ಕೊಚ್ಚಿಕೊಳ್ಳುವದಕ್ಕು ಸಹಾಯವಾಯಿತು. ಜನಮಾಧ್ಯಮ ಪತ್ರಿಕೆಯ ಬೆನ್ನೆಲುಬಾಗಿದ್ದ ಜಯರಾಮ್ ಹೆಗಡೆಯವರು ಕನ್ನಡದಲ್ಲಿದ್ದ ಕುರಾನ್ ಪುಸ್ತಕವನ್ನು ಕಳುಹಿಸಿದ್ದರು. ಅಪ್ಪನೊಟ್ಟಿಗೆ ಅದನ್ನೂ ಓದಿದೆ.

ನಮ್ಮ ಕಾಲೇಜಿನಲ್ಲಿ, 'ಓದು ಕಮ್ಮಟ' ಎಂಬ ತರಬೇತಿಯನ್ನ ಏರ್ಪಡಿಸಿದ್ದರು. ಘಟಾನುಘಟಿಗಳೆಲ್ಲ ಸೇರಿದ್ದರು. ಕಾರ್ಯಕ್ರಮ ಉದ್ಘಾಟಿಸಿದವರ ಮಾತೊಂದನ್ನು ಬಿಟ್ಟು ಮತ್ತೆಲ್ಲವು ಬೆಳಗಿಂದ ಸಂಜೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು, ನಮಗಿರುವ ಓದುವ ಹುಚ್ಚನ್ನು ಬಿಡಿಸಿಯೇ ಬಿಡುತ್ತಾರೆಂದು ನಾನು ಮತ್ತು ಸ್ನೇಹಿತೆ ಪಲ್ಲವಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದೆವು.

ಓದುವದೆಲ್ಲ, ಹೀಗೆಯೇ ಓದಬೇಕೆಂದರದು ಹೇಗೆ ಸಾಧ್ಯಾ? ಅವೆಲ್ಲ ಸ್ವಂತಕ್ಕೆ ಬಿಟ್ಟಿದ್ದು, ಓದುವದು, ಬರೆಯುವದು ಎಲ್ಲ ಬಹಳ ವಯಕ್ತಿಕವಾದದ್ದು ಕೂಡ. ಹೀಗೆಯೇ ಓದು, ಹೀಗೆಯೇ ಬರೆ, ಎಂದರೆ ಅದು ವೈವಿಧ್ಯತೆ ಕಳೆದುಕೊಳ್ಳುತ್ತದೆ ಎಂಬುದಾಗಿತ್ತು ನಮ್ಮ ಅಭಿಪ್ರಾಯ. ನಾವೇನು ಇವರನ್ನು ಹೇಗೆ ಓದಬೇಕೆಂಬುದನ್ನು ಕೇಳಿದ್ದೆವ ಎಂಬ ಉದ್ಧಟತನವೂ ನಮ್ಮಲ್ಲಿತ್ತು.

ಅದರೆ ಅಂದು ಪರಿಚಯವಾದ ಮಾನ್ಯರು ಇಂದಿಗೂ ಓದಲಿಕ್ಕೆ ಸ್ಪೂರ್ತಿಯಾಗಿದ್ದಾರೆ. ಇವರೇನು ಗುರುತದವರಾ? ನಮ್ಮ ನೋಡಿದ ಕೂಡಲೇ ನಗೆಯಾಡಿದರಲ್ಲ ಎಂದು ನಾನು,ಪಲ್ಲವಿ ಅಂದುಕೊಂಡ ಹಿರಿಯ ಸಾಹಿತಿಗಳು, ಇಂದಿಗೂ ಗುರುತಿಟ್ಟು ಸಿಕ್ಕಿದಾಗಲೆಲ್ಲ ಪಕ್ಕದಮನೆಯವರಂತೆ ಮಾತಾಡುತ್ತಾರೆ. ತುದಿಯಲ್ಲಿ ಮತ್ತೆಲ್ಲ ಆರಾಮ್ ಅಲ್ದಾ, ಮಗಳ ಕರ್ಕಂಡು ಬರಲಿಕ್ಕೆ ಹೋಗಬೇಕು ಅನ್ನುತ್ತ ಕಾರ್ ಹತ್ತಿ ಕೈ ಆಡಿಸುತ್ತಾ ನಡೆದುಬಿಡುತ್ತಾರೆ.

ಅಂದಿಗೆ ಹೋಲಿಸಿದರೆ ನನ್ನ ಓದಿನ ಓಘ ಕಡಿಮೆ ಆಗಿದೆ.ಅದರೂ ಘಮ ಕಡಿಮೆಯಾಗಿಲ್ಲ ಬಿಡಿ. ಜೋಗಿಯವರ ಪುಸ್ತಕ ‘ಹಲಗೆ ಬಳಪ’ ಕೈಯಲ್ಲಿ ಹಿಡಿದು ಇಷ್ಟೆಲ್ಲ ನೆನಪಾಯಿತು. ಪುಸ್ತಕ ಇನ್ನು ಓದಿ ಮುಗಿದಿಲ್ಲ.
(ಅಂದಹಾಗೆ, ಇದ್ಯಾವುದು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೆ ಬರೆದುದಲ್ಲ,ನನಗೆ ಇವತ್ತು ದಕ್ಕಿದ್ದು ಇಷ್ಟು.)

ಮಂಗಳವಾರ

ಅಪರೂಪಕ್ಕೆ ಸಿಕ್ಕ ಖಾಲಿತನ

ಅಪರೂಪಕ್ಕೆ ಸಿಕ್ಕ  ಖಾಲಿತನ ಅದೇ ಇವತ್ತಿನ ವಿಶೇಷ. ಬರೆಯದೇ ಅದೆಷ್ಟೋ ದಿನಗಳೇ ಸಂದಿವೆ, ಅದೆಷ್ಟೆಂದರೆ ನಾನು ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ನನಗೇ ಅನುಮಾನ ಬರುವಷ್ಟು ದಿನಗಳು.

ನಿಜ ಹೇಳಬೇಕೆಂದರೆ, ಇಷ್ಟು ದಿನ ಓಡುತ್ತಲೇ ಇದ್ದೆ ಅನ್ನಿಸುತ್ತದೆ, ಹಗಲಲ್ಲೂ, ರಾತ್ರಿಯಲ್ಲೂ,ಮುಂಜಾವಿನಲ್ಲೂ! ಮುಸ್ಸಂಜೆಯಲ್ಲೂ.ಕೊನೆಗೆ ನಿದ್ದೆಯಲ್ಲೂ ಕೈ ಕಾಲು ಬಡಿಯುತ್ತ ಒಡುತ್ತಿದ್ದೆ ಇರಬೇಕು, ಹಾಗೆಯೇ  ಓಡುತ್ತಾ ಕನಸುಗಳನ್ನೂ ಹಿಂದೆ ಸರಿಸಿ ಓಡಿರಬೇಕು. ಯಾಕೆಂದರೆ ಒಳ್ಳೆಯ ಕನಸುಗಳು ಬೀಳದೆ ತಿಂಗಳುಗಳೇ ಸರಿದಿವೆ.

ಆದರೇ, ಇವೆಲ್ಲವುಗಳ ಮಧ್ಯದಲ್ಲು ಮತ್ತೆ ಹೊರಳಿ ಬರುವ ಯತ್ನ ನಡೆಸಿದ್ದೇನೆ ಅನ್ನುವದಂತು ಸತ್ಯ.೬ ವರುಷಗಳ ನಂತರ ಮತ್ತೆ ಕುಂಚ ಹಿಡಿದೆ,೨ ನನಗೆ ಖುಶಿ ಅನ್ನಿಸುವ ಚಿತ್ರ ಬಿಡಿಸಿದೆ, ಹಲವಾರು ಛಾಯಚಿತ್ರ ಕ್ಲಿಕ್ಕಿಸಿದೆ.ಅದನ್ನ ನನ್ನ ಈ ತೇಲಿ ಬಂದ ಪುಟಗಳ ಜೊತೆಗೆ ಸೇರಿಸಿದ್ದೇನೆ.



ಶನಿವಾರ

ಅಲ್ಪ ವಿರಾಮ


ಆಕೆಯ ಕವನಗಳನ್ನ ಓದುತ್ತಿದ್ದೆ;  ಆಕೆಯ ಮನತಟ್ಟುವ ಕವನದ ಸಾಲುಗಳ ತೀವ್ರತೆಗೆ ಬೆರಗಾಗಿದ್ದೇನೆ. ಭಾವ ತೀವ್ರತೆ ಇದೆ, ನೋವಿದೆ.....ಇನ್ನು ಏನೆಲ್ಲಾ..

ಕೆಳಗಿನ ಸಾಲುಗಳನ್ನು ನಿಮಗಾಗಿ ಕೊಟ್ಟಿದ್ದೇನೆ.

......................................
"I want you to stare out of train windows
Agonising over women who look like me,"

ಆಕೆ ಇತ್ತಿಚೆಗೆ ತುಂಬ ಬರೆಯುತ್ತಿರುವ ನನ್ನ ಮೆಚ್ಚಿನ ಭಾರತೀಯ ಯುವ ಲೇಖಕಿ. ಈ ವಾರ ಪೂರ್ತ ಓದುತ್ತಾ ಕಳೆಯ ಬೇಕೆಂದು ನಿರ್ಧರಿಸಿದುದರ ಫಲ, ಅನೇಕ ಉತ್ತಮ ಪುಸ್ತಕಗಳನ್ನ ಓದುವಂತಾಯಿತು ,ಹಲವು ಉತ್ತಮ ಲೇಖರನ್ನ ಭೇಟಿಯಾದೆ, ಒಳ್ಳೆಯ ಪುಸ್ತಕಗಳ ವಿನಿಮಯವೂ ಆಯಿತೆನ್ನಿ.



ಶಾಲ್ಮಲೆ ನಕ್ಕಳಾ?

ಶಾಲ್ಮಲೆ ಯಾವತ್ತೂ ಹಾಗೇ, ಮುನಿಸಿಕೊಂಡದ್ದೇ ಇಲ್ಲ ಅಂದರೆ ತಪ್ಪಾಗುತ್ತದೆ. ‍ಅಲ್ಲದೇ, ಇದನ್ನು ಆಕೆಯ ಅವನು’ ಒಪ್ಪನು.
'ಸಿಟ್ಟು ಒಂದು ಸೊಬಗಂತೆ, ಆಕೆಯ ಪ್ರಕಾರ!
ಆಕೆಯ ಅವನು ಮೌನ ಬಂಗಾರ ಅನ್ನುವದರಲ್ಲೇ ಜೀವನ ಕಳೆಯಬೇಕೆಂದಿದ್ದವ.
ನೋಡು ಸುಮ್ಮನೆ ನೋಡು ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು !
ಅದರೊಳೊಂದಾಗುವದೆ ಪರಮ ರಸಿಕತೆ! ಅದಕೆ
ಮಿಗಿಲಿಹ ರಸಾನಂದ ಮತ್ತೆ ಬೇರೊಂದಿಲ್ಲ” - ಕುವೆಂಪು
ಎನ್ನುತ್ತಾ ಆತ ಬರಿದೇ ನಕ್ಕು ಬಿಡುತ್ತಾನೆ. ಅರ್ಥವಾಗುವದಿಲ್ಲ ಇಬ್ಬರೂ!

ತತ್ ಈ ಶಾಲ್ಮಲೆಯೊಂದಿಲ್ಲದಿದ್ದರೆ ..ರೇ ರೇ ಉಹುಮ್..ಮುಂದೆ ಮಾತು ಹೊರಡುವದೇ ಇಲ್ಲ.ಇದುರಿಗೆ ಶಾಲ್ಮಲೆ ನಿಂತಾಗ,ಮಾತು ಹೊರಕ್ಕೆ ಬರುವದೇ ಇಲ್ಲ. ಅದು ಹಾಗೇ.ಆಕೆಯೆಂದರೆ ಗೌರವವಾ,ಅತಿಯಾದ ಪ್ರೀತಿಯ? ಅದು ಆಕೆಗೂ ಅರ್ಥವಾಗಿಲ್ಲ.
ಬದುಕುತ್ತಾ ಹೊಗಬೇಕು ಇದು ಅವನ ಸಿದ್ಧಾಂತ.ಹಾನ್, ಸಿದ್ಧಾಂತವೆಂದೆಲ್ಲ ಕರಿಯಲಿಕ್ಕೆ ಅವ ತಯಾರಿಲ್ಲ.

ಜೀವನಕ್ಕೊಂದು ಗುರಿ ಇರಬೇಕು, ಸಿದ್ಧಾಂತ ಇರಬೇಕು, ನಂಬಿಕೆ ಇರಬೇಕು,ಬಾಳಲಿಕ್ಕೆ Scientific Reason ಬೇಕು, ಯಾಕೆಂದು ಪ್ರಶ್ನಿಸಬೇಕು,ಇಲ್ಲವಾದರೆ ಅದು ಮೌಢ್ಯವಾಗುತ್ತದೆ. ಇದೆಲ್ಲ ಏನಿದ್ದರು ನಮ್ಮ ಶಾಲ್ಮಲೆಯದು.

 ಕೆಲವೊಮ್ಮೆ, ಪ್ರಶ್ನೆಯೂ ಮುಖ್ಯವಲ್ಲ, ಉತ್ತರವೂ ಮುಖ್ಯವಲ್ಲ, ಅವೆರಡರ ನಡುವಿನ ಗೊಂದಲ,ತಳಮಳ ದ್ವಂದ್ವ ಮತ್ತು ಮೌನ ಬಹಳ ಮುಖ್ಯವಾದುದು ಅನ್ನಿಸುತ್ತದೆ & ಬದುಕಲಿಕ್ಕೆ Scientific Reason ಬೇಕಿಲ್ಲ ಅಲ್ಲವಾ? -ಇದು ಶಾಲ್ಮಲೆಯ ಅವನದ್ದು.

ನನಗಂತು ನೂರಕ್ಕೆ ನೂರು ಸತ್ಯ ಅನ್ನಿಸಿತ್ತು.ಅವನ ಮಾತನ್ನೆ ಹಾಗೆಯೇ ಫೇಸ್ ಬುಕ್ ವಾಲ್ನಲ್ಲಿ ಹಾಕಿದಾಗ, ನನ್ನ ಹಲವು ಸ್ನೇಹಿತರುಗಳಾದ ಪಲ್ಲವಿ,ಕವಿತಾ,ಪ್ರಸಾದು ,ಹೌದೆಂದಿದ್ದರು. ಶಾಲ್ಮಲೆಯ ಸಿಟ್ಟು ಈಗ ನನ್ನ ಮೇಲೆ ತಿರುಗಿರಬೇಕು.ಸಧ್ಯ ಮಾತಿಗೆ ಸಿಕ್ಕಿಲ್ಲ.
ಶಾಲು, ಬೇಕುಗಳಲ್ಲೆ ಜೀವನ ತುಂಬಿಸ್ಕೋತೀಯೇನೆ ಹುಚ್ಚಿ, ಅನ್ನುತ್ತಾನೆ.
ತಿಂಗಳದ ಆ ನಾಲ್ಕು ದಿನಗಳಲ್ಲಿ ಶಾಲುವಿನವದ್ದಾಟ ಆಕೆಯ ಅವನನ್ನ ಕಂಗೆಡಿಸುತ್ತದೆ. Painkiller ತೆಗೆದು ಕೊಳ್ಳದೆ ಹಾಗೆಯೇ ಒದ್ದಾಡುವ ಆಕೆಯನ್ನ ನೋಡುತ್ತ ಸುಮ್ಮನೆ ಕುಳಿತುಬಿಡುತ್ತಾನೆ, ಹೆಣ್ಣಿಗಿಂತ ಮೃದುವಾಗಿ ಬಿಡುತ್ತಾನೆ,ತಾನೇನು ಮಾಡಬೇಕೆಂದು ತಿಳಿಯದೆ ಶಾಲುವಿನ ಹಿಂದೆಯೇ ಸುತ್ತುತ್ತಾನೆ,ಬಾಲ ಸುಟ್ಟ ಬೆಕ್ಕಿನಂತೆ.ಆಕೆಗೆ ಅದು ಅರ್ಥವಾಗುವದೆ ಇಲ್ಲ. ಅರ್ಥವಾಗುವದಿಲ್ಲವೋ, ಅರ್ಥಮಾಡಿಕೊಳ್ಳಲಿಕ್ಕೆ ಯತ್ನಿಸುವದಿಲ್ಲವೋ, ನನಗಂತು ಬಗೆಹರಿಯುವದಿಲ್ಲ.

ನೋವು ಸಹಿಸುವ ಆಕೆ ಆತಂಗೆ ವಿಸ್ಮಯವಾಗಿ ಕಾಣುತ್ತಾಳೆ. ಒಂದು ಗುಳಿಗೆನುಂಗಿ ನಗಲಿಕ್ಕೆ ಆಗುವದಿಲ್ಲವ ಅಂದರೆ, ಇಲ್ಲ ಅಂತವುಗಳನೆಲ್ಲ ನುಂಗಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಂದೆ ಏನೇನೊ ಆಗಿಬಿಡುತ್ತದಂತೆ, ಶಾಲು ನಿಜಕ್ಕು ಆತನನ್ನು ಹೆದರಿಸುತ್ತಿದ್ದಾಳೆ ಅನ್ನಿಸುತ್ತದೆ.

ತನ್ನ ಮಿತಿಗೆ ಬಗೆಹರಿಯದ್ದು ಎಂದು ಸುಮ್ಮನಾಗುತ್ತಾನೆ.
ಮುಂದೆ ಎಂದೋ,ಎನೇನೋ ಆಗಿಬಿಡುತ್ತದೆಯೆಂದು ಇಂದು ಯೋಚಿಸುವ ಶಾಲ್ಮಲೆ ಆತಂಗೆ 'ಪ್ರಶ್ನೆ'ಯಾಗಿದ್ದಾಳೆ.
ಶಾಲು ಯಾಕೇ ಹೀಗೆ ನೀನು ?
ಅಳು ಬಂದಾಗ ಅತ್ತುಬಿಡು, ನಗು ಬಂದಾಗ ನಕ್ಕುಬಿಡು ಎನ್ನುವ 'ಅವ' ಶಾಲ್ಮಲೆಯ ಆ ನಗುವಿಗಾಗಿ ಕಾಯುತ್ತಿದ್ದಾನೆ. ಶಾಲ್ಮಲೆ ನಕ್ಕಳಾ?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...