ಪುಟಗಳು

ಸೋಮವಾರ

ದೀಪದಂತೆ ಬೆಳಗುತ್ತಿರಲಿ ಎಂಬ ಭಾವದೊಂದಿಗೆ


ಹೀಗೇ ಎತ್ತು ಏರಿಗೆ ಎಮ್ಮೆ ನೀರಿಗೆ ಎಳೆದರೆ,ಬದುಕು ಕಟ್ಟೋದು ಸಾಧ್ಯವಾ?ಅಂತದೊಂದು ಪ್ರಶ್ನೆ ಬಹುದಿನದಿಂದ ಕಾಡತೊಡಗಿತ್ತು. ಅದಕಿಂತ ಮುಂಚೆ, ಇಂತದೊಂದು ಬದುಕು ಕಟ್ಟಲೇ ಬೇಕಾ? ಎಂಬ ಹೋಯ್ದಾಟ ಮನಸಲ್ಲಿ. ಯಾಕೆಂದರೆ ಅದರ ಅಗತ್ಯ ಯಾಕೋ ದಿನೇ ದಿನೇ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿತ್ತು.ಅಂವ ಇರೋದೆ ಹಿಂಗೆ,ನೀನೆ ಸ್ವಲ್ಪಾ ಹೊಂದಾಣಿಕೆ ಮಾಡಿಕೊ ಎಂಬ ಬೇಕಾಬಿಟ್ಟಿ ಹಿತವಚನಗಳ ಧಾಳಿ ತಳಮಳಿಸುವಂತೆ ಮಾಡಿತ್ತು. ನಾ ಮಾಡಿದ್ದು ಸರಿ ಎಂಬ ನಂಬಿಕೆ ಎಷ್ಟೇ ಇದ್ದರೂ, ಇಂತಹ ಸ್ವಹಿತ ಚಿಂತಕರ ಮಾತುಗಳು ಅಷ್ಟಷ್ಟೇ ಅಧೀರಳಾಗಿಸಲಿಕ್ಕೆ ಸಾಕಲ್ಲ.
- ಎಂದ ಅವಳ ಮಾತಿಗೆ ತಲೆ ಆಡಿಸಿದ್ದೆ. ಕೈಯಲ್ಲಿದ್ದ ಹಣತೆಗೆ ಎಣ್ಣೆ ಸುರಿಯುತ್ತಿದ್ದಳು ಆಕೆ. ದೀಪಾವಳಿಗೆ ಊರಿಗೆ ಬಂದಿದ್ದ ನಾನು, ಅವಳನ್ನ ನೋಡುವ ಸಲುವಾಗೇ ಬಂದಿದ್ದೆ.

"ಹೀಗೆ ಅದೆಷ್ಟು ದಿನಾಂತ ಬದುಕುವದು? ಹೀಗೆಯೆ ಮೂಲೆಯಲ್ಲಿ ಅಳುತ್ತಾ ಕುಳಿತರೆ ಮನಸ್ಸು ಗಬ್ಬೆದ್ದು ನಾರಲಿಕ್ಕೆ ಶುರುವಾಗಿಬಿಡುತ್ತದೆ,ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ನಂಬಿಕೆ ಕಡಿಮೆ ಅಗಲಿಕ್ಕೂ ಸಾಕು,ಈಗಲೇ ಭವಿಷ್ಯ ಪ್ರಶ್ನಾರ್ಥಕವಾಗಿದೆ, ಹೀಗೆಯೇ ಕುಳಿತರೆ ಭವಿಷ್ಯ ಕಾಣುವದಾದರೂ ಹೇಗೆ? ಹ್ಮ್ ಹೇಗಾದರೂ ಇದರಿಂದ ಹೊರ ಬರಬೇಕು. ಜೀವನದಲ್ಲಿ ಕೋಲ್ಮಿಂಚು ಕಾಣಲಿಕ್ಕೆ, ಅಬ್ಬರದ ಮಳೆ ಗುಡುಗುಗಳೇ ಬೇಕು ಅಲ್ಲವ" ಅಂದೆ ಹಣತೆಯನ್ನ ನೋಡುತ್ತಾ.

ಹೌದು ಅನ್ನು, ಎಲ್ಲವನ್ನ ಬುಡಮೇಲು ಮಾಡುವ ಸಾಮರ್ಥ್ಯ ಇರುವದು ನಮ್ಮ ಮನಸ್ಸಿಗೆ ಅಲ್ವ? ಯಾವುದೋ ಸಮಯಕ್ಕೆ 'ಇದೇ ಅದು' ಎಂದು ಅನಿಸಿಬಿಡುತ್ತದೆ, ಭಾವವೊಂದು ಬದಲಾಗಿ ಬಿಡುತ್ತದೆ. ಅಂತಹ ಘಟನೆಗಳೆಲ್ಲ ನಡೆಯುವದು 'ಕ್ಷಣಗಳಲ್ಲಿ'. ನಿರ್ಧಾರವೊಂದು ಮನದಲ್ಲಿ ನಿಶ್ಚಲವಾಗಿಬಿಡುತ್ತದೆ. ವರ್ಷಗಳಲ್ಲಿ ಅಳೆದು ಸುರಿದು ಮಾಡಿದ ಕೆಲಸ,ಯೋಚನೆ ಹೊಸ ದಿಗಂತದತ್ತ ವಾಲಿಬಿಡುತ್ತದೆ. ಅದಕೊಂದು ಭಾವಬಂದು, ಜೀವತುಂಬಿ, ನಾನಿದ್ದೇನೆ, ಹೀಗೆಯೇ ಮಾಡು ಅಂತ ನಮ್ಮ ಮನಸ್ಸೇ ನಮ್ಮನ್ನ ನಿರ್ದೆಶಿಸತೊಡಗುತ್ತದೆ’ ಅಂದಳು ಅವಳು ದೀಪ ಹಚ್ಚುತ್ತಾ.

ಆಕೆಯ ಮನದಲ್ಲಿ ನಿರ್ಧಾರವೊಂದು, ಗುರಿಯೊಂದು ಸ್ಪಷ್ಟವಾದ ಎಲ್ಲ ಕಳೆಗಳು ಇದ್ದವು.

ಆ ಗಳಿಗೆಯಲ್ಲಿ ರಾಮಾಯಣದ ರಾಮ ನೆನಪಾಗುತ್ತಾನೆ.ಆಕೆಯ ಗಂಡನ ಮೇಲಿನ ಸಿಟ್ಟು ರಾಮನ ಬಗ್ಗೆ ತಿರುಗುವ ಎಲ್ಲ ಚಿಹ್ನೆಗಳೂ ಆಕೆಯ ಮುಖದಲ್ಲಿ ಫ್ಲೋರೆಸೆಂಟ್ ದೀಪದಷ್ಟೆ ನಿಚ್ಚಳ.ಸೀತೆ ಪಾಪ ಅನ್ನಿಸತೊಡಗುತ್ತಾಳೆ.ಸೀತೆಯನ್ನ ಕಾಡಿಗಟ್ಟುವಾಗಿನ ರಾಮನ ಮನಸು ಇಂದಿಗೂ ಆಕೆಯರಿವಿಗೆ ಮೀರಿದ್ದು ಅನ್ನಿಸಿ,ಥುತ್,ಈ ಗಂಡಸು ಜಾತಿಯೇ ಇಷ್ಟು ಅಂದುಕೊಳ್ಳುತ್ತಾಳೆ.ಅಕೆಯ ಅಜ್ಜಿ ಹೇಳಿದ್ದ ಪುರಾಣ ಕತೆಗಳಲ್ಲಿ ಬರುವ ಎಲ್ಲ ಮಹಿಳೆಯರ ಪಾಡು ನೆನೆದು ಅಯ್ಯೋ ಅನಿಸುತ್ತದೆ.ಎಲ್ಲ ನೋವು 'ಇವಳಿ'ಗೇ ಏತಕ್ಕೆ ಎಂಬ ಪ್ರಶ್ನೆಯೂ ಹಾಗೇ ಬಂದು ಹೀಗೆಯೇ ಮಾಯವಾಗುತ್ತದೆ ಅವಳಲ್ಲಿ. 'ತಾನು ಸೀತೆಯಲ್ಲ, ದ್ರೌಪದಿಯೂ ಅಲ್ಲ! ಅಹಲ್ಯೆ, ಊರ್ಮಿಳೆಯರಂತೂ ಅಲ್ಲವೇ ಅಲ್ಲ' ಎಂಬ ಸತ್ಯ ಯಾಕೋ ಅರಿಯದ ನೆಮ್ಮದಿ ಕೊಡುತ್ತಿದೆ ಅನಿಸುತ್ತದೆ. ತಾನು ಅವರ ಹಾಗೆ ಅಗುವದೂ ಇಲ್ಲ ಎಂದು ಖಚಿತವಾಗಿ ಹೇಳೇಬಿಟ್ಟಳು. ಕಾಲಘಟ್ಟವನ್ನ ಮೀರಿದ್ದು ಇದು ಅನ್ನಿಸಿ ಸುಮ್ಮನಾಗುತ್ತೇನೆ.

ನನಗೇನು ಕಮ್ಮಿ ಇದೆ? ಓದಿಲ್ಲವಾ? ಭಾಷೆ ಬರೋದಿಲ್ಲವಾ? ಏನಂತ ತಿಳ್ಕೊಂಡಿದಾನೆ ಅವ ನನ್ನ, ‘ಬದುಕಿ ತೋರಿಸ್ತೇನೆ ಅಂತ ಹೇಳು ಅವಂಗೆ’ ಅಂತ ಸ್ವಲ್ಪ ಆವೇಶದಲ್ಲೇ ಹೇಳಿದ್ದು ನನ್ನರಿವಿಗೆ ಬಂದಿತ್ತು

ತನ್ನ ಬದುಕ ಬೆರೆಯವರ ಸಹಾಯ ಪಡೆದು ಕಟ್ಟುವ ಅಗತ್ಯ ತನಗಿಲ್ಲ ಎಂದಾಗ ನನಗೆ ಆಕೆಯ ಮುಖದಲ್ಲಿ ಕಂಡಿದ್ದು ಬದುಕಿನ ಇನ್ನೊಂದು ಮುಖದ ದರ್ಶನ.ನನ್ನ ಮಟ್ಟಿಗೆ ಅದೊಂದು ಸತ್ಯ ದರ್ಶನ.ತನ್ನ ಬದುಕ ಸ್ವತಂತ್ರವಾಗಿ ಕಟ್ಟುವ ನಿರ್ಧಾರವನ್ನ ನನ್ನ ಮನವೂ ಅನುಮೋದಿಸುತ್ತಿದೆ. ದೀಪಾವಳಿಯ ಹಣತೆಯ ಬೆಳಕಲ್ಲಿ ಆಕೆಯ ನಿರ್ಧಾರ ಪ್ರತಿಫಲಿಸತೊಡಗುವದನ್ನ ನೋಡಿ ಆನಂದಿಸುವ ಭಾಗ್ಯ ನನ್ನದು. ಏನೇ ಇರಲಿ ಆಕೆ ನಗುತ್ತ ಇರಲಿ ಖುಷಿಯಾಗಿರಲಿ,
ಹಣತೆಯ ದೀಪದಂತೆ ಬೆಳಗುತ್ತಿರಲಿ, ಮೇಣದ ಬತ್ತಿಯಂತೆ ಕರಗದಿರಲಿ ಎಂಬ ಭಾವ ಮನತುಂಬಿದೆ.

ಕಾಮೆಂಟ್‌ಗಳಿಲ್ಲ: