ಭಾನುವಾರ

ಅನನ್ಯ,ಅನೂಹ್ಯ, ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ....
ಸೋ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೇ ಹಿಮ್ಮೇಳವನು ಸೋಸಿಬಹಾಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತ್ತಿತ್ತು ....

ಮುಂಜಾವು,ಸೋನೆಮಳೆ, ಎಂತಹವರನ್ನೂ ಕಟ್ಟಿ ಹಾಕಿಬಿಡುತ್ತೆ, ಆ ಗಳಿಗೆ, ಕೊನೆಯವರೆಗೂ ಉಳಿಯಬಾರದಿತ್ತ, ಎನ್ನುವ 'ಹ್ಯಾಂಗೋವರ್' ಉಳಿಸಿಬಿಡುತ್ತೆ ಅಲ್ಲವಾ?ಓ ಭಾಸ್ಕರ ಬಂದನಾ?ಇಲ್ಲ; ಮೂಡಣದಲ್ಲಿ ಮಂಗಳಕಾರವಾದ ಕಾಂತಿಯೊಂದು ಹೊಳೆಯುತ್ತಿತ್ತು ಎಂಬುದರ ಮೂಲಕ ಎಂದು ಕವಿ ಪರೋಕ್ಷವಾಗಿ ಹೇಳುತ್ತಾರೆ. ಎಷ್ಟು ಅದ್ಭುತವಾದ ಕಲ್ಪನೆ.....

ಮರೆತೀರಾ, ಇದು ಬಿರುಗಾಳಿಯಲ್ಲ,ಬಿರುಮಳೆಯ ಸನ್ನಿವೇಶವಲ್ಲ . 'ತುಂತುರು' ಮಳೆಯ ಸಮಯ. ತೆಂಗುಗರಿಗಳ ಅಲುಗಾಟ ಸುಳಿಗಾಳಿಯ ಅಸ್ತಿತ್ವಕ್ಕೊಂದು ಆಧಾರ. ವಿಶೇಷವೇನು ಗೊತ್ತಾ, ಹಸಿರು ಚಿಗುರುಹುಲ್ಲಿನ ತುದಿಯಲ್ಲಿ ಕುಳಿತ ಹನಿಗಳು ,ಹೂವ ಎಸಳಿನ ತೆಕ್ಕೆಬಿದ್ದ ಮುತ್ತಿನಂತ ಹನಿಗಳು,ಮನೆಯ ಮಾಡಿನಿಂದ ಲಯಬದ್ಧವಾಗಿ ತೊಟ್ಟಿಕ್ಕುವ ಮಳೆ ನೀರು, ಹನಿ ಹನಿಯಲ್ಲಿಯೂ ಜೀವತುಂಬಿಕೊಂಡಿದೆಯೇನೋ ಎಂಬಷ್ಟು ಅಚ್ಚು ಮೂಡಿಸುತ್ತವೆ.ಜತನವಾಗಿ ಕಾಪಿಡಬೇಕಾದ ಭಾವಗಳ ಅಲೆಯೊಂದನ್ನು ಸೃಷ್ಠಿಸುತ್ತವೆ.

ಕೈಯಲ್ಲೊಂದು ಲೋಟ ಬಿಸಿ ಬಿಸಿಯಾದ ಕಷಾಯ ಹಿಡಿದು ಇವುಗಳ ವೀಕ್ಷಣೆಗೆ ಕುಳಿತರೆ ಕಾಲ ನಿಂತೇ ಹೋದಂತೆ ಭಾಸವಾದೀತಲ್ಲ?ಕ್ಷಣ ಕಳೆದಂತೆ,ಮುಂಜಾವಿನ ಮಳೆಯ ಗತಿ ಲಂಬಿಸುತ್ತಾ ಅಬ್ಬರ ಜೋರಾಗುತ್ತದೆ. ಸುಮ್ಮನೆ ಮಳೆ ಬೀಳ್ವದನ್ನ ನೋಡುತ್ತಾ ಕುಳಿತಿದ್ದರೆ,ಅಲ್ಲೇ ಒಂದು 'ಅನನ್ಯ,ಅನೂಹ್ಯ', ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ.ಜೋರಾಗಿ ಸುರಿವ ಮಳೆಗೊಂದು 'ರಿದಂ' -ತಾಳ,ಲಯ ಗತಿಗಳಿದ್ದಾವ,ಎಂಬ ಅಚ್ಚರಿಯ ಲೋಕದಲ್ಲಿ ನಾವು ತೇಲುವದು ದಿಟ. ಒಂದು ಸಾರೇ ಜೋರಾಗಿ,ಕ್ಷಣದಲ್ಲಿ ಮಂದ್ರಗತಿಗಿಳಿದು, ಜೀರುಂಡೆ,ಕಪ್ಪೆಗಳ ಕೂಗಾಟ, ಅರಚಾಟಗಳ ಮಧ್ಯೆ,ಮತ್ತೆ ತಾರಕಕ್ಕೇರಿ ಸುರಿಯ ತೊಡಗಿದರೆ, ನಿಮ್ಮೂರ ಕೊಳಚೆಯನ್ನಷ್ಟೇ ಅಲ್ಲ,ವಿಶಾಲ ಜಗವನ್ನೇ ಚೊಕ್ಕವಾಗಿಸಿ ಮಟ್ಟಸ ಮಾಡಿಬಿಡುತ್ತೇನೆ, ಎಂಬ ಮಳೆರಾಯನ ನಿರ್ಧಾರ ಮತ್ತೂ ಗಟ್ಟಿಯಾದಂತೆ ತೋರುತ್ತದೆ,ಜೀರುಂಡೆ,ಓಟರ್ಗಪ್ಪೆಗಳ ಅರಚಾಟ ಕ್ಷಣ, ಸಹ್ಯವೆನಿಸುವದಲ್ಲ?

ಹಂ ಹೌದು ಇದೆ ಜೋರು ಮಳೆಯಲ್ಲಿ ತೋಯ್ದು ತೊಪ್ಪೆಯಾದ ದನಕರುಗಳನ್ನ ಆ ದನಗಾಹಿ ಅಟ್ಟಿಸಿಕೊಂಡು ಹೋಗುತ್ತಿದ್ದಾನೆ,ಹಾದಿ ಬದಿಯ ಚಿಗುರನ್ನ ಕತ್ತರಿಸುತ್ತಾ, ಮೆಲಕು ಹಾಕುತ್ತ, ಸಾಗಿಹ ಆ ದನಕರುಗಳನ್ನು ನೋಡುವದೆಷ್ಟು ಚಂದ.! ಆ ಬಿಳಿಯ ಪುಟ್ಟ ಕರು ನೆಗೆಯುತ್ತಿದೆ,ಮಳೆ ಜೋರಾದಂತೆ ಅಮ್ಮನ ಹಿಂದೆ,ಪಕ್ಕದಲ್ಲಿ ಅಂಟಿಕೊಂಡೇ ಸಾಗುತ್ತಿರುವದನ್ನ ನೋಡಿದರೆ, ಪಾಪ! ಅದಕ್ಕೂ ಚಳಿ ಆಗೋಲ್ವಾ,ಎನ್ನುವ ಫೀಲ್ ಹುಟ್ಟಿಸಿ ಬಿಡುತ್ತದಲ್ಲ....?

ಹೊತ್ತು ಏರುತ್ತಿದೆ, ಪಕ್ಕದ ಮನೆಯ ಬಚ್ಚಲ ಮನೆಯಿಂದ,ಕಾರಖಾನೆಯ ಚಿಮಣಿ ಇಂದ ಹೊರಬರುವ ಹೊಗೆಯಂತೆ ಒಂದೇ ಸವನೇ ಹೊಗೆ ಬರುತ್ತಿದೆ.ಸೌದೆ ಒದ್ದೆಯಿರಬೇಕು.ಜೋರು ಮಳೆಗೆ ತಲೆಬಾಗದೆ,ತಲೆ ಎತ್ತಲೂ ಆಗದೆ ಅಲ್ಲೇ ಚೆಲ್ಲಾಪಿಲ್ಲಿ ಆಗುತ್ತಿದೆ.ಅಮ್ಮ ಮಾಡಿದ ಸಾಂಬಾರಿನ ಪರಿಮಳ,ಒಗ್ಗರಣೆಯ ಘಾಟು, ಸಾಸಿವೆಯ ಚಟಪಟ ಸದ್ದನೊಡಗೂಡಿ ಹಾಗೆಯೇ ತೇಲಿಬರುತ್ತಿದೆ.
ರಸ್ತೆಯ ತುದಿಯಲ್ಲಿ ಚಿಣ್ಣರ ದಂಡೇ ಕಾಣುತ್ತಿದೆ.ಓಹೋ ಮಧ್ಯಾನ್ಹದ ಊಟದ ಸಮಯವಾಯಿತಲ್ಲ.ಹೇಯ್! 'ನೀತಿ', ನನ್ನ ಹೊಸ ಚಪ್ಲಿ ನೋಡೇ,ಎಷ್ಟು ಚೆನಾಗಿ ನೀರು ಹಾರುತ್ತೆ,ಎನ್ನುತ್ತಾ ಪೋರನೊಬ್ಬ ಕಾಲಿನಿಂದ ಮಳೆ ನೀರನ್ನು ಬಡಿಯುತ್ತಿದ್ದಾನೆ.ಹಮ್ಮ್,ಕೆಸರು ನೀರು ತಲೆತುಂಬ ವ್ಯಾಪಿಸಿ,ಹಣೆಯ ಮೇಲಿಂದ,ಕಿವಿಯ ಪಕ್ಕದಲ್ಲಿ,ಬಿಳಿಯ ಸಮವಸ್ತ್ರ ದ ಮೇಲೆ,ಕೊನೆಗೆ ಮೈ ಎಲ್ಲ ತೋಯಿಸಿದೆ.ಮಳೆಯಲ್ಲಿ ನೆನೆಯಬೇಡ, ಎಂಬ ಅಮ್ಮನ ಕಿವಿನುಡಿ,ಗಾಳಿಯೊಟ್ಟಿಗೆ ಗಾಳಿಯಾಗಿ ಹಾರಿ ಹೋಗಿದೆ,ಮಳೆಯಂತೆ ನೆಲಕ್ಕೆ ಬಿದ್ದು ರಸ್ತೆಯಗಲ ಚದುರಿ ಹೋಗಿದೆ. ಆದರೂ,ಅಮ್ಮ 'ಬೈದು ಬಿಟ್ಟರೇ', ಎಂಬ ಚಿಕ್ಕ ಭಯ ಜೊತೆಯಲ್ಲಿಯೇ ಇದೆ.

ಪೆಟ್ಟಿಗೆಯಂತ ಕೋಣೆಯಲ್ಲಿ, (ತಗಡಿನ ಮೇಲ್ಚಾವಣಿ ಇದ್ದರೇ ಇನ್ನೂ ಒಳಿತು) ಕೇಳುವ, ಪರ್ವಿನ್ ಸುಲ್ತಾನರ ರಾಗ್ -ಮೇಘಮಲ್ಲಾರ್:ಮೋಡಗಳು ಓಡುತ್ತಿವೆ,ಹಾನ್ ಈಗ ಘರ್ಶಿಸುತ್ತಿವೆ ,ಶುರುವೇ ಆಯಿತು ಜಿಟಿ ಮಳೆ,ಮೊದಲು ಮಂದ್ರ,ನಂತರ ತಾರಸಪ್ತಕಕ್ಕೇರಿ, ತಲೆಯ ಮೇಲೆಯೇ ಮಳೆ ಸುರಿಯುತ್ತಿದೆಯೇನೋ ಎನ್ನುವ ಅನುಭವ ಕಟ್ಟಿಕೊಡುತ್ತದೆ.ಅದರೊಟ್ಟಿಗೆ ಕಾಳಿದಾಸ ಮಹಾಕವಿಯ 'ಮೇಘದೂತ'ವನ್ನ ಓದಲು ಮರೆಯದಿರಿ. ವಿಶಿಷ್ಟ ಕಲ್ಪನೆಯ ಮೇಘದೂತ ಓದುತ್ತಾ, ಓದುತ್ತಾ, ಮೇಘದೊಟ್ಟಿಗೆ ನೀವೂ ಮೇಘವಾಗಿ ಬಿಡುವಿರಿ.

ಹಾನ್, ಮಳೆನಿಂತ ಮೇಲೆ ಬಿದ್ದ ಕೊನೆ ಹನಿ,ಮನೆಯ ಮಾಡಿನಿಂದುರುಳಿ,ಮನೆ ಗೋಡೆಗೆ ಸಾದಿ ಬೆಳೆದ ಪೇರಳೆ ಮರದ ಚಿಗುರಿನ ಮಧ್ಯದಲ್ಲಿ ಸೇರಿ ಮುತ್ತಾಗ್ವ ಬಗೆ,ಎಲೆಯಿಂದ ಎಲೆಗೆ ಜಾರಿ ಕೊನೆಯಲ್ಲಿ ಧರೆ ಸೇರುವ ಬಗೆ, ಟಪ್ ಟಪ್, ಎಂದು ಹನಿ ಹನಿಯಾಗಿ ಬೀಳುವ ನೀರ ಶಬ್ದ ಎಲ್ಲವೂ ಮನದಲ್ಲಿ ದಾಖಲಾಗಿ ಬಿಡುತ್ತದೆ.
ಇವೆಲ್ಲವೂ ನಮ್ಮ ನಿಮ್ಮೆಲ್ಲರನ್ನ ಅತಿ ಅನನ್ಯ,ಅನೂಹ್ಯ ಎನಿಸುವ ಲೋಕದ (ನಾಕದ ) ಖಾಯಂ ನಿವಾಸಿಗಳನ್ನಾಗಿ ಮಾಡಿಬಿಡುತ್ತದೆಯೆಂದರೆ ಅಚ್ಚರಿಯೇನಿಲ್ಲವಲ್ಲ?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...