ಮಳೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಳೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ

ಮಳೆಗಾಲವೆಂಬುದು ಒಂದು ಸುಂದರ ಅನುಭವ

ಎಲ್ಲ ಕಡೆ ಕತ್ತಲು, ಆಕಾಶದಲ್ಲೆಲ್ಲ ಕರಿಮೋಡ, ಜಿಟಿ ಜಿಟಿ ಮಳೆ ಥೇಟ್ ನಮ್ಮೂರಂತೆಯೇ ಇದೆ ಈದಿನ . ಮಳೆಗಾಲಕ್ಕೆ ಮಳೆಗಾಲವೇ ಸಮ.
ಸುಮ್ಮಗೆ ನನ್ನ ಪಾಡಿಗೆ ಕೂತಿದ್ದೆ ನೋಡಿ ಎಲ್ಲಿತ್ತೋ ಆ ಮಳೆಯ ಮೋಡಗಳ ಗಮನ, ಥಟ್ಟನೇ ನಮ್ಮ ಮನೆಯ ಸುತ್ತ ಇಣುಕಿ ನೋಡಿದ್ದೇ ನನ್ನ ಈಗಿನ ಖುಷಿಗೆ ಕಾರಣ.
ಮಳೆ ಒಂದು ವಿಸ್ಮಯ. ಮಳೆ ಮೊದಲ, ಮೋಡ ಮೊದಲ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕೀತು, ಮೊದಲ ನೋಟಕ್ಕೆ ಮೋಡ ಮೊದಲೆನ್ನಿಸಿದರೂ, ಮಳೆಯ ನೀರಿಂದಲೇ ಅಲ್ಲವ ಮೋಡ. ಆ ಕರಿಮೋಡ ಬೇಧಿಸಿ,ದೊಡ್ಡ ಹನಿಯೊಂದು ಭುವಿ ಸೇರುವ ಹೊತ್ತಿಗೆ ಹಲವು ಹನಿಗಳಾಗಿ, ಮಳೆಯ ಮುತ್ತುಗಳಾಗಿ, ಬಿಸಿಯ ಬೇಗೆಯಲ್ಲಿ ಬೇಯುತ್ತಿರುವ ಈ ಭುವಿಯನ್ನ ಚುಂಬಿಸಿದ್ದು. ಅಷ್ಟೇ ಅಲ್ಲದೇ, ಬಾಯ್ ತೆರೆದು ಕಾಯುತ್ತಿದ್ದ ಆ ಚಿಪ್ಪಿನಲ್ಲಿ ಸೇರಿ ಸ್ವಾತಿಯ ಮುತ್ತಾಗಿದ್ದು? ಏನೇ ಇರಲಿ, ಸುಮ್ಮಗೆ ತಣ್ಣಗೆ ಕೂತು ಸೆಖೆಯಿಂದ ಬೇಯುತ್ತಿರುವಾಗ, ಬಿರು ಬೇಸಿಗೆಯ ಶುರುವಿಗೆ ಬಂದ ಈ ಮಳೆಯಿದೆಯಲ್ಲ ಅದೊಂದು ಅದ್ಭುತ ಲೋಕ ಕಟ್ಟಿಕೊಟ್ಟಿದೆ. ಕಿಟಕಿಯ ಪಕ್ಕದಲ್ಲಿ ಕೂತು ಮಳೆಹನಿಗಳ ಲೆಕ್ಕ ಬರೆಯುತ್ತಿದ್ದೇನೆ.
ನನ್ನ ಮಟ್ಟಿಗೆ ಮಳೆಗಾಲವೆಂಬುದು ಒಂದು ಸುಂದರ  ಅನುಭವ. ನಿಮ್ಮ ದಣಿವನ್ನ ಅಳಿಸಿಹಾಕುವ ತಾಕತ್ತಿದೆ.

ಬುಧವಾರ

ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ


ಸುರಿವ ಮಳೆ  ಸುರಿದು ಬರಿದಾಗಿತ್ತು,ನನ್ನ ಕಣ್ಣೀರಿನಂತೆಯೇ.ಯಾಕೊ ಅತ್ತು ಹಗುರಾಗೋಣವೆಂದರೆ ಅಳುವು ಬರುತ್ತಿಲ್ಲಾ.ಮಾಡಂಚಿನಿಂದ ಮಳೆ ನೀರು ಬಿದ್ದು ಬಿದ್ದು ನೆಲ ಸವೆದಿತ್ತು,ಕೊರಕಲಾಗಿತ್ತು,ನನ್ನ ಬದುಕಿನಂತೆಯೆ.ಬಿದ್ದ ನೀರು ಆ ಇಳೆಯ ಒಡಲೊಳಕ್ಕೆ ಇಳಿಯಲೇ ಇಲ್ಲ ಆತನ ಪ್ರೀತಿಯಂತೆ.ಕೊರಕಲ ಸಂದಿಯನ್ನೂ ಬಿಡದೇ ಅಂಗಳದ ಮಣ್ಣ ಸಮೇತ ಹಾಗೆಯೇ ಕೊರೆದು, ತರೆದು ಮಳೆಯ ನೀರು ಕೆಂಪಾಗಿ ದೂರ ಹರಿದಿತ್ತು ನಮ್ಮ ಪ್ರೀತಿಯಂತೆಯೆ.ಮಣ್ಣ ಸಾರವೆಲ್ಲ ಮಳೆಯ ನೀರಿನೊಟ್ಟಿಗೆ ಹರಿದು ದೂರ ದೂರ ಸರಿದು ಸಾಗರವ ಸೇರಿತ್ತು ಉಪ್ಪಾಗಲು,ಮರಳಾಗಲು,ಥೇಟ್ ನನ್ನ ಕಣ್ಣಿರಿಂತೆಯೇ, ನನ್ನ ಬದುಕಿನಂತೆಯೇ.

ಅಂವ ಕಂಡಿದ್ದು ನಮ್ಮ ಮಲೆನಾಡಿನ ಆ ರಪ್ಪನೆ ಬಾರಿಸುವ ಮಳೆಗಾಲದಲ್ಲಿಯೇ.ನಾನು ಆಗ ಧಾರವಾಡದಲ್ಲಿ ಎಮ್ ಎ ಓದುತ್ತಿದ್ದೆ.ಇಂಗ್ಲಿಷ್ ನನ್ನ ಮೆಚ್ಚಿನ ವಿಷಯ. ಅವಗೆ ಹೇಗೋ ತಿಳಿದಿತ್ತು ಅನ್ನಿಸುತ್ತದೆ.ಆತ ಮಾತ ಶುರುವಲ್ಲಿಯೇ,
I'm Nobody! Who are you?
Are you – Nobody – too?

Then there's a pair of us?

Don't tell! they'd advertise – you know!
How dreary – to be – Somebody!

How public – like a Frog –

To tell one's name – the livelong June –

To an admiring Bog!



ಅಂದಿದ್ದ. ಎಮಿಲಿ ಡಿಕಿನ್ಸೊನ್ ರ ಪದ್ಯ.

ಇಲ್ಲಿ ಯಾರು ಯಾರಿಗು ಒತ್ತಾಯಿಸುವ ಅಗತ್ಯವಿಲ್ಲ, ಯಾರೋ ಅಗುವದಕ್ಕೆ ಹೋಗಿ ಎನೇನೊ ಆಗುವ ಅನಿವಾರ್ಯತೆ ಇಲ್ಲ,ನೀನು ನೀನಾಗಿರಲಿಕ್ಕೆ,ನಿನಗನಿಸಿದ್ದನ್ನ ಹೇಳಲಿಕ್ಕೆ ಯಾರ ಭಯವು ಇಲ್ಲ ಅಂದ.

ಕುಶಿ ಅನ್ನಿಸಿತು,ಮಹಿಳೆಯರ ಮೆಲೆ ಗೌರವವಿರುವವರನ್ನ ಕಂಡರೆ ನನಗೆ ಗೌರವ ಜಾಸ್ತಿ. ಹೀಗೆ ಪರಿಚಯ ೪ನೆ ವರುಷಕ್ಕೆ ಬಂದಿತ್ತು.ಮನೆಯಲ್ಲಿ ಮದುವೆಯ ಮಾತುಕತೆ ನಡೆದಿತ್ತು.ಜಾತಿ,ಆಚಾರ,ಗ್ರಹ ಗತಿಗಳೆಲ್ಲ ಪ್ರತಿಕೂಲವಾಗಿದ್ದವು.ಮನೆಯಲ್ಲಿ ಧಾರವಡದ ಬಿಸಿಲಲ್ಲಿ ಕಂಡ ಅವನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಕೊನೆಗು ಒಪ್ಪಲೆ ಇಲ್ಲ, ಆ ಮಳೆಗಾಲದಲ್ಲೂ.

ಅಂದು ನಮ್ಮನೆಯ ಕೆರೆ ದಂಡೆಯ ಮಗ್ಗುಲಲ್ಲಿ ಕೊನೆಯ ನಿರ್ಧಾರ.ಅದೆ ಸಿನಿಮೀಯ ತಿರುವುಗಳಿಗಾಗುವ ಅಂತ್ಯ ನಮ್ಮ ಜೀವನದ್ದು. ಬೇಜಾರಿನದ್ದು.
I cannot live with you,

It would be life,

And life is over there

Behind the shelf

………….



So we must keep apart,

You there, I here,

With just the door ajar

That oceans are,

And prayer,

And that pale sustenance,

Despair! -

Emily Dickinson

ಆ ಸಾಲುಗಳನ್ನ ಹೇಳಿಯೇ ಆತ ದೂರಸರಿದಿದ್ದು.

ಹ್ಮ್ಮ್ ಅಂದೇ ಮಳೆಗಾಲ ಶುರುವಾಗಿತ್ತು,ಜಡಿಮಳೆ. ಕನಸಾಗಿರಲಿ ಎಂದು ಕೈ ಚಿವುಟಿ ನೋಡಿಕೊಂಡಿದ್ದೆ.ಉರಿಯಲಿಲ್ಲ,ಉರಿಯಲಿಕ್ಕೆ ನೋವು ಗೊತ್ತಾಗುವದಾದರೂ ಹೇಗೆ? ಆ ನೋವೇ ಈ ನೋವ ನುಂಗಿದರೆ?
ಮತ್ತೆ ಅದೇ ಮಳೆಗಾಲ, ಅದೇ ಕಿಡಕಿಯ ಪಕ್ಕ ಅಂತೆಯೇ ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ.
ಉಸಿರು ಎಲ್ಲೋ ಕಳೆದು ಹೋಗಿದೆ,ಕಾಣದ ಅವನಂತೆ ಕಣ್ತುಂಬ ನಿದ್ರೆ ಬರದೆ ವರುಷಗಳಾಗಿದೆ,ಅಂದಿನ ದಿಟ್ಟತನ ಅವನೊಟ್ಟಿಗೇ ಮರೆಯಾಗಿದೆ ಮತ್ತೆ ಬಾರದಂತೆ.ಮತ್ತೆ ಮಳೆ ಶುರುವಾಗಿದೆ ಒಂದೇ ಸಮನೆ ಕಾಡುವ ನೆನಪುಗಳಂತೆ.

ಭಾನುವಾರ

ಅನನ್ಯ,ಅನೂಹ್ಯ, ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ....
ಸೋ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೇ ಹಿಮ್ಮೇಳವನು ಸೋಸಿಬಹಾಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತ್ತಿತ್ತು ....

ಮುಂಜಾವು,ಸೋನೆಮಳೆ, ಎಂತಹವರನ್ನೂ ಕಟ್ಟಿ ಹಾಕಿಬಿಡುತ್ತೆ, ಆ ಗಳಿಗೆ, ಕೊನೆಯವರೆಗೂ ಉಳಿಯಬಾರದಿತ್ತ, ಎನ್ನುವ 'ಹ್ಯಾಂಗೋವರ್' ಉಳಿಸಿಬಿಡುತ್ತೆ ಅಲ್ಲವಾ?ಓ ಭಾಸ್ಕರ ಬಂದನಾ?ಇಲ್ಲ; ಮೂಡಣದಲ್ಲಿ ಮಂಗಳಕಾರವಾದ ಕಾಂತಿಯೊಂದು ಹೊಳೆಯುತ್ತಿತ್ತು ಎಂಬುದರ ಮೂಲಕ ಎಂದು ಕವಿ ಪರೋಕ್ಷವಾಗಿ ಹೇಳುತ್ತಾರೆ. ಎಷ್ಟು ಅದ್ಭುತವಾದ ಕಲ್ಪನೆ.....

ಮರೆತೀರಾ, ಇದು ಬಿರುಗಾಳಿಯಲ್ಲ,ಬಿರುಮಳೆಯ ಸನ್ನಿವೇಶವಲ್ಲ . 'ತುಂತುರು' ಮಳೆಯ ಸಮಯ. ತೆಂಗುಗರಿಗಳ ಅಲುಗಾಟ ಸುಳಿಗಾಳಿಯ ಅಸ್ತಿತ್ವಕ್ಕೊಂದು ಆಧಾರ. ವಿಶೇಷವೇನು ಗೊತ್ತಾ, ಹಸಿರು ಚಿಗುರುಹುಲ್ಲಿನ ತುದಿಯಲ್ಲಿ ಕುಳಿತ ಹನಿಗಳು ,ಹೂವ ಎಸಳಿನ ತೆಕ್ಕೆಬಿದ್ದ ಮುತ್ತಿನಂತ ಹನಿಗಳು,ಮನೆಯ ಮಾಡಿನಿಂದ ಲಯಬದ್ಧವಾಗಿ ತೊಟ್ಟಿಕ್ಕುವ ಮಳೆ ನೀರು, ಹನಿ ಹನಿಯಲ್ಲಿಯೂ ಜೀವತುಂಬಿಕೊಂಡಿದೆಯೇನೋ ಎಂಬಷ್ಟು ಅಚ್ಚು ಮೂಡಿಸುತ್ತವೆ.ಜತನವಾಗಿ ಕಾಪಿಡಬೇಕಾದ ಭಾವಗಳ ಅಲೆಯೊಂದನ್ನು ಸೃಷ್ಠಿಸುತ್ತವೆ.

ಕೈಯಲ್ಲೊಂದು ಲೋಟ ಬಿಸಿ ಬಿಸಿಯಾದ ಕಷಾಯ ಹಿಡಿದು ಇವುಗಳ ವೀಕ್ಷಣೆಗೆ ಕುಳಿತರೆ ಕಾಲ ನಿಂತೇ ಹೋದಂತೆ ಭಾಸವಾದೀತಲ್ಲ?ಕ್ಷಣ ಕಳೆದಂತೆ,ಮುಂಜಾವಿನ ಮಳೆಯ ಗತಿ ಲಂಬಿಸುತ್ತಾ ಅಬ್ಬರ ಜೋರಾಗುತ್ತದೆ. ಸುಮ್ಮನೆ ಮಳೆ ಬೀಳ್ವದನ್ನ ನೋಡುತ್ತಾ ಕುಳಿತಿದ್ದರೆ,ಅಲ್ಲೇ ಒಂದು 'ಅನನ್ಯ,ಅನೂಹ್ಯ', ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ.ಜೋರಾಗಿ ಸುರಿವ ಮಳೆಗೊಂದು 'ರಿದಂ' -ತಾಳ,ಲಯ ಗತಿಗಳಿದ್ದಾವ,ಎಂಬ ಅಚ್ಚರಿಯ ಲೋಕದಲ್ಲಿ ನಾವು ತೇಲುವದು ದಿಟ. ಒಂದು ಸಾರೇ ಜೋರಾಗಿ,ಕ್ಷಣದಲ್ಲಿ ಮಂದ್ರಗತಿಗಿಳಿದು, ಜೀರುಂಡೆ,ಕಪ್ಪೆಗಳ ಕೂಗಾಟ, ಅರಚಾಟಗಳ ಮಧ್ಯೆ,ಮತ್ತೆ ತಾರಕಕ್ಕೇರಿ ಸುರಿಯ ತೊಡಗಿದರೆ, ನಿಮ್ಮೂರ ಕೊಳಚೆಯನ್ನಷ್ಟೇ ಅಲ್ಲ,ವಿಶಾಲ ಜಗವನ್ನೇ ಚೊಕ್ಕವಾಗಿಸಿ ಮಟ್ಟಸ ಮಾಡಿಬಿಡುತ್ತೇನೆ, ಎಂಬ ಮಳೆರಾಯನ ನಿರ್ಧಾರ ಮತ್ತೂ ಗಟ್ಟಿಯಾದಂತೆ ತೋರುತ್ತದೆ,ಜೀರುಂಡೆ,ಓಟರ್ಗಪ್ಪೆಗಳ ಅರಚಾಟ ಕ್ಷಣ, ಸಹ್ಯವೆನಿಸುವದಲ್ಲ?

ಹಂ ಹೌದು ಇದೆ ಜೋರು ಮಳೆಯಲ್ಲಿ ತೋಯ್ದು ತೊಪ್ಪೆಯಾದ ದನಕರುಗಳನ್ನ ಆ ದನಗಾಹಿ ಅಟ್ಟಿಸಿಕೊಂಡು ಹೋಗುತ್ತಿದ್ದಾನೆ,ಹಾದಿ ಬದಿಯ ಚಿಗುರನ್ನ ಕತ್ತರಿಸುತ್ತಾ, ಮೆಲಕು ಹಾಕುತ್ತ, ಸಾಗಿಹ ಆ ದನಕರುಗಳನ್ನು ನೋಡುವದೆಷ್ಟು ಚಂದ.! ಆ ಬಿಳಿಯ ಪುಟ್ಟ ಕರು ನೆಗೆಯುತ್ತಿದೆ,ಮಳೆ ಜೋರಾದಂತೆ ಅಮ್ಮನ ಹಿಂದೆ,ಪಕ್ಕದಲ್ಲಿ ಅಂಟಿಕೊಂಡೇ ಸಾಗುತ್ತಿರುವದನ್ನ ನೋಡಿದರೆ, ಪಾಪ! ಅದಕ್ಕೂ ಚಳಿ ಆಗೋಲ್ವಾ,ಎನ್ನುವ ಫೀಲ್ ಹುಟ್ಟಿಸಿ ಬಿಡುತ್ತದಲ್ಲ....?

ಹೊತ್ತು ಏರುತ್ತಿದೆ, ಪಕ್ಕದ ಮನೆಯ ಬಚ್ಚಲ ಮನೆಯಿಂದ,ಕಾರಖಾನೆಯ ಚಿಮಣಿ ಇಂದ ಹೊರಬರುವ ಹೊಗೆಯಂತೆ ಒಂದೇ ಸವನೇ ಹೊಗೆ ಬರುತ್ತಿದೆ.ಸೌದೆ ಒದ್ದೆಯಿರಬೇಕು.ಜೋರು ಮಳೆಗೆ ತಲೆಬಾಗದೆ,ತಲೆ ಎತ್ತಲೂ ಆಗದೆ ಅಲ್ಲೇ ಚೆಲ್ಲಾಪಿಲ್ಲಿ ಆಗುತ್ತಿದೆ.ಅಮ್ಮ ಮಾಡಿದ ಸಾಂಬಾರಿನ ಪರಿಮಳ,ಒಗ್ಗರಣೆಯ ಘಾಟು, ಸಾಸಿವೆಯ ಚಟಪಟ ಸದ್ದನೊಡಗೂಡಿ ಹಾಗೆಯೇ ತೇಲಿಬರುತ್ತಿದೆ.
ರಸ್ತೆಯ ತುದಿಯಲ್ಲಿ ಚಿಣ್ಣರ ದಂಡೇ ಕಾಣುತ್ತಿದೆ.ಓಹೋ ಮಧ್ಯಾನ್ಹದ ಊಟದ ಸಮಯವಾಯಿತಲ್ಲ.ಹೇಯ್! 'ನೀತಿ', ನನ್ನ ಹೊಸ ಚಪ್ಲಿ ನೋಡೇ,ಎಷ್ಟು ಚೆನಾಗಿ ನೀರು ಹಾರುತ್ತೆ,ಎನ್ನುತ್ತಾ ಪೋರನೊಬ್ಬ ಕಾಲಿನಿಂದ ಮಳೆ ನೀರನ್ನು ಬಡಿಯುತ್ತಿದ್ದಾನೆ.ಹಮ್ಮ್,ಕೆಸರು ನೀರು ತಲೆತುಂಬ ವ್ಯಾಪಿಸಿ,ಹಣೆಯ ಮೇಲಿಂದ,ಕಿವಿಯ ಪಕ್ಕದಲ್ಲಿ,ಬಿಳಿಯ ಸಮವಸ್ತ್ರ ದ ಮೇಲೆ,ಕೊನೆಗೆ ಮೈ ಎಲ್ಲ ತೋಯಿಸಿದೆ.ಮಳೆಯಲ್ಲಿ ನೆನೆಯಬೇಡ, ಎಂಬ ಅಮ್ಮನ ಕಿವಿನುಡಿ,ಗಾಳಿಯೊಟ್ಟಿಗೆ ಗಾಳಿಯಾಗಿ ಹಾರಿ ಹೋಗಿದೆ,ಮಳೆಯಂತೆ ನೆಲಕ್ಕೆ ಬಿದ್ದು ರಸ್ತೆಯಗಲ ಚದುರಿ ಹೋಗಿದೆ. ಆದರೂ,ಅಮ್ಮ 'ಬೈದು ಬಿಟ್ಟರೇ', ಎಂಬ ಚಿಕ್ಕ ಭಯ ಜೊತೆಯಲ್ಲಿಯೇ ಇದೆ.

ಪೆಟ್ಟಿಗೆಯಂತ ಕೋಣೆಯಲ್ಲಿ, (ತಗಡಿನ ಮೇಲ್ಚಾವಣಿ ಇದ್ದರೇ ಇನ್ನೂ ಒಳಿತು) ಕೇಳುವ, ಪರ್ವಿನ್ ಸುಲ್ತಾನರ ರಾಗ್ -ಮೇಘಮಲ್ಲಾರ್:ಮೋಡಗಳು ಓಡುತ್ತಿವೆ,ಹಾನ್ ಈಗ ಘರ್ಶಿಸುತ್ತಿವೆ ,ಶುರುವೇ ಆಯಿತು ಜಿಟಿ ಮಳೆ,ಮೊದಲು ಮಂದ್ರ,ನಂತರ ತಾರಸಪ್ತಕಕ್ಕೇರಿ, ತಲೆಯ ಮೇಲೆಯೇ ಮಳೆ ಸುರಿಯುತ್ತಿದೆಯೇನೋ ಎನ್ನುವ ಅನುಭವ ಕಟ್ಟಿಕೊಡುತ್ತದೆ.ಅದರೊಟ್ಟಿಗೆ ಕಾಳಿದಾಸ ಮಹಾಕವಿಯ 'ಮೇಘದೂತ'ವನ್ನ ಓದಲು ಮರೆಯದಿರಿ. ವಿಶಿಷ್ಟ ಕಲ್ಪನೆಯ ಮೇಘದೂತ ಓದುತ್ತಾ, ಓದುತ್ತಾ, ಮೇಘದೊಟ್ಟಿಗೆ ನೀವೂ ಮೇಘವಾಗಿ ಬಿಡುವಿರಿ.

ಹಾನ್, ಮಳೆನಿಂತ ಮೇಲೆ ಬಿದ್ದ ಕೊನೆ ಹನಿ,ಮನೆಯ ಮಾಡಿನಿಂದುರುಳಿ,ಮನೆ ಗೋಡೆಗೆ ಸಾದಿ ಬೆಳೆದ ಪೇರಳೆ ಮರದ ಚಿಗುರಿನ ಮಧ್ಯದಲ್ಲಿ ಸೇರಿ ಮುತ್ತಾಗ್ವ ಬಗೆ,ಎಲೆಯಿಂದ ಎಲೆಗೆ ಜಾರಿ ಕೊನೆಯಲ್ಲಿ ಧರೆ ಸೇರುವ ಬಗೆ, ಟಪ್ ಟಪ್, ಎಂದು ಹನಿ ಹನಿಯಾಗಿ ಬೀಳುವ ನೀರ ಶಬ್ದ ಎಲ್ಲವೂ ಮನದಲ್ಲಿ ದಾಖಲಾಗಿ ಬಿಡುತ್ತದೆ.
ಇವೆಲ್ಲವೂ ನಮ್ಮ ನಿಮ್ಮೆಲ್ಲರನ್ನ ಅತಿ ಅನನ್ಯ,ಅನೂಹ್ಯ ಎನಿಸುವ ಲೋಕದ (ನಾಕದ ) ಖಾಯಂ ನಿವಾಸಿಗಳನ್ನಾಗಿ ಮಾಡಿಬಿಡುತ್ತದೆಯೆಂದರೆ ಅಚ್ಚರಿಯೇನಿಲ್ಲವಲ್ಲ?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...