ವಿಸ್ಮಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಸ್ಮಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ

ಹಲಗೆ ಬಳಪ ಕೈಯಲ್ಲಿ ಹಿಡಿದು...

ಬಹಳ ಹಿಂದಿನ ಕತೆ. ನನಗೆ ಅದರೊಳಗೆ ಏನಿರಬಹುದೆಂಬ ಕೆಟ್ಟ ಕುತೂಹಲ.ಅದರ ಆಕಾರ, ಬಣ್ಣ ನೋಡಿದರೆ ಅದು ಬಹಳ ಹಳೆಯ ಪೆಟ್ಟಿಗೆಯೆಂದು ಸುಲಭವಾಗಿ ಹೇಳಬಹುದಿತ್ತು. ಆಗ ನನಗೆ ಸುಮಾರು ಆರೇಳು ವಯಸ್ಸಿರಬಹುದೇನೋ. ಥೇಟ್ ಮಂಗನಂತೆಯೇ ಇದ್ದನಂತೆ. ಕುಂತಲ್ಲಿ ಕೂಡದ, ಕೈಗೆ ಸಿಕ್ಕಿದ್ದನ್ನು ಸುಮ್ಮನೆ ಬಿಡದ ನಾನು, ಜಗುಲಿಯಿಂದ ಅಂಗಳಕ್ಕೆ ಹಾರುತ್ತಾ, ಅಂಗಳದಿಂದ ಜಗುಲಿಗೆ ನೆಗೆಯುತ್ತಾ, ಕುಂತಲ್ಲೇ ಬಿದ್ದು, ನಿಂತಲ್ಲೇ ಅತ್ತು,ಹಾಗೇ ಒಮ್ಮೆ ನಕ್ಕು, ಅಪ್ಪ ಅಮ್ಮರನ್ನ ಹೈರಾಣ ಮಾಡುತ್ತಿದ್ದನಂತೆ.

ಅಮಿತ, ರಂಜನರೊಟ್ಟಿಗೆ ಜಗಳವಾದಾಗಲೆಲ್ಲ ನನಗೆ, ನನ್ನ ದುಃಖಕ್ಕೆ ಜೊತೆಯಾಗುತ್ತಿದ್ದುದು ಅದೇ ಪೆಟ್ಟಿಗೆ. 'ನನ್ನ ಅಪ್ಪನ ಹತ್ರ ದೊಡ್ಡ ಪೆಟ್ಟಿಗೆ ಇದ್ದು ಒಹೋ'ಎಂದು ಕೋಣೆಗೆ ಹೋಗಿ ಪೆಟ್ಟಿಗೆ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಖಾತರಿ ಪಡಿಸಿ ಕೊಳ್ಳುತ್ತಿದ್ದೆ. ಬಹುಷಃ ನನಗೆ ಗೊತ್ತಿದ್ದ ಪುಟ್ಟ ಲೋಕಕ್ಕೆ ಆ ಪೆಟ್ಟಿಗೆ ಬಹಳ ದೊಡ್ಡದಾಗಿ ಕಂಡಿರಬೇಕು.

ಅಪ್ಪ ಎಂದೂ ಪೆಟ್ಟಿಗೆಯನ್ನ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಎಲ್ಲೋ ಒಮ್ಮೆ ಅತ್ತಾಗ, ಸುಮ್ಮನೆ ಹಟ ಮಾಡಿದಾಗ, ಆಗೊಂದು ಈಗೊಂದು ಎಂದು ಬಣ್ಣದ ಪೆನ್ಸಿಲ್ ಗಳು ಹೊರಗೆ ಬರುತ್ತಿದ್ದುದ ನೋಡಿ, ಅಪ್ಪ ಹೇಳುತ್ತಿದ್ದ ಕತೆಯಲ್ಲಿ ಬರುವ 'ಮಾಯ ಪೆಟ್ಟಿಗೆ'ಯೇ ಇರಬಹುದು ಎಂದೆಲ್ಲ ಅನಿಸಿತ್ತು. ಆದರೂ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನ ನೋಡಿಯೇ ಬಿಡಬೇಕೆಂಬ ಆಸೆ ಬಹಳ ಇತ್ತು.

ದೊಡ್ಡವಳಾಗುತ್ತ ಬಂದ ಹಾಗೆ, ಆ ಪೆಟ್ಟಿಗೆ ವಿಸ್ಮಯವಾಗಿ ಕಾಡಿದ್ದು ನಿಜ. ಒಂದು ದಿನ ಅಪ್ಪ ಮನೆಯಲ್ಲಿಲ್ಲದಾಗ ಪೆಟ್ಟಿಗೆ ತೆರೆಯುವ ವ್ಯರ್ಥ ಪ್ರಯತ್ನ ಮಾಡಿದಾಗಲೇ ಸಿಕ್ಕಿದ್ದು 'ಮಲ್ಲಿಗೆ'. ನಾ ನೋಡಿದ ಮೊದಲ ಪತ್ರಿಕೆ 'ಮಲ್ಲಿಗೆ', ಅದರ ನಂತರ, ನಮ್ಮ ಮನೆಗೆ ಬರುತ್ತಿದ್ದುದು 'ಸುಧಾ' ವಾರಪತ್ರಿಕೆ. ಜಗತ್ತೇ ನನ್ನ ಕೈಲಿದ್ದಂತೆ ಸಂಭ್ರಮಿಸುತ್ತಿದ್ದೆ. ನಾನು ಮೂರನೇ ತರಗತಿಯಲ್ಲಿದ್ದಾಗ ಬರುತ್ತಿದ್ದಾಗಿನ ಪತ್ರಿಕೆಯನ್ನ ಇನ್ನೂ ಓದುತ್ತಿದ್ದೇನೆ. ಅದರೆ ಈಗೀಗ ಯಾಕೋ ಕುಶಿ ಕೊಡುತ್ತಿಲ್ಲಾ, ಬಹುಷಃ ನಾನು ನೋಡುತ್ತಿರುವ ಜಗತ್ತಿಗೆ ಅದು ಸಾಕಾಗುತ್ತಿಲ್ಲ ಅನಿಸುತ್ತದೆ. ಆದರೂ 'ಸುಧಾ' ಪತ್ರಿಕೆ ನನ್ನ ಮನಸ್ಸಿಗೆ ತೀರ ಹತ್ತಿರದ್ದು. ಪತ್ರಿಕೆಯ ಹಿರಿಯರಾದ ಅಂತರಾಮು ಅವರ ನೆನಪಿದೆ.

ಬಹುಷಃ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದಿದೆ. ಭಾಸ್ಕರ್ ಮಾಮನ ಪುಸ್ತಕದ ಅಂಗಡಿಯಿಂದ ನನಗೆ ಓದಲಿಕ್ಕಾಗಿಯೇ ಎಲ್ಲ ದಿನಪತ್ರಿಕೆಗಳೂ, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಿಗುತ್ತಿತ್ತು. ಓದಿ ಮತ್ತೆ ಅಂಗಡಿಗೆ ಕಳುಹಿಸುತ್ತಿದ್ದೆ, ಆ ಪುಸ್ತಕ ಅಂಗಡಿಯಿಂದಾಗಿ ಕನ್ನಡದ ಎಲ್ಲ ಪತ್ರಿಕೆಗಳನ್ನು ಪ್ರತಿ ದಿನವೂ ಓದುವ ಭಾಗ್ಯ ನನ್ನದಾಗಿತ್ತು. ಹಾಗೆ ಓದುತ್ತಿದ್ದಾಗ ನನ್ನ ಮನಸ್ಸಿಗೆ ಯಾವುದೇ 'Prejudice' (ಪೂರ್ವಗ್ರಹ) ಇರಲಿಲ್ಲ. ಲೇಖಕ ಯಾರೆಂಬುದು ನನಗೆ ಮುಖ್ಯವಾಗಿರಲೇ ಇಲ್ಲ, ಯಾಕೆ ಓದಬೇಕೆನ್ನುವ ಪ್ರಶ್ನೆ ಯಾವತ್ತೂ ಕಾಡಿರಲೇ ಇಲ್ಲಾ. ಸತತ ಹದಿಮೂರು ವರುಷ ಹಾಗೆಯೇ ಓದಿದೆ.

ಇನ್ನು, ಶಾಲೆಯಲ್ಲಿ ಪುಸ್ತಕ ಓದುವ ಹುಚ್ಚಿರುವ ಕೆಲವು ಸ್ನೇಹಿತರಿದ್ದರು, ಕೆಲವೊಮ್ಮೆ ಅವರಿಗಿಂತ ಮುಂಚೆ ಓದಿರಬೇಕೆನ್ನುವ ಮನೋಭಾವವು ಮತ್ತೂ ಓದಲ್ಲಿಕ್ಕೆ ಹಚ್ಚಿದ್ದು ದಿಟ. ಹೈ ಸ್ಕೂಲ್ & ಕಾಲೇಜುಗಳ ಗ್ರಂಥಾಲಯದಲ್ಲಿನ ಯಾರೂ ಓದದೆ ಇದ್ದ, ಒಮ್ಮೆಯೂ ಯಾರ ಹೆಸರನ್ನೂ ತನ್ನ ಬೆನ್ನಮೇಲೆ ಬರೆಯಿಸಿ ಕೊಳ್ಳದ ಪುಸ್ತಕಗಳಿಗೆಲ್ಲ ನನ್ನ ಮತ್ತು ನನ್ನ ಕೆಲವು ಸ್ನೇಹಿತೆಯರ ಹೆಸರಿದೆ.

ಅಪ್ಪ ಎಂದೂ ನನಗೆ ಪುಸ್ತಕ ಓದೆಂದು ಹೇಳಿರಲಿಲ್ಲ.ಮತ್ತೂ ಇಂದಿಗೂ ನಾ ಆ ದೊಡ್ಡ ಪೆಟ್ಟಿಗೆಯ ಬಾಗಿಲು ಪೂರ್ತಿ ತೆರೆದು ನೋಡಿಲ್ಲ. ಅಪ್ಪ ನನ್ನನ್ನು ಓದಲು ಹಚ್ಚಿದ ರೀತಿಯೇ ಅಂತದ್ದು. ಮನೆಗೆ ಬರುವಾಗ ಚೀಲದಲ್ಲಿ ತರುತ್ತಿದ್ದ ಪುಸ್ತಕಗಳು ಅವಾಗಿಯೇ ತಮ್ಮತ್ತ ಸೆಳೆದುಕೊಂಡಿದ್ದವು. ನನ್ನ ಪುಟ್ಟ ಟೇಬಲ್ಲಿನ ಮೇಲೆ ಬಣ್ಣದ ಪುಸ್ತಕಗಳು , ಮತ್ತು ಮನೆಗೆ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ಓದುತ್ತ ಕುಳಿತ್ತಿರುತ್ತಿದ್ದ ಭಂಗಿ ಬಹುಷಃ ನನ್ನ ಸೆಳೆದಿರಬೇಕು. ದಿನಕಳೆದಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದೇ ಬೈಠಕ್ ನಲ್ಲಿ ಓದುವದು ಅಪ್ಪನಂತಾಗಬೇಕೆನ್ನುವ ನನ್ನ ಜೀವನದ ಭಾಗವಾಯಿತೆನ್ನಿ. ಅಲ್ಲದೇ ಸ್ನೇಹಿತರ ಮುಂದೆ ಜಂಭ ಕೊಚ್ಚಿಕೊಳ್ಳುವದಕ್ಕು ಸಹಾಯವಾಯಿತು. ಜನಮಾಧ್ಯಮ ಪತ್ರಿಕೆಯ ಬೆನ್ನೆಲುಬಾಗಿದ್ದ ಜಯರಾಮ್ ಹೆಗಡೆಯವರು ಕನ್ನಡದಲ್ಲಿದ್ದ ಕುರಾನ್ ಪುಸ್ತಕವನ್ನು ಕಳುಹಿಸಿದ್ದರು. ಅಪ್ಪನೊಟ್ಟಿಗೆ ಅದನ್ನೂ ಓದಿದೆ.

ನಮ್ಮ ಕಾಲೇಜಿನಲ್ಲಿ, 'ಓದು ಕಮ್ಮಟ' ಎಂಬ ತರಬೇತಿಯನ್ನ ಏರ್ಪಡಿಸಿದ್ದರು. ಘಟಾನುಘಟಿಗಳೆಲ್ಲ ಸೇರಿದ್ದರು. ಕಾರ್ಯಕ್ರಮ ಉದ್ಘಾಟಿಸಿದವರ ಮಾತೊಂದನ್ನು ಬಿಟ್ಟು ಮತ್ತೆಲ್ಲವು ಬೆಳಗಿಂದ ಸಂಜೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು, ನಮಗಿರುವ ಓದುವ ಹುಚ್ಚನ್ನು ಬಿಡಿಸಿಯೇ ಬಿಡುತ್ತಾರೆಂದು ನಾನು ಮತ್ತು ಸ್ನೇಹಿತೆ ಪಲ್ಲವಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದೆವು.

ಓದುವದೆಲ್ಲ, ಹೀಗೆಯೇ ಓದಬೇಕೆಂದರದು ಹೇಗೆ ಸಾಧ್ಯಾ? ಅವೆಲ್ಲ ಸ್ವಂತಕ್ಕೆ ಬಿಟ್ಟಿದ್ದು, ಓದುವದು, ಬರೆಯುವದು ಎಲ್ಲ ಬಹಳ ವಯಕ್ತಿಕವಾದದ್ದು ಕೂಡ. ಹೀಗೆಯೇ ಓದು, ಹೀಗೆಯೇ ಬರೆ, ಎಂದರೆ ಅದು ವೈವಿಧ್ಯತೆ ಕಳೆದುಕೊಳ್ಳುತ್ತದೆ ಎಂಬುದಾಗಿತ್ತು ನಮ್ಮ ಅಭಿಪ್ರಾಯ. ನಾವೇನು ಇವರನ್ನು ಹೇಗೆ ಓದಬೇಕೆಂಬುದನ್ನು ಕೇಳಿದ್ದೆವ ಎಂಬ ಉದ್ಧಟತನವೂ ನಮ್ಮಲ್ಲಿತ್ತು.

ಅದರೆ ಅಂದು ಪರಿಚಯವಾದ ಮಾನ್ಯರು ಇಂದಿಗೂ ಓದಲಿಕ್ಕೆ ಸ್ಪೂರ್ತಿಯಾಗಿದ್ದಾರೆ. ಇವರೇನು ಗುರುತದವರಾ? ನಮ್ಮ ನೋಡಿದ ಕೂಡಲೇ ನಗೆಯಾಡಿದರಲ್ಲ ಎಂದು ನಾನು,ಪಲ್ಲವಿ ಅಂದುಕೊಂಡ ಹಿರಿಯ ಸಾಹಿತಿಗಳು, ಇಂದಿಗೂ ಗುರುತಿಟ್ಟು ಸಿಕ್ಕಿದಾಗಲೆಲ್ಲ ಪಕ್ಕದಮನೆಯವರಂತೆ ಮಾತಾಡುತ್ತಾರೆ. ತುದಿಯಲ್ಲಿ ಮತ್ತೆಲ್ಲ ಆರಾಮ್ ಅಲ್ದಾ, ಮಗಳ ಕರ್ಕಂಡು ಬರಲಿಕ್ಕೆ ಹೋಗಬೇಕು ಅನ್ನುತ್ತ ಕಾರ್ ಹತ್ತಿ ಕೈ ಆಡಿಸುತ್ತಾ ನಡೆದುಬಿಡುತ್ತಾರೆ.

ಅಂದಿಗೆ ಹೋಲಿಸಿದರೆ ನನ್ನ ಓದಿನ ಓಘ ಕಡಿಮೆ ಆಗಿದೆ.ಅದರೂ ಘಮ ಕಡಿಮೆಯಾಗಿಲ್ಲ ಬಿಡಿ. ಜೋಗಿಯವರ ಪುಸ್ತಕ ‘ಹಲಗೆ ಬಳಪ’ ಕೈಯಲ್ಲಿ ಹಿಡಿದು ಇಷ್ಟೆಲ್ಲ ನೆನಪಾಯಿತು. ಪುಸ್ತಕ ಇನ್ನು ಓದಿ ಮುಗಿದಿಲ್ಲ.
(ಅಂದಹಾಗೆ, ಇದ್ಯಾವುದು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೆ ಬರೆದುದಲ್ಲ,ನನಗೆ ಇವತ್ತು ದಕ್ಕಿದ್ದು ಇಷ್ಟು.)

ಗುರುವಾರ

ಮೂಡಿಗೆರೆಯ ವಿಸ್ಮಯ!

ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದು ಕಾಫಿ ಬೀಜಗಳನ್ನು ಮಾರಿ ಇಲ್ಲಿಂದ ಹಳೆಯ ಪೇಪರ್ ಗಳನ್ನು ಒಟ್ಟುಗೂಡಿಸಿ ಒಯ್ಯುತ್ತಿದ್ದ.ಸುತ್ತಲಿನ ಮನೆಗಳಿಗೆಲ್ಲ ಹೋಗುವ ಮುಂಚೆ ಬರುತ್ತಿದ್ದುದೇ ನಮ್ಮಮನೆಗೆ.

ನನಗೆ ಆತನ ನೆನಪಾದಾಗಲೆಲ್ಲ ರವೀಂದ್ರರ 'ಕಾಬೂಲಿವಾಲ' ನೆನಪಿಗೆ ಬರುತ್ತಾನೆ .ನಮ್ಮ ಮನೆಯ ಮಕ್ಕಳೆಲ್ಲ ಸಾಬಣ್ಣ ಬರುತ್ತಾನೆ ಅಂದ್ರೆ ಸಾಕು ಅಂದು ಆಟ ಪಾಟಗಳೆಲ್ಲ ಬಂದು .ಆತ ಬರುತ್ತಿದ್ದುದೇ ವರ್ಷಕ್ಕೆರಡು ಸಾರೆ. ಬಂದೆ ಇಲ್ವಲ್ಲೋ ಸಾಬಣ್ಣ ಅಂದರೆ 'ಹಾದಿ ಕರ್ಚು ಹುಟ್ಟಬೇಕಲ್ಲ ಕೂಸೇ 'ಎಂದು ಸುಮ್ಮನಾಗುತ್ತಿದ್ದ..ಆತ ನಮಗೆ ಹೇಳುತ್ತಿದ್ದುದೆಲ್ಲ ಪೂರ್ಣ ಚಂದ್ರ ತೇಜಸ್ವಿಯವರ ಕತೆಗಳು.ಆತ ಅವರ ತೋಟಕ್ಕೆ ಕಾಫಿ ಬೀಜಕ್ಕಾಗಿ ಹೋಗುತ್ತಿದ್ದ .
ಮೀನು ಹಿಡಿಯುತ್ತ ಕೂತಿರುತ್ತಿದ್ದ ತೇಜಸ್ವಿ,ಹಾರುವ ಹಕ್ಕಿಗಾಗಿ ತಾಸುಗಟ್ಟಲೆ ಕುಳಿತು ಕಾದು ಪೋಟೋ ತೆಗೆಯುತ್ತಿದ್ದ ತೇಜಸ್ವಿ ,ನಮ್ಮ ಮನೆಯ ಮಕ್ಕಳಿಗೆಲ್ಲ ತೇಜಸ್ವಿ ಬಹು ಪರಿಚಿತರು .ಚಿರತೆ ಎಂದರೆ ಜಿಮ್ ಕಾರ್ಬೆಟ್ ,ಮಚಾನು , ಚಂದ್ರ ,ನಡೆಯುತ್ತಿದ್ದರೆ ನಿಮ್ಮನ್ನು ಹುದುಗಿಸಿಕೊಳ್ಳುವ ಮಾಯಾ ಮರಳು ,ಹಾರುವ ತಟ್ಟೆಗಳು ...,ಒಟ್ಟಾರೆ ಜಗತ್ತನ್ನು ನಾವು ನೋಡಿದ್ದೇ ತೇಜಸ್ವಿಯವರ ಕಣ್ಣುಗಳ ಮೂಲಕ. ಸಾಬಣ್ಣ ಹೇಳುತ್ತಿದ್ದ ಕತೆಗಳಲ್ಲಿನ ಕೈಗೆಲ್ಲ ಕಪ್ಪು ತಾಗಿಸಿಕೊಳ್ಳುತ್ತ ಮಿಕ್ಸರ್ ,ಗಾಡಿ ಗಳ ರೆಪೇರಿ ಮಾಡುತ್ತಿದ್ದ ,ಕಂಪ್ಯೂಟರ್ ಮುಂದೆ ಕುಳಿತು ಕನ್ನಡ ಸಾಫ್ಟವೇರ್ ಬಗ್ಗೆ ಹೋರಾಡುತ್ತಿದ್ದತೇಜಸ್ವಿ ,ಕಾಫಿ ಬೆಳೆಗಾರರಿಗಾಗಿ ಧ್ವನಿಯೆತ್ತಿದ್ದ ತೇಜಸ್ವಿ .....ಅವರ ಪ್ರೀತಿಯ ಕಾಫಿ ತೋಟ ,ನಾಯಿ ಎಲ್ಲ ಕತೆಗಳನ್ನ ನಮಗೆ ಸಾಬಣ್ಣ ಹೇಳುತ್ತಿದ್ದ. ಈ ಎಲ್ಲವುಗಳಿಂದ ತೇಜಸ್ವಿ ಒಂದು ವ್ಯಕ್ತಿಯಸ್ಟೇ ಆಗಿರದೇ ಶಕ್ತಿಯಾಗಿ ಕಂಡಿದ್ದರು .ವ್ಯಕ್ತಿ ಶಕ್ತಿ ಆಗುವದು ನಿಜಜೀವನದಲ್ಲಿ ಬಹು ಕಠಿಣ .

ಇಂದಿನ ಹಾಗೆ ಏಪ್ರಿಲ್ ತಿಂಗಳು .ನನ್ನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ...ನ್ಯೂಸ್ ನೋಡುತ್ತಿದ್ದ ಅಪ್ಪ ಬಂದು ತೇಜಸ್ವಿಯವರು ಮರಣಿಸಿದ ವಾರ್ತೆ ತಿಳಿಸಿದಾಗ ..ಓಹ್ ಇದು ಸುಳ್ಳಾಗಬಾರದೆ ಎಂದು ಮರುಗಿದ್ದೆ .Attachment With Dettachment ಎಂಬ ನಂಬಿಕೆಯಿಟ್ಟು ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನಗೆ ತೇಜಸ್ವಿಯವರನ್ನು ಮರೆಯಾದ ಸುದ್ದಿ ಬಹಳ ದುಃಖ ತಂದಿತ್ತು.

ಸತ್ಯ ಒಪ್ಪಿಕೊಳ್ಳ ಬೇಕಿತ್ತು ಮತ್ತು ಜೀವನ ಸಾಗಿತ್ತು .

ಆ ವಿಸ್ಮಯ ವಿಶ್ವ ,ಕಾಡುಗಳು ,ಕಾಡುತ್ತಿದ್ದವು ...ಕೃಷ್ಣೆ ಗೌಡನ ಆನೆ ,ಮಂದಣ್ಣ ನೆನಪಾಗಿದ್ದರು ,ಮಚಾನು ಹತ್ತಿ ಚಿರತೆಗಾಗಿ ಕಾಯಬೇಕು ಅನ್ನಿಸುತ್ತಿತ್ತು ,ಬಿಸಿಲುಗಾಲದಲ್ಲಿ ಪಕ್ಕದಲ್ಲೇ ಹಾರುವ ತಟ್ಟೆ ಕಂಡಹಾಗೆ ಆಗುತ್ತಿತ್ತು ...ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ ಜೀವನದ ಕೆಲವು ಗಳಿಗೆಗಳನ್ನು ಕಾಡಿನಲ್ಲಿ ಮನೆಮಾಡಿ ಅಲ್ಲೊಂದು ಕೊಳ ಕಟ್ಟಿ ಗಾಳ ಹಾಕುತ್ತ ಮೀನು ಹಿಡಿಯುತ್ತ ಕುಳಿತಿರಬೇಕು ಎಂದು .....ಹುಚ್ಚಾ ..!ಸಮಸ್ಯೆ ಇಲ್ಲದಲ್ಲಿ ಸಮಸ್ಯೆ ಹುಟ್ಟುಹಾಕಿ ಅದನ್ನು solve ಮಾಡುವ ಹುಚ್ಚೆ ನಿಂಗೆ ಎಂದು ಸ್ನೇಹಿತರೊಬ್ಬರು ಅಣಕಿಸಿದ್ದರು....ನಾನೂ ನನ್ನ ಸ್ನೇಹಿತೆ ಸೇರಿ ರೈಟೆಯ ಎಂಬ ಕೃತಿಯನ್ನು ಚಲನ ಚಿತ್ರವಾಗಿಸಬೇಕೆಂದು ಮಾತಾಡಿಕೊಂಡಿದ್ದೆವು . ಪಂಪ ಪ್ರಶಸ್ತಿ ಬಂದಾಗ ಹತ್ತಿರದ ಬನವಾಸಿಗೆ ಬರುವರಲ್ಲ ಎಂದು ಅಲ್ಲಿಗೆ ಹೋದರೆ ತಗೆದುಕೊಳ್ಳಲು ಬರಲೇ ಇಲ್ಲ...ನೇರ ನುಡಿಯ ನಿಗೂಢ ಮನುಷ್ಯ ನಮ್ಮ ಮೆಚ್ಚಿನ ತೇಜಸ್ವಿ .

ಹತ್ತಿರದ ಮರ್ಕಡಕ್ಕೋ,ಕಾರ್ಕಳಕ್ಕೋ ಹೋದಾಗ ,ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನೆನಪಾಗುತ್ತಿತ್ತು ,ತೇಜಸ್ವಿ ನೆನಪಪಾಗುತ್ತಿದ್ದರು ..ತಟ್ಟನೆ ಅವರಿಲ್ಲವಲ್ಲ ಎಂದು ನೆನಪಾಗುತ್ತಿತ್ತು ....ನದಿಮೂಲ ಹುಡುಕ ಹೊರಟ ಮಾಯಾಲೋಕ ,ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ,ಓತಿಕ್ಯಾತ ದ ಹಿಂದೆ ಬಿದ್ದೆ ಕರ್ವಾಲೋ, ಮಿಲೆನಿಯಮ್ ಸಿರೀಸ್ ,ಅಣ್ಣನ ನೆನಪು ,ಪರಿಸರದ ಕತೆಗಳು ,ಹುಲಿಯೂರಿನ ಸರಹದ್ದು ,ಅಬಚೂರಿನ ಪೋಸ್ಟ್ ಆಫೀಸು ,ತಬರನ ಕತೆ ,ಕಾಡಿನ ಕತೆಗಳು ,ಗುಡುಗು ಹೇಳಿದ್ದೇನು,ರಹಸ್ಯ ವಿಶ್ವ,ನಿಗೂಢ ಮನುಷ್ಯರು ಸ್ವರೂಪ ....ಓದುತ್ತ ಓದುತ್ತ ಚಿರತೆ ಕೂಗಿದ ಹಾಗೆ ಆಗುತ್ತಿತ್ತು,ಗಯ್ಯಾಳಿಗಳು ಅಟ್ಟಿಸಿಕೊಂಡು ಬಂದ ಹಾಗೆ ಅನ್ನಿಸುತ್ತಿತ್ತು ,ಮೇಲೆ ನಡೆದರೆ ತನ್ನೊಳಗೆ ಹುದುಗಿಸಿಕೊಳ್ಳುವ ಮಾಯಾ ಮರಳಲ್ಲಿ ನಡೆದ ಹಾಗೆ ,ಮಲೆನಾಡಿನ ಅಪ್ಪಟ ಮಳೆಗಾಲದಲ್ಲಿ ಕಿಟಕಿಯ ಮುಂದೆ ಕುಳಿತು ಹಪ್ಪಳ ತಿನ್ನುತ್ತ ಕುಳಿತರೆ ವಿಶ್ವವೇ ನಿಗೂಢ ವಾಗಿ ,ನಾನೂ ನಿಗೂಢತೆಯ ಭಾಗವಾದಂತೆ ತೋರುತ್ತಿತ್ತು ....ತಿರುಗಿದಾಗ ತೇಜಸ್ವಿಯವರು ಪಕ್ಕದಲ್ಲೇ ಬಂದು ನಿಂತಂತೆ ಭಾಸವಾಗುತ್ತಿತ್ತು ,,ಆದರೆ ಅದು ಬರಿದೇ ಕೋಲ್ ಮಿಂಚು ..ಮಿಂಚುಳ್ಳಿಯಲ್ಲ ಎಂದರಿವಿಗೆ ಬಂದಾಗ ತುಸು ಸಂಕಟ ....

ಮೊನ್ನೆ ಏಪ್ರಿಲ್ ೫ ಕ್ಕೆ ಅವರಿಲ್ಲವಾಗಿ ವರ್ಷಗಳೆರಡು ಕಳೆಯುತ್ತಿದೆ ....ಅಂದೇ ಬರೆಯಬೇಕೆಂದು ಕೊಂಡಿದ್ದೆ ಆದರೆ ಕೆಲಸದ ಒತ್ತಡ ದಿಂದಾಗಿ ಬರೆಯಲಿಕ್ಕಾಗಲಿಲ್ಲ.. ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ ..ನನಗೆ ಗೊತ್ತು ಇಂದು ನನ್ನ ಕೆಲಸ ಹಿಂದೆ ಬೀಳುತ್ತದೆ ಎಂದು.ಆದರೆ ನಾನು ಇಸ್ಟು ಮುಂದೆ ಬರಲು ಕಾರಣರದವರಿಗಾಗಿ ಇಸ್ಟೂ ಮಾಡಲಾರೆನೆ???

ನನ್ನ ಒಂದು ನುಡಿ ನಮನ...............
ಇತ್ತೀಚಿಗೆ ಕಾಫೀ ಸಾಬಣ್ಣನೂ ಬರುತ್ತಿಲ್ಲ ,ವಯಸ್ಸಾಯಿತಲ್ಲ ..ಪರಾವಲಂಭಿ ಆಗಿದ್ದಾನಂತೆ.....ನಾವು ಮಕ್ಕಳೆಲ್ಲ ರೆಕ್ಕೆ ಕಟ್ಟಿಕೊಂಡು ಗೂಡಿನಿಂದ ಹಾರಿ ಬಂದಿದ್ದೇವೆ .... ಜೀವನ ಸಾಗುತ್ತಲಿದೆ .....

ತೇಜಸ್ವಿಯವರ ಪತ್ನಿ ರಾಜೇಶ್ವರಿ ಕೆಂಡಸಂಪಿಗೆ ಯಲ್ಲಿ ತಮ್ಮ ನೆನಪುಗಳನ್ನು ತುಂಬ ಚೆನ್ನಾಗಿ ಹಂಚಿಕೊಂಡಿದ್ದಾರೆ ....


ಸ್ನೇಹಿತರೆ,



ಇದು ನನ್ನ ಮೆಚ್ಚಿನ ಹಳೆಯದೊಂದು ಬ್ಲೋಗ್ ..ಬಹಳ ದಿನಗಳ ಹಿಂದೆ ಬರೆದಿದ್ದೆ ,ಹಲವಾರು ಕಾರಣಗಳಿಂದ ನನ್ನ ನೆನಪಲಿ ಬಹಳ ದಿನ ಉಳಿದಿದೆ ಈ ಲೇಖನ ...ಯಾಕೋ ಮತ್ತೆ ಹೊಸ ಬ್ಲೋಗ್ ಮನೆಯಲ್ಲಿ ಹಾಕಬೇಕು ಅನ್ನಿಸಿತು ,ಮತ್ತೆ ಈ ಬ್ಲೋಗಿನಲ್ಲಿ ಮಾರ್ಪಡಿಸದೆಯೇ ಹಾಕಿದ್ದೇನೆ.........ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ ........

ಶುಕ್ರವಾರ

ಜಸ್ಟ್  ಮಾತ್  ಮಾತಲ್ಲಿ........



ನಿನ್ನೆ ಸಂಜೆ ತುಂಬಾ ತುಂಬಾ ಚೆನ್ನಾಗಿತ್ತು. ರವಿ ಬೆಳಗೆರೆ,ಕನ್ನಡದ ಸುದೀಪ್ ,ಜಸ್ಟ್ ಮಾತ್ ಮಾತಲ್ಲಿ..ಎಂದು ಹಾಡುವ ರಘು ದೀಕ್ಷಿತ್, ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಲು ಬಂದ 'ಎವರ್ ಗ್ರೀನ್' ಅಪರ್ಣಾ..!ಎಲ್ಲ ನಮ್ಮ ಕಂಪನೀ ಯ ಆವರಣದಲ್ಲಿ ...!

ಕಾರಣ??
 ಐ ಟಿ ಆವರಣದಲ್ಲಿ ರವೀ ,ಸುದೀಪ್,ರಘು...
ನಮ್ಮಲ್ಲೂ ಕತೆ ,ಕವನ ಬರೆಯುವ ವರಿದ್ದಾರೆ ,ಒಳ್ಳೆಯ ಲೇಖಕರಿದ್ದಾರೆ ...ವೃತ್ತಿ ಬೇರೆ ಪ್ರವೃತ್ತಿ ಬೇರೆ ಅಷ್ಟೇ....
ವಿಸ್ಮಯ ಎನ್ನುವ ಕನ್ನಡ ಹಬ್ಬ ನಮ್ಮ ಕ್ಯಾಂಪಸ್ ನಲ್ಲಿ...

ನಿಜ ಹೇಳಲೇ ಬೇಕು ಎಂದರೆ ಹೇಳುತ್ತೇನೆ ಕೇಳಿ

ನಾನು ರವಿ ಯ ಓ ಮನಸೇಯಿಂದ (ನನ್ನ ಮೊದಲ ಉದ್ದನೆಯ ಲೇಖನ ಪ್ರಕಟ ವಾಗಿದ್ದು ಓ ಮನಸೇ ನಲ್ಲಿ !) ಆಗಾಗ ಒಳ್ಳೆಯ ಲೇಖನ ಗಳನ್ನ ಹೆಕ್ಕಿ ತೆಗೆದು ಓದುತ್ತಿದ್ದೆ.  ಆದರೆ ಬಹಳ ವರುಷಗಳಿಂದ ನನ್ನ ಪ್ರೀತಿಯ 'ಸುಧಾ' ಗೆ ಆತು ಕೊಂಡು ಬಿಟ್ಟಿದ್ದೆ. ಯಾಕೋ ಗೊತ್ತಿಲ್ಲ ಇಂದಿಗೂ ಬಿಟ್ಟಿಲ್ಲ.
ಮಯೂರ ,ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್ ,ಸುಧಾ ,ವರ್ಷಕ್ಕೊಂದೆ ಬರುತ್ತಿದ್ದ ವಿಶೇಷ ಸಂಚಿಕೆ ಇವೆಲ್ಲ ನನ್ನ ಕನ್ನಡ್ಕ್ಕೊಂದು ಕ್ಲ್ಯಾಸಿಕ್ ಟಚ್ ಕೊಡುವಲ್ಲಿ ತುಂಬಾ ಸಹಾಯ  ಮಾಡಿದ್ದವು..ಬಂಡ್ಲ್ ಗಟ್ಟಲೆ ಸಣ್ಣ ಕತೆಗಳನ್ನ, ಬೇರೆ ಬೇರೆ ದೇಶದ ಕತೆಗಳನ್ನ ಟಾಲ್ ಸ್ಟಾಯ್ ನಂತಹ ಮಹಾನ್ ಲೇಖಕನ Anna Kerenina,'ವಾರ್ n ಪೀಸ್' ಕೃತಿಗಳನ್ನ ,'Just Lather That's All 'ಕತೆ  ಓದಿದ್ದು ಮಯೂರ ದಲ್ಲಿ .(ಮಯೂರ ದಲ್ಲಿ ಬರುತ್ತಿದ್ದ ಕ್ಲಾಸಿಕ್ ಶೈಲಿಯ ಸಣ್ಣ ಕತೆಗಳ ಅಭಿಮಾನಿ ನಾನು) ..,ಅಮೃತ ಪ್ರೀತಂ ರಂತ ಲೇಖಕಿಯರ ( ಲೇಖಕರ) ನಿವೇದನೆಗಳನ್ನ.,ರಾಮಾಯಣ,ಮಹಾಭಾರತ, ದಂತಹವನ್ನ 'B K S ವರ್ಮ' ರ ಚಿತ್ರಗಳ ಸಮೇತ ಧಾರಾವಾಹಿಯಾಗಿ ಬಂದಿದ್ದನ್ನ ಓದಿದ್ದೆ..ನನ್ನ ಕಣ್ಮುಂದೆಯೇ ಮಹಾಭಾರತ ನಡೆಯುತ್ತಿದೆಯೇನೋ ,ನನ್ನ ಕಣ್ಮುಂದೆಯೇ ಸೀತೆಯ ಅಪಹರಣನಡೆಯಿತೇನೋ ಎನ್ನುವ ಮಟ್ಟಿಗೆ ಆ ಧಾರಾವಾಹಿಗಳು ನಮ್ಮ ಮಹಾನ್ ಕೃತಿಗಳ ದರ್ಶನ ಮಾಡಿಸಿದ್ದವು ..ಕೃಷ್ಣನ ಗೀತೋಪದೇಶ ನನ್ನ ಕಣ್ಮುಂದೆ ಇಂದಿಗೂ ಇದೆ...

  ಬನ್ನoಜೆ ಗೋವಿಂದಾಚಾರ್ಯ, ಕೃಷ್ಣ ಶಾಸ್ತ್ರಿ, ಜೊತೆಯಲ್ಲಿ ವಂಶೀ, ತುಶ್ವಿನು ,ನನ್ನ ಪಕ್ಕದ ಊರು ಸಾಗರದ ನಾಡಿಸೋಜ, ಮುಂತಾದವರೆಲ್ಲ ಜಗತ್ತು ನೋಡಲು ಶುರು ಮಾಡಿದ್ದ ನನಗೆ ಸಾತ್ ಕೊಟ್ಟಿದ್ದವು ..ನಾಡಿಸೋಜ ರಿಂದ (ಈಗರ್ಜಿಯ ಸುತ್ತಲಿನ ಹತ್ತು ಮನೆಗಳು etc) Christian ರ ಸಮಾಜದ ಆಗು ಹೋಗುಗಳ ಬಗ್ಗೆ , ಡ್ಯಾಮ್ ಕಟ್ಟಿ ಮುಳುಗಿಸಿದಾಗ ಅಲ್ಲಿನ ಜನರಿಗೆ ಬಂದೆರಗಿದ್ದ ಆಪತ್ತು ಗಳು ,ಅವರ ಜೀವದ ತುಮುಲಗಳು, ಮುಳುಗಡೆಯ ಭೀತಿ ,ಶರಾವತಿ ಹಿನ್ನೀರಿನ ಜನರ ಪಾಡು,ಕ್ಷಣ ಕ್ಷಣಕ್ಕೂ ಬದಲಾಗುವ ಅಲ್ಲಿನ ಜನರ ಕಾರ್ಪಣ್ಯಗಳು  ಇವೆಲ್ಲವನ್ನ  ಅರುಂಧತಿ ರಾಯ್ ರ 'ಗ್ರೇಟರ್ ಕಾಮನ್ ಗುಡ್ '  ಗಿಂತಲೂ ಚೆನ್ನಾಗಿ ಅರ್ಥ ಮಾಡಿಸಿದ್ದು ನಾಡಿಸೋಜ  .........ನನಗೆ ದಕ್ಷಿಣ ಕನ್ನಡ ದ ಬಂಟ್ಸ್ ಸಮಾಜ ದ ಬಗ್ಗೆ ,ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ, ವೀರಪ್ಪನ್ ,ಕ್ರಪಾಕರ ಸೇನಾನಿ ಇವರೆಲ್ಲರನ್ನು ನನಗೆ ಪರಿಚಯಿಸಿದ್ದು 'ಸುಧಾ'.. .....ಫಾಂಟಮ್ ನಂತಹ ಎಂದು ಮುಗಿಯದ ಚಿತ್ರಕತೆಗಳು, ತಲೆ ಗೊಂಚುರು ಕಾಟ ಕೊಡುವ ಪಧಬಂಧ.,ಮಕ್ಕಳ ಪುಟಗಳು etc etc ..

ನಾನು ಓದಿದ್ದ ಮೊದಲ ಕಾದಂಬರಿ 'ದೌಲತ್' (ಆಗ ನಾನು ನಾಲ್ಕನೇಯದೋ  ,೫ದನೇಯದೋ  ತರಗತಿ ಯಲ್ಲಿದ್ದೆ.) ಇತಿಹಾಸಿಕ ಘಟನೆಗಳನ್ನ ಒಳಗೊಂಡ ಟಿಪ್ಪು,ಹೈದರಾಲಿ ಯರ ಕುರಿತಾದ ಒಳ್ಳೆಯ ಕಾದಂಬರಿ ... ಮಗುವಾಗಿ ಹಾವು ಹುಟ್ಟು ವ (ಮಹಿಳೆಯ ಹೊಟ್ಟೆಯಿಂದ ಹಾವು ತೆಗೆದದ್ದು ನಾನು ನೋಡಿದ್ದೇನೆ, ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಇದೆ,ಹಾವಿನ ಮೊಟ್ಟೇ ಹೊಟ್ಟೆಯೊಳಕ್ಕೆ ಸೇರಿ.. ) ಒಂದು ರೀತಿಯ ಕತೆ, ಸಿನೆಮಾ ಜೀವನ(movie 'ಫ್ಯಾಶನ್' ಗೆ ಹೋಲುವಂತ್ ದೇ ಒಂದು ಕತೆ ಯ ಎಳೆ ) ಕಿತ್ತೂರಿನ ಚನ್ನಮ್ಮಳ ಕತೆ, ಎಲ್ಲವೂ ನಾನು ಓದಿದ್ದು ಸುಧಾ ದಲ್ಲಿ..,       ನೇಮಿಚಂದ್ರರ ಹ್ಯಾನ ,ಅನೇಕ ಥ್ರಿಲಿಂಗ್ ಅನ್ನಿಸುವ ಪತ್ತೇದಾರಿ ಕತೆಗಳು (ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ್ದು ),ಡಬ್ಲ್ ಕ್ರಾಸ್ ಎನ್ನುವ ಶಬ್ಧ ಪರಿಚಯ ವಾಗಿದ್ದೆ ಅಲ್ಲಿಂದ..
ಈಗ ಕೆ ಎನ್ ಗಣೇಶಯ್ಯ.. ಇತ್ತೀಚೆಗೆ ಬರುತ್ತಿರುವ ಕೆ ಎನ್ ಗಣೇಶಯ್ಯನವರ ಇತಿಹಾಸಿಕ, ತಾರ್ಕಿಕ ಕಾದಂಬರಿಗಳು ....ವಾವ್ ...ನಿಜಕ್ಕೂ ನನಗೆ ಸ್ವಾಮಿ ವೆಂಕಟೇಶ್ವರನಲ್ಲಿ ಬುದ್ಧಕಾಣುತ್ತಿದ್ದಾನೆ..
ಅದ್ಭುತ ಎನ್ನಬಹುದಾದ ಕ್ಲಾಸಿಕ್ ಗಳು ಅವು ..ನಿಜಕ್ಕೂ ಅಲ್ಲಿನ ತರ್ಕಗಳು ನಮ್ಮ ಧೀ ಶಕ್ತಿಗೆ ಒಳ್ಳೆಯ ಕಸರತ್ತು ಕೊಡುತ್ತಿದೆ..ಥ್ಯಾಂಕ್ ಯೂ ಗಣೇಶಯ್ಯನವರೇ..

ಓಹ್ ತುಂಬಾ ಸುದ್ದಿ ಹೇಳಿಬಿಟ್ಟೆ ಅಲ್ಲವ?.............'ಓ ಮನಸೆಯನ್ನ' ನೆನಪು ಮಾಡಿಕೊಂಡಾಗ ಇವೆಲ್ಲ ನನ್ನ ಮನದಲ್ಲಿ ಹಾಗೆ ತೇಲಿ ಬಂದಿದ್ದು  ಸುಳ್ಳಲ್ಲ.

ನಾನು, ಪಾಚು ಪ್ರಪಂಚ ಬ್ಲೋಗಿನ ಪಾಚು ಅಣ್ಣ , ಮಲೆನಾದ ಕರಾವಳಿ ಬ್ಲೋಗಿನ ಭಟ್ಟ, ಹುಡುಕಾಟದ ಯಜ್ಞೇಶ್ ಮತ್ತು ಹಲವಾರು ಸೇರಿ ಒಂದೆಡೆ ಕುಳಿತು ವಿಸ್ಮಯ ಕಾರ್ಯ ಕ್ರಮ ನೋಡಿದ್ದು ಒಂದು ವಿಶೇಷ..ಕನ್ನಡ ದ ಒಳ್ಳೆಯ ನಟ 'ಸುದೀಪ್' ತುಂಬಾ ಚೆನ್ನಾಗಿ ಹಾಡು ಹೇಳಿ ,ಚಿಂತನಾಶೀಲ, ಸಮಯೋಚಿತ ಮಾತುಗಳನ್ನು ಆಡಿದ್ದರು.. ನಾನು ಕೇವಲ ೧.೫ ಘಂಟೆ ಮಾತ್ರ ಇದ್ದೇ.. ಮೀಟಿಂಗ್ ಮಿಸ್ ಮಾಡುವಂತೆ ಇರಲಿಲ್ಲ ,ಸುದೀಪ್,ರವೀ ಎದ್ದು ಹೊರಟ ಮೇಲೆ ನನ್ನ ಡೆಸ್ಕ್ ಗೆ ಬಂದು  'ಜಸ್ಟ್ ಮಾತ್ ಮಾತಲ್ಲಿ' ಎಂದು ಹಾಡಿಕೊಳ್ಳುತ್ತ ಮತ್ತೆ ಕೆಲಸ ಶುರು ಮಾಡಿಕೊಂಡೆ....

ಚಿತ್ರ ಕೃಪೆ;ಅಂತರ್ಜಾಲ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...