ಪುಟಗಳು

ಭಾನುವಾರ

ಹಲಗೆ ಬಳಪ ಕೈಯಲ್ಲಿ ಹಿಡಿದು...(Acrylic way -ಇವತ್ತು  ನಾ ಬಿಡಿಸಿದ ಚಿತ್ರ.)

ಬಹಳ ಹಿಂದಿನ ಕತೆ. ನನಗೆ ಅದರೊಳಗೆ ಏನಿರಬಹುದೆಂಬ ಕೆಟ್ಟ ಕುತೂಹಲ.ಅದರ ಆಕಾರ, ಬಣ್ಣ ನೋಡಿದರೆ ಅದು ಬಹಳ ಹಳೆಯ ಪೆಟ್ಟಿಗೆಯೆಂದು ಸುಲಭವಾಗಿ ಹೇಳಬಹುದಿತ್ತು. ಆಗ ನನಗೆ ಸುಮಾರು ಆರೇಳು ವಯಸ್ಸಿರಬಹುದೇನೋ. ಥೇಟ್ ಮಂಗನಂತೆಯೇ ಇದ್ದನಂತೆ. ಕುಂತಲ್ಲಿ ಕೂಡದ, ಕೈಗೆ ಸಿಕ್ಕಿದ್ದನ್ನು ಸುಮ್ಮನೆ ಬಿಡದ ನಾನು, ಜಗುಲಿಯಿಂದ ಅಂಗಳಕ್ಕೆ ಹಾರುತ್ತಾ, ಅಂಗಳದಿಂದ ಜಗುಲಿಗೆ ನೆಗೆಯುತ್ತಾ, ಕುಂತಲ್ಲೇ ಬಿದ್ದು, ನಿಂತಲ್ಲೇ ಅತ್ತು,ಹಾಗೇ ಒಮ್ಮೆ ನಕ್ಕು, ಅಪ್ಪ ಅಮ್ಮರನ್ನ ಹೈರಾಣ ಮಾಡುತ್ತಿದ್ದನಂತೆ.

ಅಮಿತ, ರಂಜನರೊಟ್ಟಿಗೆ ಜಗಳವಾದಾಗಲೆಲ್ಲ ನನಗೆ, ನನ್ನ ದುಃಖಕ್ಕೆ ಜೊತೆಯಾಗುತ್ತಿದ್ದುದು ಅದೇ ಪೆಟ್ಟಿಗೆ. 'ನನ್ನ ಅಪ್ಪನ ಹತ್ರ ದೊಡ್ಡ ಪೆಟ್ಟಿಗೆ ಇದ್ದು ಒಹೋ'ಎಂದು ಕೋಣೆಗೆ ಹೋಗಿ ಪೆಟ್ಟಿಗೆ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಖಾತರಿ ಪಡಿಸಿ ಕೊಳ್ಳುತ್ತಿದ್ದೆ. ಬಹುಷಃ ನನಗೆ ಗೊತ್ತಿದ್ದ ಪುಟ್ಟ ಲೋಕಕ್ಕೆ ಆ ಪೆಟ್ಟಿಗೆ ಬಹಳ ದೊಡ್ಡದಾಗಿ ಕಂಡಿರಬೇಕು.

ಅಪ್ಪ ಎಂದೂ ಪೆಟ್ಟಿಗೆಯನ್ನ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಎಲ್ಲೋ ಒಮ್ಮೆ ಅತ್ತಾಗ, ಸುಮ್ಮನೆ ಹಟ ಮಾಡಿದಾಗ, ಆಗೊಂದು ಈಗೊಂದು ಎಂದು ಬಣ್ಣದ ಪೆನ್ಸಿಲ್ ಗಳು ಹೊರಗೆ ಬರುತ್ತಿದ್ದುದ ನೋಡಿ, ಅಪ್ಪ ಹೇಳುತ್ತಿದ್ದ ಕತೆಯಲ್ಲಿ ಬರುವ 'ಮಾಯ ಪೆಟ್ಟಿಗೆ'ಯೇ ಇರಬಹುದು ಎಂದೆಲ್ಲ ಅನಿಸಿತ್ತು. ಆದರೂ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನ ನೋಡಿಯೇ ಬಿಡಬೇಕೆಂಬ ಆಸೆ ಬಹಳ ಇತ್ತು.

ದೊಡ್ಡವಳಾಗುತ್ತ ಬಂದ ಹಾಗೆ, ಆ ಪೆಟ್ಟಿಗೆ ವಿಸ್ಮಯವಾಗಿ ಕಾಡಿದ್ದು ನಿಜ. ಒಂದು ದಿನ ಅಪ್ಪ ಮನೆಯಲ್ಲಿಲ್ಲದಾಗ ಪೆಟ್ಟಿಗೆ ತೆರೆಯುವ ವ್ಯರ್ಥ ಪ್ರಯತ್ನ ಮಾಡಿದಾಗಲೇ ಸಿಕ್ಕಿದ್ದು 'ಮಲ್ಲಿಗೆ'. ನಾ ನೋಡಿದ ಮೊದಲ ಪತ್ರಿಕೆ 'ಮಲ್ಲಿಗೆ', ಅದರ ನಂತರ, ನಮ್ಮ ಮನೆಗೆ ಬರುತ್ತಿದ್ದುದು 'ಸುಧಾ' ವಾರಪತ್ರಿಕೆ. ಜಗತ್ತೇ ನನ್ನ ಕೈಲಿದ್ದಂತೆ ಸಂಭ್ರಮಿಸುತ್ತಿದ್ದೆ. ನಾನು ಮೂರನೇ ತರಗತಿಯಲ್ಲಿದ್ದಾಗ ಬರುತ್ತಿದ್ದಾಗಿನ ಪತ್ರಿಕೆಯನ್ನ ಇನ್ನೂ ಓದುತ್ತಿದ್ದೇನೆ. ಅದರೆ ಈಗೀಗ ಯಾಕೋ ಕುಶಿ ಕೊಡುತ್ತಿಲ್ಲಾ, ಬಹುಷಃ ನಾನು ನೋಡುತ್ತಿರುವ ಜಗತ್ತಿಗೆ ಅದು ಸಾಕಾಗುತ್ತಿಲ್ಲ ಅನಿಸುತ್ತದೆ. ಆದರೂ 'ಸುಧಾ' ಪತ್ರಿಕೆ ನನ್ನ ಮನಸ್ಸಿಗೆ ತೀರ ಹತ್ತಿರದ್ದು. ಪತ್ರಿಕೆಯ ಹಿರಿಯರಾದ ಅಂತರಾಮು ಅವರ ನೆನಪಿದೆ.

ಬಹುಷಃ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದಿದೆ. ಭಾಸ್ಕರ್ ಮಾಮನ ಪುಸ್ತಕದ ಅಂಗಡಿಯಿಂದ ನನಗೆ ಓದಲಿಕ್ಕಾಗಿಯೇ ಎಲ್ಲ ದಿನಪತ್ರಿಕೆಗಳೂ, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಿಗುತ್ತಿತ್ತು. ಓದಿ ಮತ್ತೆ ಅಂಗಡಿಗೆ ಕಳುಹಿಸುತ್ತಿದ್ದೆ, ಆ ಪುಸ್ತಕ ಅಂಗಡಿಯಿಂದಾಗಿ ಕನ್ನಡದ ಎಲ್ಲ ಪತ್ರಿಕೆಗಳನ್ನು ಪ್ರತಿ ದಿನವೂ ಓದುವ ಭಾಗ್ಯ ನನ್ನದಾಗಿತ್ತು. ಹಾಗೆ ಓದುತ್ತಿದ್ದಾಗ ನನ್ನ ಮನಸ್ಸಿಗೆ ಯಾವುದೇ 'Prejudice' (ಪೂರ್ವಗ್ರಹ) ಇರಲಿಲ್ಲ. ಲೇಖಕ ಯಾರೆಂಬುದು ನನಗೆ ಮುಖ್ಯವಾಗಿರಲೇ ಇಲ್ಲ, ಯಾಕೆ ಓದಬೇಕೆನ್ನುವ ಪ್ರಶ್ನೆ ಯಾವತ್ತೂ ಕಾಡಿರಲೇ ಇಲ್ಲಾ. ಸತತ ಹದಿಮೂರು ವರುಷ ಹಾಗೆಯೇ ಓದಿದೆ.

ಇನ್ನು, ಶಾಲೆಯಲ್ಲಿ ಪುಸ್ತಕ ಓದುವ ಹುಚ್ಚಿರುವ ಕೆಲವು ಸ್ನೇಹಿತರಿದ್ದರು, ಕೆಲವೊಮ್ಮೆ ಅವರಿಗಿಂತ ಮುಂಚೆ ಓದಿರಬೇಕೆನ್ನುವ ಮನೋಭಾವವು ಮತ್ತೂ ಓದಲ್ಲಿಕ್ಕೆ ಹಚ್ಚಿದ್ದು ದಿಟ. ಹೈ ಸ್ಕೂಲ್ & ಕಾಲೇಜುಗಳ ಗ್ರಂಥಾಲಯದಲ್ಲಿನ ಯಾರೂ ಓದದೆ ಇದ್ದ, ಒಮ್ಮೆಯೂ ಯಾರ ಹೆಸರನ್ನೂ ತನ್ನ ಬೆನ್ನಮೇಲೆ ಬರೆಯಿಸಿ ಕೊಳ್ಳದ ಪುಸ್ತಕಗಳಿಗೆಲ್ಲ ನನ್ನ ಮತ್ತು ನನ್ನ ಕೆಲವು ಸ್ನೇಹಿತೆಯರ ಹೆಸರಿದೆ.

ಅಪ್ಪ ಎಂದೂ ನನಗೆ ಪುಸ್ತಕ ಓದೆಂದು ಹೇಳಿರಲಿಲ್ಲ.ಮತ್ತೂ ಇಂದಿಗೂ ನಾ ಆ ದೊಡ್ಡ ಪೆಟ್ಟಿಗೆಯ ಬಾಗಿಲು ಪೂರ್ತಿ ತೆರೆದು ನೋಡಿಲ್ಲ. ಅಪ್ಪ ನನ್ನನ್ನು ಓದಲು ಹಚ್ಚಿದ ರೀತಿಯೇ ಅಂತದ್ದು. ಮನೆಗೆ ಬರುವಾಗ ಚೀಲದಲ್ಲಿ ತರುತ್ತಿದ್ದ ಪುಸ್ತಕಗಳು ಅವಾಗಿಯೇ ತಮ್ಮತ್ತ ಸೆಳೆದುಕೊಂಡಿದ್ದವು. ನನ್ನ ಪುಟ್ಟ ಟೇಬಲ್ಲಿನ ಮೇಲೆ ಬಣ್ಣದ ಪುಸ್ತಕಗಳು , ಮತ್ತು ಮನೆಗೆ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ಓದುತ್ತ ಕುಳಿತ್ತಿರುತ್ತಿದ್ದ ಭಂಗಿ ಬಹುಷಃ ನನ್ನ ಸೆಳೆದಿರಬೇಕು. ದಿನಕಳೆದಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದೇ ಬೈಠಕ್ ನಲ್ಲಿ ಓದುವದು ಅಪ್ಪನಂತಾಗಬೇಕೆನ್ನುವ ನನ್ನ ಜೀವನದ ಭಾಗವಾಯಿತೆನ್ನಿ. ಅಲ್ಲದೇ ಸ್ನೇಹಿತರ ಮುಂದೆ ಜಂಭ ಕೊಚ್ಚಿಕೊಳ್ಳುವದಕ್ಕು ಸಹಾಯವಾಯಿತು. ಜನಮಾಧ್ಯಮ ಪತ್ರಿಕೆಯ ಬೆನ್ನೆಲುಬಾಗಿದ್ದ ಜಯರಾಮ್ ಹೆಗಡೆಯವರು ಕನ್ನಡದಲ್ಲಿದ್ದ ಕುರಾನ್ ಪುಸ್ತಕವನ್ನು ಕಳುಹಿಸಿದ್ದರು. ಅಪ್ಪನೊಟ್ಟಿಗೆ ಅದನ್ನೂ ಓದಿದೆ.

ನಮ್ಮ ಕಾಲೇಜಿನಲ್ಲಿ, 'ಓದು ಕಮ್ಮಟ' ಎಂಬ ತರಬೇತಿಯನ್ನ ಏರ್ಪಡಿಸಿದ್ದರು. ಘಟಾನುಘಟಿಗಳೆಲ್ಲ ಸೇರಿದ್ದರು. ಕಾರ್ಯಕ್ರಮ ಉದ್ಘಾಟಿಸಿದವರ ಮಾತೊಂದನ್ನು ಬಿಟ್ಟು ಮತ್ತೆಲ್ಲವು ಬೆಳಗಿಂದ ಸಂಜೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು, ನಮಗಿರುವ ಓದುವ ಹುಚ್ಚನ್ನು ಬಿಡಿಸಿಯೇ ಬಿಡುತ್ತಾರೆಂದು ನಾನು ಮತ್ತು ಸ್ನೇಹಿತೆ ಪಲ್ಲವಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದೆವು.

ಓದುವದೆಲ್ಲ, ಹೀಗೆಯೇ ಓದಬೇಕೆಂದರದು ಹೇಗೆ ಸಾಧ್ಯಾ? ಅವೆಲ್ಲ ಸ್ವಂತಕ್ಕೆ ಬಿಟ್ಟಿದ್ದು, ಓದುವದು, ಬರೆಯುವದು ಎಲ್ಲ ಬಹಳ ವಯಕ್ತಿಕವಾದದ್ದು ಕೂಡ. ಹೀಗೆಯೇ ಓದು, ಹೀಗೆಯೇ ಬರೆ, ಎಂದರೆ ಅದು ವೈವಿಧ್ಯತೆ ಕಳೆದುಕೊಳ್ಳುತ್ತದೆ ಎಂಬುದಾಗಿತ್ತು ನಮ್ಮ ಅಭಿಪ್ರಾಯ. ನಾವೇನು ಇವರನ್ನು ಹೇಗೆ ಓದಬೇಕೆಂಬುದನ್ನು ಕೇಳಿದ್ದೆವ ಎಂಬ ಉದ್ಧಟತನವೂ ನಮ್ಮಲ್ಲಿತ್ತು.

ಅದರೆ ಅಂದು ಪರಿಚಯವಾದ ಮಾನ್ಯರು ಇಂದಿಗೂ ಓದಲಿಕ್ಕೆ ಸ್ಪೂರ್ತಿಯಾಗಿದ್ದಾರೆ. ಇವರೇನು ಗುರುತದವರಾ? ನಮ್ಮ ನೋಡಿದ ಕೂಡಲೇ ನಗೆಯಾಡಿದರಲ್ಲ ಎಂದು ನಾನು,ಪಲ್ಲವಿ ಅಂದುಕೊಂಡ ಹಿರಿಯ ಸಾಹಿತಿಗಳು, ಇಂದಿಗೂ ಗುರುತಿಟ್ಟು ಸಿಕ್ಕಿದಾಗಲೆಲ್ಲ ಪಕ್ಕದಮನೆಯವರಂತೆ ಮಾತಾಡುತ್ತಾರೆ. ತುದಿಯಲ್ಲಿ ಮತ್ತೆಲ್ಲ ಆರಾಮ್ ಅಲ್ದಾ, ಮಗಳ ಕರ್ಕಂಡು ಬರಲಿಕ್ಕೆ ಹೋಗಬೇಕು ಅನ್ನುತ್ತ ಕಾರ್ ಹತ್ತಿ ಕೈ ಆಡಿಸುತ್ತಾ ನಡೆದುಬಿಡುತ್ತಾರೆ.

ಅಂದಿಗೆ ಹೋಲಿಸಿದರೆ ನನ್ನ ಓದಿನ ಓಘ ಕಡಿಮೆ ಆಗಿದೆ.ಅದರೂ ಘಮ ಕಡಿಮೆಯಾಗಿಲ್ಲ ಬಿಡಿ. ಜೋಗಿಯವರ ಪುಸ್ತಕ ‘ಹಲಗೆ ಬಳಪ’ ಕೈಯಲ್ಲಿ ಹಿಡಿದು ಇಷ್ಟೆಲ್ಲ ನೆನಪಾಯಿತು. ಪುಸ್ತಕ ಇನ್ನು ಓದಿ ಮುಗಿದಿಲ್ಲ.
(ಅಂದಹಾಗೆ, ಇದ್ಯಾವುದು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೆ ಬರೆದುದಲ್ಲ,ನನಗೆ ಇವತ್ತು ದಕ್ಕಿದ್ದು ಇಷ್ಟು.)

2 ಕಾಮೆಂಟ್‌ಗಳು:

Akshay Bhagwat ಹೇಳಿದರು...

ಮೊದಲಿಗೆ ಚಿತ್ರದ ಬಗ್ಗೆ: ಒಮ್ಮೆ ಲೇಖನಕ್ಕೂ ಚಿತ್ರಕ್ಕೂ ಏನು ಸಂಭಂದ ಎನಿಸಿದರೂ ಆ ವಿಶಾಲವಾದ ಬಾಲ್ಯವೇ ಇಲ್ಲಿ ನೀಲಾಕಾಶವಾಗಿ ಬಂದಂತಿದೆ. ನೀಲಿ ಜೊತೆ ಉಳಿದ ಬಣ್ಣಗಳ ಚಿತ್ತಾರ ಕೂಡ ಚಿತ್ರವನ್ನು ಮತ್ತೆ ಮತ್ತೆ ನೋಡುವಂತೆ ಮಾಡಿತು. ಭೂಮಿ, ಸಾಗರ ಮತ್ತು ಆಗಸ ಈ ಮೂರರ ಸಮ್ಮಿಳನ ನೀನು, ಅಪ್ಪ ಮತ್ತು ಓದು ಎನ್ನುವಂತೆ ಚೆನ್ನಾಗಿ ಮೂಡಿದೆ.
ಇನ್ನು ಬರವಣಿಗೆ ಬಗ್ಗೆ: ಹಿಂದೊಮ್ಮೆ ನಿನ್ನ ಒಂದು ಲೇಖನ ಎರಡೆರಡು ಬಾರಿ ಓದಿದರೂ ಅರ್ಥವಾಗಲಿಲ್ಲ ಎಂದಿದ್ದೆ. ಅಲ್ಲದೆ ಸಾಮಾನ್ಯ ಓದುಗನಿಗೆ ಅರ್ಥವಾಗುವಂತದ್ದು ಬರೆ ಎಂದಿದ್ದೆ. ಈ ಬರವಣಿಗೆ ನಿಜಕ್ಕೂ ಓದಿಸಿಕೊಂಡು ಹೋಯಿತು. ಅಂತಜರ್ಾಲದಲ್ಲಿ ಓದುವಾಗ ವೇಗವಾಗಿ ಸ್ಕ್ರೋಲ್ ಮಾಡಿಸದೆ ಎಲ್ಲ ವಾಕ್ಯವನ್ನೂ ಓದಿಸಿಕೊಂಡು ಹೋಗುವ ಬರವಣಿಗೆಗೆ ಉತ್ತಮ ಬರವಣಿಗೆ ಎನ್ನುವುದಾದರೆ ಇದೂ ಒಂದು. ಯಾಕೆ ಓದಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಚೆನ್ನಾಗಿದೆ. ಸಂಪೂರ್ಣ ಕನ್ನಡಮಯವಾಗಿರುವ ಇದರಲ್ಲಿ ಒಂದೇ ಒಂದು ಆಂಗ್ಲ ಪದ ಬಳಸಿರುವಿದರ ಔಚಿತ್ಯ ಏನಿರಬಹುದು? ಅದನ್ನೂ ಕನ್ನಡೀಕರಣ ಮಾಡಿದ್ದರೆ ಇಡೀ ಲೇಖನ ನನ್ನನ್ನು ಹತ್ತು ವರ್ಷದ ಹಿಂದೇ ಹಿಡಿದಿರುತ್ತಿತ್ತು. ಒಮ್ಮೆ ಇವತ್ತಿಗೆ ಬಂದು ಮತ್ತೆ ಹಿಂದೆ ಹೋದಂತಾಯಿತು.
ದಿನವೂ ಓಂದಿಷ್ಟು ಸಮಯ ಮತ್ತು ವಿಷಯ ದಕ್ಕುತ್ತಿರಲಿ. ಹೇಗೆ ಆಗ ಓದುವುದಕ್ಕೆ ಕಾರಣ ಬೇಕಾಗಿರಲಿಲ್ಲವೋ ಈಗ ಬರೆಯುವುದಕ್ಕೂ ಬೇಡವಾಗಲಿ. ಮತ್ತಷ್ಟು ಬರೆ.

jithendra hindumane ಹೇಳಿದರು...

ಹಂ, ಓದು ಬಾಲ್ಯದಲ್ಲಿ ಬೆನ್ನು ಬಿದ್ದರೆ ನಾವು ಒಂಟಿ ಅನಿಸುವುದೇ ಇಲ್ಲಾ ಮೊದಲ ಓದು ಎಲ್ಲಾ ಆಗಿರುತ್ತದೆ. ನಾವು ಬೆಳೆದಂತೆ ಸಿಕ್ಕಿದ್ದೆಲ್ಲಾ ಬಿಟ್ಟು ಆಯ್ಕೆ ಮಾಡುತ್ತಾ ಹೋಗುತ್ತೇವೆ. ಸುಂದರ ಬರಹ. ಆದರೆ ಇಂದನ ಮಕ್ಕಳಲ್ಲಿ ಓದುವ ಹಂಬಲ ಪಠ್ಯಕ್ಕೆ ಸೀಮಿತವಾಗಿದೆ...