ಪುಟಗಳು

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಕಾಮೆಂಟ್‌ಗಳಿಲ್ಲ: