ಪುಟಗಳು

ಶನಿವಾರ

ಭೂಮಿ,Annie ಮತ್ತು ಕ್ರಿಸ್ಮಸ್

ಭೂಮಿ
ಒಟ್ಟು ಹದಿಮೂರು ತಾಸಿನ ಪ್ರಯಾಣ.ಈ ಸಾರೆಯೂ ಕಿಡಕಿಯ ಪಕ್ಕವೆ.ಕಿಡಕಿಯ ಪಕ್ಕ ಕೂತು ಮೇಲಿಂದ ಕೆಳಗೆ ನೋಡುವದೆಂದರೆ ಅಂದಿನಿಂದಲೂ ಮೆಚ್ಚು.ಅಜ್ಜಿ ಹೇಳುತ್ತಿದ್ದ ಕೈಲಾಸ ಲೋಕದ ದರ್ಶನವಾಗುತ್ತಿತ್ತಲ್ಲ.ನನ್ನ ಮುಂದಿನ ಸೀಟಿನಲ್ಲಿ ,ಮಕ್ಕಳಿಬ್ಬರು ಪ್ರಯಾಣದುದ್ದಕ್ಕು ಬೋರಾಗದಂತೆ ನೋಡಿಕೊಂಡರು ಅಂದರೆ ತಪ್ಪಿಲ್ಲ.ಸೀಟ್ ಬೆಲ್ಟ್ ಕಟ್ಟಿಕೊಳ್ಳುವಂತೆ ಗಗನಸಖಿ,ಸುಂದರವಾಗಿ ಉಲಿಯುತ್ತಿದ್ದಳು.ಕ್ಯಾಪ್ಟನ್ ಸೌರಭ್ ಕುಮಾರ್ ಮತ್ತು ಅವರ ಸಿಬ್ಬಂದಿ  ವಿಮಾನ ಇಳಿಸುವತ್ತ ಕಾರ್ಯೋನ್ಮುಖ ರಾಗಿದ್ದರು.
ದೇವನಹಳ್ಳಿ ವಿಮಾನ  ನಿಲ್ದಾಣದಲ್ಲಿ ಬಂದಿಳಿದಿದ್ದೆ.ಬೆಂಗಳೂರಿಗೆ ಬಂದಿದ್ದು ಇದೇ ಮೊದಲಲ್ಲವಾದರು, ನನಗೆ ಬೆಂಗಳೂರು ಇನ್ನೂ ಒಗ್ಗಿಲ್ಲವಾಗಿತ್ತು. ಒಂದು ವಾರದ ಮಟ್ಟಿಗೆ ಅಲ್ಲವಾ, ಅಂದುಕೊಳ್ಳುತ್ತ ೨ ಸಲ್ವಾರು,೨ ಜೀನ್ಸ್,ಒಂದು ಸೀರೆಯನ್ನಷ್ಟೇ ತುಂಬಿಸಿಕೊಂಡಿದ್ದೆ.ಗಂಟೆ ೫  ಆಗಿದೆ,ಮೊದಲು ಬಂದಿದ್ದು ೫ ವರ್ಷಗಳ ಹಿಂದೆ.ಮಳೆ,ಮುಸ್ಸಂಜೆ,ಟ್ರಾಫಿಕ್ಕು,ನಗರಕ್ಕೆ  ಬರುತ್ತಿರುವ ಮೆಟ್ರೊ, ಎಲ್ಲ ಬೆಂಗಳೂರನ್ನ ಹೈರಾಣ ಮಾಡಿಬಿಡುತ್ತದಂತೆ, ಹಾಗಂತ  ಅವ ಹೇಳಿದ್ದ.ಥತ್ ಜೆಟ್ ಲಾಗ್ ,ಕಣ್ಣುಗಳು ತಾವೇ ಮುಚ್ಚುತ್ತಿದ್ದವು.ನನ್ನ ಪುಟ್ಟ ಬ್ಯಾಗನ್ನ ಎಳೆದುಕೊಂಡು,ಹೊರಗಿನ ಕುರ್ಚಿಯಲ್ಲಿ ಕುಳಿತೆ.ಅವ ಇನ್ನೂ ಬಂದಿಲ್ಲವಾಗಿತ್ತು.ಹೊಟ್ಟೆ ಛುರುಗುಟ್ಟುತ್ತಿತ್ತು.ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಲ್ಲಿ ವೆಜ್ ರೋಲ್ ಖರಿದಿಸಿ ತಿನ್ನತೊಡಗಿದೆ.ಬೆಂಗಳೊರಲ್ಲಿ ಮಳೆ ಅಂದಿದ್ದ ಅವ.ಹೊರಗೆ ಕುಳಿತವಳಿಗೆ ಚಳಿಯಾಗತೊಡಗಿತ್ತು.ಸುಡುಗಾಡು ಮಳೆ ಅನ್ನುತ್ತಲೇ ಒಂದೇ  ಸಮನೆ ಸುರಿಯುತ್ತಿದ್ದ ಮಳೆಯನ್ನ ಎಂಜೊಯ್ ಮಾಡುತ್ತಿದ್ದೆ.
ಅವನ ಬಗ್ಗೆ ಹೇಳೋಕೆ ಏನಿದೆ? ಉಹ್ ಹಾಗಲ್ಲ,ಹೇಳೋಕೆ ಏನೆಲ್ಲ ಇದೆ..ಮಾತಾಡುವ ಮನಸ್ಸು ಬಂದರೆ ಮಾತಾಡುತ್ತಾನೆ,ಹೊತ್ತಿಗೆ ಲೆಕ್ಕವಿಲ್ಲ.ನಾನು ಇದ್ದಿದ್ದು  ಹೌಸ್ಟ್ನನ್ ನಲ್ಲಿ ,ಇವ ಬೆಂಗಳೂರಲ್ಲಿ.

ಓದಿದ್ದು  ಒಂದೇ ಶಾಲೆಯಲ್ಲಿ, ಅನ್ನುವದರೊಟ್ಟಿಗೆ ಶಾಂತತ್ತೆಯ ಮಗ ಅನ್ನುವ ಪರಿಚಯ.
ಹೆಸರು ಹೇಳಬೇಕಾ? ಗೋಪಾಲ,ನನ್ನ ಮಟ್ಟಿಗೆ ಗೋಪಣ್ಣ..ಅಗಷ್ಟ ಹದಿನೈದು ,ಜನವರಿ ಇಪ್ಪತ್ತಾರು ,ಗಾಂಧೀ ಜಯಂತಿ ಇದಕ್ಕೆಲ್ಲ ಭಾಷಣ ಬರೆದು ಕೊಡಲು ಗೋಪಣ್ಣ ಇದ್ದ.ಗೋಪಣ್ಣ ಬರೆಯುತ್ತಿದ್ದ ಸಾಲುಗಳು ಹೊಸದೆನಿಸುತ್ತಿದ್ದವು.ಇನ್ನು ನೆನಪಿದೆ,ಹಿಂದೆ ಗುರುವಿಲ್ಲ,ಮುಂದೆ ಗುರಿಯಿಲ್ಲ ಸಾಗುತ್ತಿದೆ ಪುಂಡರ ದಂಡು'ಎಂಬ ಸಾಲುಗಳು ನನಗೆ ಮೊದಲ ಬಹುಮಾನ ತಂದು ಕೊಟ್ಟಿದ್ದವು.

ಇಂತಿರ್ಪ ಗೋಪಣ್ಣ ಎಸ್ ಎಸ್ ಎಲ್ ಸೀ ಪಾಸಾಗಿದ್ದು ಊರಲ್ಲೆಲ್ಲ ಸುದ್ದಿಯಾಗಿತ್ತು.ಆವಾಗೆಲ್ಲ ಅದೆ ದೊಡ್ಡ ಸುದ್ದಿ.ಶಾಂತತ್ತೆ ಮನತುಂಬಿ ನಗೆಯಾಡಿದ್ದು ಆವತ್ತೆ ಅಂತ ಅಮ್ಮ ಹೇಳಿದ್ದ ನೆನಪು.
ನನ್ನ ಅಪ್ಪನದ್ದು ಊರಿಂದ ಊರಿಗೆ ಎತ್ತಂಗಡಿ ಆಗುವ ಸರಕಾರಿ ಕೆಲಸ.ಮುಂದೆ ಗೋಪಣ್ಣ ನೋಡಿದ್ದೂ ನನಗೆ ನೆನಪಿಲ್ಲ. ಒಮ್ಮೆ ಗೋಪಣ್ಣ ಇಂಗ್ಲಿಷ್ ನಲ್ಲಿ ಎಮ್ ಎ ಓದುತ್ತಿದ್ದ ವಿಷಯ ಅಮ್ಮ ಹೇಳಿದ್ದಳು.ಮುಂದಿನ ಕತೆ  ಗೊತ್ತಿರಲಿಲ್ಲ.
ನಾನು ಪಿಎಚ್ ಡಿ ಮಾಡುತ್ತಿದ್ದೆ  ಹೌಸ್ಟ್ನನ್ ಯುನಿವರ್ಸಿಟಿಯಲ್ಲಿ.ಒಂದು ದಿನ ಅಚಾನಕ್ ಆಗಿ ಫೇಸ್ ಬುಕ್ ನಲ್ಲಿ ಗೋಪಣ್ಣ ಕಂಡಂತಾದ. ಕಂಡಂತಾದ ಏನು, ಸಿಕ್ಕೇ ಬಿಟ್ಟ
ಹೀಗೆ ಗೋಪಣ್ಣ ಮತ್ತೆ ಸಿಕ್ಕಿದ. ನಾಲ್ಕೈದು ವರ್ಷಗಳ ಹಿಂದೆ.

ಆತ
ಅಣ್ಣಾ, ನವಿಲು ಮರಿ ಹುಟ್ಟುತ್ತಾ? ಎಂದು ಮುದ್ದಾಗಿ ಕೇಳಿದ್ದಳು,ಆಕೆಯ ಪುಟ್ಟ ಮುಖಕ್ಕೆ ಆ ಕಣ್ಣುಗಳು ಎದ್ದು ಕಾಣುತಿದ್ದವು.ಕೈಯಲ್ಲಿನ ಆ ನವಿಲುಗರಿಯನ್ನ ನೋಡುತ್ತ ಇಲ್ಲ ಪುಟ್ಟಾ ಅಂದಿದ್ದೆ. ಕೆಲವರ ಮುಖ ನೋಡಿದಾಗಲೇ ಅವರ ಬಗ್ಗೆ ಗೌರವ/ಪ್ರೀತಿ/ಕಾಳಜಿ ಬಂದುಬಿಡುತ್ತದೆ.ಅದರಲ್ಲೂ ನನಗೆ ಸ್ವಂತ ತಂಗಿ ಇರಲಿಲ್ಲ. ಈ ಪುಟ್ಟ ಕೂಸು ನಮ್ಮ ಮನೆಯವಳೇ ಆಗಿದ್ದಳು. ಆಗಾಗ ಗೋಪಣ್ಣಾ ಎಂದು ಕರೆಯುತ್ತ ತನ್ನ ೨೭ ಮತ್ತೊಂದು ಹಲ್ಲು ತೋರಿಸುತ್ತ ನಮ್ಮ ಮನೆಯತ್ತ ಸವಾರಿ ಆಗಮಿಸುತ್ತಿತ್ತು. ಆಕೆಯ ಅಪ್ಪನಿಗೆ ಮತ್ತೊಂದು ಊರಿಗೆ ವರ್ಗವಾಗಿ ಹೊರಟು ನಿಂತಾಗ,ನಂಗಂತು ಅಳುವೇ ಬಂದಿತ್ತು,ಗಂಡು ಹುಡುಗ ಅಲ್ಲವ ಅತ್ತರೆ ಮರ್ಯಾದೆ ಅಂದುಕೊಂಡು ಸುಮ್ಮನಿದ್ದೆ.
ಆಕೆಯನ್ನ ಮತ್ತೆ ನೋಡಿದ್ದು ಫೇಸ್ ಬುಕ್ ನಲ್ಲಿಯೆ.
ಹ್ಮ್,ಅವುಳು ಹಾಗೆ ಸದಾ ಹರಿವ ನದಿಯಂತೆ ಹರಿಯುತ್ತಲೇ ಇರಬೇಕೆನ್ನುವವಳು.ಒಂದು ಖಾದಿಯ ಕುರ್ತ/ ಟೀ ಶರ್ಟ್, ಮಾಸಿದ ಜೀನ್ಸ್ ಹಾಕಿ ನಿಂತರೆ ಮುಗಿಯಿತು ಅವಳ ಅಲಂಕಾರ.ತುಂಡು ಕೂದಲಿಗೊಂದು ಕಪ್ಪನೆಯ ರಬ್ಬರ್ ಬ್ಯಾಂಡು.ಚರ್ ಪರ್ ಎಂದು ಫ್ಲೋಟಸ್ ಹಾಕಿಕೊಂಡರೆ,ಕಾಲಿನ ಬಗೆಗಿನ ಕಾಳಜಿ ಮುಗಿಯಿತು.ಸದಾ ಏನನ್ನಾದರು ಹಲುಬುವವಳಿಗೆ  ತಿನ್ನಲಿಕ್ಕೆ ಅದೇ ಆಗಬೇಕೆನ್ನುವದೇನೂ ಇಲ್ಲ , ಏನಾದರೂ ನಡಿದೀತು. ಕಳೆದ ಎರಡ್ಮೂರು ವರ್ಷಗಳಿಂದ ಇವಳ ಬಗ್ಗೆ ಅರಿತಿದ್ದು ಇಷ್ಟೇ.
ಆಕೆ ಇರೋದೆ ಹಾಗೆ. ಆ ಊರಿನ ತಳಕು ಈಕೆಯನ್ನ ತಟ್ಟಲ್ಲ,ಹತ್ತಿರಕ್ಕು ಸೇರಿಸಲ್ಲ. ಆ ಊರನ್ನ ಆಕೆ ಒಗ್ಗಿಸಿಕೊಂಡಿಲ್ಲ ಅನ್ನಿಸಿತ್ತು ಮೊನ್ನೆ.
ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಈ ಸಮಯದಲ್ಲಿ ಗೋಪಣ್ಣಾ ‘Don’t worry’ ಅಂದಿದ್ದು ಈಕೆಯೇ.

ಭೂಮಿ
ಇದುರಿನಲ್ಲಿ ಗೋಪಣ್ಣನ್ನ ಕಂಡು ನನ್ನ ಯೋಚನೆಗಳಿಗೆಲ್ಲ ತಡೆ ಬಿತ್ತು. ಗೋಪಣ್ಣ ಮನೆಗೆ ಕರೆದೊಯ್ದ. ಶಾಂತತ್ತೆಯ ಮುಖದಲ್ಲಿ ಕುಶಿ ಇತ್ತು. ತುಂಬಿದ ಮನಸಿನಿಂದ ಸ್ವಾಗತಿಸಿದ್ದರು.
ಯಾಕೋ ಗೊತ್ತಿಲ್ಲ,ಮರಳಿದ ಮುಸ್ಸಂಜೆ ನಿರಾಸೆಯನ್ನ ಕಟ್ಟಿಕೊಂದು ಬಂದಿಲ್ಲವೆಂಬುದಷ್ಟೇ ಖಾತರಿ.ತೀರಾ ಮಂದ ಬೆಳಕಿರುವ ನಮ್ಮೂರಿನ ರಸ್ತೆಯ ದೀಪ,ಮಿಂಚಿ ಮರೆಯಾಗುವ ಆ ಮಿಂಚು ಹುಳುವಿನ ಮಿಂಚು, ಇದುರಿನ ಆಂಜನೇಯ ದೇವಾಲಯ,ರಸ್ತೆಗೆ ಅಂಟಿಕೊಂಡಿದ್ದ ಗಟಾರ,ಮನೆಯ ಗೋಡೆಗೆ ಆತುಕೊಂಡಿದ್ದ ಪೇರಲೆಯ ಗಿಡ ಮತ್ತು ಅಲ್ಲಿ ತನ್ನ ಪುಟ್ಟ ಗೂಡು ಕಟ್ಟಿರುವ ಆ ಜುಟ್ಟಪಿಕಳಾರ,ಪಕ್ಕದಲ್ಲೇ ಹಬ್ಬಿದ್ದ ನೆಹ್ರು ಗುಲಾಬಿಯ ಗಿಡ, ಮೈ ತುಂಬ ಮುಳ್ಳಿದ್ದರೂ ಬೇಸರಿಸದೆ ಗುಲಾಬಿಯ ಗಿಡಕ್ಕೆ ಹಬ್ಬಿದ್ದ ಶಂಖಪುಷ್ಪ ಹೂವಿನ ಬಳ್ಳಿ,ಅಲ್ಲೇ ಪಕ್ಕದಲ್ಲಿ ಶಾಂತತ್ತೆ ನೆಟ್ಟಿದ್ದ ಚಿಕ್ಕ ತುಳಸಿಯ ಗಿಡ, ಅದಕ್ಕೆ ಹಚ್ಛಿದ್ದ ಅರಿಶಿಣ,ಕುಂಕುಮ ಆ ಮಬ್ಬು ಬೆಳಕಲ್ಲೂ ಎದ್ದು ತೋರುತ್ತಿತ್ತು.
ಅಂತಹ ಮಬ್ಬುಬೆಳಕಲ್ಲಿ,ಮನೆಯಂಗಳದಲ್ಲಿ ಕುರ್ಚಿ ಹಾಕಿ ಕೂತು ತಲೆ ಎತ್ತಿ ಆಕಾಶ ನೋಡುವದೆಂದರೆ ಪರಮ ಸುಖ.ಅಂದು ನಾವು ಕೂತದ್ದು ಹಾಗೆಯೆ.


ಆತ
ಮಾತಿಗಿಂತ ಮೌನವೇ ಪ್ರಿಯವಾದಾಗ.
ಹಲವರನ್ನ ಗಮನಿಸಿದ್ದೀನಿ ಮಾತಾಡ್ತಲೇ ಇರ್ತಾರೆ ಸಾಕು ಅನ್ನುವವರೆಗೂ,ಸಾಕೆನ್ನಿಸುವವರೆಗೂ,ಸಾಕಪ್ಪಾ ಅನ್ನುವ ವರೆಗೂ.ಹೀಗೂ ಅಗುತ್ತೆ,ಕೆಲವೊಮ್ಮೆ ಕೆಲವರ ಮಾತು ಸಿಂಫನಿಯೇ ಹೌದು.(ಸಿಂಫನಿ = ಸಿಂಪು + ಹನಿ -ಸ್ವಾತಿ ಯ ಮಳೆಯ ಹನಿ ಸಿಂಪಿನಲ್ಲಿ ಮುತ್ತಗುತ್ತಲ್ಲಾ ಹಾಗೆ, ಸ್ವರಮೇಳ ಅಂತಲೂ ಹೇಳಬಹುದು.)ಮುತ್ತಿನಂತ ಮಾತು.ಕೆಲವರ ಮಾತಿಗಾಗಿ ತಾಸುಗಟ್ಟಲೆ ಕಾಯುತ್ತೇನೆ.ಮಾತಾಡುತ್ತಲೇ ಕಣ್ಣೀರಾಗಿಬಿಡುತ್ತೇನೆ.ಕೆಲವೊಮ್ಮೆ ಎದುರಿನವರನ್ನೂ ಅಳಿಸಿ ಕೊನೆಗೆ 'I am sorry' ಎಂದು ಹೇಳಿ ನನ್ನ ಪಾಡಿಗೆ ನಾನು ಸ್ವಲ್ಪ ಹೊತ್ತು ಹಾಗೆ ಇದ್ದುಬಿಡುತ್ತೇನೆ.
ಎಲ್ಲಾ ಮಾತಿಂದ, ಮಾತಿಗಾಗಿಯೇ.

ಅಪರೂಪಕ್ಕೆ ಸಿಕ್ಕಿದ ನಮಗೆ ಮಾತಾಡಲಿಕ್ಕೆ ಬಹಳ ವಿಷಯವಿತ್ತು,ಆದರೆ ಮಾತೇ ಹೊರಡುತ್ತಿರಲಿಲ್ಲ.
‘Annie’ ಪರಿಚಯಿಸಿದ್ದಕ್ಕೆ ಆಕೆಗೊಂದಿಷ್ಟು ಧನ್ಯವಾದ ಹೇಳಬೇಕಿತ್ತು.  Annie, ನನ್ನ ಹೆಂಡತಿ. ಮೂಲ ಇಂಗ್ಲೆಂಡಿನವಳು. ಕಳೆದ ವರ್ಷವಷ್ಟೇ ನಮ್ಮ ಮದುವೆ ಆಗಿತ್ತು.ಹಾಗಾಗಿ ಈಗ ನಮ್ಮದೊಂದು ಅಂತರ್ಜಾತೀಯ,ಅಂತರ್ದೇಶೀಯ,ಸಂಸಾರ. ಇದು ಸಾಕಾರಗೊಂಡಿದ್ದೆ ನಮ್ಮ ಈ ಪುಟ್ಟ ಕೂಸಿನ ಸಹಾಯದಿಂದ.ಈಗ ಆಕೆ ಪುಟ್ಟ ಕೂಸಲ್ಲ, Dr.ಭೂಮಿ.
ನಮ್ಮ ಮನೆಯಲ್ಲಿ ಕ್ರಿಸ್ಮಸ್ ನ ಸಂಭ್ರಮ.Annie ಯ ಸಂತಸ ಮುಗಿಲು ಮುಟ್ಟಿತ್ತು. ಭೂಮಿ ಆಕೆಯ ಆಪ್ತ ಗೆಳತಿ.
ಕೇಕ್ ತಯಾರಿಯಲ್ಲಿ ಸಾತ್ ನೀಡಲಿಕ್ಕೆ ಭೂಮಿಗೆ  ಅಡುಗೆ ಮನೆಯಿಂದ ಕರೆ ಬಂದಿತ್ತು.

Merry Christmasssss!! Annie ಎಂದು ಕೂಗುತ್ತಾ ಭೂಮಿ ಒಳಗೋಡಿದ್ದಳು


2 ಕಾಮೆಂಟ್‌ಗಳು:

ಜಲನಯನ ಹೇಳಿದರು...

ಮೆರ್ರಿ ಕ್ರಿಸ್ಮಸ್ ನಿಮ್ಮೆಲ್ಲರಿಗೂ ಹಾಗೇ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಲೇಖನ ಹಲವಾರು ಅನೂಹ್ಯ ಪಾತ್ರಗಳ ಸುತ್ತ ಮೂಡಿದೆ. ಮೆರ್ರಿ ಕ್ರಿಸ್ಮಸ್ ಶೀರ್ಷಿಕೆ ?? ಇದು ಸ್ವಲ್ಪ ಗೊಂದಲ ಆಯ್ತು ನನಗೆ.

Sudarshan ಹೇಳಿದರು...

Its very cryptic article.. Thale buda artha aaglilla.. Saanta claus- ge kelbekeno enu antha..! ;)

Anyways, "Unity of INTERNATIONAL Integration" anna nimma katheya moolaka niroopisiddeera..

Kathe ond reethi chennagidhe..