ಗುರುವಾರ

ಕಳೆದದ್ದು ಸಿಕ್ಕಿಲ್ಲಾ


ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವಾಗ ಭಟ್ಟರನ್ನ ತಾಕುತ್ತಿದ್ದುದು ಅವರಪ್ಪನ ನೆನಪಲ್ಲ, ‘ತೋ ನೀನು ಬ್ರಾಹ್ಮಣನಾಗಿ ಶ್ರಾದ್ಧಮಾಡದೇ ನಿನ್ನ ಅಪ್ಪನನ್ನು ದುರ್ಗತಿಗೀಡು ಮಾಡುವೆಯಾ, ಮಗನಾಗಿ ನಿನಗೆ ಅಷ್ಟು ಯೋಗ್ಯತೆಯೂ ಇಲ್ಲವ ‘ ಎಂದ ಸಂಬಂಧಿಗಳ ಬಿರು ನುಡಿ , ಕೆಲವರ ಹಿತನುಡಿ , ಅಮ್ಮನ ಆಗ್ರಹ....... ಅಮ್ಮನ ನಂಬಿಕೆಗಾಗಿ ತಾನು ಮಾಡುತ್ತಿರುವದಲ್ಲವ ..? ಅಂತೂ ಅಪರ ಕಾರ್ಯಗಳನ್ನು ಸಾಂಗವಾಗಿ ಮುಗಿಸಿದ್ದಾಯಿತು ,ನನ್ನ ಮಗನಿಗೆ ಹೇಳಬೇಕು ,ನಾನು ಸತ್ತಾಗ ಶ್ರಾಧ್ಧ ಮಾಡುವದೆಲ್ಲ ಬೇಡವೆಂದು , ದೇಹವನ್ನ ಯಾವುದಾದರೊಂದು ವೈದ್ಯಕೀಯ ಕಾಲೇಜ್ ಗೆ ದಾನ ಮಾಡಿ ಎನ್ನಬೇಕು ಅಂದುಕೊಂಡಿದ್ದೆ.....ಈಗಂತೂ ದೇಹದಾನ,ನೇತ್ರ ದಾನ ಎಷ್ಟು ಅಮೂಲ್ಯವಾದುದು. ‘ಶ್ರದ್ಧಾ ಇವ ಶ್ರಾದ್ಧಃ’ ಶ್ರದ್ಧೆಯೇ ಶ್ರಾದ್ಧ ಅಲ್ಲವ.ಶ್ರದ್ಧೆಯೇ ಇಲ್ಲದವ ಶ್ರಾದ್ಧ ಮಾಡಿ ಪ್ರಯೋಜನವೇನು? ಪುರೋಹಿತರನ್ನ ಕರೆದು ಕೈಯಲ್ಲಿ ಕಾಸಿಲ್ಲದಿದ್ದರು ಮೈ ತುಂಬಾ ಸಾಲ ಮಾಡಿ ಆ ಜೋಯಿಸ್ರು ಹೇಳಿದ ಕಡೆಯಲ್ಲ ದಕ್ಷಿಣೆ ಇಟ್ಟು ,ಪಂಚೆ ,ತಂಬಿಗೆ,ಅಕ್ಕಿ ದಾನ ಮಾಡಿ ... ಶ್ರಾದ್ಧ ಮುಗಿಸಿ ಕೊನೆಗೆ ಸಾಲ ತೀರಿಸಲು ಅಲೆದಾಡುವವರನ್ನು ನೋಡಿ ಅಯ್ಯೋ ಅನಿಸಿತ್ತು. ಅಲ್ಲ ಸ್ವಾಮಿ, ಇದೆಲ್ಲ ಬೇಕಿತ್ತ ಎಂದರೆ, ನಿನ್ನದೊಂದನ್ನು ನೀನು ನೋಡ್ಕೊಳ್ಳೋ..ಎಂದಿದ್ದ ನನ್ನ ಸ್ನೇಹಿತನೊಬ್ಬ.....
ಶ್ರಾದ್ಧ ಮುಗಿಸಿ ಕುಳಿತ ಭಟ್ಟರನ್ನ ಕಾಡಿದ್ದು ಹಳೆಯ ನೆನಪುಗಳು..
ಅಪ್ಪ ಹಾಗೆ ಅಲ್ಲವ? ಎಲ್ಲವೂ ತನ್ನ ಮೂಗಿನ ನೇರಕ್ಕೇ ಆಗ್ಬೇಕು ಅಂತಿದ್ದೋನು .ಸಾಯುವ ಗಳಿಗೆಯಲ್ಲೂ , ಗಂಗೆಯ ನೀರು ಕೂಡಿದೇ ಉಸಿರು ಬಿಟ್ಟಿದ್ದು ..... ಎಲ್ಲಿ ನೋಡಿದರು ಇದು ಮಡಿ, ಇದು ಮೈಲಿಗೆ ...ಆತನ ಕೂಗಾಟ ಸಹಿಸಲಾಗದೆ ಸುಮ್ಮನೇ ಎದುರಾಡುವದೇಕೆಂದು ಸುಮ್ಮನ್ನಿದ್ದುದಾಗಿತ್ತು. ಆತನೊಂದು ಸರ್ವಾಧಿಕಾರಿಯೇನೋ ಎಂಬಂತೆ ಬದುಕಿದ್ದ... ಮೊನ್ನೆ ಸಾಯುವವರೆಗೂ ,ಕೊನೆಯ ಕ್ಷಣಗಳಲ್ಲೂ ಆತ ಬದಲಾಗಲೇ ಇಲ್ಲ, ಆತ ಬದಲಾಗುತ್ತಾನೆ ಎಂದು ನಿರೀಕ್ಷಿಸಿದ್ದೇ ತನ್ನ ತಪ್ಪೇನೋ ಅನಿಸಿತ್ತು.. ಅಮ್ಮನನ್ನ ನೋಡಿ ತಾನು ಸುಮ್ಮನಿದ್ದುದಾಗಿತ್ತು... ಅಪ್ಪ ಹೇಳಿದ್ದೆಲ್ಲ ಶಿರಸಾವಹಿಸಿ ಮಾಡುತ್ತಿದ್ದಳು ..ಆಕೆಗೆ ಅಪ್ಪನೇ ದೇವರಾಗಿದ್ದ....ಅಪ್ಪನನ್ನ ಬಿಟ್ಟು ಮನೆಯ ಅಂಗಳ ದಾಟಿದ್ದೂ ಇಲ್ಲ... ಅಮ್ಮನಿಗೆ ಅಪ್ಪನೇ ದೈವ ,ಅಪ್ಪನಿಗೋ ಗೋಕರ್ಣಾಧೀಶ್ವ ರನೇ ಮನದ ಒಡೆಯ.. ಇದು ಆದರ್ಶವಾ ? ಗೊತ್ತಿಲ್ಲ...
ಹ್ಮ್... ಎಳೆವೆಯಲ್ಲೇ ಅಪ್ಪನ ಒತ್ತಾಯಕ್ಕೆ ಮಣಿದು ಬನಾರಸ್ಸು ಸೇರಿದ್ದಾಗಿತ್ತು.. ಮನೆಯನ್ನ ,ಮಮತೆಯ ಅಮ್ಮನ ಬಿಟ್ಟು ಹೋಗಲಾರೆ ಎಂದು ಅದೆಷ್ಟು ವಾದಿಸಿದ್ದೆ ತಾನು , ಮೇಲಾಗಿ ,ಸಂಸ್ಕೃತ ಕಲಿಯುವಲ್ಲಿ ,ವೇದಾಧ್ಯಯನ ದಲ್ಲಿ ಆಸಕ್ತಿಯೂ ಅಷ್ಟಕ್ಕಷ್ಟೇ.......ಕೊನೆಗೂ ಅಪ್ಪನದೇ ಮೇಲುಗೈ . ಅಂತೂ ಪಕ್ಕದ ಮನೆಯ ಬಾಲೂ ಭಟ್ಟನನ್ನ ಜೊತೆ ಮಾಡಿ ಬನಾರಸ್ಸು ಸೇರಿಸಿಯೇ ಬಿಟ್ಟಿದ್ದ ಅಪ್ಪ. ಕಾಲೇಜು ಸೇರಿ ವಿಜ್ಞಾನ ಕಲಿಯಬೇಕೆಂಬ ಹಂಬಲವನ್ನ ಮೂಟೆಕಟ್ಟಿ ಇಟ್ಟಿದ್ದೆ ತಾನು ....... ...ನಾನು ಬನಾರಸ್ಸಿನಲ್ಲಿ ಸಂಸ್ಕೃತ ಕಲಿಯೋಕೆ ಹೋದಾಗ ಹಾಂ....ಆಕೆ ಸಿಕ್ಕಿದ್ದು ಅಲ್ಲೇ ಅಲ್ಲವ? ಶುದ್ದ ಮೊಗದ ಗಂಗೆಯೇ ಆಕೆ. ಬನಾರಸ್ಸಿನಲ್ಲ್ಲಿ ಉಳಿದು ೨ ವರ್ಷಗಳಾಗುವವರೆಗೂ ಆಕೆ ತನಗೆ ಕಂಡಿರಲೇ ಇಲ್ಲ. ಒಮ್ಮೆ ಹೀಗೆ ಸುಮ್ಮನೇ ಸ್ನೇಹಿತನ ಬಲವಂತಕ್ಕೆ ತಿರುಗಾಡಲು ಹೋದಾಗ ಆಕೆ ಕಣ್ಣಿಗೆ ಬಿದ್ದಿದ್ದಳು...ಇನ್ನೋರ್ವ ಸ್ನೇಹಿತನ ಒಬ್ಬಳೇ ತಂಗಿ . ಆಕೆಯನ್ನ ಮತ್ತೆ ಮತ್ತೆ ನೋಡುವ ಹಂಬಲ ವಾಗಿತ್ತು . ಆಕೆ ಇನ್ನೂ ‘ಪ್ರಪಂಚವೆಂದರೇ ಬನಾರಸ್ಸು, ಬನಾರಸ್ಸೇಂದರೇ ಪ್ರಪಂಚ’ ಎಂದು ನಂಬಿದ ಮುಗ್ಧೆ. ನಂತರ ಸ್ನೇಹಿತನ ಮನೆಗೂ ಹೋಗಿದ್ದೆ ಹಲವು ಸಾರೇ ,ಆಕೆಯನ್ನ ನೋಡುವ ಸಲುವಾಗಿ. ಆಕೆಯೂ ಜೊತೆಗೆ ಹೆಜ್ಜೆ ಹಾಕುವ ಸೂಚನೆ ಕೊಟ್ಟಿದ್ದಳು. ಹೀಗೆಯೇ ಪ್ರೀತಿ ಸಾಗಿತ್ತು ...ಬರೋಬ್ಬರಿ ೪-೫ ವರುಷ......... ಆಕೆಯ ಜೊತೆಗೂಡಿ ಹಣತೆಹಚ್ಚಿ ನದಿಯಲ್ಲಿ ತೇಲಿಬಿಟ್ಟಿದ್ದೆ ,ನಮ್ಮ ಇಷ್ಟಾರ್ಥ ಸಿದ್ದಿಸಲೆಂದು ಪ್ರಾರ್ಥಿಸಿದ್ದೆ ...ಆ ಹಣತೆಯ ಬೆಳಕಲ್ಲಿ ಎಷ್ಟು ಶುದ್ಧವಾಗಿ ಕಂಡಿದ್ದಳು ಆಕೆ. ಬಾರದ ಭಾಷೆಯಲ್ಲಿ ಪ್ರೀತಿ ಇತ್ತು , ಕಣ್ಣಲ್ಲಿ, ಈ ಗೆಳೆಯ ಎಂದಿಗೂ ಕೈ ಬಿಡಲಾರನೆಂಬ ನಂಬಿಕೆ ಇತ್ತು.. ಅದು ಹೇಗೋ ಬಾಲೂ ಭಟ್ಟನ ಮೂಲಕ ಅಪ್ಪನವರೆಗೂ ಹೋಗಿತ್ತು. ಅಪ್ಪ, ಮಾಣಿಯನ್ನು ಇನ್ನೂ ಅಲ್ಲೇ ಬಿಟ್ಟರೆ ಪೂರ್ತಿ ಕೆಟ್ಟು ಹೋಗಿಬಿಟ್ಟಾನು ,ಯಾವಳನ್ನೊ ಕಟ್ಟಿಕೊಂಡೇ ಬಂದಾನು ಎಂದು ,ಅಮ್ಮನಿಗೆ ಹುಷಾರಿಲ್ಲ ತಕ್ಷಣ ಹೊರಡು ಎಂದು ತಂತಿ ಕಳುಹಿ ಕರೆಸಿ ಕೊಂಡಿದ್ದ...ತಾನು ಇಲ್ಲಿ ಬಂದಾಗ ಎಲ್ಲವೂ ಸರಿಯಾಗಿಯೇ ಇತ್ತು..., ಬಂದಮೇಲೆ, ತನಗೂ ವಯಸ್ಸಾಯಿತು ಇಲ್ಲಿಯೇ ನಿನ್ನ ಪೌರೋಹಿತ್ಯ ನಡೆಸು ಅಲ್ಲಿ ಹೋಗುವದೇ ಬೇಡ ಎಂದು ಬಲವಂತ ಮಾಡಿ ತಿರುಗಿ ಹೋಗದಂತೆ ಮಾಡಿಬಿಟ್ಟಿದ್ದ. ಆಕೆಯನ್ನು ಇಲ್ಲೇ ಕರೆಸಿಕೊಂಡರಾಯಿತೆಂದು ಕೊಂಡಿದ್ದ ನನಗೆ ಬಲವಂತವಾಗಿ ಸುಶೀಲಳನ್ನು ಗಂಟು ಹಾಕಿಸಿ ಬಿಟ್ಟಿದ್ದ. ಬ್ರಾಹ್ಮಣನಾಗಿದ್ದೇ ತಪ್ಪಾ ?ಅನಿಸಿತ್ತಲ್ಲ.......... ಆಕೆಯನ್ನ ಬಿಟ್ಟು ಬರುವಾಗೆಷ್ಟು ನೊಂದಿತ್ತು ತನ್ನ ಮನ..... ಕಾಲ ,ಜನರು ಎಲ್ಲ ಬದಲಾಗಿದಾರೆ ಎನ್ನುತ್ತಾರಲ್ಲ ..ಎಲ್ಲ ಸುಳ್ಳ ? ಹೌದು ತನ್ನ ಮಟ್ಟಿಗೆ ಸುಳ್ಳೇ.. ಕಾಲ ಬದಲಾಗೊಲ್ಲ , ಕಾಲ ಓಡುತ್ತೆ...… ಜನರು ತಮಗೆ ಬೇಕಿದ್ದುದನ್ನ , ಇದು ಸರಿ ಇದು ತಪ್ಪು ಎಂದು ಅಲಿಖಿತ ಒಪ್ಪಂದ ಮಾಡಿಕೊಂಡು ಎಲ್ಲರ ಮೇಲೆ ಬಲವಂತವಾಗಿ ಹೇರುತ್ತಿದ್ದುದು ಸುಳ್ಳಲ್ಲ.... ಆಕೆ ಹೇಗಿದಾಳೋ,ಎಲ್ಲಿದ್ದಾಳೋ ಒಂದೂ ಗೊತ್ತಿಲ್ಲ.... ಬಾಲೂ ಭಟ್ಟನೋ ತಿರುಗಿ ಬಂದು ಬಿಟ್ಟಿದ್ದ.....

ಈಗ, ಹುಟ್ಟಿದ ಮಗನ ಮುಖದಲ್ಲೇ ತನ್ನ ಸುಖ, ಕನಸು ಕಾಣುವದನ್ನ ಬಿಟ್ಟು ಇನ್ನೇನು ಉಳಿದಿಲ್ಲವಾಗಿತ್ತು....ತನ್ನ ಮಗ ಹಾಗಲ್ಲ ಅನುಭವಿಸ ಕೂಡದು, ನನ್ನ ಹಾಗೆ ಸಂಪ್ರದಾಯದ ಕಟ್ಟಳೇ ಬೇಲಿಯ ಒಳಗೆ ಬೆಳೆಯಬಾರದು ....ಇಂದಿನ ದಿನಕ್ಕೆ ಸರಿಯಾಗಿ ಬದುಕಬೇಕು ...ಎಂದೆಲ್ಲ ನನ್ನ ಕನಸು ............ ಮನೆಯಲ್ಲಿ ಎಷ್ಟೆಷ್ಟೋ ಒಳ್ಳೆಯ ಪುಸ್ತಕಗಳನ್ನು ತಂದಿಟ್ಟಿದ್ದೆ,ಚಿಕ್ಕ ಮಗ ಓದುವಂತೆ ಲಕ್ಷ್ಯ ಸೆಳೆಯುತ್ತಿದ್ದೆ..

ತನಗೆ ಹಳೆಯ ಸಂಪ್ರದಾಯಗಳಿಂದ ದೂರ ಓಡಿ ಹೋಗಿ ಗಂಗೆಯ ತಟದಲ್ಲಿ ಬದುಕಬೇಕೆಂದಿತ್ತು, ಕೊನೆಗೂ ಆಗಲೇ ಇಲ್ಲ....ಅದಕ್ಕೆ ಅಲ್ಲವ ಮಗನಿಗೆ ವಿಜ್ಞಾನ ಓದಿಸಿದ್ದು ... ಮಗನಿಗೆ ಮನೆಯಲ್ಲಿ ತಾನು ಹೇಳಿಕೊಟ್ಟುದೇನೂ ಇಲ್ಲ, ಮನೇಪಾಠಕ್ಕೂ ಸೇರಿಸಿಲ್ಲವಾಗಿತ್ತು.. ಈಗ ೧೦ ವರುಷಗಳ ಹಿಂದೆಯೇ ಕುಮಟೆಯ ಬಸ್ಸಿನಲ್ಲಿ ಸಿಕ್ಕ ಯಾಜೀ ಮಾಸ್ತರ್ರು , ‘ನಿಮ್ಮ ಮಗ ಬಿಡಿ , ಶಾಲೆಗೇ ಆದರ್ಶ ವಿದ್ಯಾರ್ಥಿ ಅವನು’ ಎಂದಿದ್ದರು.. ಪಾಠದಲ್ಲಷ್ಟೇ ಅಲ್ಲ, ಏನೇನೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದು ಅಮ್ಮನ ಮುಂದೆ ಹಿಡಿಯುತ್ತಿದ್ದ... ಹತ್ತನೆ ತರಗತಿ ,ಪಿಯುಸಿ ಯಲ್ಲೆಲ್ಲ ೯೭ % ,೯೪ % ಅಂಕಗಳಿಸಿದಾಗ ಇಡೀ ಊರಿಗೇ ಪೇಡೇ ಹಂಚಿದ್ದೆ. ೯೦% ಕ್ಕಿಂತ ಜಾಸ್ತಿ ಮಾಡಿದವರಿಗೆಲ್ಲ ಇಡಗುಂಜಿಯಲ್ಲಿ ಸನ್ಮಾನಿಸುತಾರಂತೆ ... ಹೋಗಿ ಬಾ ಎಂದಾಗ ... ‘ಇಲ್ಲಪ್ಪ ನನಗೆ ಆಸಕ್ತಿ ಇಲ್ಲ’ ಎಂದ ಮಗನಿಗೆ ಕೊಂಚ ಒತ್ತಾಯಿಸಿದ್ದು ಸುಳ್ಳಲ್ಲ. ಇಡಗುಂಜಿಗೆ ಹೋಗಲೇಬೇಕೇನೂ ಅಪ್ಪ.. ಎಂದ , ಮರುಕ್ಷಣದಲ್ಲಿಯೇ ‘ಸರಿ’ ಎಂದು ಹೆಚ್ಚೇನೂ ಹೇಳದೇ ಹೊರಟಾಗ ...ಮಗ ಹೇಳಿದ್ದು ಕೇಳಿದನಲ್ಲ ಎಂದು ಕುಶಿ ಆಗಿತ್ತು ... ಆದರೆ ಮಗ? ಮಗ ಯಾಕೋ ತಿಕ್ಕಲು ಎಂದು ನೆರೆಯವರು ಹೇಳಿದ್ದು ಕೇಳಿದ್ದೆ. ಅದಕ್ಕೆ ಸರಿಯಾಗಿ , ಇಡಗುಂಜಿಗೆ ಹೋಗಬೇಕಿದ್ದವ ,ಮನೆಯಿಂದ ಹೊರಟು ಸಿಗಂಧೂರಿಗೆ ಹೋಗಿ ಬಂದು ಬಿಟ್ಟ........ ಸನ್ಮಾನಗಳೆಲ್ಲಾ ಬೇಡ ತನಗೆ ಎಂದು ಹೋಗಲೇ ಇಲ್ಲ ಎಂದಿದ್ದ...
ಇದ್ದ ಒಬ್ಬ ಮಗನಿಗೆ ವಿಜ್ಞಾನ ಕಲಿಸಿ ಮುಂದೆ ತರಬೇಕೆಂಬ ತನ್ನ ಕನಸು ಅರ್ಧಭಾಗ ಮುಗಿದ ಹಾಗೆ ಎಂದು ಸಂತಸ ಪಟ್ಟಿದ್ದೆ.. ವಿಪರೀತ ಎನ್ನುವಷ್ಟು ಓದುತ್ತಿದ್ದ ಆತನ ಕಂಡು ಅಕ್ಕರೆ ಉಕ್ಕಿ ಬರುತ್ತಿತ್ತು.. ಭೈರಪ್ಪ,ಕಾರಂತ,ತೇಜಸ್ವಿ,ಕಾಳಿದಾಸ,ಭಾಸ, ವ್ಯಾಸ, ಸ್ಟೀಫಾನ್ ಹಾಕಿಂಗ್...ಇನ್ನೂ ನಾನು ಕೇಳರಿಯದ ಹೆಸರುಗಳು….. ನಮ್ಮ ಮನೆಯಲ್ಲಿ ವಿಜ್ಞಾನವನ್ನ ಪ್ರತಿಪಾದಿಸುವ ,ಹಳೆಯ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಬಲ್ಲ ಕುಡಿಯೊಂದು ಚಿಗುರುತ್ತಿದೆಯಲ್ಲ, ತನಗೆ ಸಿಗದ ಅವಕಾಶ ತನ್ನ ಮಗನಿಗಾದರೂ ಸಿಕ್ಕಿತಲ್ಲ ಎಂದು ಸಂತಸವಾಗಿತ್ತು...

ಅದಕ್ಕೆ ತಕ್ಕಂತೆ ಒಳ್ಳೆಯ ಕಾಲೇಜುಗಳಲ್ಲಿ ಓದಿ ದೂರದ ದೇಶ ಇಂಗ್ಲೆಂಡಿನ ಪ್ರಸಿದ್ದ ಸಂಸ್ಥೆ ಯಲ್ಲಿ ವಿಜ್ಞಾನಿ ಆಗಿ ಸೇರಿದ್ದ.. ೭-೮ ತಿಂಗಳುಗಳು ಆದಾವೆಂದು ತೋರುತ್ತೆ...


ಕಳೆದ ತಿಂಗಳು ಕೆಲ್ಸಾ ಸೇರಿ ಮೊದಲ ಬಾರಿಗೆ ಊರಿಗೆ ಬಂದಿದ್ದ,ಇನ್ನೇನು ಹೊರಡುವ ದಿನ ಹತ್ತಿರ ಬಂದು ಬಿಟ್ಟಿತಲ್ಲ ಎಂದು ಕೊಂಡಾಗ, ಅಪ್ಪ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದ. ಸರಿ ಏನಪ್ಪಾ ಹೇಳು ...ಎಂದೆ. ಅಪ್ಪಾ... ನಾನು ಸನ್ಯಾಸ ಸ್ವೀಕರಿಸುತ್ತೇನೆ. ಮಗ ಗಟ್ಟಿ ನಿರ್ಧಾರ ಮಾಡಿ ಹೇಳಿದಂತೆ ಇತ್ತು........... ಸನ್ಯಾಸ ಅಂದರೆ ಸುಲಭ ಎಂದು ಕೊಂಡೆಯ? ಯಾವುದೇ ಜೀವ ಕಣಕ್ಕೂ ತೊಂದರೆ ಆಗದ ಹಾಗೆ ಬದುಕಬೇಕು,ತಾನೆಂಬುದನ್ನ ಮರೆತು ಸರ್ವಜನ ಹಿತಕ್ಕಾಗಿ ಬದುಕಬೇಕು , ಅದರಲ್ಲೂ ರಾಜ ಸನ್ಯಾಸ ಸುಲಭದ್ದಲ್ಲ, ನೂರಾರು ಸಾವಿರಾರು ಜನರು ನಿನ್ನ ನಂಬಿರುತ್ತಾರೆ.ಅಲ್ಲ ಮೊನ್ನೆ ಆ ನಿತ್ಯಾನಂದನ ವ್ಯವಹಾರ ನೋಡಿ , ಹೇಳುತ್ತಿದ್ದೇಯಲ್ಲ...ಕಾಕಿ ,ಖಾವಿ,ಖಾದಿ ಎಲ್ಲವೂ ಪ್ರಶ್ನಾತೀತವಾಗಿದ್ದಾವೆ ,ಶಕ್ತಿಯನ್ನೇ ಮರೆತಿದ್ದಾವೆ ,ಮೋಹದಲ್ಲಿ ಬಿದ್ದಿದ್ದಾರೆ ಅಂತ.. ಮತ್ತೆ ನೀನು ವಾಲುತ್ತಿರುವದು ಯಾಕೆ? ಅಲ್ಲ ಮಗನೇ ಸನ್ಯಾಸ ಸ್ವೀಕಾರದಿಂದ ಎಲ್ಲವೂ ಮುಗಿಯುವದಿಲ್ಲ. ಅಲ್ಲ ವ್ಯಕ್ತಿ ಯೋರ್ವ ಶಕ್ತಿಯಾಗುವದು ಎಷ್ಟು ಕಷ್ಟದ ಜವಾಬ್ದಾರಿ ಗೊತ್ತಾ ಮಗು ........ ಅದೊಂದು ಪುನರ್ಜನ್ಮ,ಪೂರ್ವಾಶ್ರಮ ದೊಂದಿಗೆ ನಿನ್ನ ಸಂಬಂಧ ಪೂರ್ತಿ ಇಲ್ಲವಾಗುತ್ತೆ. ನಾನು ಮಠಮಾನ್ಯಗಳ ವಿರುದ್ದವಿದ್ದಿದ್ದು ಗೊತ್ತಿತ್ತು ಮಗನಿಗೆ. ಅಪ್ಪ... ಮೊಹವೇ ಮುಖ್ಯವಾಗಬಾರದಪ್ಪ,ಅದರ ಹೊರತಾಗಿಯೂ ಜೀವನವಿದೆ.ಅದನ್ನ ಹುಡುಕುತ್ತಾ ಹೊರಡುತ್ತಿದ್ದೇನೆ..ಇತಿಹಾಸ ಮರುಕಳಿಸುತ್ತದೆಯಂತೆ.. ಧರ್ಮ ಗ್ಲಾನಿ ಆದಾಗಲೆಲ್ಲ ಮತ್ತೆ ಮಾರ್ಗದರ್ಶಕರು ಬೇಕಾಗುತ್ತಾರೆ ಅಂದಿದ್ದ. ಅಪ್ಪ ನಾವು ಕೆಲಸ ಮಾಡುವದೆಲ್ಲ ಏತಕ್ಕೆ,ಪರದೇಶದವರನ್ನ ಉದ್ಧರಿಸುವದಕ್ಕ?ನನ್ನ ಅವರು ಕೂಲಿಯ ತರ ನೋಡುವದಕ್ಕ? ಇಲ್ಲಪ್ಪ.. ನನಗೆ ಧರ್ಮ ಕೊಡುವ ಶಾಂತಿಯನ್ನ ಬೇರಾವದೋ ಕೊಡಲಿಕ್ಕೆ ಸಾಧ್ಯವೇ ಇಲ್ಲ....... ‘ಧರ್ಮ’ ಎಂದರೆ ಬದುಕೋ ಮಾರ್ಗ ಅಲ್ವಾ ಅಪ್ಪ ಯಾಕೆ ಈ ಜನ ಹೋಡ್ಕೊಂಡು ಸಾಯ್ತಾರೆ ? ಅಂತ ಮೊನ್ನೆ ಪಕ್ಕದ ಶಿವಮೊಗ್ಗ ಗಲಭೆಯ ಸಮಯದಲ್ಲಿ ಫೋನಿನಲ್ಲಿ ಹೇಳಿದ್ದು ನೆನಪಿಗೆ ಬಂತು... ಆತನ ವಾದದಲ್ಲಿ ತಪ್ಪೇನೂ ಇರಲಿಲ್ಲ........

ನಾನು ಅಷ್ಟು ಹೇಳುವಷ್ಟರಲ್ಲಿ ಸುಶೀಲಾ ಕಣ್ಣೀರು ಹಾಕುತ್ತಿದ್ದಳು ....ಮಗ ವಿಜ್ಞಾನಿಯಂತೆ ,ಪರದೇಶಗಳಲ್ಲಿ ತನ್ನ ಅಧ್ಯಯನದ ಮೇಲೆಲ್ಲ ತರಬೇತಿಗಳನ್ನು ನಡೆಸುತ್ತಾನಂತೆ ,ಮುಂದೆ ಒಂದು ದಿನ ತನ್ನನ್ನು ಕರೆದೊಯ್ಯ ಬಹುದು, ತಾನು ಮೊಮ್ಮಗುವನ್ನ ಆಡಿಸುತ್ತಾ ನಾಲ್ಕು ದಿನ ಹೆಚ್ಚು ಬದುಕಬಹುದು ....... ಮಗ ಈ ಸಾರೇ ಬಂದಾಗ ಮದುವೆ ಮಾಡಿಯೇ ಬಿಡಬೇಕೆಂದೂ ನಿರ್ಧರಿಸಿದ್ದಳು ... ಮೊನ್ನೆ ನಾದಿನಿಯ ಮಗನ ಮದುವೆಗೆ ಹೋದಾಗ ಹೆಣ್ಣಿನ ಕಡೆಯವರಿಬ್ಬರು ಮಗನಿಗೆ ಜಾತಕ ಕೊಡುವದಕ್ಕೆ ಬರುತ್ತೇನೆಂದಿದ್ದರು... ಎಂದು ನನ್ನ ಹತ್ತಿರ ಸಂಭ್ರಮದಿಂದ ಹೇಳಿಕೊಂಡಿದ್ದಳು , ಊರಿಗೆ ಬಂದ ಮಗನಿಗೆ ೨ ಹೆಣ್ಣುಮಕ್ಕಳ ಛಾಯಾಚಿತ್ರವನ್ನತೋರಿಸಿಯೂ ಇದ್ದಳು , ನಾವಿಬ್ರೂ ಇಷ್ಟು ಕಷ್ಟಪಟ್ಟಿದ್ದು ನಿನ್ನ ಸ್ವಾಮಿಯಾಗಿ ನೋಡಲಿಕ್ಕಲ್ಲ, ನಾವು ಹುಡುಕಿದ್ದು ಇಷ್ಟವಾಗಿಲ್ಲವಾದರೆ, ನೀನೆ ಹುಡುಗಿಯನ್ನ ಹುಡುಕು ,ಮದುವೆ ಮಾಡೋಣಾ ನೀನೇ ಯಾವುದಾದರೂ ಹುಡುಗಿಯನ್ನ ಮೆಚ್ಚಿ ಮದುವೆ ಆಗುವದಾದರೆ ನಮಗೆ ಸ್ವಲ್ಪವೂ ಬೇಸರಿಕೆ ಇಲ್ಲ,..... ಕೂದಲು ಕಿತ್ತುಕೊಂಡು , ತಲೆ ಬೋಳಿಸಿಕೊಂಡು , ದಂಡ ಹಿಡಿದು, ಕೇಸರಿ ಬಟ್ಟೆಯಲ್ಲಿ ನಿನ್ನ ನೆನೆಸಲೂ ಆಗದು ನನ್ನಲ್ಲಿ ... … ಮಾಣಿ ನೀ ಎಂತಕ್ಕೆ ಹಿಂಗೆ ಮಾಡ್ತೆ , ಎಂದೆಲ್ಲ ಬಿಕ್ಕಿಬಿಕ್ಕಿ ಅತ್ತಿದ್ದಳು ………. ಅಮ್ಮನ ಕಣ್ಣೀರಿಗೆ ಸ್ವಲ್ಪ ಕರಗಿದಂತೆ ತೋರಿದ್ದ......... ಅಮ್ಮ ನೀನು ಅಳಬೇಡ... ನೋಡೋಣ ಹೇಗೆ ಸಾಗುತ್ತದೆ ಜೀವನ ...ಎಂದು ಹೇಳಿ ಹೊರಟೇ ಹೋಗಿದ್ದ...



ನಮ್ಮ ಕನಸುಗಳನ್ನ ನಮ್ಮ ಮಕ್ಕಳಲ್ಲಿ ಕಾಣುವದು ತಪ್ಪಾ?.....ನಮ್ಮ ಮಕ್ಕಳ ಮೂಲಕ ನನಸಾಗಿಸಲು ಯತ್ನಿಸಿದ್ದರಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ... ನನಗಾದ ಹಾಗೆ ನನ್ನ ಮಗನಿಗಾಗಬಾರದು ಎಂದಲ್ಲವೇ ತಾನು ಇಷ್ಟೆಲ್ಲಾ ಶ್ರಮ ಪಟ್ಟಿದ್ದು.... ಮಗ ವಿಜ್ಞಾನಿ ಆಗುತ್ತಾನೆಂದು ಎಷ್ಟು ಕನಸ ಕಟ್ಟಿದ್ದೆ...... ಎಳೆವೆಯಲ್ಲೇ ,ಆತ ತೋರಿದ್ದ ಪ್ರತಿಭೆಯೇನು ಚಿಕ್ಕದ? ಹ್ಮ್...

                    -2-
ಸುಶೀಲಾ ,ಬಾಗಿಲು ಹಾಕಿಕೋ ,ಇಲ್ಲೇ ಅಂಗಡಿಗೆ ಹೋಗಿ ಬರುತ್ತೇನೆ ...ಮನೆಯಲ್ಲಿಯೇ ಕೂತು ಕೂತು ಬೇಜಾರಾಗಿದೆ ಎಂದು ಹೊರಡುತ್ತಿದ್ದಂತೆಯೇ , ಪಕ್ಕದ ಮನೆಯ ಬಾಲೂ ಭಟ್ಟ ಹೇಳಿದ ಸುದ್ದಿ ಕೇಳಿ ತಡೆಯಲಾರದೇ ಅಲ್ಲೇ ಕುಸಿದು ಕುಳಿತರು ಭಟ್ಟರು....
ಅಲ್ಲ ,ನಿನ್ನ ಮಗನಿಂದ ಏನೂ ಸುದ್ದಿಯಿಲ್ಲವೆಂದು ಚಿಂತಿಸುತ್ತಿದ್ದೇಯಲ್ಲ ,ನೋಡು ಎಂತಹ ದೊಡ್ಡ ಸುದ್ದಿಯನ್ನೇ ತಂದಿದ್ದೇನೆ ನಾನು ಎಂದು ಅವನು ಅಲ್ಲೇ ಕಟ್ಟೆಯ ಮೇಲೆ ಕುಳಿತ .ನಮ್ಮ ಮಠ “ಚಕ್ರ ವಟೀ'' ಯಲ್ಲಿ ನಿನ್ನ ಮಗ ಸನ್ಯಾಸ ದೀಕ್ಷೆ ತೆಗೆದುಕೊಂಡನಂತೆ .... ಒಂದು ದಿನ ಅಲ್ಲಿನ ಮುಖ್ಯ ಸ್ವಾಮೀಜಿಯನ್ನ ಭೇಟಿ ಆಗಿದ್ದನಂತೆ.. ಸನ್ಯಾಸ ಸ್ವೀಕಾರಕ್ಕೆ ಅಂದೇ ನಿರ್ಧರಿಸಿದ್ಧ ಎಂದು ನೀನು ಹೇಳುತ್ತಿದ್ದೇಯಲ್ಲ ಅಲ್ಲವ... ..ಮಠದ ಹಿರಿಯ ಸ್ವಾಮಿಗಳು ,ಮತ್ತೊಮ್ಮೆ ಯೋಚಿಸುವಂತೆ ಹೇಳಿದರಂತೆ ...ಆ ನಿನ್ನ ಮಗನೇ ಸ್ವಇಚ್ಛೆಯಿಂದ ಬಂದಿದ್ದೇನೆ ಅಂದನಂತೆ ..
ಹೆಚ್ಚಿನ ಅಧ್ಯಯನಕ್ಕಾಗಿ ಆತ ಬನಾರಸ್ಸಿಗೆ ತೆರಳುತ್ತಿದ್ದಾನಂತೆ.....ವೇದ,ಜೋತಿಷ್ಯ ,ಎಲ್ಲ ಅಧ್ಯ ಮಾಡುತ್ತಾನಂತೆ..ನಿನ್ನ ಮಗನ ದೃಢ ಸಂಕಲ್ಪ ನೋಡಿ ಹಿರಿಯ ಸ್ವಾಮಿಗಳಿಗೆ ಅಪರಿಮಿತ ಆನಂದವಾಗಿದೆಯಂತೆ .....ಹೀಗೆ ಹೇಳುತಲೇ ಇದ್ದ ಬಾಲು ಭಟ್ಟ.... ಹಮ್



‘ಕಳೆದದ್ದು ಸಿಕ್ಕಲೇ ಇಲ್ಲವ’ ಎಂದು ಹೇಳಿದ ಭಟ್ಟರ ಕಣ್ಣು ಮಂಜಾಗಿತ್ತು...

25 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಕಥಾವಸ್ತು ಚೆನ್ನಾಗಿದೆ. ಅದೇ ರೀತಿ ನಿರೂಪಿಸಿದ ಶೈಲಿ ಕೂಡ ಇಷ್ಟವಾಯಿತು. ಬರೆಯುತ್ತಿರಿ...

Shweta ಹೇಳಿದರು...

thank you tejakka..

shridhar ಹೇಳಿದರು...

ಶ್ವೇತಾ .
ಕಥೆ ಚೆನ್ನಾಗಿದ್ದು .... ಹೊಸ ತಲೆಮಾರಿನ ಎಷ್ಟೋ ಜನರಲ್ಲಿ ಈ ರೀತಿಯ ಭಾವನಗಳು ಕಂಡು ಬರುತ್ತಿವೆ .
ನೀರೂಪಣೆ ಇಷ್ಟವಾಯ್ತು :)

ಇನ್ನಷ್ಟು ಬರೆಯಿರಿ ...

Ittigecement ಹೇಳಿದರು...

ವಿಷಯ...
ಬರವಣಿಗೆಯ ರೀತಿ ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...

ಚುಕ್ಕಿಚಿತ್ತಾರ ಹೇಳಿದರು...

ಕಥೆ ತು೦ಬಾ ಚನ್ನಾಗಿ ಬರೆದಿದ್ದೀರಿ...

ಸೀತಾರಾಮ. ಕೆ. / SITARAM.K ಹೇಳಿದರು...

ತಾನೊಂದು ಬಗೆದರೆ...ಅಪ್ಪ ಒತ್ತಾಯವಾಗಿ ಹೇರಿದ್ದನ್ನು ವಿರೋಧಿಸುವ ಭಟ್ಟರು ತಮ್ಮ ಮಗನೊಡನೆ ಮಾಡಿದ್ದು ಅದೇ!
ಆದರೂ ವಿಧಿಲಿಖಿತ....
ಚೆಂದದ ಕಥೆ ಮತ್ತು ಕಥೆಗಾರಿಕೆ...
ಧನ್ಯವಾದಗಳು.

ಮನಮುಕ್ತಾ ಹೇಳಿದರು...

ಕಥೆಯಲ್ಲಿ ಪ್ರತಿಯೊಬ್ಬರ ಭಾವನೆಯನ್ನು ಚೆನ್ನಾಗಿ ಚಿತ್ರಿಸಿದ್ದಿರಿ.

ದಿನಕರ ಮೊಗೇರ ಹೇಳಿದರು...

ಶ್ವೇತಾ ಮೇಡಂ,
ಬರೆದ ರೀತಿ ತುಂಬಾ ಚೆನ್ನಾಗಿದೆ.... ಸನ್ಯಾಸತ್ವಕ್ಕೆ ಮನಸ್ಸು ಯಾವಾಗ್ ಬೇಕಾದರೂ ಆಗಬಹುದು.... ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ಹೆಚ್ಚಿಗೆ ದುಡಿದರೆ ಹೀಗೆ ಯೋಚಿಸಲು ಬರೋಲ್ಲ ಎನ್ನುವುದು ಸಾದ್ಯಾನೆ ಇಲ್ಲ ಆಲ್ವಾ..... ಹೀಗೆ ಬರೆಯುತ್ತಾ ಇರಿ ಮೇಡಂ.....

Harisha - ಹರೀಶ ಹೇಳಿದರು...

ಶ್ವೇತಾ ಅವರೇ, ಕಥೆ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ..

ಜಲನಯನ ಹೇಳಿದರು...

ಶೇತಾ ವಿಧಿ ಲಿಖಿತ ನಾವು ನಮ್ಮ ಕೈಲಾಗುವುದನ್ನು ಮಾಡಿ ಪ್ರಯತ್ನಿಸಿ ಆಗದೇ ಹೋದರೆ ..ಸರಿ...ಆದರೂ ವಿಧಿಲಿಖಿತ ಎನ್ನುವುದು ಕಡಿಮೆಯೇ ಅಲ್ಲವೇ....ಇಷ್ಟವಾಯ್ತು ನಿಮ್ಮ ನಿರೂಪಣಾ ಮತ್ತೆ ಪ್ರಸಾವನಾ ಶೈಲಿ...

Akshay ಹೇಳಿದರು...

ekdham first-class!!! every paragraph reminded me one or other events i have seen or heard. story represents the real life. wonderful. keep it up.
so.....when will u start a book? shall we talk on royalty of copyright? :-)

ಸಾಗರಿ.. ಹೇಳಿದರು...

ಶ್ವೇತಾ ಅವರೇ,
ತಮ್ಮ ಕಥಾವಸ್ತು ಮತ್ತು ನಿರೂಪಣೆ ಬಹಳ ಚೆನ್ನಾಗಿದೆ. ಚೆನ್ನಾಗಿ ಓದಿಸಿಕೊಂದು ಹೋಗುತ್ತದೆ. ಬಹಳ ಇಷ್ಟವಾಯ್ತು.

Shweta ಹೇಳಿದರು...

@ಶ್ರೀಧರ್
ಹೊಸ ತಲೆಮಾರು ಅಂತ ಅಲ್ಲ,ನಿನ್ನೆ ಹಳತಾಗಿದ್ದು ಇವತ್ತು ಹೊಸದು,ಅಷ್ಟೇ.ಧರ್ಮ,ಜಾತಿ ಇವೆಲ್ಲ ಸವಕಲು ಆದ ವಿಷಯಗಳಾದರೂ ಮತ್ತೆ ನೆನಪಾಗುತ್ತೆ,ಏಕೆಂದರೆ ಪ್ರತಿ ದಿನ ಇವುಗಳ ನಡುವೆಯೇ ನಮ್ಮ ಬಾಳು.

ಮನಸಿನಮನೆಯವನು ಹೇಳಿದರು...

ನಿಜವಾಗಿ ಸೊಗಸಾದ ಲೇಖನ..
ಭಟ್ಟರು ಮನೆಯವರ ಒತ್ತಾಸೆಗೆ ಗೆಳತಿಯನ್ನು ಮರೆತಿದ್ದು ಬೇಸರಿಕೆ ಮೂಡಿಸುತ್ತದೆ..
ಹೌದು.. ಹೀಗೆಯೇ.
ಯಾರು ಯಾರಾಗಬೇಕೆಂದು ಕೊಳ್ಳುತ್ತಾರೋ ಅದಾಗುವುದೇ ಇಲ್ಲ..

Shweta ಹೇಳಿದರು...

ತೇಜಕ್ಕ,ಪ್ರಕಾಶಣ್ಣ ,ವಿಜಯಶ್ರೀ ಮೇಡಮ್,ಸೀತಾರಾಂ ಸರ್,ಮನಮುಕ್ತಾ ,ದಿನಕರ್ ಸರ್,ಹರೀಶ್ ,ಆಜಾದ್ ಸರ್,ಕತ್ತಲೇ ಮನೆ,ಸಾಗರಿ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು

@ರೈಸಿಂಗ್ ಇಂಡಿಯನ್ : ಬುಕ್ ಓದೋದು ತುಂಬಾ ಇದ್ಯಪ್ಪ,ಪುಸ್ತಕ ಬರಿಯೊ ಯೋಚನೆ ಇಲ್ಲ.ಆದರೆ,Royatly ಬಗ್ಗೆ ಮಾತಾಡೋಣ ಅದಕ್ಕೇನಂತೆ?:):)

-ಶ್ವೇತಾ

ಮನಸ್ವಿ ಹೇಳಿದರು...

ಕಥೆ ಚನ್ನಾಗಿ ಮೂಡಿಬಂದಿದೆ, ಹೀಗೆ ಒಳ್ಳೋಳ್ಳೇ ಕಥೆಗಳನ್ನು ಬರೆಯುತ್ತಿರಿ

Subrahmanya ಹೇಳಿದರು...

ಕಥಾ ಶೈಲಿ ಮತ್ತು ಕಥೆ ಎರಡೂ ಚೆನ್ನಾಗಿದೆ.

V.R.BHAT ಹೇಳಿದರು...

ಕಥೆಗಾರಿಕೆ ಚೆನ್ನಾಗಿದೆ, ಕಥಾವಸ್ತುವೂ ಕೂಡ!

SATISH N GOWDA ಹೇಳಿದರು...

ಶ್ವೇತ ರವರೆ ತುಂಬಾ ಒಳ್ಳೆಯ ಕಥ ವಸ್ತು , ತುಂಬಾ ಚನ್ನಾಗಿ ಬರೆದಿದ್ದೀರಾ , ಮನಸ್ಸಿಗೆ ನಿಮ್ಮ ಕಥಾ ವಸ್ತು ತುಂಬಾ ಹಿಡಿಸಿತು ...... ಧನ್ಯವಾದಗಳು .
ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ
ನಿಮ್ಮನ್ನು ಸ್ವಾಗತಿಸುತ್ತೇನೆ

SATISH N gowda
ನನ್ನ ಸ್ನೇಹಲೋಕ (orkut)
satishgowdagowda@gmail.com
ನನ್ನವಳ ಪ್ರೇಮಲೋಕ )blog)
http://nannavalaloka.blogspot.com

Badarinath Palavalli ಹೇಳಿದರು...

:) :-) :-D chennagidhe madam

kindly visit my blog too

Raghu ಹೇಳಿದರು...

ಕಥೆ ಚೆನ್ನಾಗಿದೆ ಸರ್..
ನಿಮ್ಮವ,
ರಾಘು.

Chaithrika ಹೇಳಿದರು...

ಚೆನ್ನಾಗಿದೆ.

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ಶ್ವೇತಾ , ಕಥೆ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ, ಕಥೆ ತುಂಬಾ ಚೆನ್ನಾಗಿದೆ.

ಮೌನಯಾನಿ ಹೇಳಿದರು...

ಮೊದಲ ಬಾರಿಗೆ ನಿಮ್ಮ ಬ್ಲಾಗ್ ವಿಸಿಟ್ ಮಾಡಿದ್ದು, ಚಂದ ಬರಿತೀರ, ಶುಭವಾಗಲಿ

ಮೌನಯಾನಿ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...