ಪುಟಗಳು

ಶನಿವಾರ

ಮಳೆಗಾಲದ ಸಂಜೆ

ಮಳೆಗಾಲದ ಸಂಜೆ,
ಸಮುದ್ರ ನೋಡುವ ಮನಸಾಗಿತ್ತು.
ಅಪ್ಪಳಿಸುವ ಅಬ್ಬರದ ಅಲೆಗಳಿಲ್ಲ,
ಅಲೆಗಳ ಅಳಲ ಕೇಳುವ ಬಂಡೆಗಳೂ ಇಲ್ಲ
ತೇಲುವ ಹಡಗಿನ ಲಂಗರುಗಳಿಲ್ಲ,
ಹಾರುವ ಹಕ್ಕಿಯ ನೆರಳೂ ಇಲ್ಲ

ಅಲ್ಲಲ್ಲಿ ಬಾಗಿರುವ ತೆಂಗಿನ ಮರ,
ಅಪರೂಪಕ್ಕೊಮ್ಮೆ ಇಣುಕುವ ಸೂರ್ಯ,
ಹತ್ತಿರದ ಹುಣಿಮೆಯ ನೆನಪಿಸುವರ ಚಂದಿರ,
ತಂಪಿಲ್ಲದ,ಹದವಾದ ಗಾಳಿ

ಅದು ಮುಸ್ಸಂಜೆ, ಸೂರ್ಯ ತಂಪಾಗ್ವ ಹೊತ್ತು
ಮಳೆ ನಿಂತು, ಹನಿಯೊಂದು ಸಮುದ್ರಸೇರಿದ ಗಳಿಗೆ,
ಸಮುದ್ರ ಸೇರದ ಇನ್ನೊಂದು ಹನಿ ಮುತ್ತಾಗುವ,
ತಾಪಕ್ಕೆ ಬಳಲಿದ ಕಪ್ಪೆ ಮಳೆಗಾಗಿ ಧ್ಯಾನಿಸುವ
ಸುಯೋಗದ ಗಳಿಗೆ!

ಎಲ್ಲಿದ್ದವೋ ಆ ಕರಿಯ ಮೋಡ,
ಎಲ್ಲಿತ್ತೋ ಆಪರಿಯ ಗಾಳಿ
ಎಲ್ಲ ಒಟ್ಟು ಸೇರಿದಾಗಲೇ ಶುರುವಿಟ್ಟಿತು
ಭೋರ್ಗರೆವ ಜೋರು ಮಳೆ,‍ xyz ಬರೆವ ಕೋಲ್ಮಿಂಚು
ಮುಸ್ಸಂಜೆಯ ಮಳೆಯಜೊತೆ ಗುಡುಗು ರಾಯನ ಸ್ಪರ್ಧೆ!

ತಣ್ಣಗೆ ಕುಳಿತ ಸಮುದ್ರಕ್ಕೂ ಜೀವ ಬಂತು
ಮತ್ತೆ ಶುರುವಾಯ್ತು ಅಲೆಗಳ ಅಲೆದಾಟ,
ಅದು ಮಳೆಗಾಲದ ಸಂಜೆ!

ಭಾನುವಾರ

ಇನ್ನೂ ಹೆಸರಿಡದ್ದು


ಅದೊಂದು ಚಿಕ್ಕ ಊರು. ಅಲ್ಲಿನ ಜನರದ್ದು ಆರಕ್ಕೇರದ,ಮೂರಕ್ಕಿಳಿಯದ ಜೀವನ. ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ಹಾಗೆಯೇ ನೇರ ನಡೆದರೆ ಇದುರಿಗೆ ಒಂದು ದೊಡ್ಡ ಅರಳಿ ಮರ ಕಾಣುತ್ತದೆ. ವಿಶಾಲವಾಗಿ ಹರಡಿಕೊಂಡಿದ್ದ ಆ ಮರದ ಕೆಳಗೆ ಇದ್ದುದು ಒಂದು ನಾಗರ ಕಲ್ಲು,ಅರಳಿ ಮರದ ಬುಡದಲ್ಲಿದ್ದ ಆ ನಾಗರ ಕಲ್ಲಿಂದಾಗಿ ಅರಳಿಮರದ ಮಹಿಮೆ ಹೆಚ್ಚಿತ್ತು ಅಂದರೆ ತಪ್ಪಿಲ್ಲವೇನೋ. ಊರವರೆಲ್ಲ ಅದಕ್ಕೊಂದು ಕಟ್ಟೆಕಟ್ಟಿಸಿಮರದ ಸುತ್ತಲೂ ಆ ನೀಲಗಿರಿ ಗಿಡದ ನಾಲ್ಕು ಕಂಬ ನೆಟ್ಟುಬಣ್ಣದ ಕಾಗದದ ತೋರಣ ಕಟ್ಟಿದ್ದರು. ಸುರಿವ ಮಳೆ, ಬೀಸುವ ಗಾಳಿಯಿಂದ ಅರಳಿಯ ಮರ ಆ ತೋರಣವನ್ನ ತನ್ನೆರಡೂ ಕೈಗಳಿಂದ ರಕ್ಷಣೆ ಮಾಡುತ್ತಿತ್ತು ಅನಿಸುತ್ತದೆ. ಅದೇನೇ ಇರಲಿ ಅರಳಿಮರ ಜನರ ಅಸ್ತಿತ್ವಕ್ಕೊಂದು ಗುರುತಾಗಿತ್ತು, ಆ ಊರಿನ ಹಗಲು ರಾತ್ರಿಗಳಿಗೆ ಕಣ್ಣಾಗಿತ್ತು.
ಆ ಮರವನ್ನ ದಾಟಿ ಮುಂದೆ ನಾಲ್ಕು ಹೆಜ್ಜೆ ಹಾಕಿದರೆಅಲ್ಲೊಂದು ದೊಡ್ಡ ಬಾವಿ. ಆ ಊರಿನ ಜನರ ನೀರಿನ ಮೂಲ ಆಕರ. 'ಸರಕಾರಿ ಬಾವಿ' ಎಂದೇ ಹೆಸರು. ಒಂದು ಕ್ಷಣವೂ ಬಾವಿಯನ್ನು ಬಿಟ್ಟು ಇದ್ದುದೇ ಇಲ್ಲ ಊರಿನವರು. ಆ ಹಾದಿಗುಂಟಾ ಹೋದರೆ ನೀವು ಕೇಳಿದ್ದ ನೀರೆತ್ತುವ ಶಬ್ಧ ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಹಗಲಲ್ಲೂ, ಇರುಳಲ್ಲೂ. ಹಾಗೇ ಆ ಕಪ್ಪು ಬಾವಿಯನ್ನ ದಾಟಿ ಮುಂದೆ ನಡೆದರೆ ಅಲ್ಲೊಂದು ಮನೆಯಿದೆಅದು ಕ್ಯಾಶಿಯರ್ ಮನೆ ಅಂದೆ ಪರಿಚಿತ. ಬಿಳಿಯ ತಾಜ್ಮಹಲ್ಲೇ ಅದು. ಮನೆಯ ಉದ್ದುದ್ದ ಗೋಡೆಗಳಿಗೆ ಬಿಳಿಯ ಸುಣ್ಣ ಬಡಿದಿದ್ದಕ್ಕೇ ಇರಬೇಕು ಅಥವಾ ಆ ಮನೆಗಿದ್ದ ಗಂಭೀರ ಕಳೆ ಊರವರಲ್ಲಿ ಒಂದು ಖಚಿತ ಅಭಿಪ್ರಾಯವನ್ನಂತೂ ಹುಟ್ಟುಹಾಕಿತ್ತು. ಆ ಮನೆಯ ಯಜಮಾನ ಕ್ರಷ್ಣಾ ಭಟ್ಟರು ಮತ್ತು ಅವರ ಪತ್ನಿ ಅನ್ನಪೂರ್ಣಮ್ಮ. ಕ್ರಷ್ಣಾ ಭಟ್ಟರು ಆ ಊರಿಂದ ಮೈಲಿ ದೂರದಲ್ಲಿರುವ ಮಲ್ಲಾಪುರದ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿದ್ದರು. ಆ ಕಾರಣ ಮನೆಗೂ ಅದೇ ಹೆಸರು.
 ಕ್ಯಾಶಿಯರ್ ಮನೆ ಅಥವಾ ವಟಾರದಲ್ಲಿ ಬಾಡಿಗೆಗೆಂದು ಇದ್ದವರಲ್ಲಿ ನಮ್ಮ ಸೋಮಸುಂದರ ರಾವ್ ಕೂಡ ಒಬ್ಬರು. ಅನ್ನಪೂರ್ಣಮ್ಮನವರ ಪ್ರಕಾರ ಆ ಮನುಷ್ಯಂಗೆ ೪೦ ಆಗಿರಬಹುದುತಮ್ಮ ಯಜಮಾನರಿಗಿಂತ ಇನ್ನೂ ನಾಲ್ಕು ವರ್ಷ ಕಿರಿಯವನೆಂದು ಅನಿಸಿಕೆ. ಇನ್ನು ಮದುವೆ ಮಾಡ್ಕೊಂಡಿಲ್ಲಾ ಅದಿಕ್ಕೆ ಆತ ಬ್ರಹ್ಮಚಾರಿಮನೆಗೆ ಬಂದ ಮೊದಲ ದಿನವೇ ತನ್ನ ಹೆಸರಿರುವ ನೀಲಿ ಬಣ್ಣದ ಬೋರ್ಡನ್ನ ಬಾಗಿಲಿಗೆ ತೂಗುಬಿಟ್ಟಿದ್ದ. ತಹಶೀಲುದಾರ್ ಕಛೇರಿಯಲ್ಲಿ ಈತನ ಕೆಲಸ. ಆತ ಪ್ರತಿ ದಿನ ಬೆಳಿಗ್ಗೆದ್ದುತಣ್ಣೀರಲ್ಲಿ ಸ್ನಾನ ಮಾಡಿಹಣೆಗೊಂದು ಕುಂಕುಮದ ಬೊಟ್ಟಿಟ್ಟುಕೃಷ್ಣಾರ್ಪಣಮಸ್ತು! ಎನ್ನುತ್ತಾ ತನ್ನ ಉದ್ದನೆಯ ಚೀಲ ತಗಲುಹಾಕಿ ಕೊಂಡು ಮನೆಯಿಂದ ಹೊರಬೀಳುತ್ತಿದ್ದ. ‍ತಿಂಡಿ ತೀರ್ಥದ ವಿಷಯ ಅನ್ನಪೂರ್ಣಮ್ಮನವರಿಗೆ ಅಷ್ಟಾಗಿ ತಿಳಿಯುತ್ತಿರಲ್ಲಿಲ್ಲ. ಭಾನುವಾರ ಮಾತ್ರಾ ಕೃಷ್ಣಾ ಭಟ್ಟರೊಡನೆ ಮಾತಿಗೆ ಸಿಗುತ್ತಿದ್ದ. ಈ ಪರಿಪಾಠ ಹಲವು ದಿನ ನಡೆದಿತ್ತು.
ಈಗಿನಂತೆ ಎಲ್ಲರ ಮನೆಗಳಲ್ಲಿ ದೂರದರ್ಶನದ ಸೌಲಭ್ಯಗಳಿಲ್ಲದ ಕಾಲ ಅದು.  ಮುಸ್ಸಂಜೆಯ ಹೊತ್ತಲ್ಲಿ ಊರ ಹೆಂಗಸರೆಲ್ಲ ಒಂದು ಕಡೆ ಕುಳಿತು ಹರಟುತ್ತಾರೆ. ಅರಳೀ ಕಟ್ಟೆ ಖಾಲಿ ಇದ್ದರೆ ಅಲ್ಲಿ, ಇಲ್ಲವಾದರೆ ಊರ ಮಧ್ಯದಲ್ಲಿನ ಆಂಜನೇಯ ದೇವಾಲಯದ ಕಟ್ಟೆ.ಅದೂ ಇಲ್ಲವಾದರೇ ಕ್ಯಾಶಿಯರ್ ಮನೆಯ ಉದ್ದನೆಯ ಜಗುಲಿ. ಅವರ ಮಾತುಗಳಲ್ಲಿ, ಮಳೆ, ಗಾಳಿ, ಬಿಸಿಲು,ಅಡುಗೆ, ನೆಂಟರು,ಮದುವೆ, ಇತ್ಯಾದಿಗಳದ್ದೆ ಮೇಲುಗೈ. ಲೋಕಾಭಿರಾಮವಾಗಿ ಹರಟುತ್ತಿದ್ದರು
 ಬೆಳಗ್ಗೆದ್ದು ಜ್ಯೊತಿಷ್ಯವನ್ನೋ,ಬ್ರೇಕಿಂಗ್ ಸುದ್ದಿಗಳನ್ನೋ  ನೋಡುವ ತರಾತುರಿ ಮನೆಯ ಗಂಡಸರಿಗಿರುತ್ತಿರಲಿಲ್ಲ, ಹಾಕುತ್ತಿರುವ ವಗ್ಗರಣೆಯನ್ನ ಅಲ್ಲೇ ಬಿಟ್ಟು  ಬೇರೆಯವರಿಂದ ಅಡುಗೆ ಕಲಿವ ಜರೂರತ್ತು, ಊಟ ಮಾಡುತ್ತಲೋ, ಮನೆಗೆಲಸ ಮಾಡುತ್ತಲೋ ಧಾರಾವಾಹಿಗಳನ್ನ ನೋಡುವ ಕಲ್ಪನೆ ಮನೆಯ ಹೆಂಗಸರಿಗಿರುತ್ತಿರಲಿಲ್ಲ. ನಮ್ಮೂರಿಗೆ ಟೀವಿ ಬಂದ ಕತೆ ಬಹಳ ಆಸಕ್ತಿದಾಯಕವಾಗಿದೆ.ಇನ್ನೊಮ್ಮೆ ನೋಡೋಣ ಅದರ ಬಗ್ಗೆ. ಬಹುಷ, ಘಟ್ಟದ ಮೇಲಿನ ಜನರ ಜೀವನವೇ ಹಾಗೆ ಅನ್ನಿಸುತ್ತದೆ, ಜಾಸ್ತಿ ಅನ್ನಿಸುವಷ್ಟೇ ಸುಖಕರ.ಅವರ ಜೀವನಕ್ಕೆ ಅಂತಹ ಗಿಲೀಟಿನ ಬೆರಗಿನ ಅಗತ್ಯ ಇಲ್ಲವಾಗಿತ್ತೆಂದೇ ನನ್ನ ಲೆಕ್ಕ.
ಕ್ರಷ್ಣಾ ಭಟ್ಟರು  ಮತ್ತು ಸೋಮಸುಂದರ ರಾವ್ ಕೂಡ ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದರು. ಸೋಮಸುಂದರ ರಾವ್ ರ ಪ್ರಕಾರ ರಾಮ ದೇವರಲ್ಲ, ಕೃಷ್ಣ ಮಾತ್ರ ದೇವರಂತೆ. ಅವರದೇ ವಾದಗಳಿದ್ದವು ಅದನ್ನ ಸಮರ್ಥಿಸಲಿಕ್ಕೆ. ಅವರವರ ನಂಬಿಕೆ ಎನ್ನುತ್ತ ಸುಮ್ಮನಾಗಿದ್ದರು ಕ್ರಷ್ಣಾ ಭಟ್ಟರು. ಆತ ಮತ್ತೆ ಮತ್ತೆ ಅದನ್ನೇ ಹೇಳತೊಡಗಿದಾಗ, ಮಾತಾಡುವದನ್ನೇ ಕಡಿಮೆ ಮಾಡಿದ್ದರು ಕೂಡಾ. ರಾಮಾಯಣದ ಶ್ರೀ ರಾಮನಾಗಲೀ, ಮಹಭಾರತದ ಶ್ರೀ ಕೃಷ್ಣನಾಗಲೀ ಅವತಾರಗಳಲ್ಲವ. ಇವ ಎಂತ ಮಾತಾಡೋದು, ಅನ್ನುತ್ತಾ ಸುಮ್ಮನ್ನಿದ್ದರು. ಇವರ ಮನೆಯಲ್ಲಿ ರಾಮನವಮಿಯಂತೆ ಕೃಷ್ಣಷ್ಟಮಿಯೂ ನಡೆಯುತ್ತಿತ್ತು. ತಮ್ಮ ನಂಬಿಕೆಯ ಬಗ್ಗೆ ಎಂದೂ ಸಂಶಯ ಬಂದಿರಲೇ ಇಲ್ಲ.
ನಮ್ಮೂರಿನಲ್ಲಿ ಇರುವ  ದೇವಸ್ಥಾನಗಳಲ್ಲಿ, ಆಂಜನೇಯ ಸ್ವಾಮಿ ಬಹಳ ಶಕ್ತಿವಂತ ಎನ್ನುವ ಪ್ರತೀತಿ. ಪ್ರತಿ ಶನೀವಾರದಂದು ಅಲ್ಲಿ ಭಜನೆಗಳು, ವಿಶೇಷ ಪೂಜೆಗಳು ಜರುಗುತ್ತವೆ. ಊರಿನವರೆಲ್ಲ ಒಂದುಕಡೆ ಸೇರುವದೇ ಒಂದು ಸಂಭ್ರಮ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ, ಜನರನ್ನು ಒಟ್ಟಾಗಿಸಲಿಕ್ಕೆ ಬಹಳ ಸಹಾಯವಾಗಿರಲಿಕ್ಕೆ ಸಾಕು ಇಂತಹವುಗಳು. ರುಚಿಯಾದ ಪ್ರಸಾದ ಸಿಕ್ಕುತ್ತಿತ್ತು ಎಲ್ಲರಿಗೂ. ದೇವಾಲಯಗಳ ಪ್ರಸಾದಗಳಲ್ಲಿ ಏನೋ ಒಂದು ವಿಶಿಷ್ಟ ರುಚಿ ಇರುವದಂತು ನಿಜ. ಮೊನ್ನೆ ಇಲ್ಲಿನ(ಈಗ ನಾನಿರುವ ಊರಲ್ಲಿ)ಪೆರುಮಾಳ್ ಟೆಂಪಲ್ ನ ಪ್ರಸಾದ ತಿಂದಾಗಿನಿಂದಲೂ ನನ್ನ ನಂಬಿಕೆಗೆ ಇನ್ನೂ ಬಲ ಬಂದಿತ್ತು.
ಕ್ರಷ್ಣ ಭಟ್ಟರ ವತ್ತಾಯಕ್ಕೆ ಈತನೂ ಹೋಗುತ್ತಿದ್ದ ಅನಿಸುತ್ತದೆ. ಪ್ರಸಾದ ಕೈಯಲ್ಲಿ ಹಿಡಿದು ಅದೇನು ಯೊಚಿಸುತ್ತಿದ್ದನೋ, ಹಾಗೆಯೇ 

ಕೈಯಲ್ಲಿ ಹಿಡಿದು ಮನೆಯತ್ತ ಹೋಗಿಬಿಡುತ್ತಿದ್ದ. ತಿನ್ನುತ್ತಿದ್ದನೋ, ಹಾಗೆಯೇ ಚೆಲ್ಲುತ್ತಿದ್ದನೋ ಹೊರಗಿನವರಿಗೆ ತಿಳಿಯುತ್ತಿರಲಿಲ್ಲ. 

ಪುಣ್ಯಾತ್ಮನ ಕೃಷ್ಣ ಭಕ್ತಿ ದಿನೇ ದಿನೇ ಹೆಚ್ಚುತ್ತಿತ್ತು. ನಮ್ಮೂರಲ್ಲಿ ಒಂದೂ ಕೃಷ್ಣ ದೇವಾಲಯವಿಲ್ಲ ಎಂಬುದೂ ಈತನ ಅಸಮಾಧಾನಕ್ಕೆ 

ಕಾರಣವಾಗಿತ್ತು. ಆಗಾಗ್ಗೆ ಹೇಳುತ್ತಲೂ ಇದ್ದ.