ಬುಧವಾರ

ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ


ಸುರಿವ ಮಳೆ  ಸುರಿದು ಬರಿದಾಗಿತ್ತು,ನನ್ನ ಕಣ್ಣೀರಿನಂತೆಯೇ.ಯಾಕೊ ಅತ್ತು ಹಗುರಾಗೋಣವೆಂದರೆ ಅಳುವು ಬರುತ್ತಿಲ್ಲಾ.ಮಾಡಂಚಿನಿಂದ ಮಳೆ ನೀರು ಬಿದ್ದು ಬಿದ್ದು ನೆಲ ಸವೆದಿತ್ತು,ಕೊರಕಲಾಗಿತ್ತು,ನನ್ನ ಬದುಕಿನಂತೆಯೆ.ಬಿದ್ದ ನೀರು ಆ ಇಳೆಯ ಒಡಲೊಳಕ್ಕೆ ಇಳಿಯಲೇ ಇಲ್ಲ ಆತನ ಪ್ರೀತಿಯಂತೆ.ಕೊರಕಲ ಸಂದಿಯನ್ನೂ ಬಿಡದೇ ಅಂಗಳದ ಮಣ್ಣ ಸಮೇತ ಹಾಗೆಯೇ ಕೊರೆದು, ತರೆದು ಮಳೆಯ ನೀರು ಕೆಂಪಾಗಿ ದೂರ ಹರಿದಿತ್ತು ನಮ್ಮ ಪ್ರೀತಿಯಂತೆಯೆ.ಮಣ್ಣ ಸಾರವೆಲ್ಲ ಮಳೆಯ ನೀರಿನೊಟ್ಟಿಗೆ ಹರಿದು ದೂರ ದೂರ ಸರಿದು ಸಾಗರವ ಸೇರಿತ್ತು ಉಪ್ಪಾಗಲು,ಮರಳಾಗಲು,ಥೇಟ್ ನನ್ನ ಕಣ್ಣಿರಿಂತೆಯೇ, ನನ್ನ ಬದುಕಿನಂತೆಯೇ.

ಅಂವ ಕಂಡಿದ್ದು ನಮ್ಮ ಮಲೆನಾಡಿನ ಆ ರಪ್ಪನೆ ಬಾರಿಸುವ ಮಳೆಗಾಲದಲ್ಲಿಯೇ.ನಾನು ಆಗ ಧಾರವಾಡದಲ್ಲಿ ಎಮ್ ಎ ಓದುತ್ತಿದ್ದೆ.ಇಂಗ್ಲಿಷ್ ನನ್ನ ಮೆಚ್ಚಿನ ವಿಷಯ. ಅವಗೆ ಹೇಗೋ ತಿಳಿದಿತ್ತು ಅನ್ನಿಸುತ್ತದೆ.ಆತ ಮಾತ ಶುರುವಲ್ಲಿಯೇ,
I'm Nobody! Who are you?
Are you – Nobody – too?

Then there's a pair of us?

Don't tell! they'd advertise – you know!
How dreary – to be – Somebody!

How public – like a Frog –

To tell one's name – the livelong June –

To an admiring Bog!



ಅಂದಿದ್ದ. ಎಮಿಲಿ ಡಿಕಿನ್ಸೊನ್ ರ ಪದ್ಯ.

ಇಲ್ಲಿ ಯಾರು ಯಾರಿಗು ಒತ್ತಾಯಿಸುವ ಅಗತ್ಯವಿಲ್ಲ, ಯಾರೋ ಅಗುವದಕ್ಕೆ ಹೋಗಿ ಎನೇನೊ ಆಗುವ ಅನಿವಾರ್ಯತೆ ಇಲ್ಲ,ನೀನು ನೀನಾಗಿರಲಿಕ್ಕೆ,ನಿನಗನಿಸಿದ್ದನ್ನ ಹೇಳಲಿಕ್ಕೆ ಯಾರ ಭಯವು ಇಲ್ಲ ಅಂದ.

ಕುಶಿ ಅನ್ನಿಸಿತು,ಮಹಿಳೆಯರ ಮೆಲೆ ಗೌರವವಿರುವವರನ್ನ ಕಂಡರೆ ನನಗೆ ಗೌರವ ಜಾಸ್ತಿ. ಹೀಗೆ ಪರಿಚಯ ೪ನೆ ವರುಷಕ್ಕೆ ಬಂದಿತ್ತು.ಮನೆಯಲ್ಲಿ ಮದುವೆಯ ಮಾತುಕತೆ ನಡೆದಿತ್ತು.ಜಾತಿ,ಆಚಾರ,ಗ್ರಹ ಗತಿಗಳೆಲ್ಲ ಪ್ರತಿಕೂಲವಾಗಿದ್ದವು.ಮನೆಯಲ್ಲಿ ಧಾರವಡದ ಬಿಸಿಲಲ್ಲಿ ಕಂಡ ಅವನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಕೊನೆಗು ಒಪ್ಪಲೆ ಇಲ್ಲ, ಆ ಮಳೆಗಾಲದಲ್ಲೂ.

ಅಂದು ನಮ್ಮನೆಯ ಕೆರೆ ದಂಡೆಯ ಮಗ್ಗುಲಲ್ಲಿ ಕೊನೆಯ ನಿರ್ಧಾರ.ಅದೆ ಸಿನಿಮೀಯ ತಿರುವುಗಳಿಗಾಗುವ ಅಂತ್ಯ ನಮ್ಮ ಜೀವನದ್ದು. ಬೇಜಾರಿನದ್ದು.
I cannot live with you,

It would be life,

And life is over there

Behind the shelf

………….



So we must keep apart,

You there, I here,

With just the door ajar

That oceans are,

And prayer,

And that pale sustenance,

Despair! -

Emily Dickinson

ಆ ಸಾಲುಗಳನ್ನ ಹೇಳಿಯೇ ಆತ ದೂರಸರಿದಿದ್ದು.

ಹ್ಮ್ಮ್ ಅಂದೇ ಮಳೆಗಾಲ ಶುರುವಾಗಿತ್ತು,ಜಡಿಮಳೆ. ಕನಸಾಗಿರಲಿ ಎಂದು ಕೈ ಚಿವುಟಿ ನೋಡಿಕೊಂಡಿದ್ದೆ.ಉರಿಯಲಿಲ್ಲ,ಉರಿಯಲಿಕ್ಕೆ ನೋವು ಗೊತ್ತಾಗುವದಾದರೂ ಹೇಗೆ? ಆ ನೋವೇ ಈ ನೋವ ನುಂಗಿದರೆ?
ಮತ್ತೆ ಅದೇ ಮಳೆಗಾಲ, ಅದೇ ಕಿಡಕಿಯ ಪಕ್ಕ ಅಂತೆಯೇ ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ.
ಉಸಿರು ಎಲ್ಲೋ ಕಳೆದು ಹೋಗಿದೆ,ಕಾಣದ ಅವನಂತೆ ಕಣ್ತುಂಬ ನಿದ್ರೆ ಬರದೆ ವರುಷಗಳಾಗಿದೆ,ಅಂದಿನ ದಿಟ್ಟತನ ಅವನೊಟ್ಟಿಗೇ ಮರೆಯಾಗಿದೆ ಮತ್ತೆ ಬಾರದಂತೆ.ಮತ್ತೆ ಮಳೆ ಶುರುವಾಗಿದೆ ಒಂದೇ ಸಮನೆ ಕಾಡುವ ನೆನಪುಗಳಂತೆ.

ಗುರುವಾರ



ನಾಕೇ ನಾಕು ತಂತಿ.....



ಅಬ್ಬಾ ಎಷ್ಟೋ ದಿನಗಳು ಅಲ್ಲಲ್ಲ ತಿಂಗಳುಗಳೆ ಸರಿದು ಹೋಗಿದ್ದಾವೆ ಏನನ್ನು ಬರೆಯದೇ. ಮಳೆಗಾಲ ಕಳೆದು ,ಚಳಿಗಾಲ ಮುಗಿದು ಬಿರು ಬೇಸಿಗೆಯೂ ಕೈಬೀಸಿ ಹೋಗಿಬರುತ್ತೇನೆ ಅನ್ನುತ್ತಿದೆ. ಮತ್ತೆ ವರುಣ ದೇವರ ಕೃಪೆಯಿಂದ ಆಗಸದಲ್ಲಿ ಮೋಡಗಳು ತೇಲಿ ಕುಬೇರನ ಲೋಕದ ನೆನಪನ್ನ ತರುತ್ತಿವೆ(ಕುಬೇರನ ಲೋಕವನ್ನ ಯಾವತ್ತು ನೋಡಿದ್ದೀಯಾ ಎಂದು ಕೇಳಬೇಡಿ, ಹಾಗೆ ಸುಮ್ಮನೇ..),ಆಗಾಗ ಆಂಗ್ಲ x, y, z, ಬರೆಯುವ ಕೋಲ್ಮಿಂಚುಗಳು, ನೆನ್ನೆ ಮೊನ್ನೆಯ ಗುಡುಗುಗಳು,ಬೆಂಗಳೂರಲ್ಲಿ ಮಳೆಗಾಲ ಶುರುವೇ ಆಗಿಬಿಟ್ಟೀತೇನೋ ಎಂಬ ಫೀಲ್ ಕಟ್ಟಿಕೊಟ್ಟಿವೆ.
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ನೆಗೆದಂತೆ ದಿನಗಳೆಲ್ಲ ಕಳೆದೆ ಹೋಗಿವೆ.ಇಷ್ಟೆಲ್ಲಾ ದಿನಗಳಲ್ಲಿ ಎಷ್ಟೆಲ್ಲಾ ಘಟನೆಗಳು ನಡೆದು ಹೋಗಿದ್ದಾವೆ
ಒತ್ತಡದ ಜೀವನಕ್ಕೊಂದು ತಡವಾದ ವಿಶ್ರಾಂತಿ ದೊರಕಿದೆ.ಬಹಳ ದಿನಗಳಿಂದ ಹಲವು ಅನಿಸಿಕೆಗಳು ತೇಲಿ ಬರುತ್ತಲೇ ಇದ್ದವು, ಎಲ್ಲವನ್ನು ಕೂಡಿಹಾಕಲಿಕ್ಕಾಗಿರಲಿಲ್ಲವಷ್ಟೇ.



*****ಒಂದು*****

ಬಿಡುವಿನ ವೇಳೆಯಲ್ಲಿ ಹಲವು ಪುಸ್ತಕಗಳನ್ನು ಓದಿ ಮುಗಿಸಿದೆ ಎನ್ನುವದು ಒಂದು ಸಾಧನೆಯ ಅಧ್ಯಾಯ. ಹಾಂ ಹೇಳಬೇಕೆಂದರೆ, ಬೇಂದ್ರೆಯವರ ಕವನ ಸಂಕಲನಗಳನ್ನು ಮತ್ತೆ ಓದಿದೆ ಈ ಬಾರಿ ಹೊಸದೊಂದೇ ಅರ್ಥ ಹುದುಕಿದೆ.ಹುಡುಕಿದೆ ಅನ್ನುವದಕ್ಕಿಂತ ದೊರಕಿದೆ ಅನ್ನುವದೇ ಸೂಕ್ತವಾದೀತು. ಪುಸ್ತಕಗಳನ್ನು ನೋಡಿದಾಗ ರುಚಿಕಟ್ಟಾದ ಭೋಜನ ದ ಚಿತ್ರ ಕಣ್ಮುಂದೆ ಬರುತ್ತದೆ ನನಗೆ. ಇದುವರೆಗೂ ಪುಸ್ತಕಗಳು ನೀಡಿದ ಕುಷಿಯನ್ನ ಮತ್ತೆಲ್ಲೂ ಹುಡುಕಲಿಕ್ಕಾಗಲಿಕ್ಕಿಲ್ಲ ಅನ್ನುವದು ಕುಷಿಯೂ ಅಲ್ಲದ ಬೇಜಾರು ಇಲ್ಲದ ಸಂಗತಿ .ಒಂದೇ ಉಸಿರಿನಲ್ಲಿ ಓದಿದ, ಖಲೆದ್ ಹೋಸೆನಿಯ 'Thousand Splendid Suns ಕಾದಂಬರಿ - ಸುಂದರ ಆಫ್ಘಾನಿಸ್ತಾನಕ್ಕಾದ ಗತಿಗಾಗಿ ಮರುಗುತ್ತದೆ, ಮತ್ತು ನಾನು ಭಾರತದಲ್ಲಿ ಜನಿಸಿದ ಬಗ್ಗೆ ಬಹಳ ಕುಶಿಯಾಗುತ್ತದೆ. ಆ ಕಾದಂಬರಿ ಓದಿದ ಕೂಡಲೇ ಅನಿಸಿದ್ದು ಇಷ್ಟೇ -'ನಾನು ಆಫ್ಘಾನ್ ದೇಶದಲ್ಲಿ ಹುಟ್ಟಲಿಲ್ಲವಲ್ಲ ಸಧ್ಯ'.ಅಫಘಾನಿನ ಜನರ ಬಗ್ಗೆ ಮರುಕ ಹುಟ್ಟಿಸುತ್ತದೆ,ಕತೆಯಲ್ಲಿನ ಮರಿಯಂ ಮತ್ತು ಲೈಲ ಎಂಬ ಇಬ್ಬರು ಮಹಿಳೆಯರು ಅಫಘಾನಿನ ಮಹಿಳೆಯರನ್ನ ಪ್ರತಿನಿಧಿಸುತ್ತಾರೆ, ಅಲ್ಲಿನ ಬಡತನ, ಯುದ್ಧ ಮತ್ತು ಅದರ ಪರಿಣಾಮಗಳು,ಮಹಿಳೆ ಗಿರುವ ಸ್ಥಾನಮಾನಗಳು ಎಲ್ಲವನ್ನ ಜಾಹೀರು ಮಾಡಿದೆ ಈ ದೊಡ್ಡ ಕಾದಂಬರಿ.ಖಲೆದ್ ಹೋಸೆನಿ , ಕೊಡುವ ವಿವರಣೆ, ಮರಿಯಂ ಪಾತ್ರವನ್ನ ಚಿತ್ರಿಸಿದ ಬಗೆ, ಮರಿಯಂನ ತಲೆಯಲ್ಲಿ ಬಂದು ಹೋಗುವ ವಿಚಾರಗಳ ನಿರೂಪಣೆ,ಎಲ್ಲವನ್ನ ಓದಿ ಮುಗಿಸುವ ಹೊತ್ತಿಗೆ, ನಿಮ್ಮಿದುರಲ್ಲಿ ,ಕಾಬೂಲ್, ಮರಿಯಂ,ಮತ್ತು ಎಲ್ಲ ಸಂಘರ್ಷಗಳಿಂದ ಎರಡು ದಿನಕ್ಕಾಗುವ 'hangover' ತಯಾರಾಗಿ ಬಿಡುತ್ತದೆ.



*****ಎರಡು*****


ಹಲವು ಒಳ್ಳೆಯ ಚಲನ ಚಿತ್ರಗಳನ್ನ ನೋಡುತ್ತೇನೆ , ಒಂದು ಸಾರೆಯಲ್ಲ ಹಲವು ಸಾರೆ.... ಮೊದಲ ಬಾರಿ ನೋಡುವಾಗ ಕಣ್ಣು ಬಿಟ್ಟುಕೊಂಡು,ಬಾಯೀ ಮುಚ್ಚಿಕೊಂಡು ನೋಡಿದರೆ ಮುಂದಿನ ಬಾರಿಯೆಲ್ಲ ಇವ ಈ ಕತೆಯನ್ನ ಒಂದು ಚೂರು ಹಿಂಗೆ ಮಾಡಿದ್ರೆ ಛೋಲೋ ಇತ್ತಲ್ಲ, ಈ ನಾಯಕನ ಚಿತ್ರಣ ಹೀಗಿದ್ದರೆ ಚೆನ್ನ, ನಾಯಕಿಗೆ ಅವಕಾಶ ಕಡಿಮೆ ಆದಹಾಗೆ ಅನಿಸುತ್ತಿದೆ, ಕತೆಯಲ್ಲಿ ಗಟ್ಟಿತನವಿಲ್ಲ,ಈ ಕತೆ ಮುಗಿಯದ ಹ್ಯಾಂಗೋವರ್ ಉಳಿಸಿದೆ ಅಲ್ಲ, ಎಂದೆಲ್ಲ ಯೋಚಿಸುತ್ತಾ, ಚಲನ ಚಿತ್ರದ ಕೊನೆಯ ಭಾಗಕ್ಕೆ ಕಾಯತೊಡಗುತ್ತೇನೆ : ಹಲವು ಚಲನ ಚಿತ್ರಗಳ 'ಮುಕ್ತಾಯ' ಬಹಳ ಸೂಕ್ಷ್ಮವಾಗಿರುತ್ತವೆ (ನಾನು ಹೇಳುತ್ತಿರುವದೆಲ್ಲ ಕಲಾತ್ಮಕ ಚಿತ್ರಗಳ ಬಗ್ಗೆ ನೆನಪಿರಲಿ.) ಅಷ್ಟೇ ಅಲ್ಲದೇ ಮನತಟ್ಟುವಂತಿರುವ, ಚಿತ್ರಗಳೆ ಮಾತಾಡುವ 'ಅಂತಿಮ' ಭಾಗವೇ ಕೆಲವು ಸಾರೇ ಚಲನ ಚಿತ್ರದ ಯಶಸ್ಸಿಗೆ ಕಾರಣ ವಾಗುತ್ತದೆ.ಇಲ್ಲಿ ಯಶಸ್ಸು ಎನ್ನುವದು ಪ್ರೇಕ್ಷಕರ ಮೆಚ್ಚುಗೆ ಮಾತ್ರ ಸೀಮಿತ.'ಮಡಗಾಸ್ಕರ್ ೩' ಬೆಂಗಳೂರಲ್ಲಿ ತಯಾರಾಗುತ್ತಿದೆ ಎಂಬುದನ್ನು ಕೇಳಿ ಬೆಂಗಳೂರಿಗೆ 'ಹಾಲಿವುಡ್ ವ್ಯಾಲ್ಯೂ' ವಾಹ್ ಎಂದು ಕುಶಿ ಪಡುತ್ತೇನೆ.'Cow' ಚಲನಚಿತ್ರ ದಂತಹ ಚಿತ್ರಗಳನ್ನು ನೋಡುವಾಗ ಅದೇ ಗುಂಗಿನಲ್ಲಿ ಎರಡು ದಿನಾ ಹಾಗೆ ಕಳೆದು ಹೋಗುತ್ತದೆ.


***** ಮೂರು*****

ಅದರೊಟ್ಟಿಗೆ,

ಬಂಗಾಲದಲ್ಲಿ ಸೂರ್ಯೋದಯವಾಗಿದೆ, ಚಟ-ಪಟ ಮಾತಾಡುವ ಸರಳ ಜೀವಿ 'ದೀದಿ' ಮಮತ ಅಧಿಕಾರಕ್ಕೆ ಬಂದಿದ್ದಾರೆ. ಪಕ್ಕದ ತಮಿಳುನಾಡಲ್ಲಿ 'ಅಮ್ಮ' ವಿಜಯ ಭೇರಿ ಬಾರಿಸಿದ್ದಾರೆ,ಮಹಿಳಾ ಮಣಿಗಳ ಯಾತ್ರೆ ಹೀಗೆ ಮುಂದುವರಿಯಲಿ. ವಾರ್ತಾ ವಾಹಿನಿಗಳು ಇನ್ನು ಸಾಕೆಂದು ಒಸಾಮ ಮತ್ತು ಓಬಾಮರ ಸುದ್ದಿಗಳನ್ನು, ತಕ್ಕಮಟ್ಟಿಗೆ ನಿಲ್ಲಿಸಿದ್ದಾರೆ. ವಾರಗಟ್ಟಲೆ ಅದೇ ಅದೇ ಸುದ್ದಿಯನ್ನ, ವಿಕಾರಗೊಂಡ ಭಯಾನಕ ಛಾಯಾಚಿತ್ರಗಳನ್ನ ನೋಡಿ ನೋಡಿ ಬೇಸತ್ತಿದ್ದ ಮನಕ್ಕೆ 'ಕೆನ್ಸ್ ಚಲನ ಚಿತ್ರೋತ್ಸವ' ಸ್ವಲ್ಪ ತಂಪು ತಂದಿದೆ:). ಐ ಪಿ ಲ್ ಮತ್ತು ಬೇಸಿಗೆಯ ರಜ ಮುಗಿಯುತ್ತಿದೆ.




ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?

ಶುಕ್ರವಾರ

ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ !

ನೀಲಿ ಬಣ್ಣದ ವಸ್ತ್ರದ ಅಲಂಕಾರ,ಅದರೊಳಗೆ  ಚಿನ್ನದ ಬಣ್ಣದ ಇನ್ನೊಂದು ಅಂಗಿ, ಸಾಥ್ ಕೊಡಲಿಕ್ಕೆಂದೇ ಬಿಳಿಯ ಬಣ್ಣ,  ಚಿಕ್ಕದು ,ದೊಡ್ಡದು,ಇನ್ನೂ ದೊಡ್ಡದು ,ಹೀಗೆ ತಹೇವಾರಿ ಗಾತ್ರಗಳಲ್ಲಿ.. ನೀಲಿ ಬಣ್ಣದ್ದು,ಬಂಗಾರದ ಬಣ್ಣದ್ದು
ಒಮ್ಮೆ ನೋಡಿದರೆ ಮತ್ತೆ ತಿರುಗದೆಯೆ ಹಾಗೆ ಹೋಗಲಿಕ್ಕಾಗುವದಿಲ್ಲ,ಅಂತಹ ಸೆಳೆತ ಆ ನೀಲಿ ಮಾಟಗಾತಿಯದು. ಸುಂದರಿ ಅನ್ನಲಿಕ್ಕಾಗದಿದ್ದರು ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ ,ಅದೇಕೋ ಏನೋ ,ನೋಡುವವರು ಕುರುಬಿಯಾರೆಂದೋ ಏನೋ ಈ ಮಾಟಗಾತಿ ಯ ಬಣ್ಣ ಕಪ್ಪು- ಅಮ್ಮ ಹೇಳೋ ಹಾಗೆ, ಅದೇ ಕಾಫೀ  ಕಲರ್ರು. 'ಕಬ್ಬು ಡೊಂಕಾದರೆ ಸಿಹಿ ಡೊಂಕೆ' ಅನ್ನುವ ಗಾದೆ ಇದೆಯಲ್ಲಾ,ಅದೇ ತರ ಓಡಳೊಳಗೆ ಮುಗಿಯಲಾರದಷ್ಟು ಸಿಹಿ ಹಾಂ..ಡಬ್ಬಿ ತುಂಬಿಸಿಡುವಷ್ಟು .
ಪುಟ್ಟಿ ನೀನು ಊಟ  ಬೇಗ ಮಾಡ್ಬಿಟ್ರೆ, ಹೋಮ್‌ವರ್ಕ್ ಎಲ್ಲ ಬೇಗ ಮುಗ್ಸಿ ಬಿಟ್ರೆ, ಹಟ ಮಾಡದೇ ಇದ್ರೆ ...ಎನ್ನುವ ಎಲ್ಲ  'ಟ್ರೇ,ದ್ರೆ' ಗಳಿಗೆ ಪರಿಹಾರ ಆ ಮಾಟಗಿತ್ತಿಯೇ ...ನಂಗೂ ಅಮ್ಮಂಗೂ ಎಂದಿಗೂ ಗೊತ್ತಿದ್ದುದು.
ಇನ್ನೊಂದು ಮತ್ತೊಂದು ,ಈ ಕೈಗೊಂದು ಇನ್ನೊಂದು ಕೈಗೆ ಇನ್ನೊಂದು ...ಮುಗಿಯದ ಕತೆ ಎಂದು ಅಮ್ಮ ಅರಿತಾಗ, ನಾಳೆಗೆ ಮತ್ತೊಂದು ಎಂದು ಸಮಾಧಾನ ಮಾಡಿದ್ದು ಅಮ್ಮನ ಜಾಣ್ಮೆ.
ಅದು -------->Cadbury Dairy Milk

ಭಾನುವಾರ

ಮತ್ತೇನೂ ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ


ನನ್ನ ಆಫೀಸಿನ ೧೧ ನೆ ಮಹಡಿಯಲ್ಲಿ ಇರುವದು ನನ್ನ ಡೆಸ್ಕ್,ಒಟ್ಟು 10ಲಿಫ್ಟ್ ಗಳಿದ್ದಾವೆ ಅಲ್ಲಿ .ಬೆಳಿಗ್ಗೆ ೮ ಕ್ಕೆಲ್ಲ ಲಿಫ್ಟ್  ಸುಮಾರಾಗಿ ಖಾಲಿ ಇರುತ್ತದೆ.ಆದ್ದರಿಂದ ನಾನೇರಿದ ಲಿಫ್ಟ್, ಬೇರೆ ಮಹಡಿಗಳಲ್ಲಿ ನಿಲ್ಲದೆ,ಸೀದಾ ೧೧ ನೆ ಮಹಡಿ ತಲುಪಿಬಿಡುತ್ತದೆ.ಆಗಲೇ ನನಗೆ ಒಂದು ತರದ ಸಮಾಧಾನ,ಎಲ್ಲಾಮಹಡಿಗಳಲ್ಲಿ ನಿಲ್ಲುತ್ತಾ ಮೇಲೇರ ತೊಡಗಿದರೆ,ಯಾಕೋ ವಿಪರೀತ ಅಸಮಾಧಾನ.೫ ನಿಮಿಷಕ್ಕೆ ಬರಬೇಕಾದ್ದು,೭ ನಿಮಿಷ ತೆಗೆದುಕೊಂಡರೆ ಅದರ ಬಗ್ಗೆ ಕೆಟ್ಟ ಅಸಮಾಧಾನ.ಲಿಫ್ಟೆ ಇಲ್ಲದಿದ್ದರೆ ಎಂಬುದನ್ನ ಯೋಚಿಸುವದಕ್ಕೂ ಹೋಗುವದಿಲ್ಲ,ಆತುರತೆ 'ಆಧುನಿಕತೆಯ ಉಡುಗರೆಯ?ಇರಬೇಕು .ಜೀವನ ಸರಳವಾದಷ್ಟು ,ಸುಲಭವಾದಷ್ಟು ಮತ್ತೂ ಸುಲಭವಾಗಬೇಕು,ಸರಳವಾಗಬೇಕೆಂಬುದು ದುರಾಸೆ ಅಲ್ಲವ?(ಹ್ಮಮ್, ಇಂದಿನ ಎಲ್ಲಾ ನವನವೀನ ಆವಿಷ್ಕಾರಗಳಿಗೆ ,ಬರುತ್ತಿರುವ ಹೊಸ ಉದ್ಯಮಗಳಿಗೆ ಇದೇ ಮೂಲ)ನಾನೊಬ್ಬಳು ಹುಟ್ಟಾ ಆತುರಗಿತ್ತಿ,ದಡ್ ದಡ್ ಎಂದು ಎಲ್ಲಾ ಆಗಿಬಿಡಬೇಕು,ಕಣ್ಮುಚ್ಚಿ ತೆರೆಯುವಷ್ಟರಲ್ಲಿ ,ಇಲ್ಲದ್ದು ಬಂದುಬಿಡಬೇಕು (ಅದನ್ನು ನಾನು 'Effcient Way' ಅನ್ನುವದು )

ಆದರೂ,ಇತ್ತೀಚಿಗೆ ನನ್ನ ಆತುರ ಪ್ರವ್ರತ್ತಿಗೆ ಕಡಿವಾಣ ಬಿದ್ದಿದೆ (ಮತ್ತೇನು ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ:ಕೊನೆಯಲ್ಲಿ ಅದರ ಬಗ್ಗೆ ಬರೋಣ.)ತುಂಬಿದ ಲಿಫ್ಟ್ ನ ಕನ್ನಡಿಯಲ್ಲಿ ತನ್ನ ಅಲಂಕಾರ ಸರಿಯಾಗಿದೆಯೋ ಇಲ್ಲವೋ ಎಂದು ಪದೇ ಪದೇ   ಕನ್ನಡಿಯತ್ತ ನೋಡುತ್ತಿರುವ ಆ ನೀರೆಯ ನಾಜೂಕು, ಬಿಗಿದುಕೊಂಡ ಕೊರಳ ಪಟ್ಟಿ (ಟೈ ) ಸರಿಪಡಿಸಿಕೊಳ್ಳುವ ಮಹಾನುಭಾವ ,ಕಾಪಿಚಿನೋ ಕೈಯಲ್ಲಿ ಹಿಡಿದು,ಕಣ್ಣು ಕಣ್ಣು ಬಿಡುತ್ತಿರುವ ಚೀನಿ ಯುವಕ,ಯುವತಿ,ಜಗತ್ತೇ ತಲೆಯ ಮೇಲಿದೆಯೇನೋ ಎಂಬ ಮುಖಮಾಡಿ ಕೈಯಲ್ಲಿನ ಬೆರ್ರಿ ಯಲ್ಲಿ ಇ-ಮೇಲ್ ಓದುತ್ತಿರುವ ಗಂಭೀರ ಮುಸುಡಿಯ ಮ್ಯಾನೇಜರ್ ,ತನ್ನದೇ ಫೋಟೋವನ್ನು ಫ್ರೇಮು ಹಾಕಿ ಕುತ್ತಿಗೆಗೆ ನೇತುಹಾಕಿಕೊಂಡಿರುವ ಆತಾ, ಆಕೆ .....ಅಯ್ಯೋ ಇಷ್ಟು ದಿನ ಎಷ್ಟೆಲ್ಲಾ ಮಿಸ್ ಮಾಡಿಕೊಂಡಿದ್ದೆನಲ್ಲ  ಅಂತ ಮೊನ್ನೆ ಅನಿಸಿತ್ತು.

ಮನೆಗೆ ಬಂದು ಬಾಗಿಲು ತೆರೆಯಲು ಐಡಿ ಕಾರ್ಡ್ ಹಿಡಿಯುವದು , ಮಾತಿನಲ್ಲಿ ನೂರುಬಾರಿ 'Issue' ಎಂಬ ಪದ ಬಳಸುವದು ಇವೆಲ್ಲ ವ್ರತ್ತಿ ಕೊಟ್ಟ ವರ.
                              * **** ******* **** **** **** ***
ನಾನು ಮೊದಲೇ ಪ್ರಾಮಿಸ್ ಮಾಡಿದಂತೆ, ಚಿತ್ರಾ ದಿವಾಕರುಣಿ ಯವರ 'One Amazing Thing ' ಕಾದಂಬರಿಯ ಕತೆ ಹೇಳಿಬಿಡುತ್ತೇನೆ;

೯ ಜನರ ತಂಡವೊಂದು, ಅಮೇರಿಕದ ನಗರವೊಂದರಲ್ಲಾದ ಭೂಕಂಪದಿಂದಾಗಿ,ವೀಸಾ ಆಫೀಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ:ಉಮಾ (ಅಮೇರಿಕಾದಲ್ಲಿ ಬೆಳೆದ ಭಾರತೀಯ ಕೂಸು) ,ತಾರಿಕ್ (ಬದಲಾದ ಅಮೇರಿಕಾದ ಬಗ್ಗೆ ಕೋಪವುಳ್ಳ ಮುಸ್ಲಿಂ ಯುವಕ), ಮತ್ತೊಬ್ಬ ಮಾಜಿ ಸೈನಿಕ ,ವೀಸಾ ಕಚೇರಿಯ ಅಧಿಕಾರಿ ,ಚೈನೀಸ್ - ಇಂಡಿಯನ್  ಮಹಿಳೆ ಮತ್ತೂ ಆಕೆಯ ಮಗಳು ಲಿಲಿ ,ವಯಸ್ಸಾದ ಬಿಳಿಯ ದಂಪತಿಗಳು, ಇವರೆಲ್ಲ ಕಾದಂಬರಿಯ ಪಾತ್ರಗಳು. ತಮ್ಮನ್ನು ರಕ್ಷಿಸಲು ಬರುವ  ಸಹಾಯ ತಂಡಕ್ಕಾಗಿ ಕಾದುಕುಳಿತಿರುವಾಗ, ಸಮಯ ಕಳೆಯಲು ತಮ್ಮ ಜೀವನದ ಅತಿ ಅದ್ಭುತ ಅನಿಸುವ,
ಅದುವರೆಗೂ ಯಾರಿಗೂ ಹೇಳಿರದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.


ಅಮೇರಿಕಾದ 'Houston Univercity' ಯಲ್ಲಿ ಪ್ರೊಫೆಸರ್ ಆಗಿರುವ ಈಕೆಯ ಹಲವು ಸಂದರ್ಶನಗಳನ್ನು ಓದಿದ್ದೇನೆ, ಆಕೆಯಿಂದ ಹಲವು ಮಾರ್ಗದರ್ಶನಗಳನ್ನೂ ಪಡೆದಿದ್ದೇನೆ. ಆಕೆಯ ಬರವಣಿಗೆಯ ಶೈಲಿಯಲ್ಲಿ,ವಸ್ತು ವರ್ಣನೆಯಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು.ಆಕೆಯ ಸರಳ ಬರಹ ನನಗೆ ತುಂಬಾ ಇಷ್ಟವಾದದ್ದು. ಮುಖ್ಯವಾಗಿ ಅನಿವಾಸಿಗಳ ಜೀವನದ ತುಮುಲಗಳು,ಮಹಿಳೆ, ಆಕೆಯ ಬರಹದ ವಿಷಯಗಳು. ಆಕೆಯ 'Palace Of Illusions'ಇನ್ನೊಂದು ಇಷ್ಟವಾದ ಕೃತಿ(ದ್ರೌಪದಿ ಮತ್ತು ಕರ್ಣನ ಕುರಿತಾದದ್ದು)

                                                    ****************
ಕೊನೆಯದೊಂದು ಪ್ರಶ್ನೆ :

- ನನ್ನ ಮೊದಲಿನ ಜೀವನಕ್ಕೆ ಹಿಂತಿರುಗಲು ಹಾದಿಗಳಿಲ್ಲ- ಕೂಡಿಸುವ ಸೇತುವೆಗಳು ಮುರಿದಿವೆ ;ಅಷ್ಟೇ ಅಲ್ಲ ,ನನಗೆ ನನ್ನಿದುರು ಯಾವ ಹಾದಿಗಳು ಕಾಣುತ್ತಿಲ್ಲ.

ಅವರು ಹೇಳಿದ್ದು :
ಯಾವುದು ಇಲ್ಲ, 'ಹಾದಿ'ಎನ್ನುವದು ನಿನ್ನ ಮನದ ಭ್ರಮೆ.ಮನಸ್ಸಿದೆಯಲ್ಲ, ಅದು ತನ್ನ ಗುರಿಸಾಧಿಸಲು, ಆಸೆ ಪೂರೈಸಿಕೊಳ್ಳಲು ಕನಸುಗಳನ್ನು ಕಾಣುತ್ತಲೇ ಸಾಗುತ್ತದೆ. ಮನಸ್ಸಿನ ಈ ವ್ಯವಹಾರಗಳ ಛಾಯೆಯೇ 'ಹಾದಿ '.ಮೊದಲು ಏನೋ ಬೇಕೆಂದುಕೊಳ್ಳುತ್ತೀಯ,ಸಹಜವಾಗಿ ಅದು ಬೇಕು,ಇದು ಬೇಕು,ಇತ್ಯಾದಿ 'ಬೇಕು'ಗಳ ವ್ಯವಹಾರ ಭವಿಷ್ಯತ್ತಿಗೆ ಸಂಬಂಧಿಸಿದ್ದು.ಭವಿಷ್ಯತ್ ವರ್ತಮಾನದಲ್ಲಿಲ್ಲ, ಹಾಗಂದ ಮೇಲೆ ನಮ್ಮ ಬಳಿ ಇರುವ ಇವತ್ತಿಗೂ, ಇನ್ನೂ ಬಾರದ ನಾಳೆಗೂ ಸೇತುವೆ ಕಟ್ಟಿದೆ ಅನ್ನಿಸಿದರೆ ಅದು ನಿನ್ನ ಕಲ್ಪನೆ,ಭ್ರಮೆ .

ನಿನಗೆ ಎಲ್ಲೂ ಹೋಗುವದಕ್ಕಿಲ್ಲ, ನೀನು ಎಲ್ಲಿ ಹೋಗಬೇ ಕೆಂದಿರುವೆಯೋ ಅಲ್ಲಿಯೇ ಇದ್ದೀಯ,ಅದು ನೀನು ಸಾಧಿಸಿದ್ದಲ್ಲ, ನಿನಗೆ ದಕ್ಕಿದ್ದು .

ಸ್ನೇಹಿತರೇ , ಇವತ್ತು ನನಗೆ ದಕ್ಕಿದ ಸಮಯ ಇಷ್ಟೇ.ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು

ಸೋಮವಾರ

ಮತ್ತೆ ಅದೇ ಸಂಭ್ರಮ ! ಇತ್ತ ಬರದೇ ,ಏನನ್ನೂ ಬರೆಯದೇ ದಿನಗಳೆe ಉರುಳಿ ಹೊಗಿವೆ.ಪುರುಸೊತ್ತಿನಲ್ಲಿ, ನಾಲ್ಕಾರು ಪುಸ್ತಕ ಓದಿದ್ದು ಬಿಟ್ಟರೆ,ಫೇಸ್ ಬುಕ್ ನಲ್ಲಿ ಚುಟುಕು ಸಂದೇಶಗಳನ್ನ ಹಾಕುತ್ತಿದ್ದುದನ್ನ ಬಿಟ್ಟರೆ ಮತ್ತೇನನ್ನು ಮಾಡಿಯೇ ಇಲ್ಲ. ಈ ನಡುವೆ ಹೇಳಬೇಕೆಂದುಕೊಂಡಿದ್ದ ಹಲವು ವಿಷಯಗಳು ಹಳೆಯದಾಗಿವೆ,ಹಾಂ ಹೊಸ ವಿಷಯಗಳು ಬಂದು ಸೇರಿವೆ .ಈ ಸಾರೇ ನಾನೋದಿದ ಪುಸ್ತಕಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಓದಿ ಖುಷಿಯಾಗಿದ್ದು,ಜೋಗಿಯವರ ಸೂಫೀ ಕತೆಗಳನ್ನ,ಚಿತ್ರಾ ದಿವಾಕರುಣಿಯವರ One Amazing Thing,ಮತ್ತು ಇನ್ನೂ ಹಲವು, ಎಷ್ಟು ಓದಿದರು   ಹಳೆಯದೆನಿಸದ ಪ್ರೀತಿಯ ಲಂಗೂಲಾಚಾರ್ಯರದ್ದು .

ನನ್ನ ಮೆಚ್ಚಿನ ಆಕೆ ಇತ್ತೀಚೆಗೆ ಖುಷಿ ಇಂದ ಇದ್ದಾಳೆ,ಮನೆಯಲ್ಲಿ ಮತ್ತೆ ಸಂಭ್ರಮ ಮರುಕಳಿಸಿದೆ .ಮತ್ತೆ ಬರೆಯುತ್ತೇನೆ,ಇವತ್ತು ಲಭ್ಯವಿದ್ದ ಸಮಯ ಇಷ್ಟೇ....

ಗುರುವಾರ

ಕಳೆದದ್ದು ಸಿಕ್ಕಿಲ್ಲಾ


ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವಾಗ ಭಟ್ಟರನ್ನ ತಾಕುತ್ತಿದ್ದುದು ಅವರಪ್ಪನ ನೆನಪಲ್ಲ, ‘ತೋ ನೀನು ಬ್ರಾಹ್ಮಣನಾಗಿ ಶ್ರಾದ್ಧಮಾಡದೇ ನಿನ್ನ ಅಪ್ಪನನ್ನು ದುರ್ಗತಿಗೀಡು ಮಾಡುವೆಯಾ, ಮಗನಾಗಿ ನಿನಗೆ ಅಷ್ಟು ಯೋಗ್ಯತೆಯೂ ಇಲ್ಲವ ‘ ಎಂದ ಸಂಬಂಧಿಗಳ ಬಿರು ನುಡಿ , ಕೆಲವರ ಹಿತನುಡಿ , ಅಮ್ಮನ ಆಗ್ರಹ....... ಅಮ್ಮನ ನಂಬಿಕೆಗಾಗಿ ತಾನು ಮಾಡುತ್ತಿರುವದಲ್ಲವ ..? ಅಂತೂ ಅಪರ ಕಾರ್ಯಗಳನ್ನು ಸಾಂಗವಾಗಿ ಮುಗಿಸಿದ್ದಾಯಿತು ,ನನ್ನ ಮಗನಿಗೆ ಹೇಳಬೇಕು ,ನಾನು ಸತ್ತಾಗ ಶ್ರಾಧ್ಧ ಮಾಡುವದೆಲ್ಲ ಬೇಡವೆಂದು , ದೇಹವನ್ನ ಯಾವುದಾದರೊಂದು ವೈದ್ಯಕೀಯ ಕಾಲೇಜ್ ಗೆ ದಾನ ಮಾಡಿ ಎನ್ನಬೇಕು ಅಂದುಕೊಂಡಿದ್ದೆ.....ಈಗಂತೂ ದೇಹದಾನ,ನೇತ್ರ ದಾನ ಎಷ್ಟು ಅಮೂಲ್ಯವಾದುದು. ‘ಶ್ರದ್ಧಾ ಇವ ಶ್ರಾದ್ಧಃ’ ಶ್ರದ್ಧೆಯೇ ಶ್ರಾದ್ಧ ಅಲ್ಲವ.ಶ್ರದ್ಧೆಯೇ ಇಲ್ಲದವ ಶ್ರಾದ್ಧ ಮಾಡಿ ಪ್ರಯೋಜನವೇನು? ಪುರೋಹಿತರನ್ನ ಕರೆದು ಕೈಯಲ್ಲಿ ಕಾಸಿಲ್ಲದಿದ್ದರು ಮೈ ತುಂಬಾ ಸಾಲ ಮಾಡಿ ಆ ಜೋಯಿಸ್ರು ಹೇಳಿದ ಕಡೆಯಲ್ಲ ದಕ್ಷಿಣೆ ಇಟ್ಟು ,ಪಂಚೆ ,ತಂಬಿಗೆ,ಅಕ್ಕಿ ದಾನ ಮಾಡಿ ... ಶ್ರಾದ್ಧ ಮುಗಿಸಿ ಕೊನೆಗೆ ಸಾಲ ತೀರಿಸಲು ಅಲೆದಾಡುವವರನ್ನು ನೋಡಿ ಅಯ್ಯೋ ಅನಿಸಿತ್ತು. ಅಲ್ಲ ಸ್ವಾಮಿ, ಇದೆಲ್ಲ ಬೇಕಿತ್ತ ಎಂದರೆ, ನಿನ್ನದೊಂದನ್ನು ನೀನು ನೋಡ್ಕೊಳ್ಳೋ..ಎಂದಿದ್ದ ನನ್ನ ಸ್ನೇಹಿತನೊಬ್ಬ.....
ಶ್ರಾದ್ಧ ಮುಗಿಸಿ ಕುಳಿತ ಭಟ್ಟರನ್ನ ಕಾಡಿದ್ದು ಹಳೆಯ ನೆನಪುಗಳು..
ಅಪ್ಪ ಹಾಗೆ ಅಲ್ಲವ? ಎಲ್ಲವೂ ತನ್ನ ಮೂಗಿನ ನೇರಕ್ಕೇ ಆಗ್ಬೇಕು ಅಂತಿದ್ದೋನು .ಸಾಯುವ ಗಳಿಗೆಯಲ್ಲೂ , ಗಂಗೆಯ ನೀರು ಕೂಡಿದೇ ಉಸಿರು ಬಿಟ್ಟಿದ್ದು ..... ಎಲ್ಲಿ ನೋಡಿದರು ಇದು ಮಡಿ, ಇದು ಮೈಲಿಗೆ ...ಆತನ ಕೂಗಾಟ ಸಹಿಸಲಾಗದೆ ಸುಮ್ಮನೇ ಎದುರಾಡುವದೇಕೆಂದು ಸುಮ್ಮನ್ನಿದ್ದುದಾಗಿತ್ತು. ಆತನೊಂದು ಸರ್ವಾಧಿಕಾರಿಯೇನೋ ಎಂಬಂತೆ ಬದುಕಿದ್ದ... ಮೊನ್ನೆ ಸಾಯುವವರೆಗೂ ,ಕೊನೆಯ ಕ್ಷಣಗಳಲ್ಲೂ ಆತ ಬದಲಾಗಲೇ ಇಲ್ಲ, ಆತ ಬದಲಾಗುತ್ತಾನೆ ಎಂದು ನಿರೀಕ್ಷಿಸಿದ್ದೇ ತನ್ನ ತಪ್ಪೇನೋ ಅನಿಸಿತ್ತು.. ಅಮ್ಮನನ್ನ ನೋಡಿ ತಾನು ಸುಮ್ಮನಿದ್ದುದಾಗಿತ್ತು... ಅಪ್ಪ ಹೇಳಿದ್ದೆಲ್ಲ ಶಿರಸಾವಹಿಸಿ ಮಾಡುತ್ತಿದ್ದಳು ..ಆಕೆಗೆ ಅಪ್ಪನೇ ದೇವರಾಗಿದ್ದ....ಅಪ್ಪನನ್ನ ಬಿಟ್ಟು ಮನೆಯ ಅಂಗಳ ದಾಟಿದ್ದೂ ಇಲ್ಲ... ಅಮ್ಮನಿಗೆ ಅಪ್ಪನೇ ದೈವ ,ಅಪ್ಪನಿಗೋ ಗೋಕರ್ಣಾಧೀಶ್ವ ರನೇ ಮನದ ಒಡೆಯ.. ಇದು ಆದರ್ಶವಾ ? ಗೊತ್ತಿಲ್ಲ...
ಹ್ಮ್... ಎಳೆವೆಯಲ್ಲೇ ಅಪ್ಪನ ಒತ್ತಾಯಕ್ಕೆ ಮಣಿದು ಬನಾರಸ್ಸು ಸೇರಿದ್ದಾಗಿತ್ತು.. ಮನೆಯನ್ನ ,ಮಮತೆಯ ಅಮ್ಮನ ಬಿಟ್ಟು ಹೋಗಲಾರೆ ಎಂದು ಅದೆಷ್ಟು ವಾದಿಸಿದ್ದೆ ತಾನು , ಮೇಲಾಗಿ ,ಸಂಸ್ಕೃತ ಕಲಿಯುವಲ್ಲಿ ,ವೇದಾಧ್ಯಯನ ದಲ್ಲಿ ಆಸಕ್ತಿಯೂ ಅಷ್ಟಕ್ಕಷ್ಟೇ.......ಕೊನೆಗೂ ಅಪ್ಪನದೇ ಮೇಲುಗೈ . ಅಂತೂ ಪಕ್ಕದ ಮನೆಯ ಬಾಲೂ ಭಟ್ಟನನ್ನ ಜೊತೆ ಮಾಡಿ ಬನಾರಸ್ಸು ಸೇರಿಸಿಯೇ ಬಿಟ್ಟಿದ್ದ ಅಪ್ಪ. ಕಾಲೇಜು ಸೇರಿ ವಿಜ್ಞಾನ ಕಲಿಯಬೇಕೆಂಬ ಹಂಬಲವನ್ನ ಮೂಟೆಕಟ್ಟಿ ಇಟ್ಟಿದ್ದೆ ತಾನು ....... ...ನಾನು ಬನಾರಸ್ಸಿನಲ್ಲಿ ಸಂಸ್ಕೃತ ಕಲಿಯೋಕೆ ಹೋದಾಗ ಹಾಂ....ಆಕೆ ಸಿಕ್ಕಿದ್ದು ಅಲ್ಲೇ ಅಲ್ಲವ? ಶುದ್ದ ಮೊಗದ ಗಂಗೆಯೇ ಆಕೆ. ಬನಾರಸ್ಸಿನಲ್ಲ್ಲಿ ಉಳಿದು ೨ ವರ್ಷಗಳಾಗುವವರೆಗೂ ಆಕೆ ತನಗೆ ಕಂಡಿರಲೇ ಇಲ್ಲ. ಒಮ್ಮೆ ಹೀಗೆ ಸುಮ್ಮನೇ ಸ್ನೇಹಿತನ ಬಲವಂತಕ್ಕೆ ತಿರುಗಾಡಲು ಹೋದಾಗ ಆಕೆ ಕಣ್ಣಿಗೆ ಬಿದ್ದಿದ್ದಳು...ಇನ್ನೋರ್ವ ಸ್ನೇಹಿತನ ಒಬ್ಬಳೇ ತಂಗಿ . ಆಕೆಯನ್ನ ಮತ್ತೆ ಮತ್ತೆ ನೋಡುವ ಹಂಬಲ ವಾಗಿತ್ತು . ಆಕೆ ಇನ್ನೂ ‘ಪ್ರಪಂಚವೆಂದರೇ ಬನಾರಸ್ಸು, ಬನಾರಸ್ಸೇಂದರೇ ಪ್ರಪಂಚ’ ಎಂದು ನಂಬಿದ ಮುಗ್ಧೆ. ನಂತರ ಸ್ನೇಹಿತನ ಮನೆಗೂ ಹೋಗಿದ್ದೆ ಹಲವು ಸಾರೇ ,ಆಕೆಯನ್ನ ನೋಡುವ ಸಲುವಾಗಿ. ಆಕೆಯೂ ಜೊತೆಗೆ ಹೆಜ್ಜೆ ಹಾಕುವ ಸೂಚನೆ ಕೊಟ್ಟಿದ್ದಳು. ಹೀಗೆಯೇ ಪ್ರೀತಿ ಸಾಗಿತ್ತು ...ಬರೋಬ್ಬರಿ ೪-೫ ವರುಷ......... ಆಕೆಯ ಜೊತೆಗೂಡಿ ಹಣತೆಹಚ್ಚಿ ನದಿಯಲ್ಲಿ ತೇಲಿಬಿಟ್ಟಿದ್ದೆ ,ನಮ್ಮ ಇಷ್ಟಾರ್ಥ ಸಿದ್ದಿಸಲೆಂದು ಪ್ರಾರ್ಥಿಸಿದ್ದೆ ...ಆ ಹಣತೆಯ ಬೆಳಕಲ್ಲಿ ಎಷ್ಟು ಶುದ್ಧವಾಗಿ ಕಂಡಿದ್ದಳು ಆಕೆ. ಬಾರದ ಭಾಷೆಯಲ್ಲಿ ಪ್ರೀತಿ ಇತ್ತು , ಕಣ್ಣಲ್ಲಿ, ಈ ಗೆಳೆಯ ಎಂದಿಗೂ ಕೈ ಬಿಡಲಾರನೆಂಬ ನಂಬಿಕೆ ಇತ್ತು.. ಅದು ಹೇಗೋ ಬಾಲೂ ಭಟ್ಟನ ಮೂಲಕ ಅಪ್ಪನವರೆಗೂ ಹೋಗಿತ್ತು. ಅಪ್ಪ, ಮಾಣಿಯನ್ನು ಇನ್ನೂ ಅಲ್ಲೇ ಬಿಟ್ಟರೆ ಪೂರ್ತಿ ಕೆಟ್ಟು ಹೋಗಿಬಿಟ್ಟಾನು ,ಯಾವಳನ್ನೊ ಕಟ್ಟಿಕೊಂಡೇ ಬಂದಾನು ಎಂದು ,ಅಮ್ಮನಿಗೆ ಹುಷಾರಿಲ್ಲ ತಕ್ಷಣ ಹೊರಡು ಎಂದು ತಂತಿ ಕಳುಹಿ ಕರೆಸಿ ಕೊಂಡಿದ್ದ...ತಾನು ಇಲ್ಲಿ ಬಂದಾಗ ಎಲ್ಲವೂ ಸರಿಯಾಗಿಯೇ ಇತ್ತು..., ಬಂದಮೇಲೆ, ತನಗೂ ವಯಸ್ಸಾಯಿತು ಇಲ್ಲಿಯೇ ನಿನ್ನ ಪೌರೋಹಿತ್ಯ ನಡೆಸು ಅಲ್ಲಿ ಹೋಗುವದೇ ಬೇಡ ಎಂದು ಬಲವಂತ ಮಾಡಿ ತಿರುಗಿ ಹೋಗದಂತೆ ಮಾಡಿಬಿಟ್ಟಿದ್ದ. ಆಕೆಯನ್ನು ಇಲ್ಲೇ ಕರೆಸಿಕೊಂಡರಾಯಿತೆಂದು ಕೊಂಡಿದ್ದ ನನಗೆ ಬಲವಂತವಾಗಿ ಸುಶೀಲಳನ್ನು ಗಂಟು ಹಾಕಿಸಿ ಬಿಟ್ಟಿದ್ದ. ಬ್ರಾಹ್ಮಣನಾಗಿದ್ದೇ ತಪ್ಪಾ ?ಅನಿಸಿತ್ತಲ್ಲ.......... ಆಕೆಯನ್ನ ಬಿಟ್ಟು ಬರುವಾಗೆಷ್ಟು ನೊಂದಿತ್ತು ತನ್ನ ಮನ..... ಕಾಲ ,ಜನರು ಎಲ್ಲ ಬದಲಾಗಿದಾರೆ ಎನ್ನುತ್ತಾರಲ್ಲ ..ಎಲ್ಲ ಸುಳ್ಳ ? ಹೌದು ತನ್ನ ಮಟ್ಟಿಗೆ ಸುಳ್ಳೇ.. ಕಾಲ ಬದಲಾಗೊಲ್ಲ , ಕಾಲ ಓಡುತ್ತೆ...… ಜನರು ತಮಗೆ ಬೇಕಿದ್ದುದನ್ನ , ಇದು ಸರಿ ಇದು ತಪ್ಪು ಎಂದು ಅಲಿಖಿತ ಒಪ್ಪಂದ ಮಾಡಿಕೊಂಡು ಎಲ್ಲರ ಮೇಲೆ ಬಲವಂತವಾಗಿ ಹೇರುತ್ತಿದ್ದುದು ಸುಳ್ಳಲ್ಲ.... ಆಕೆ ಹೇಗಿದಾಳೋ,ಎಲ್ಲಿದ್ದಾಳೋ ಒಂದೂ ಗೊತ್ತಿಲ್ಲ.... ಬಾಲೂ ಭಟ್ಟನೋ ತಿರುಗಿ ಬಂದು ಬಿಟ್ಟಿದ್ದ.....

ಈಗ, ಹುಟ್ಟಿದ ಮಗನ ಮುಖದಲ್ಲೇ ತನ್ನ ಸುಖ, ಕನಸು ಕಾಣುವದನ್ನ ಬಿಟ್ಟು ಇನ್ನೇನು ಉಳಿದಿಲ್ಲವಾಗಿತ್ತು....ತನ್ನ ಮಗ ಹಾಗಲ್ಲ ಅನುಭವಿಸ ಕೂಡದು, ನನ್ನ ಹಾಗೆ ಸಂಪ್ರದಾಯದ ಕಟ್ಟಳೇ ಬೇಲಿಯ ಒಳಗೆ ಬೆಳೆಯಬಾರದು ....ಇಂದಿನ ದಿನಕ್ಕೆ ಸರಿಯಾಗಿ ಬದುಕಬೇಕು ...ಎಂದೆಲ್ಲ ನನ್ನ ಕನಸು ............ ಮನೆಯಲ್ಲಿ ಎಷ್ಟೆಷ್ಟೋ ಒಳ್ಳೆಯ ಪುಸ್ತಕಗಳನ್ನು ತಂದಿಟ್ಟಿದ್ದೆ,ಚಿಕ್ಕ ಮಗ ಓದುವಂತೆ ಲಕ್ಷ್ಯ ಸೆಳೆಯುತ್ತಿದ್ದೆ..

ತನಗೆ ಹಳೆಯ ಸಂಪ್ರದಾಯಗಳಿಂದ ದೂರ ಓಡಿ ಹೋಗಿ ಗಂಗೆಯ ತಟದಲ್ಲಿ ಬದುಕಬೇಕೆಂದಿತ್ತು, ಕೊನೆಗೂ ಆಗಲೇ ಇಲ್ಲ....ಅದಕ್ಕೆ ಅಲ್ಲವ ಮಗನಿಗೆ ವಿಜ್ಞಾನ ಓದಿಸಿದ್ದು ... ಮಗನಿಗೆ ಮನೆಯಲ್ಲಿ ತಾನು ಹೇಳಿಕೊಟ್ಟುದೇನೂ ಇಲ್ಲ, ಮನೇಪಾಠಕ್ಕೂ ಸೇರಿಸಿಲ್ಲವಾಗಿತ್ತು.. ಈಗ ೧೦ ವರುಷಗಳ ಹಿಂದೆಯೇ ಕುಮಟೆಯ ಬಸ್ಸಿನಲ್ಲಿ ಸಿಕ್ಕ ಯಾಜೀ ಮಾಸ್ತರ್ರು , ‘ನಿಮ್ಮ ಮಗ ಬಿಡಿ , ಶಾಲೆಗೇ ಆದರ್ಶ ವಿದ್ಯಾರ್ಥಿ ಅವನು’ ಎಂದಿದ್ದರು.. ಪಾಠದಲ್ಲಷ್ಟೇ ಅಲ್ಲ, ಏನೇನೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದು ಅಮ್ಮನ ಮುಂದೆ ಹಿಡಿಯುತ್ತಿದ್ದ... ಹತ್ತನೆ ತರಗತಿ ,ಪಿಯುಸಿ ಯಲ್ಲೆಲ್ಲ ೯೭ % ,೯೪ % ಅಂಕಗಳಿಸಿದಾಗ ಇಡೀ ಊರಿಗೇ ಪೇಡೇ ಹಂಚಿದ್ದೆ. ೯೦% ಕ್ಕಿಂತ ಜಾಸ್ತಿ ಮಾಡಿದವರಿಗೆಲ್ಲ ಇಡಗುಂಜಿಯಲ್ಲಿ ಸನ್ಮಾನಿಸುತಾರಂತೆ ... ಹೋಗಿ ಬಾ ಎಂದಾಗ ... ‘ಇಲ್ಲಪ್ಪ ನನಗೆ ಆಸಕ್ತಿ ಇಲ್ಲ’ ಎಂದ ಮಗನಿಗೆ ಕೊಂಚ ಒತ್ತಾಯಿಸಿದ್ದು ಸುಳ್ಳಲ್ಲ. ಇಡಗುಂಜಿಗೆ ಹೋಗಲೇಬೇಕೇನೂ ಅಪ್ಪ.. ಎಂದ , ಮರುಕ್ಷಣದಲ್ಲಿಯೇ ‘ಸರಿ’ ಎಂದು ಹೆಚ್ಚೇನೂ ಹೇಳದೇ ಹೊರಟಾಗ ...ಮಗ ಹೇಳಿದ್ದು ಕೇಳಿದನಲ್ಲ ಎಂದು ಕುಶಿ ಆಗಿತ್ತು ... ಆದರೆ ಮಗ? ಮಗ ಯಾಕೋ ತಿಕ್ಕಲು ಎಂದು ನೆರೆಯವರು ಹೇಳಿದ್ದು ಕೇಳಿದ್ದೆ. ಅದಕ್ಕೆ ಸರಿಯಾಗಿ , ಇಡಗುಂಜಿಗೆ ಹೋಗಬೇಕಿದ್ದವ ,ಮನೆಯಿಂದ ಹೊರಟು ಸಿಗಂಧೂರಿಗೆ ಹೋಗಿ ಬಂದು ಬಿಟ್ಟ........ ಸನ್ಮಾನಗಳೆಲ್ಲಾ ಬೇಡ ತನಗೆ ಎಂದು ಹೋಗಲೇ ಇಲ್ಲ ಎಂದಿದ್ದ...
ಇದ್ದ ಒಬ್ಬ ಮಗನಿಗೆ ವಿಜ್ಞಾನ ಕಲಿಸಿ ಮುಂದೆ ತರಬೇಕೆಂಬ ತನ್ನ ಕನಸು ಅರ್ಧಭಾಗ ಮುಗಿದ ಹಾಗೆ ಎಂದು ಸಂತಸ ಪಟ್ಟಿದ್ದೆ.. ವಿಪರೀತ ಎನ್ನುವಷ್ಟು ಓದುತ್ತಿದ್ದ ಆತನ ಕಂಡು ಅಕ್ಕರೆ ಉಕ್ಕಿ ಬರುತ್ತಿತ್ತು.. ಭೈರಪ್ಪ,ಕಾರಂತ,ತೇಜಸ್ವಿ,ಕಾಳಿದಾಸ,ಭಾಸ, ವ್ಯಾಸ, ಸ್ಟೀಫಾನ್ ಹಾಕಿಂಗ್...ಇನ್ನೂ ನಾನು ಕೇಳರಿಯದ ಹೆಸರುಗಳು….. ನಮ್ಮ ಮನೆಯಲ್ಲಿ ವಿಜ್ಞಾನವನ್ನ ಪ್ರತಿಪಾದಿಸುವ ,ಹಳೆಯ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಬಲ್ಲ ಕುಡಿಯೊಂದು ಚಿಗುರುತ್ತಿದೆಯಲ್ಲ, ತನಗೆ ಸಿಗದ ಅವಕಾಶ ತನ್ನ ಮಗನಿಗಾದರೂ ಸಿಕ್ಕಿತಲ್ಲ ಎಂದು ಸಂತಸವಾಗಿತ್ತು...

ಅದಕ್ಕೆ ತಕ್ಕಂತೆ ಒಳ್ಳೆಯ ಕಾಲೇಜುಗಳಲ್ಲಿ ಓದಿ ದೂರದ ದೇಶ ಇಂಗ್ಲೆಂಡಿನ ಪ್ರಸಿದ್ದ ಸಂಸ್ಥೆ ಯಲ್ಲಿ ವಿಜ್ಞಾನಿ ಆಗಿ ಸೇರಿದ್ದ.. ೭-೮ ತಿಂಗಳುಗಳು ಆದಾವೆಂದು ತೋರುತ್ತೆ...


ಕಳೆದ ತಿಂಗಳು ಕೆಲ್ಸಾ ಸೇರಿ ಮೊದಲ ಬಾರಿಗೆ ಊರಿಗೆ ಬಂದಿದ್ದ,ಇನ್ನೇನು ಹೊರಡುವ ದಿನ ಹತ್ತಿರ ಬಂದು ಬಿಟ್ಟಿತಲ್ಲ ಎಂದು ಕೊಂಡಾಗ, ಅಪ್ಪ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದ. ಸರಿ ಏನಪ್ಪಾ ಹೇಳು ...ಎಂದೆ. ಅಪ್ಪಾ... ನಾನು ಸನ್ಯಾಸ ಸ್ವೀಕರಿಸುತ್ತೇನೆ. ಮಗ ಗಟ್ಟಿ ನಿರ್ಧಾರ ಮಾಡಿ ಹೇಳಿದಂತೆ ಇತ್ತು........... ಸನ್ಯಾಸ ಅಂದರೆ ಸುಲಭ ಎಂದು ಕೊಂಡೆಯ? ಯಾವುದೇ ಜೀವ ಕಣಕ್ಕೂ ತೊಂದರೆ ಆಗದ ಹಾಗೆ ಬದುಕಬೇಕು,ತಾನೆಂಬುದನ್ನ ಮರೆತು ಸರ್ವಜನ ಹಿತಕ್ಕಾಗಿ ಬದುಕಬೇಕು , ಅದರಲ್ಲೂ ರಾಜ ಸನ್ಯಾಸ ಸುಲಭದ್ದಲ್ಲ, ನೂರಾರು ಸಾವಿರಾರು ಜನರು ನಿನ್ನ ನಂಬಿರುತ್ತಾರೆ.ಅಲ್ಲ ಮೊನ್ನೆ ಆ ನಿತ್ಯಾನಂದನ ವ್ಯವಹಾರ ನೋಡಿ , ಹೇಳುತ್ತಿದ್ದೇಯಲ್ಲ...ಕಾಕಿ ,ಖಾವಿ,ಖಾದಿ ಎಲ್ಲವೂ ಪ್ರಶ್ನಾತೀತವಾಗಿದ್ದಾವೆ ,ಶಕ್ತಿಯನ್ನೇ ಮರೆತಿದ್ದಾವೆ ,ಮೋಹದಲ್ಲಿ ಬಿದ್ದಿದ್ದಾರೆ ಅಂತ.. ಮತ್ತೆ ನೀನು ವಾಲುತ್ತಿರುವದು ಯಾಕೆ? ಅಲ್ಲ ಮಗನೇ ಸನ್ಯಾಸ ಸ್ವೀಕಾರದಿಂದ ಎಲ್ಲವೂ ಮುಗಿಯುವದಿಲ್ಲ. ಅಲ್ಲ ವ್ಯಕ್ತಿ ಯೋರ್ವ ಶಕ್ತಿಯಾಗುವದು ಎಷ್ಟು ಕಷ್ಟದ ಜವಾಬ್ದಾರಿ ಗೊತ್ತಾ ಮಗು ........ ಅದೊಂದು ಪುನರ್ಜನ್ಮ,ಪೂರ್ವಾಶ್ರಮ ದೊಂದಿಗೆ ನಿನ್ನ ಸಂಬಂಧ ಪೂರ್ತಿ ಇಲ್ಲವಾಗುತ್ತೆ. ನಾನು ಮಠಮಾನ್ಯಗಳ ವಿರುದ್ದವಿದ್ದಿದ್ದು ಗೊತ್ತಿತ್ತು ಮಗನಿಗೆ. ಅಪ್ಪ... ಮೊಹವೇ ಮುಖ್ಯವಾಗಬಾರದಪ್ಪ,ಅದರ ಹೊರತಾಗಿಯೂ ಜೀವನವಿದೆ.ಅದನ್ನ ಹುಡುಕುತ್ತಾ ಹೊರಡುತ್ತಿದ್ದೇನೆ..ಇತಿಹಾಸ ಮರುಕಳಿಸುತ್ತದೆಯಂತೆ.. ಧರ್ಮ ಗ್ಲಾನಿ ಆದಾಗಲೆಲ್ಲ ಮತ್ತೆ ಮಾರ್ಗದರ್ಶಕರು ಬೇಕಾಗುತ್ತಾರೆ ಅಂದಿದ್ದ. ಅಪ್ಪ ನಾವು ಕೆಲಸ ಮಾಡುವದೆಲ್ಲ ಏತಕ್ಕೆ,ಪರದೇಶದವರನ್ನ ಉದ್ಧರಿಸುವದಕ್ಕ?ನನ್ನ ಅವರು ಕೂಲಿಯ ತರ ನೋಡುವದಕ್ಕ? ಇಲ್ಲಪ್ಪ.. ನನಗೆ ಧರ್ಮ ಕೊಡುವ ಶಾಂತಿಯನ್ನ ಬೇರಾವದೋ ಕೊಡಲಿಕ್ಕೆ ಸಾಧ್ಯವೇ ಇಲ್ಲ....... ‘ಧರ್ಮ’ ಎಂದರೆ ಬದುಕೋ ಮಾರ್ಗ ಅಲ್ವಾ ಅಪ್ಪ ಯಾಕೆ ಈ ಜನ ಹೋಡ್ಕೊಂಡು ಸಾಯ್ತಾರೆ ? ಅಂತ ಮೊನ್ನೆ ಪಕ್ಕದ ಶಿವಮೊಗ್ಗ ಗಲಭೆಯ ಸಮಯದಲ್ಲಿ ಫೋನಿನಲ್ಲಿ ಹೇಳಿದ್ದು ನೆನಪಿಗೆ ಬಂತು... ಆತನ ವಾದದಲ್ಲಿ ತಪ್ಪೇನೂ ಇರಲಿಲ್ಲ........

ನಾನು ಅಷ್ಟು ಹೇಳುವಷ್ಟರಲ್ಲಿ ಸುಶೀಲಾ ಕಣ್ಣೀರು ಹಾಕುತ್ತಿದ್ದಳು ....ಮಗ ವಿಜ್ಞಾನಿಯಂತೆ ,ಪರದೇಶಗಳಲ್ಲಿ ತನ್ನ ಅಧ್ಯಯನದ ಮೇಲೆಲ್ಲ ತರಬೇತಿಗಳನ್ನು ನಡೆಸುತ್ತಾನಂತೆ ,ಮುಂದೆ ಒಂದು ದಿನ ತನ್ನನ್ನು ಕರೆದೊಯ್ಯ ಬಹುದು, ತಾನು ಮೊಮ್ಮಗುವನ್ನ ಆಡಿಸುತ್ತಾ ನಾಲ್ಕು ದಿನ ಹೆಚ್ಚು ಬದುಕಬಹುದು ....... ಮಗ ಈ ಸಾರೇ ಬಂದಾಗ ಮದುವೆ ಮಾಡಿಯೇ ಬಿಡಬೇಕೆಂದೂ ನಿರ್ಧರಿಸಿದ್ದಳು ... ಮೊನ್ನೆ ನಾದಿನಿಯ ಮಗನ ಮದುವೆಗೆ ಹೋದಾಗ ಹೆಣ್ಣಿನ ಕಡೆಯವರಿಬ್ಬರು ಮಗನಿಗೆ ಜಾತಕ ಕೊಡುವದಕ್ಕೆ ಬರುತ್ತೇನೆಂದಿದ್ದರು... ಎಂದು ನನ್ನ ಹತ್ತಿರ ಸಂಭ್ರಮದಿಂದ ಹೇಳಿಕೊಂಡಿದ್ದಳು , ಊರಿಗೆ ಬಂದ ಮಗನಿಗೆ ೨ ಹೆಣ್ಣುಮಕ್ಕಳ ಛಾಯಾಚಿತ್ರವನ್ನತೋರಿಸಿಯೂ ಇದ್ದಳು , ನಾವಿಬ್ರೂ ಇಷ್ಟು ಕಷ್ಟಪಟ್ಟಿದ್ದು ನಿನ್ನ ಸ್ವಾಮಿಯಾಗಿ ನೋಡಲಿಕ್ಕಲ್ಲ, ನಾವು ಹುಡುಕಿದ್ದು ಇಷ್ಟವಾಗಿಲ್ಲವಾದರೆ, ನೀನೆ ಹುಡುಗಿಯನ್ನ ಹುಡುಕು ,ಮದುವೆ ಮಾಡೋಣಾ ನೀನೇ ಯಾವುದಾದರೂ ಹುಡುಗಿಯನ್ನ ಮೆಚ್ಚಿ ಮದುವೆ ಆಗುವದಾದರೆ ನಮಗೆ ಸ್ವಲ್ಪವೂ ಬೇಸರಿಕೆ ಇಲ್ಲ,..... ಕೂದಲು ಕಿತ್ತುಕೊಂಡು , ತಲೆ ಬೋಳಿಸಿಕೊಂಡು , ದಂಡ ಹಿಡಿದು, ಕೇಸರಿ ಬಟ್ಟೆಯಲ್ಲಿ ನಿನ್ನ ನೆನೆಸಲೂ ಆಗದು ನನ್ನಲ್ಲಿ ... … ಮಾಣಿ ನೀ ಎಂತಕ್ಕೆ ಹಿಂಗೆ ಮಾಡ್ತೆ , ಎಂದೆಲ್ಲ ಬಿಕ್ಕಿಬಿಕ್ಕಿ ಅತ್ತಿದ್ದಳು ………. ಅಮ್ಮನ ಕಣ್ಣೀರಿಗೆ ಸ್ವಲ್ಪ ಕರಗಿದಂತೆ ತೋರಿದ್ದ......... ಅಮ್ಮ ನೀನು ಅಳಬೇಡ... ನೋಡೋಣ ಹೇಗೆ ಸಾಗುತ್ತದೆ ಜೀವನ ...ಎಂದು ಹೇಳಿ ಹೊರಟೇ ಹೋಗಿದ್ದ...



ನಮ್ಮ ಕನಸುಗಳನ್ನ ನಮ್ಮ ಮಕ್ಕಳಲ್ಲಿ ಕಾಣುವದು ತಪ್ಪಾ?.....ನಮ್ಮ ಮಕ್ಕಳ ಮೂಲಕ ನನಸಾಗಿಸಲು ಯತ್ನಿಸಿದ್ದರಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ... ನನಗಾದ ಹಾಗೆ ನನ್ನ ಮಗನಿಗಾಗಬಾರದು ಎಂದಲ್ಲವೇ ತಾನು ಇಷ್ಟೆಲ್ಲಾ ಶ್ರಮ ಪಟ್ಟಿದ್ದು.... ಮಗ ವಿಜ್ಞಾನಿ ಆಗುತ್ತಾನೆಂದು ಎಷ್ಟು ಕನಸ ಕಟ್ಟಿದ್ದೆ...... ಎಳೆವೆಯಲ್ಲೇ ,ಆತ ತೋರಿದ್ದ ಪ್ರತಿಭೆಯೇನು ಚಿಕ್ಕದ? ಹ್ಮ್...

                    -2-
ಸುಶೀಲಾ ,ಬಾಗಿಲು ಹಾಕಿಕೋ ,ಇಲ್ಲೇ ಅಂಗಡಿಗೆ ಹೋಗಿ ಬರುತ್ತೇನೆ ...ಮನೆಯಲ್ಲಿಯೇ ಕೂತು ಕೂತು ಬೇಜಾರಾಗಿದೆ ಎಂದು ಹೊರಡುತ್ತಿದ್ದಂತೆಯೇ , ಪಕ್ಕದ ಮನೆಯ ಬಾಲೂ ಭಟ್ಟ ಹೇಳಿದ ಸುದ್ದಿ ಕೇಳಿ ತಡೆಯಲಾರದೇ ಅಲ್ಲೇ ಕುಸಿದು ಕುಳಿತರು ಭಟ್ಟರು....
ಅಲ್ಲ ,ನಿನ್ನ ಮಗನಿಂದ ಏನೂ ಸುದ್ದಿಯಿಲ್ಲವೆಂದು ಚಿಂತಿಸುತ್ತಿದ್ದೇಯಲ್ಲ ,ನೋಡು ಎಂತಹ ದೊಡ್ಡ ಸುದ್ದಿಯನ್ನೇ ತಂದಿದ್ದೇನೆ ನಾನು ಎಂದು ಅವನು ಅಲ್ಲೇ ಕಟ್ಟೆಯ ಮೇಲೆ ಕುಳಿತ .ನಮ್ಮ ಮಠ “ಚಕ್ರ ವಟೀ'' ಯಲ್ಲಿ ನಿನ್ನ ಮಗ ಸನ್ಯಾಸ ದೀಕ್ಷೆ ತೆಗೆದುಕೊಂಡನಂತೆ .... ಒಂದು ದಿನ ಅಲ್ಲಿನ ಮುಖ್ಯ ಸ್ವಾಮೀಜಿಯನ್ನ ಭೇಟಿ ಆಗಿದ್ದನಂತೆ.. ಸನ್ಯಾಸ ಸ್ವೀಕಾರಕ್ಕೆ ಅಂದೇ ನಿರ್ಧರಿಸಿದ್ಧ ಎಂದು ನೀನು ಹೇಳುತ್ತಿದ್ದೇಯಲ್ಲ ಅಲ್ಲವ... ..ಮಠದ ಹಿರಿಯ ಸ್ವಾಮಿಗಳು ,ಮತ್ತೊಮ್ಮೆ ಯೋಚಿಸುವಂತೆ ಹೇಳಿದರಂತೆ ...ಆ ನಿನ್ನ ಮಗನೇ ಸ್ವಇಚ್ಛೆಯಿಂದ ಬಂದಿದ್ದೇನೆ ಅಂದನಂತೆ ..
ಹೆಚ್ಚಿನ ಅಧ್ಯಯನಕ್ಕಾಗಿ ಆತ ಬನಾರಸ್ಸಿಗೆ ತೆರಳುತ್ತಿದ್ದಾನಂತೆ.....ವೇದ,ಜೋತಿಷ್ಯ ,ಎಲ್ಲ ಅಧ್ಯ ಮಾಡುತ್ತಾನಂತೆ..ನಿನ್ನ ಮಗನ ದೃಢ ಸಂಕಲ್ಪ ನೋಡಿ ಹಿರಿಯ ಸ್ವಾಮಿಗಳಿಗೆ ಅಪರಿಮಿತ ಆನಂದವಾಗಿದೆಯಂತೆ .....ಹೀಗೆ ಹೇಳುತಲೇ ಇದ್ದ ಬಾಲು ಭಟ್ಟ.... ಹಮ್



‘ಕಳೆದದ್ದು ಸಿಕ್ಕಲೇ ಇಲ್ಲವ’ ಎಂದು ಹೇಳಿದ ಭಟ್ಟರ ಕಣ್ಣು ಮಂಜಾಗಿತ್ತು...

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...